ಸರ್ಜಿಕಲ್ ಸ್ಟ್ರೈಕ್‌ನಲ್ಲಿ ರಾಜಕೀಯ ಬೇಡ
Team Udayavani, Mar 4, 2019, 12:50 AM IST
ರಾಷ್ಟ್ರೀಯ ಭದ್ರತೆಯಂಥ ಮಹತ್ವದ ವಿಚಾರವನ್ನು ರಾಜಕೀಯದ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಈ ಸಂವೇದನಾರಹಿತ ನಡೆ ದೇಶದ ವರ್ಚಸ್ಸನ್ನು ಕಡಿಮೆಗೊಳಿಸಿದೆ.
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸುರಕ್ಷಿತವಾಗಿ ಹಿಂದುರುಗಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಕವಿದಿದ್ದ ಯುದ್ಧದ ಕಾರ್ಮೋಡ ತುಸು ತಿಳಿಯಾಗಿರುವಂತೆ ಕಾಣಿಸುತ್ತದೆ. ಆದರೆ ಇದೇ ವೇಳೆ ಭಾರತ ನಡೆಸಿದ ಎರಡನೇ ಸರ್ಜಿಕಲ್ ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯಕ್ಕೆ ಬಳಸಬಾರದು ಎಂದು ರಾಜಕೀಯದವರೂ ಸೇರಿದಂತೆ ಎಲ್ಲರೂ ಹೇಳುತ್ತಾರೆ. ಆದರೆ ಸರ್ಜಿಕಲ್ ಸ್ಟೈಕ್ ಆದ ಎರಡೇ ದಿನಗಳಲ್ಲಿ ಅದು ರಾಜಕೀಯದ ಆರೋಪ ಮತ್ತು ಪ್ರತ್ಯಾರೋಪದ ವಿಷಯವಾಗಿ ಬದಲಾಗಿತ್ತು.ಪಕ್ಷಗಳು ಕನಿಷ್ಠ ಎರಡು ದಿನವಾದರೂ ಈ ವಿಚಾರದಲ್ಲಿ ರಾಜಕೀಯ ನುಸುಳದಂತೆ ಸಂಯಮ ವಹಿಸಿಕೊಂಡದ್ದೇ ಆಶ್ಚರ್ಯಕರ.
ರಾಷ್ಟ್ರೀಯ ಭದ್ರತೆಯಂಥ ಮಹತ್ವದ ವಿಚಾರವನ್ನು ರಾಜಕೀಯದ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಆದರೆ ನಮ್ಮ ರಾಜಕೀಯ ಪಕ್ಷಗಳು ಮತವಾಗಿ ಪರಿವರ್ತಿತವಾಗುವ ಯಾವುದೇ ವಿಷಯವನ್ನು ಉಪಯೋಗಿಸದೆ ಬಿಡುವುದಿಲ್ಲ. ಅವುಗಳು ಈ ಸಂವೇದನಾರಹಿತ ನಡೆಯೇ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ವರ್ಚಸ್ಸನ್ನು ಕಡಿಮೆಗೊಳಿಸಿದೆ. ಇದೀಗ ಪುಲ್ವಾಮ ದಾಳಿ ಹಾಗೂ ಅದಕ್ಕೆ ಬಳಿಕದ ಬೆಳವಣಿಗೆಗಳೆಲ್ಲ ಈ ಮಾತನ್ನು ಪುಷ್ಟೀಕರಿಸುವ ರೀತಿಯಲ್ಲೇ ಸಾಗುತ್ತಿರುವುದು ದುರದೃಷ್ಟಕರ. ಉರಿ ಸೇನಾ ನೆಲೆಯ ಮೇಲಾದ ದಾಳಿಗೆ ಪ್ರತೀಕಾರವಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ವಿಪಕ್ಷಗಳೆಲ್ಲ ಸೇನೆಯಿಂದ ಸಾಕ್ಷಿ ಕೇಳಿದ್ದವು. ಇದೀಗ ಎರಡನೇ ಸರ್ಜಿಕಲ್ ಸ್ಟೈಕ್ ಸಂದರ್ಭದಲ್ಲೂ ಅದೇ ಆಗುತ್ತಿದೆ.
ಇದರಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷ ಎರಡೂ ಕಡೆಯವರದ್ದು ತಪ್ಪಿದೆ. ಸದ್ಯದಲ್ಲೇ ಲೋಕಸಭಾ ಚುನಾವಣೆ ನಡೆಯಲಿ ರುವುದರಿಂದ ಆಡಳಿತ ಪಕ್ಷ ಸರ್ಜಿಕಲ್ ಸ್ಟ್ರೈಕ್‌ನ್ನು ಮುಂದಿಟ್ಟುಕೊಂಡು ಆದಷ್ಟು ಹೆಚ್ಚು ಮತಗಳನ್ನು ಬಾಚಿಕೊಳ್ಳುವ ಪ್ರಯತ್ನದಲ್ಲಿದೆ. ಆಡಳಿತ ಪಕ್ಷದಲ್ಲಿರುವವರು ನಾವು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರೂ ಪ್ರತಿ ರ್ಯಾಲಿಯಲ್ಲೂ ಈ ವಿಚಾರವನ್ನು ಪ್ರಸ್ತಾವಿಸುತ್ತಿದ್ದಾರೆ. ನಮ್ಮದು ಪ್ರಬಲ ನಾಯಕತ್ವ ಎಂದು ಬಿಂಬಿಸಲು ಸರ್ಜಿಕಲ್ ಸ್ಟ್ರೈಕ್ ಬಳಕೆಯಾಗುತ್ತಿದೆ. ಕರ್ನಾಟಕದ ನಾಯಕರೊಬ್ಬರು ನೇರವಾಗಿಯೇ ಸರ್ಜಿಕಲ್ ದಾಳಿಯಿಂದಾಗಿ ನಮ್ಮ ಸೀಟು ಗಳಿಕೆ ಹೆಚ್ಚಾಗಲಿದೆ ಹೇಳಿ ಬಿಟ್ಟರು. ಅವರ ಈ ಹೇಳಿಕೆಯಿಂದಾಗಿ ರಾಜಕೀಯ ಘರ್ಷಣೆ ತೀವ್ರಗೊಂಡಿತು. ಕರ್ನಾಟದವರೇ ಆದ ವಿಪಕ್ಷದ ಇನ್ನೊಬ್ಬ ನಾಯಕರು ಸರ್ಜಿಕಲ್ ಸ್ಟ್ರೈಕ್‌ನಿಂದ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂದು ಲೆಕ್ಕ ಕೇಳುತ್ತಿದ್ದಾರೆ.
ವಿಪಕ್ಷಗಳಿಗೆ ಸರ್ಜಿಕಲ್ ಸ್ಟ್ರೈಕ್‌ನ ಲಾಭ ಆಡಳಿತ ಪಕ್ಷಕ್ಕೆ ಸಿಗುವ ಆತಂಕ. ಹೀಗಾಗಿಯೇ ದಾಳಿಯಾದ ಎರಡು ದಿನಗಳ ಬಳಿಕ 21 ವಿಪಕ್ಷಗಳು ಕಾರ್ಯಾಚರಣೆ ನಡೆಸಿದ ವಾಯುಪಡೆಯನ್ನು ಅಭಿನಂದಿಸುವ ನೆಪದಲ್ಲಿ ಒಟ್ಟಾಗಿ ಸರ್ಜಿಕಲ್ ಸ್ಟ್ರೈಕ್‌ನ ಹಿಂದೆ ರಾಜಕೀಯದ ಷಡ್ಯಂತ್ರವಿರುವ ಗುಮಾನಿ ವ್ಯಕ್ತಪಡಿಸಿದವು. ಸ್ಟ್ರೈಜಿಕಲ್ ದಾಳಿಯ ಯಶಸ್ಸಿನ ಬಗ್ಗಯೇ ವಿಪಕ್ಷಗಳಿಗೆ ಅನುಮಾನಗಳಿದ್ದವು. ಇದು ಪರೋಕ್ಷವಾಗಿ ಪಾಕಿಸ್ಥಾನಕ್ಕೆ ನೆರವಾಯಿತು.
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪುಲ್ವಾಮ ದಾಳಿ ನಡೆದಿದೆ ಎಂಬ ವಾದವನ್ನು ಪಾಕಿಸ್ಥಾನ ತೀವ್ರವಾಗಿ ಪ್ರತಿಪಾದಿಸತೊಡಗಿತು. ನಮ್ಮ ಕಚ್ಚಾಟದ ಲಾಭವನ್ನು ಶತ್ರು ದೇಶ ಪಡೆದುಕೊಳ್ಳುತ್ತಿದೆ ಎಂಬ ಕನಿಷ್ಠ ವಿವೇಚನೆಯೂ ರಾಜಕಿಯ ನಾಯಕರಲಿಲ್ಲ. ಸಾಮಾಜಿಕ ಮಾಧ್ಯಮಗಳು ಮತ್ತು ಮುಖ್ಯ ವಾಹಿನಿ ಮಾಧ್ಯಮಗಳು ರಾಜಕೀಯದವರ ಈ ಕಚ್ಚಾಟಗಳಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಚುನಾವಣೆ ಕಣದಲ್ಲಿ ಹೋರಾಡಲು ಕೃಷಿ ಕ್ಷೇತ್ರದ ಹಿನ್ನಡೆ, ರೈತರು ಎದುರಿಸುತ್ತಿರುವ ಸಂಕಷ್ಟ, ನಿರುದ್ಯೋಗ ಸೇರಿದಂತೆ ಹಲವಾರು ಜ್ವಲಂತ ವಿಚಾರಗಳಿವೆ. ಸೇನೆಯ ಕಾರ್ಯಾಚರಣೆ, ರಾಷ್ಟ್ರೀಯ ಸುರಕ್ಷತೆ, ಅಂತರಾಷ್ಟ್ರೀಯ ಸಂಬಂಧಗಳು ಇತ್ಯಾದಿಗಳನ್ನೆಲ್ಲ ರಾಜಕೀಯಕ್ಕೆ ಎಳೆದು ತರುವುದು ಬೇಡ. ಆಡಳಿತ ಪಕ್ಷ ಮತ್ತು ವಿಪಕ್ಷಗಳು ಈ ವಿಚಾರದಲ್ಲಿ ಪ್ರಾಂಜಲ ಮನಸ್ಸಿನಿಂದ ನಿರ್ಧಾರವೊಂದನ್ನು ಕೈಗೊಳ್ಳುವ ಅಗತ್ಯವಿದೆ. ಇಂಥ ಕಾರ್ಯತಂತ್ರಗಳಿಂದ ಚುನಾವಣೆಯಲ್ಲಿ ಗೆದ್ದರೂ ದೇಶಕ್ಕೆ ಸೋಲಾಗಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.