ಮಾಲಿನ್ಯ ನಿಯಂತ್ರಣ ಸಾಧಿಸಬೇಕಾದದ್ದು ಬಹಳಷ್ಟಿದೆ
Team Udayavani, Mar 7, 2019, 12:30 AM IST
ಭಾರತದ ನಗರಗಳ ವಾಯುಮಾಲಿನ್ಯ ಮಟ್ಟ ಕಳವಳಕಾರಿ ಮಟ್ಟಕ್ಕೆ ತಲುಪಿದೆ ಎನ್ನುತ್ತಿದೆ ಗ್ರೀನ್‌ಪೀಸ್ ಸಂಸ್ಥೆಯ ವರದಿ. ಇದು ಜಗತ್ತಿನಾದ್ಯಂತ ನಗರಗಳ ವಾಯುಮಾಲಿನ್ಯ ಮಟ್ಟವನ್ನು ಅಧ್ಯಯನ ನಡೆಸುವ ಸಂಸ್ಥೆ. ಇದು ನೀಡಿರುವ ವರದಿಯನ್ನು ನಾವು ಎಚ್ಚರಿಕೆಯ ಕರೆಗಂಟೆಯಾಗಿ ಪರಿಗಣಿಸುವ ಅಗತ್ಯವಿದೆ. ಜಗತ್ತಿನ ಅತಿ ಹೆಚ್ಚು ಮಲಿನಗೊಂಡಿರುವ 30 ನಗರಗಳ ಪೈಕಿ 22 ನಗರಗಳು ಭಾರತದಲ್ಲೇ ಇವೆ. ಮಾಲಿನ್ಯದಲ್ಲಿ ಟಾಪ್ 20 ನಗರಗಳಲ್ಲಿ 15 ನಗರಗಳು ನಮ್ಮದೇ. ಅಂತೆಯೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ ರಾಜಧಾನಿಗಳಲ್ಲಿ ದಿಲ್ಲಿ ಅಗ್ರಸ್ಥಾನದಲ್ಲಿದೆ. ಗುರುಗ್ರಾಮ ಜಗತ್ತಿನಲ್ಲೇ ಅತಿ ಹೆಚ್ಚು ವಾಯುಮಾಲಿನ್ಯವಿರುವ ನಗರ. ಇಡೀ ದೇಶ ತಲೆತಗ್ಗಿಸಬೇಕಾದ ವರದಿಯಿದು. ವಾಯುಮಾಲಿನ್ಯವೂ ಸೇರಿದಂತೆ ವಿವಿಧ ರೀತಿಯ ಮಾಲಿನ್ಯ ಗಳ ನಿವಾರಣೆಗಾಗಿ ಹಲವಾರು ವರ್ಷಗಳಿಂದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಘೋಷಿಸುತ್ತಾ ಬಂದಿದ್ದರೂ ವರ್ಷದಿಂದ ವರ್ಷಕ್ಕೆ ವಾತಾವರಣ ಹದಗೆಡುತ್ತಿರುವುದು ಈ ಯೋಜನೆಗಳ ಎದುರು ಮಾತ್ರವಲ್ಲದೆ ನಮ್ಮ ಇಚ್ಛಾಶಕ್ತಿಯ ವಿರುದ್ಧವೂ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಡುತ್ತಿದೆ.
ದಿಲ್ಲಿಯ ವಾಯುಮಾಲಿನ್ಯ ಹದಗೆಟ್ಟು ನಡು ಮಧ್ಯಾಹ್ನವೇ ಮಬ್ಬು ಆವರಿಸಿ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ಓಡಾಡುವ, ಜನರು ಮನೆಯಿಂದ ಹೊರಗೆ ಬರಲು ಹೆದರುವ ಸ್ಥಿತಿಯನ್ನು ನಾವು ಪ್ರತಿವರ್ಷ ನೋಡುತ್ತಿದ್ದೇವೆ. ಅಕ್ಟೋಬರ್ ಬರುವಾಗ ಮಾಲಿನ್ಯ ಕಡಿಮೆಗೊಳಿಸಲು ಏನು ಮಾಡಬಹುದು ಎಂಬುದರ ಕುರಿತು ಬಿರುಸಿನ ಚರ್ಚೆ, ವಾದ-ಪ್ರತಿವಾದಗಳು ಆಗುತ್ತವೆ. ವಿವಿಧ ಕ್ರಮಗಳನ್ನು ,ಕಾನೂನುಗಳನ್ನು ಘೋಷಿಸಲಾಗುತ್ತದೆ. ಆದರೆ ಎಲ್ಲವೂ ನಾಲ್ಕು ದಿನದ ಅಬ್ಬರ. ಮತ್ತೆ ಮಾಲಿನ್ಯ ನೆನಪಾಗುವುದು ಇನ್ನೊಂದು ಚಳಿಗಾಲ ಬಂದಾಗ. ಈ ರೀತಿಯ ಚಲ್ತಾ ಹೈ ಧೋರಣೆ ಮೇಲೆ ನಡೆಯುವ ವ್ಯವಸ್ಥೆಯಿಂದ ಯಾವುದೇ ದೊಡ್ಡ ರೀತಿಯ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ದಿಲ್ಲಿಯೇ ಉತ್ತಮ ಉದಾಹರಣೆ.
ವಾಯುಮಾಲಿನ್ಯ ಮತ್ತು ಅಭಿವೃದ್ಧಿಗೆ ನಿಕಟ ಸಂಬಂಧವಿದೆ. ಅಂತೆಯೇ ವಾಯುಮಾಲಿನ್ಯ ಮತ್ತು ಜನರ ಆರೋಗ್ಯ, ಮಾಲಿನ್ಯ ಮತ್ತು ಬಡತನಕ್ಕೂ ಹತ್ತಿರ ಸಂಬಂಧವಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣ ಎನ್ನುವುದು ಬರೀ ನಗರವನ್ನು ಸ್ವತ್ಛಗೊಳಿಸುವ ವಿಷಯವಷ್ಟೇ ಅಲ್ಲ. ಅದು ಬೇರೆ ಬೇರೆ ಇಲಾಖೆಗಳ ಸಮನ್ವಯದಿಂದ ಎಲ್ಲ ಆಯಾಮಗಳನ್ನು ಒಳಗೊಂಡು ಸಮಗ್ರವಾಗಿ ಆಗಬೇಕಾದ ಕೆಲಸ.
ನಗರಗಳ ವಾಯು ಗುಣಮಟ್ಟ ಹದಗೆಡಲು ಅಲ್ಲಿರುವ ಜನದಟ್ಟಣೆಯೂ ಕಾರಣ. ದೇಶದಲ್ಲಿ ಸಂಭವಿಸುವ ಪ್ರತಿ 8 ಸಾವಿನಲ್ಲಿ ಒಂದು ಮಾಲಿನ್ಯದಿಂದ ಆಗಿರುತ್ತದೆ. ಅಂತೆಯೇ ಹೃದಯ ಸಂಬಂಧಿ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಳವಳಕಾರಿಯಾಗಿ ಹೆಚ್ಚಾಗಲು ವಾತಾವರಣದಲ್ಲಾಗಿರುವ ಬದಲಾವಣೆಯೇ ಕಾರಣ ಎನ್ನುವುದು ಹಲವು ಅಧ್ಯಯನಗಳಿಂದ ದೃಢಪಟ್ಟಿದ್ದರೂ ಈ ನಿಟ್ಟಿನಲ್ಲಿ ನಾವು ಸಾಧಿಸಿದ್ದು ಮಾತ್ರ ಬಹಳ ಕಡಿಮೆ.
ಕೆಲ ವರ್ಷಗಳ ಹಿಂದೆಯಷ್ಟೇ ಮಾಲಿನ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಚೀನದ ಬೀಜಿಂಗ್ ನಗರ ಈಗ 122ನೇ ಸ್ಥಾನಕ್ಕೆ ಕುಸಿದಿದೆ. ನಮ್ಮಂತೆಯೇ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಚೀನಕ್ಕೆ ತನ್ನ ನಗರದ ಮಾಲಿನ್ಯವನ್ನು ಕೆಲವೇ ವರ್ಷಗಳಲ್ಲಿ ನಿಯಂತ್ರಿಸಲು ಸಾಧ್ಯವಾಗಿದೆ ಎಂದಾದರೆ ನಮಗೇಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಮಾಲಿನ್ಯ ನಿಯಂತ್ರಿಸಲು ಚೀನ ಏನೇನು ಕ್ರಮಗಳನ್ನು ಕೈಗೊಂಡಿದೆ ಎನ್ನುವುದು ಅಧ್ಯಯನಯೋಗ್ಯ ವಿಷಯ.
ವಾಯುಮಾಲಿನ್ಯವೂ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯಗಳನ್ನು ತಡೆಗಟ್ಟಲು ದೇಶದಲ್ಲಿ ಸಾಕಷ್ಟು ಕಾನೂನುಗಳು ಇವೆ. ಆದರೆ ಅವುಗಳ ಅನುಷ್ಠಾನದ್ದೇ ಸಮಸ್ಯೆ. ಪ್ಯಾರಿಸ್ ಒಪ್ಪಂದಕ್ಕೆ ಬದ್ಧತೆ ತೋರಿಸುವ ಸಲುವಾಗಿ ದೇಶದಲ್ಲಿ ವಾತಾವರಣಕ್ಕೆ ಸೇರುವ ಇಂಗಾಲಾಮ್ಲದ ಪ್ರಮಾಣವನ್ನು ಕಡಿಮೆಗೊಳಿಸುವ, ಅಂತೆಯೇ ಜಾಗತಿಕ ತಾಪಮಾನಕ್ಕೆ ಕಾರಣವಾಗಿರುವ ಇನ್ನಿತರ ಮಾಲಿನ್ಯಗಳನ್ನು ನಿಯಂತ್ರಿಸುವ ಗುರುತರವಾದ ಹೊಣೆ ಸರಕಾರದ ಮೇಲಿದೆ. ಇಷ್ಟರತನಕ ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿಯಾಗಿರುವುದು ಮಾತ್ರ ಕಾಣಿಸುತ್ತಿಲ್ಲ. ಇಂಗಾಲಾಮ್ಲ ಬಿಡುಗಡೆ ಕಡಿಮೆಯಾಗಬೇಕಿದ್ದರೆ ಇಂಧನ ಸುಡುವುದು ಕಡಿಮೆಯಾಗಬೇಕಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿ ಪ್ರತಿ ವರ್ಷ ವಾಹನಗಳ ಮತ್ತು ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ವಿದ್ಯುತ್ ಚಾಲಿತ ವಾಹನಗಳನ್ನು ಜನಪ್ರಿಯಗೊಳಿಸುವುದು, ಬಿಎಸ್4 ನಿಯಮವನ್ನು ಮೇಲ್ದರ್ಜೆಗೇರಿಸುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು, ಕಾಡು ನಾಶ ತಡೆಯುವುದು ಈ ಮುಂತಾದ ಕ್ರಮಗಳಿಂದ ವಾಯುಮಾಲಿನ್ಯ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಅದಕ್ಕೆ ಪ್ರಬಲ ಇಚ್ಛಾಶಕ್ತಿಯಿರಬೇಕಷ್ಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.