ಪ್ರಾಣ ವಾಯುವಿನಿಂದಲೇ ಪ್ರಾಣ ಹರಣ
Team Udayavani, Feb 20, 2017, 3:45 AM IST
ಮಾಲಿನ್ಯ ನಿಯಂತ್ರಣ ಆದ್ಯತೆಯ ಕಾರ್ಯಕ್ರಮವಾಗಲಿ
ವಾಯುಮಾಲಿನ್ಯದ ವಿರುದ್ಧ ದೇಶ ಸಮರ ಸಾರುವ ಕಾಲ ಬಂದಿದೆ. ಮಾಲಿನ್ಯ ನಿಯಂತ್ರಣ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಕೇಂದ್ರ-ರಾಜ್ಯ ಕೈಜೋಡಿಸಿದರೆ, ಇದು ಅಸಾಧ್ಯವಾದ ಗುರಿಯಲ್ಲ. ಸಾಧಿಸುವ ಇಚ್ಛಾಶಕ್ತಿ ಬೇಕಷ್ಟೆ.
ಅಮೆರಿಕದಿಂದ ಪ್ರಕಟವಾಗುವ ವೈದ್ಯಕೀಯ ಪತ್ರಿಕೆ ದಿ ಲ್ಯಾನ್ಸೆಟ್‌ನಲ್ಲಿ ಬಂದಿರುವ ವರದಿ ಭಾರತದ ನಗರಗಳ ವಾಯುಮಾಲಿನ್ಯದ ಕುರಿತು ಕಳವಳಕಾರಿಯಾದ ಅಂಶಗಳನ್ನು ಬಹಿರಂಗಪಡಿಸಿದೆ. ಎರಡು ದಿನಗಳ ಹಿಂದೆ ಅಮೆರಿಕದ ಹೆಲ್ತ್ ಇಫೆಕ್ಟ್ ಇನ್ಸ್‌ಸ್ಟಿಟ್ಯೂಟ್ ಎಂಬ ಸಂಸ್ಥೆಯೂ ವಾಯುಮಾಲಿನ್ಯದ ಕುರಿತು ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.
ವಾಯುಮಾಲಿನ್ಯದಿಂದಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ 4.2 ದಶಲಕ್ಷ ಮಂದಿ ಆಯುಷ್ಯ ಮುಗಿಯುವ ಮೊದಲೇ ಸಾಯುತ್ತಿದ್ದಾರೆ. ಭಾರತವೊಂದರಲ್ಲೇ ವಾಯುಮಾಲಿನ್ಯಕ್ಕೆ ಬಲಿಯಾಗುವವರ ಸಂಖ್ಯೆ ವಾರ್ಷಿಕ 1.1 ದಶಲಕ್ಷ. ಜಗತ್ತಿನ ಒಟ್ಟು ಸಾವುಗಳಲ್ಲಿ ಶೇ. 25ರಷ್ಟು ಭಾರತದಲ್ಲೇ ಸಂಭವಿಸುತ್ತದೆ ಎನ್ನುವ ಅಂಶವೇ ವಾಯುಮಾಲಿನ್ಯ ಎಷ್ಟು ಭೀಕರವಾಗಿದೆ ಎನ್ನುವುದನ್ನು ತಿಳಿಸುತ್ತದೆ. ದೇಶದಲ್ಲಿ ಸರಾಧಿಸರಿ ನಿಮಿಷಕ್ಕೆ ಇಬ್ಬರಂತೆ ವಾಯುಧಿಮಾಲಿನ್ಯದಿಂದಾಗಿ ಅಸುನೀಗುತ್ತಿದ್ದಾರೆ. ಪ್ರಾಣ ವಾಯುವೇ ಪ್ರಾಣ ಹರಣ ಮಾಡುತ್ತಿರುವ ದುರಂತ ಕತೆಯಿದು. ಇದು ಮನುಷ್ಯರೇ ತಮ್ಮ ಕೈಯಾರೆ ತಂದುಕೊಂಡಿರುವ ಆಪತ್ತು.
ವಾಯುಮಾಲಿನ್ಯದಲ್ಲಿ ಭಾರತ ಮಾತ್ರವಲ್ಲ ದಕ್ಷಿಣ ಏಷ್ಯಾವೇ ಕಳಪೆ ದಾಖಲೆಗಳನ್ನು ಹೊಂದಿದೆ. ಆದರೆ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ವಾಯುಮಾಲಿನ್ಯವಿರುವ ಚೀನವನ್ನು ಹಿಂದಿಕ್ಕಿದೆ. ದಿಲ್ಲಿ, ಮುಂಬಯಿ, ಬೆಂಗಳೂರು , ಕೋಲ್ಕತ್ತ ಹೀಗೆ ಯಾವ ಮಹಾನಗರವೂ ವಾಯುಮಾಲಿನ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ವರದಿಗಳ ಪ್ರಕಾರ ನಮ್ಮ ಮಹಾನಗರಗಳ ವಾಯುಮಾಲಿನ್ಯ ಮಟ್ಟ ಪಿಎಂ2.5ಗೇರಿ ಬಹಳ ಸಮಯವಾಗಿದೆ. ಪಿಎಂ ಎಂದರೆ ವಾತಾವರಣದಲ್ಲಿರುವ ಧೂಳಿನ ಕಣಗಳ ಪ್ರಮಾಣ. ಇದು 0.5ರಿಂದ 1.0ರೊಳಗಿದ್ದರೆ ಸುರಕ್ಷಿತ ಎಂದರ್ಥ. 1990ರಿಂದೀಚೆಗೆ ಪಿಎಂ2.5ಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ ಚೀನದಲ್ಲಿ ಶೇ. 17.22ರಷ್ಟು ಹೆಚ್ಚಳವಾಗಿದ್ದರೆ ಭಾರತದಲ್ಲಿ ಶೇ. 48 ಹೆಚ್ಚಳವಾಗಿದೆ.
ಲಂಗುಲಗಾಮಿಲ್ಲದ ಕೈಗಾರಿಕೀಕರಣ, ಮಿತಿಮೀರಿರುವ ವಾಹನಗಳ ಸಂಖ್ಯೆ, ಕಡಿಮೆಯಾಗುತ್ತಿರುವ ಅರಣ್ಯ ಹೀಗೆ ವಾಯುಮಾಲಿನ್ಯ ಹೆಚ್ಚಾಗಲು ನೂರಾರು ಕಾರಣಗಳನ್ನು ಗುರುತಿಸಬಹುದು. ಪಿಎಂ2.5 ಮಟ್ಟ ಹೆಚ್ಚಿರುವುದರಿಂದಲೇ ನಗರಗಳಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು, ಕ್ಯಾನ್ಸರ್, ಹೃದಯಾಘಾತ ಮತ್ತು ಚರ್ಮ ಸೋಂಕುಗಳು ಹೆಚ್ಚುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ವೃಷ್ಟಿ , ಜಾಗತಿಕ ತಾಪಮಾನ ಹೆಚ್ಚಳ ಇವುಗಳಿಗೆ ಮೂಲಕಾರಣ ವಾಯುಮಾಲಿನ್ಯ. ವಿಶ್ವಬ್ಯಾಂಕ್ ಪ್ರಕಾರ ವಾಯುಮಾಲಿನ್ಯದಿಂದ ದೇಶ 38 ಶತಕೋಟಿ ಡಾಲರ್ ಕಾರ್ಮಿಕ ಆದಾಯವನ್ನು ಕಳೆದುಕೊಳ್ಳುತ್ತಿದೆ. ದಿಲ್ಲಿ ಮತ್ತು ಪಾಟ್ನ ದೇಶದ ಅತ್ಯಂತ ಕಲುಷಿತ ನಗರಗಳು ಎನ್ನುವುದು ಅಧ್ಯಯನದಿಂದ ಪತ್ತೆಯಾಗಿದೆ. ಇಷ್ಟೆಲ್ಲ ಆದರೂ ಸರ್ಕಾರ ಮಾಲಿನ್ಯ ತಡೆಗೆ ಗಂಭೀರ ಪ್ರಯತ್ನ ಮಾಡಿಲ್ಲ. ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಅಭಿವೃದ್ಧಿಗನುಗುಣವಾಗಿ ಮಾಲಿನ್ಯ ನಿಯಂತ್ರಿಸುವ ವಿಧಾನಗಳನ್ನು ಅಳವಡಿಸಿಲ್ಲ. ಪರಿಸರದ ಧಾರಣ ಸಾಮರ್ಥ್ಯವನ್ನು ಮೀರಿದ ಕಾರ್ಯಗಳನ್ನು ಕೈಗೊಂಡಾಗ ಎದುರಾಗುವ ದುಷ್ಪರಿಣಾಮಗಳನ್ನು ದೇಶ ಈಗ ಅನುಭವಿಸುತ್ತಿದೆ. ಇಂಧನದ ಬೇಡಿಕೆ ಅತಿಯಾಗಿರುವುದೇ ವಾಯುಮಾಲಿನ್ಯ ಹೆಚ್ಚಾಗಲು ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಪರಿಸರ ಸಹ್ಯ ಇಂಧನ ಬಳಕೆ ಮಾಲಿನ್ಯವನ್ನು ನಿಯಂತ್ರಿಸುವ ಮಾರ್ಗೋಪಾಯ. ಕಲ್ಲಿದ್ದಲು ಮತ್ತು ನೈಸರ್ಗಿಕ ತೈಲದ ಮೇಲಿನ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಕೂಗು ಇಂದು ನಿನ್ನೆಯದ್ದಲ್ಲ. ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಿರತವಾಗಿದ್ದರೂ ನಿರೀಕ್ಷಿತ ಫಲಿತಾಂಶ ದೊರಕುತ್ತಿಲ್ಲ.
ವಾರದ ಹಿಂದೆಯಷ್ಟೇ ಸುಪ್ರೀಂ ಕೋರ್ಟ್ ದಿಲ್ಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸಲು ಕ್ರಿಯಾ ಯೋಜನೆ ರೂಪಿಸಲು ಆದೇಶಿಸಿದೆ. ಮಾಲಿನ್ಯವನ್ನು ಗ್ರೇಡ್‌ಗಳಲ್ಲಿ ಗುರುತಿಸಿ ಅದಕ್ಕೆ ತಕ್ಕಂತೆ ಪರಿಹಾರೋಪಾಯವನ್ನು ಕಂಡುಕೊಳ್ಳುವುದಾಗಿ ಸರಕಾರ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಎಲ್ಲ ನಗರಗಳಿಗೂ ಅನ್ವಯವಾಗುವಂತೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಿಯಾ ಯೋಜನೆಯನ್ನು ರಚಿಸಲು ಇದು ಸಕಾಲ. ಎಚ್ಚರಿಕೆಯ ಗಂಟೆ ಮೊಳಗಿರುವುದರಿಂದ ವಾಯುಮಾಲಿನ್ಯದ ವಿರುದ್ಧ ದೇಶ ಸಮರ ಸಾರುವ ಕಾಲ ಬಂದಿದೆ. ಮಾಲಿನ್ಯ ನಿಯಂತ್ರಣ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. ಕೇಂದ್ರ-ರಾಜ್ಯ ಕೈಜೋಡಿಸಿದರೆ, ಇದು ಅಸಾಧ್ಯವಾದ ಗುರಿಯಲ್ಲ. ಸಾಧಿಸುವ ಇಚ್ಛಾಶಕ್ತಿ ಬೇಕಷ್ಟೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.