ಆರೆಸ್ಸೆಸ್ ಸಭೆಗೆ ಪ್ರಣಬ್: ಆರೋಗ್ಯಕರ ಸಂವಾದಕ್ಕೆ ವೇದಿಕೆಯಾಗಲಿ
Team Udayavani, Jun 1, 2018, 6:00 AM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೂ. 7ರಂದು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಸಂಘ… ಶಿಕ್ಷಾ ವರ್ಗವನ್ನುದ್ದೇಶಿಸಿ ಮಾತನಾಡಲಿರುವ ವಿಚಾರ ರಾಜಕೀಯ ವಲಯದಲ್ಲೀಗ ಬಿರುಸಿನ ಚರ್ಚೆಗೆ ಕಾರಣ ವಾಗಿದೆ. ನಾಲ್ಕು ದಶಕಕ್ಕೂ ಮಿಕ್ಕಿದ ರಾಜಕೀಯ ಬದುಕನ್ನು ಕಾಂಗ್ರೆಸ್‌ನಲ್ಲಿ ಕಳೆದಿರುವ ಮುಖರ್ಜಿಯವರು ಆರ್‌ಎಸ್‌ಎಸ್‌ನ ಈ ಆಹ್ವಾನವನ್ನು ಒಪ್ಪಿಕೊಂಡದ್ದೇ ಒಂದು ಅದ್ಭುತ ಎನ್ನುವಂತೆ ನೋಡಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಮುಖರ್ಜಿಯವರ ಈ ನಡೆಯಿಂದ ತೀವ್ರ ಇರಿಸುಮುರಿಸಿ ಗೊಳಗಾಗಿದೆ. ಸೈದ್ಧಾಂತಿಕವಾಗಿ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ವಿರುದ್ಧ ಧ್ರುವಗಳು. ಅದರಲ್ಲೂ ಕಾಂಗ್ರೆಸ್‌ನ ಈಗಿನ ಅಧ್ಯಕ್ಷ ರಾಹುಲ್ ಗಾಂಧಿ ಆರ್‌ಎಸ್‌ಎಸ್‌ನ ಕಟ್ಟಾ ವಿರೋಧಿಯಾಗಿದ್ದಾರೆ. ಮಹಾತ್ಮ ಗಾಂಧಿ ಹತ್ಯೆಯನ್ನು ಆರ್‌ಎಸ್‌ಎಸ್ ಮಾಡಿದೆ ಎಂದು ಹೇಳಿರುವ ಅವರ ವಿರುದ್ಧ ಒಂದು ಕೇಸ್ ಕೂಡಾ ಮುಂಬಯಿಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹೀಗಿರುವಾಗ ಅವರದ್ದೇ ಪಕ್ಷದಲ್ಲಿ ಬೆಳೆದು ಬಂದಿರುವ ಮುಖರ್ಜಿ ನಾಗಪುರಕ್ಕೆ ಭೇಟಿ ನೀಡಲಿರುವ ವಿಷಯವನ್ನು ರಾಜಕೀಯ ವಾಗಿ ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮುಖರ್ಜಿ ಬಲಪಂಥೀಯ ಸಿದ್ಧಾಂತದತ್ತ ವಾಲುತ್ತಿದ್ದಾರೆ ಎಂಬ ಊಹಾಪೋಹಗಳೂ ಇವೆ. ಇದೇ ವೇಳೆ ಅವರು ಮರಳಿ ಸಕ್ರಿಯ ರಾಜಕೀಯ ಪ್ರವೇಶಿಸಲಿದ್ದಾರೆ. ಇದಕ್ಕೆ ವೇದಿಕೆಯಾಗಿ ಆರ್‌ಎಸ್‌ಎಸ್‌ನ ವಾರ್ಷಿಕ ಕಾರ್ಯಕ್ರಮವನ್ನು ಬಳಸಿಕೊಳ್ಳಲಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಇದೇ ವೇಳೆ ಮುಂದಿನ ಸಾರ್ವತ್ರಿಕ ಚುನಾವಣೆಗಾಗುವಾಗ ತೃತೀಯ ರಂಗಕ್ಕೊಬ್ಬರು ಪ್ರಧಾನಿ ಅಭ್ಯರ್ಥಿಬೇಕಾಗಿದ್ದರೆ. ಸದ್ಯ ಎಲ್ಲರಿಗೂ ಸಹ್ಯವಾಗಬಲ್ಲ ಹಾಗೂ ಮೋದಿಯ ಪ್ರಭಾವಳಿಗೆ ಸರಿಸಮ ವಾಗಿರುವ ವ್ಯಕ್ತಿತ್ವವನ್ನು ಹೊಂದಿರುವ ಸರ್ವ ಸಮ್ಮತ ನಾಯಕ ಎಂದು ಇರುವುದು ಮುಖರ್ಜಿ. ಹೀಗಾಗಿ ಅವರು ಕಾಂಗ್ರೆಸ್‌ನಿಂದ ಹೊರ ಹೋಗುವ ಸನ್ನಾಹದಲ್ಲಿದ್ದಾರೆ. ಇದರ ಮುನ್ಸೂಚನೆಯೇ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ರಾಷ್ಟ್ರಪತಿಯಾದ ಬಳಿಕ ಮುಖರ್ಜಿ ಕಾಂಗ್ರೆಸಿಗರಾಗಿ ಉಳಿದಿಲ್ಲ. ಈ ಹುದ್ದೆ ಅಲಂಕರಿಸಿದವರು ಹುದ್ದೆಯಿಂದ ನಿರ್ಗಮಿಸಿದ ಮೇಲೂ ರಾಜ ಕೀಯ ವಾಗಿ ತಟಸ್ಥ ಧೋರಣೆಯನ್ನು ಅನುಸರಿಸುತ್ತಾರೆ. ಇದು ಇಷ್ಟರ ತನಕ ನಡೆದುಕೊಂಡು ಬಂದಿರುವ ಸಂಪ್ರದಾಯ. ರಾಷ್ಟ್ರಪತಿ ಯಾದವರು ಹುದ್ದೆಯಿಂದ ನಿರ್ಗಮಿಸಿದ ಬಳಿಕ ಸಕ್ರಿಯ ರಾಜಕೀಯಕ್ಕೆ ಬಂದ ಉದಾಹರಣೆ ಇಲ್ಲ. ಇದೀಗ ಮುಖರ್ಜಿ ಈ ಸಂಪ್ರದಾಯವನ್ನು ಮುರಿಯುತ್ತಾರೆಯೇ ಎನ್ನುವುದು ಜನರಿಗಿರುವ ಕುತೂಹಲ.
ರಾಜಕೀಯವಾಗಿ ಏನೇ ವಿಶ್ಲೇಷಣೆಗಳಿದ್ದರೂ ಆರ್‌ಎಸ್‌ಎಸ್ ತನ್ನ ಮುಖ್ಯ ಕಾರ್ಯಕ್ರಮವೊಂದಕ್ಕೆ ವಿರುದ್ಧ ಸಿದ್ಧಾಂತವನ್ನು ಪ್ರತಿಪಾದಿಸುವ ನಾಯಕನನ್ನು ಆಹ್ವಾನಿಸಿದ್ದು ಮತ್ತು ಅವರು ಈ ಆಹ್ವಾನವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಒಂದು ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಇಂಥ ಒಂದು ಅಪರೂಪದ ವಿದ್ಯಮಾನಕ್ಕೆ ರಾಜಕೀಯ ಸ್ಪರ್ಷ ನೀಡುವುದು ತೀರಾ ಅಗತ್ಯವೇನೂ ಅಲ್ಲ. ವಿಭಿನ್ನ ಸಿದ್ಧಾಂತಗಳು ಪರಸ್ಪರ ಸಂವಾದ ನಡೆಸಿ ಒಮ್ಮತಕ್ಕೆ ಬರುವುದರಲ್ಲಿ ಸಂಸದೀಯ ಪ್ರಜಾಸತ್ತೆಯ ಯಶಸ್ಸು ನಿಂತಿದೆ. ರಾಷ್ಟ್ರ ನಿರ್ಮಾಣದ ಮುಖ್ಯ ನೆಲೆಗಟ್ಟೇ ವಿಭಿನ್ನ ಅಭಿಪ್ರಾಯಗಳನ್ನು ಆಲಿಸಿ ಸರ್ವಸಮ್ಮತವಾದ ತೀರ್ಮಾನವೊಂದಕ್ಕೆ ಬರುವುದು. ಇದು ಸಾಧ್ಯ ವಾಗದಿದ್ದರೆ ಜನರು ಸಂಕುಚಿತ ದೃಷ್ಟಿಕೋನಗಳನ್ನು ಹೊಂದಿರುವ ಸಣ್ಣ ಗುಂಪುಗಳಿಗೆ ಸೀಮಿತವಾಗಿ ಬಿಡುವ ಅಪಾಯವಿದೆ. ಸದ್ಯಕ್ಕೆ ದೇಶದಲ್ಲಿ ಇಂತಹ ಒಂದು ವಾತಾವರಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಖರ್ಜಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಮಹತ್ವವಿದೆ. ಅಲ್ಲದೆ ಪ್ರಚಲಿತ ರಾಜಕೀಯ ವ್ಯವಸ್ಥೆಯ ಬಗ್ಗೆಯೇ ಮುಖರ್ಜಿ ಕಳವಳ ಹೊಂದಿದ್ದಾರೆ. ರಾಜಕೀಯ ನಾಯಕರ ನೈತಿಕ ಅಧಃಪತನದ ಬಗ್ಗೆ ಅವರು ಮಾತನಾಡಿದ್ದುಂಟು. ಅದರಲ್ಲೂ ನಾಯಕರು ಬಳಸುವ ಭಾಷೆಯ ಬಗ್ಗೆ ಅವರು ಆಗಾಗ ಎಚ್ಚರಿಕೆ ರೂಪದ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಕೆಲವು ವಿಚಾರಗಳ ಮೇಲೆ ಅವರು ಆರ್‌ಎಸ್‌ಎಸ್ ಸಭೆಯಲ್ಲಿ ಮಾತನಾಡುವ ಸಾಧ್ಯತೆಯೂ ಇದೆ. ಏನೇ ಆದರೂ ಅವರು ಈ ಒಂದು ಭಾಷಣವನ್ನು ಬಹಳ ನಾಜೂಕಾಗಿ ನಿಭಾಯಿಸುವ ಅಗತ್ಯವಿದೆ. ಅತಿಥಿಯ ಶಿಷ್ಟಾಚಾರವನ್ನು ಪಾಲಿಸಿಕೊಂಡೇ ಕೆಲವು ಕಹಿ ಸತ್ಯಗಳನ್ನು ಹೇಳುವ ಸಂದಿಗ್ಧ ಸ್ಥಿತಿಯನ್ನು ಅವರು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಎಲ್ಲರದ್ದು.
ಹಾಗೆಂದು ಮುಖರ್ಜಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೂಡಲೇ ದೇಶದಲ್ಲಿರುವ ಎಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಗೆಹರಿಯುತ್ತವೆ/ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ನಡುವಿನ ಸಂಘರ್ಷ ಕೊನೆಗೊಳ್ಳುತ್ತಿದೆ ಎಂದಲ್ಲ. ಆದರೆ ಇದರಿಂದ ತದ್ವಿರುದ್ಧ ಸಿದ್ಧಾಂತಗಳ ನಡುವೆ ಕೂಡಾ ಸಂವಾದ ಸಾಧ್ಯ ಎಂಬ ಸಂದೇಶವೊಂದು ರವಾನೆಯಾ ಗುತ್ತದೆ. ಒಟ್ಟಾರೆಯಾಗಿ ದೇಶದಲ್ಲಿ ಒಂದು ಭಾವನಾತ್ಮಕ ಬದಲಾವಣೆ ಕಾಣಲು ಸಾಧ್ಯ. ರಕ್ತಪಾತಕ್ಕಿಂತ ನಾಗರಿಕ ಚರ್ಚೆಗಳು ಮೇಲು ಎನ್ನುವ ಸಕಾರಾತ್ಮಕ ಚಿಂತನೆ ಮೊಳಕೆಯೊಡೆದರೆ ಈ ಭೇಟಿ ಸಾರ್ಥಕವಾದಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.