ವಿಶ್ವಸಂಸ್ಥೆಯ ವಾಸ್ತವ ತೆರೆದಿಟ್ಟ ಪ್ರಧಾನಿ ಬದಲಾವಣೆ ಅತ್ಯಗತ್ಯ
Team Udayavani, Sep 24, 2020, 6:12 AM IST
ವಿಶ್ವಸಂಸ್ಥೆಯು 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಕಾರ್ಯ ಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯು ವಿಶ್ವಾಸದ ಕೊರತೆ ಎದುರಿಸುತ್ತಿದೆ ಎಂದಿದ್ದಾರೆ.
ಇದು ನಿಜಕ್ಕೂ ಬಲಿಷ್ಠ ಸಂದೇಶವೇ ಸರಿ. ಆದರೆ ಈ ಮಾತು ಜಾಗತಿಕ ಸಮುದಾಯಕ್ಕೆ ಅಷ್ಟೇನೂ ಅಚ್ಚರಿ ಹುಟ್ಟಿಸುತ್ತಿಲ್ಲ ಎನ್ನುವುದು, ಪ್ರಧಾನಿಗಳ ಮಾತಲ್ಲಿ ಸತ್ಯವಿದೆ ಎನ್ನುವುದನ್ನು ಸಾರುತ್ತದೆ.
ಏಕೆಂದರೆ ದಶಕಗಳಿಂದ ವಿಶ್ವಸಂಸ್ಥೆಯ ಆಶಯಗಳಿಗೂ, ಅದು ಇಡುತ್ತಿರುವ ಹೆಜ್ಜೆಗಳಿಗೂ ತಾಳಮೇಳವೇ ಇಲ್ಲದಂತಾಗಿದೆ. ಕೆಲವೇ ಕೆಲವು ರಾಷ್ಟ್ರಗಳ ಕೈಗೊಂಬೆಯಂತೆ ವರ್ತಿಸುವ ವಿಶ್ವಸಂಸ್ಥೆಯು ಬರೀ ಖಂಡನೆಗಳಿಗೆ, ಫಲಿತಾಂಶವಿಲ್ಲದ ಚರ್ಚೆಗಳಿಗೆ, ಭಾಷಣಗಳಿಗೆ ಸೀಮಿತವಾದ ಸಂಸ್ಥೆಯಾಗಿದೆ ಎನ್ನುವಂತಿರುತ್ತವೆ ಅದರ ನಡೆಗಳು.
ವಿಶ್ವಸಂಸ್ಥೆಯ ಪ್ರಮುಖ ಭಾಗಗಳಾಗಿರುವ ಯುನೆಸ್ಕೋ, ವಿಶ್ವ ಆರೋಗ್ಯ ಸಂಸ್ಥೆ, ಭದ್ರತಾ ಮಂಡಳಿ, ಮಾನವ ಹಕ್ಕುಗಳ ಆಯೋಗ ತಮ್ಮ ಮೂಲೋದ್ದೇಶಕ್ಕೆ ತಕ್ಕಂತೆ ಕಾರ್ಯಪ್ರವೃತ್ತವಾಗುವುದು ಕಾಣಿಸುತ್ತಲೇ ಇಲ್ಲ. ಬದಲಾವಣೆಗೆ ತೆರೆದುಕೊಳ್ಳಲು ಅದಕ್ಕೇ ಮನಸ್ಸೇ ಇಲ್ಲವೆಂದೆನಿಸುತ್ತದೆ. ದಶಕಗಳಿಂದ ಒಂದರ್ಥದಲ್ಲಿ ಅಮೆರಿಕದ ಹಿಡಿತದಲ್ಲಿದ್ದ ವಿಶ್ವಸಂಸ್ಥೆ ಈಗ ಚೀನದತ್ತ ವಾಲುತ್ತಿದೆ ಎನ್ನುವುದಷ್ಟೇ ಆಗಿರುವ ಬದಲಾವಣೆ! ವಿಶ್ವಸಂಸ್ಥೆಯ ವಿವಿಧ ಅಂಗಗಳಲ್ಲಿ ಕೆಲ ವರ್ಷಗಳಿಂದ ಚೀನ ಪ್ರಮುಖ ಆಸನಗಳಲ್ಲಿ ಕುಳಿತುಕೊಳ್ಳುತ್ತಿದೆ. ವಿಶ್ವಸಂಸ್ಥೆಯ ವಿರುದ್ಧದ ಅಮೆರಿಕದ ಅಸಮಾಧಾನಕ್ಕೂ ಈ ಸಂಗತಿಯೇ ಕಾರಣ ಹೊರತು, ವಿಶ್ವಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದಂತೂ ಅಲ್ಲ.
ಕೋವಿಡ್‌ನ ಈ ಸಂಕಷ್ಟಕರ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನದ ಪ್ರಭಾವ ಅಧಿಕವೇ ಇದೆ ಎನ್ನುವುದು ಜಗತ್ತಿಗೆ ಸ್ಪಷ್ಟವಾಯಿತು. ಕೋವಿಡ್ ಆರಂಭವಾದಾಗ, ಚೀನವನ್ನು ರಕ್ಷಿಸುವುದರಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅಮೂಲ್ಯ ಸಮಯವನ್ನು ಪೋಲು ಮಾಡಿತು. ರೋಗದ ತೀವ್ರತೆಯನ್ನು ಅವಗಣಿಸಿ ಜಾಗತಿಕ ತುರ್ತುಸ್ಥಿತಿಯನ್ನು ಘೋಷಿಸಲು ಅದು ವಿಳಂಬ ಮಾಡಿದ ಕಾರಣಕ್ಕಾಗಿಯೇ ಜಗತ್ತು ಇಂದು ಇಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ವಿಶ್ವಸಂಸ್ಥೆಯ ಶಾಂತಿ ಪಾಲನೆ ಪಡೆ, ಭದ್ರತಾ ಮಂಡಳಿ, ಮಾನವ ಹಕ್ಕುಗಳ ಆಯೋಗದ ನಡೆಗಳು ಎಲ್ಲೆಡೆ ಒಂದೇ ತೆರನಾಗಿರುವುದಿಲ್ಲ. ಉದಾಹರಣೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಕಾಂಡವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಅಕ್ಷರಶಃ ವಿಫಲವಾಗುತ್ತಲೇ ಬಂದಿದೆ. ಅನ್ಯ ದೇಶಗಳಲ್ಲಿ ಸ್ವಲ್ಪ ಕುಂದುಕೊರತೆಗಳು ಕಂಡರೂ ಕಠಿನ ನಿಲುವು ತಾಳುವ ಯುನೆಸ್ಕೋ ವಿಚಾರಕ್ಕೆ ಬಂದರೆ, ಅದು ಮಧ್ಯಪ್ರಾಚ್ಯದಲ್ಲಿ ಉಗ್ರರಿಂದ ಪಾರಂಪರಿಕ ತಾಣಗಳ ನೆಲಸಮವಾದರೂ, ಬಾಯಿಮಾತಿನ ಖಂಡನೆಗಷ್ಟೇ ತನ್ನ ಜವಾಬ್ದಾರಿಯನ್ನು ಇಳಿಸಿಕೊಂಡುಬಿಡುತ್ತದೆ. ಸಾವಿರಾರು ಜನ ಐಸಿಸ್‌ನಂಥ ಉಗ್ರ ಸಂಘಟನೆಗಳಿಗೆ ಬಲಿಯಾದರೂ ಲಕ್ಷಾಂತರ ಜನ ನೆಲೆ ಕಳೆದುಕೊಂಡು ವಲಸೆ ಹೋದರೂ ಮಾನವ ಹಕ್ಕುಗಳ ಆಯೋಗ ಹೆಚ್ಚು ಮಾತನಾಡುವುದೇ ಇಲ್ಲ.
ಕಾಶ್ಮೀರದಲ್ಲಿ ಪಾಕ್ ಪೋಷಿತ ಉಗ್ರರಿಂದ ಸಾವುನೋವು ಸಂಭವಿಸಿದರೂ, ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಮನ ಅಷ್ಟಾಗಿ ಮಿಡಿಯುವುದಿಲ್ಲ. ಒಟ್ಟಲ್ಲಿ ಕೇವಲ ಅಂಕಿಸಂಖ್ಯೆಗಳನ್ನು ಎದುರಿಡುವುದೇ ತಮ್ಮ ಕೆಲಸ ಎಂದು ಈ ಸಂಸ್ಥೆಯ ಅಂಗಗಳು ಭಾವಿಸಿವೆ. ವಿಶ್ವಸಂಸ್ಥೆಯ ಪರಿಹಾರ, ಪುನರ್ವಸತಿ ವಿಭಾಗದ ಕೆಲಸವೂ ಹೇಳಿಕೊಳ್ಳುವಂತಿಲ್ಲ. ಅಲ್ಲಿ ಬರೀ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿವಿಧ ರಾಷ್ಟ್ರಗಳು ಆರೋಪಿಸುತ್ತಲೇ ಬಂದಿವೆ. ಈ ಕಾರಣಕ್ಕಾಗಿಯೇ, ವಿಶ್ವಸಂಸ್ಥೆಯ ಸಂರಚನೆಯನ್ನೇ ಬದಲಿಸಿ, ಅದು ಒಂದೆರಡು ದೇಶಗಳ ಕಪಿಮುಷ್ಠಿಯಿಂದ ಮುಕ್ತವಾಗುವಂತೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.