ಹೆಚ್ಚುವರಿ ಶಿಕ್ಷಕರಿಗೆ ಭಡ್ತಿ ನೀಡಿ ವರ್ಗಾವಣೆ ಮಾಡಿ
Team Udayavani, Jan 19, 2023, 6:00 AM IST
ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಭಡ್ತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂಬ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಸ್ಪಷ್ಟೋಕ್ತಿ ಭಡ್ತಿಯ ನಿರೀಕ್ಷೆಯಲ್ಲಿದ್ದ ಹಿರಿಯ ಶಿಕ್ಷಕರಿಗೆ ನಿರಾಸೆ ಮೂಡಿಸಿದೆ. ಕಳೆದ ಕೆಲವು ತಿಂಗಳುಗಳಿಂದೀಚೆಗೆ ಭಡ್ತಿ ಲಭಿಸುವ ಇರಾದೆಯಲ್ಲಿದ್ದ ಸಾವಿರಾರು ಹಿರಿಯ ಶಿಕ್ಷಕರು ಸರಕಾರದ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದಾರೆ.
ಶಿಕ್ಷಕರ ವರ್ಗಾವಣೆ, ಭಡ್ತಿ ಪ್ರಕ್ರಿಯೆಗಳು ಪ್ರತೀ ವರ್ಷ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದ್ದು ವಾರ್ಷಿಕ ಸಮಸ್ಯೆಯಾಗಿ ಮಾರ್ಪ ಟ್ಟಿದೆ. ಸರಕಾರ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗತ್ತಿ ಕೊಂಡ ಸಂದರ್ಭದಲ್ಲಿಯೇ ಈ ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆತಂಕ ವ್ಯಕ್ತಪಡಿಸಿತ್ತು. ಮಾತ್ರವಲ್ಲದೆ ಮೊದಲು ಅರ್ಹರಿಗೆ ಭಡ್ತಿ ನೀಡಿ ಆ ಬಳಿಕ ವರ್ಗಾವಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿತ್ತು.
ಆದರೆ ಶಿಕ್ಷಣ ಇಲಾಖೆ ಇದಕ್ಕೆ ತಲೆಕೆಡಿಸಿಕೊಳ್ಳದೆ ತನ್ನ ಪೂರ್ವನಿಗದಿತ ವೇಳಾಪಟ್ಟಿಯಂತೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಮಾ.16ರ ವರೆಗೆ ನಡೆಯಲಿದೆ. ಹಂತವಾರು ಪ್ರಕ್ರಿಯೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಗೊಳಿಸಲಾಗುತ್ತಿದೆ. ಸರಕಾರದ ಈ ಬಿಗಿ ಧೋರಣೆಯಿಂದಾಗಿ ಮುಂದಿನ 2-3 ತಿಂಗಳುಗಳಲ್ಲಿ ನಿವೃತ್ತರಾಗಲಿರುವ ಹಿರಿಯ ಶಿಕ್ಷಕರಿಗೆ ಭಡ್ತಿಯ ಅವ ಕಾಶ ಕೈತಪ್ಪಿ ಹೋಗಲಿದೆ. ಮಾ.31ರೊಳಗೆ ಅರ್ಹರಿಗೆ ಭಡ್ತಿ ಸಿಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ನಿವೃತ್ತರಾಗಲಿರುವ ಶಿಕ್ಷಕರಿಗೆ ದ್ರೋಹ ಬಗೆದಂತಾಗಲಿದೆ.
ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ಸಾವಿರಕ್ಕೂ ಅಧಿಕ ಶಿಕ್ಷಕರು ಸದ್ಯ ದಲ್ಲಿಯೇ ನಿವೃತ್ತಿಯಾಗಲಿದ್ದಾರೆ. ಒಂದು ವೇಳೆ ಸರಕಾರ ಈಗಲೇ ಅವರಿಗೆ ಭಡ್ತಿ ನೀಡಿದಲ್ಲಿÉ ಒಂದಿಷ್ಟು ಹೆಚ್ಚುವರಿ ವೇತನ, ಸವಲತ್ತುಗಳು ಲಭಿಸುತ್ತಿದ್ದವು ಮಾತ್ರವಲ್ಲದೆ ಗೌರವವೂ ಹೆಚ್ಚುತ್ತಿತ್ತು. ಈ ಹಿಂದೆ ಮೀಸಲಾತಿ ವಿಚಾರದಲ್ಲಿನ ಗೊಂದಲದಿಂದಾಗಿ ಭಡ್ತಿಯನ್ನು ಮುಂದೂ ಡುತ್ತ ಬರಲಾಗಿತ್ತು. ವಾರಗಳ ಹಿಂದೆಯಷ್ಟೇ ಕೊನೆಗೊಂಡ ಬೆಳಗಾವಿ ಅಧಿವೇಶನದಲ್ಲಿ ಈ ಗೊಂದಲ ನಿವಾರಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಶೀಘ್ರ ಭಡ್ತಿ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಇವರೆಲ್ಲರ ನಿರೀಕ್ಷೆಗೆ ಸರಕಾರ ತಣ್ಣೀರೆರಚಿದೆ.
ದಶಕಗಳಿಗೂ ಅಧಿಕ ಕಾಲ ಶಿಕ್ಷಕರಾಗಿ ಮಕ್ಕಳಿಗೆ ವಿದ್ಯೆ ಧಾರೆ ಎರೆದ ಶಿಕ್ಷಕರನ್ನು ಸರಕಾರ ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂಬ ವಾದ ಸಾರ್ವಜನಿಕ ವಲಯದಿಂದಲೂ ಕೇಳಿಬರತೊಡಗಿದೆ. ಒಂದೆರಡು ತಿಂಗಳ ಕಾಲ ಶಾಲಾ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುವ ಅವಕಾಶದಿಂದ ವಂಚಿತರಾಗಿಸುತ್ತಿರುವುದು ಖೇದನೀಯ.
ಅದಾಗ್ಯೂ ಈಗ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಿದರೂ ಅದು ಅಧಿಕೃತವಾಗಿ ಜಾರಿಗೆ ಬರುವುದು ಮುಂದಿನ ಶೈಕ್ಷಣಿಕ ವರ್ಷದ ಆರಂಭ ದಲ್ಲಿಯೇ. ಸರಕಾರ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಇಷ್ಟೊಂದು ಆತುರ ತೋರುತ್ತಿರುವುದಾದರೂ ಏಕೆ ಎಂಬುದು ಶಿಕ್ಷಕರ ಸಂಘದ ಪ್ರಶ್ನೆ. ಈ ವಿಚಾರದಲ್ಲಿ ಶಿಕ್ಷಕರ ಸಂಘ ಮತ್ತು ಅಧಿಕಾರಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಹೆಚ್ಚುವರಿ ಶಿಕ್ಷಕರು ಮೊದಲು ಭಡ್ತಿ ನೀಡಿ ಬಳಿಕ ವರ್ಗಾವಣೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದಾರೆಯೇ ಹೊರತು ವರ್ಗದ ಬಗೆಗಲ್ಲ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.