ಇಕ್ಕಟ್ಟಿನಲ್ಲಿ ಸಿಲುಕಿಸಿದ ನಿರ್ಣಯ: ಬಡ್ತಿ ಮೀಸಲು
Team Udayavani, Mar 31, 2018, 6:00 AM IST
ಸಂವಿಧಾನಬದ್ಧ ಮೀಸಲಾತಿ ವಿಚಾರದಲ್ಲಿ ಸರಕಾರಗಳು ಸ್ವಲ್ಪ ಯಡವಟ್ಟು ಮಾಡಿದರೂ ಹೇಗೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ರಾಜ್ಯ ಸರಕಾರದ ಬಡ್ತಿ ಮೀಸಲು ಕಾಯ್ದೆ. ಸರಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಲು ಸಂವಿಧಾನದ ಬೆಂಬಲವಿದೆ, ಕಾನೂನಿನ ಬಲವೂ ಇದೆ. ಆದರೆ, ಇದಾವುದೂ ಇಲ್ಲದೆ, ಕೇವಲ ಕಾಯ್ದೆಯ ಮೂಲಕ ಒಂದು ಸೀಮಿತ ಸಮುದಾಯಕ್ಕೆ ನೆರವಾಗಲು ಹೋದರೆ ಆಗುವ ಅಪಾಯವೇನು ಎಂಬುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಶಾಸಕಾಂಗ ತನಗೆ ಅಧಿಕಾರವಿದೆ ಎಂದು ಹೇಳಿ ಸಂವಿಧಾನಬದ್ಧ ಹಕ್ಕುಗಳನ್ನು ಮೀರಿ ತೀರ್ಮಾನ ಕೈಗೊಂಡರೆ ಅದರಿಂದ ಅದೆಷ್ಟು ಮಂದಿ ಅನ್ಯಾಯ, ಅವಮಾನ ಎದುರಿಸಬೇಕಾಗುತ್ತದೆ ಎಂಬುದೂ ಗೊತ್ತಾಗುತ್ತಿದೆ.
ಮೀಸಲಾತಿ ಅಡಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ನೀಡುವ ಅವಕಾಶವನ್ನು ಕಲ್ಪಿಸಲೆಂದು ಹಾಗೂ 1978ರ ಏಪ್ರಿಲ… 27ರಿಂದ ನೀಡಲಾಗಿರುವ ಸಾಂದರ್ಭಿಕ ಸೇವಾ ಹಿರಿತನವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರಕಾರ “ಸರಕಾರಿ ನೌಕರರ ಮೀಸಲಾತಿ ಆಧರಿತ ಬಡ್ತಿ ನೌಕರರ ಜ್ಯೇಷ್ಠತೆ ನಿರ್ಣಯ ಕಾಯ್ದೆ 2002′ ಜಾರಿಗೆ ತಂದಿತ್ತು. 2017ರ ಫೆ. 9ರಂದು ಈ ಕಾಯ್ದೆ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಮೂರು ತಿಂಗಳಲ್ಲಿ ಬಡ್ತಿ ಮೀಸಲಿನಡಿ ಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಬೇಕು. ಹೊಸದಾಗಿ ಜೇಷ್ಠತಾ ಪಟ್ಟಿ ಪ್ರಕಟಿಸಿ ಈ ಕಾಯ್ದೆಯಿಂದ ಅನ್ಯಾಯಕ್ಕೊಳಗಾದವರಿಗೆ ಬಡ್ತಿ ನೀಡಬೇಕು ಎಂದು ಆದೇಶಿಸಿತ್ತು. ಅಲ್ಲದೆ, ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಸರಕಾರಿ ಹು¨ªೆಗಳಲ್ಲಿ ಆಯಾ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಹಿಂದುಳಿದಿರುವಿಕೆ, ಆಡಳಿತ ದಕ್ಷತೆಯಂತಹ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯ. ಈ ಬಡ್ತಿಗಳಿಂದ ಒಟ್ಟಾರೆ ಕಾರ್ಯದಕ್ಷತೆಗೆ ಧಕ್ಕೆ ಬಂದಿಲ್ಲ ಎಂಬುದರ ಬಗ್ಗೆ ಅಧ್ಯಯನ ಆಧರಿತ ಸಾಕ್ಷ್ಯಾಧಾರಗಳನ್ನು ಸರಕಾರ ಮಂಡಿಸಬೇಕಿತ್ತು ಎಂದು ಬಡ್ತಿ ಮೀಸಲು ರದ್ದುಗೊಳಿಸುವ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಆದರೆ, ಇದನ್ನು ಕಾನೂನಿಗಿಂತ ರಾಜಕೀಯವಾಗಿ ಪರಿಗಣಿಸಿದ ಕಾಂಗ್ರೆಸ್ ಸರಕಾರ, ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದರೆ ಎಸ್‌ಸಿ, ಎಸ್‌ಟಿ ನೌಕರರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳಿ ಕೋರ್ಟ್ ಆದೇಶ ಪಾಲಿಸಲು ಕಾಲಾವಕಾಶ ಕೇಳುತ್ತಾ ಅದರ ಮಧ್ಯೆ “ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆ ವಿಸ್ತರಿಸುವ ವಿಧೇಯಕ-2017′ ರೂಪಿಸಿತ್ತು. ಈ ಸಂದರ್ಭದಲ್ಲೂ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಗಳನ್ನು ಪಾಲಿಸದ ಕಾರಣ ಕಾಯ್ದೆಯ ಬಲ ಸಿಗಲಿಲ್ಲ. ಇದೀಗ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಎ. 20ರೊಳಗೆ ಪಾಲಿಸಬೇಕು ಎಂದು ಕೋರ್ಟ್ ಖಡಕ್ಕಾಗಿ ಹೇಳಿದ್ದು, ಇಲ್ಲವಾದಲ್ಲಿ ಎ. 25ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಹೇಳಿದೆ.
ಒಂದೊಮ್ಮೆ ಆದೇಶ ಪಾಲಿಸದೆ ಎ. 25 ರಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾದರೆ ಸುಪ್ರೀಂ ಕೋರ್ಟ್ ಅವರನ್ನು ನ್ಯಾಯಾಂಗ ನಿಂದನೆ ಆರೋಪದ ಮೇಲೆ ಜೈಲಿಗೆ ಕಳುಹಿಸುವ ಸಾಧ್ಯತೆಯೂ ಇದೆ. ಇದುವರೆಗೆ ಶಾಸಕಾಂಗದ ಸೂಚನೆ ಮೇಲೆ ಬಡ್ತಿ ಮೀಸಲು ಕುರಿತ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ವಿಳಂಬ ಮಾಡಿದ ಕಾರ್ಯಾಂಗ ಇದೀಗ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ಶಾಸಕಾಂಗದ ಹಸ್ತಕ್ಷೇಪ ದೂರವಾಗುತ್ತಿದ್ದಂತೆ ಆದೇಶ ಪಾಲಿಸಲು ಮುಂದಾಗಿದೆ. ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ಆಯೋಗ ಸೇರಿದಂತೆ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸಿದ್ಧಪಡಿಸಿರುವ ಜೇಷ್ಠತಾ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿ ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ಕಳುಹಿಸಿಕೊಡುವಂತೆ ನಿರ್ದೇಶನ ನೀಡಿದೆ. ಈ ಜೇಷ್ಠತಾ ಪಟ್ಟಿ ಸಿದ್ಧವಾದ ಮೇಲೆ ಸರಕಾರ ಬಡ್ತಿ ಮೀಸಲಾತಿಯಡಿ ಬಡ್ತಿ ಹೊಂದಿದ ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಬಡ್ತಿ ನೀಡಬೇಕು. ಈ ರೀತಿ ಮಾಡಿದಾಗ ಖಾಲಿಯಾಗುವ ಹುದ್ದೆಗಳಿಗೆ ಜೇಷ್ಠತಾ ಪಟ್ಟಿ ಆಧರಿಸಿ ನೌಕರರನ್ನು ನೇಮಕ ಮಾಡಬೇಕು. ಈ ಸಂದರ್ಭದಲ್ಲಿ ದಶಕಗಳ ಕಾಲ ಬಡ್ತಿಯಲ್ಲಿ ಅನ್ಯಾಯಕ್ಕೊಳಗಾದವರು ನ್ಯಾಯ ಪಡೆಯುತ್ತಾರಾದರೂ, ಸರಕಾರ ಮಾಡಿದ ತಪ್ಪಿಗೆ ಬಡ್ತಿ ಹೊಂದಿದ ಸಾವಿರಾರು ನೌಕರರು ಹಿಂಬಡ್ತಿ ಯಿಂದ ಅನ್ಯಾಯ ಮಾತ್ರವಲ್ಲ, ಅವಮಾನಕ್ಕೂ ಒಳಗಾಗುತ್ತಾರೆ. ಒಟ್ಟಿನಲ್ಲಿ ಕಾರ್ಯಾಂಗದ ವಿಚಾರದಲ್ಲಿನ ರಾಜಕೀಯ ನಿರ್ಣಯ ಕಾರ್ಯಾಂಗ ವನ್ನು ಹೇಗೆ ಇಕ್ಕಟ್ಟಿನಲ್ಲಿ ಸಿಲುಕಿಸುತ್ತದೆ ಎಂಬುದೂ ಬಹಿರಂಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.