ಪುನರ್ವಸತಿಯೇ ದೊಡ್ಡ ಸವಾಲು; ಶಾಶ್ವತ ನೆಲೆ ಒದಗಿಸಿ
Team Udayavani, Aug 14, 2019, 5:11 AM IST
ರಾಜ್ಯದ 17 ಜಿಲ್ಲೆಗಳ 86 ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹದಿಂದ 2217 ಗ್ರಾಮಗಳು ಮುಳುಗಡೆಯಾಗಿ 41,915 ಮನೆಗಳು ಕುಸಿದಿವೆ. ಇದೀಗ ರಾಜ್ಯ ಸರ್ಕಾರಕ್ಕೆ ಪುನರ್ವಸತಿ ದೊಡ್ಡ ಸವಾಲಾಗಿದೆ.
ತಕ್ಷಣಕ್ಕೆ 1224 ಆಶ್ರಯ ಕೇಂದ್ರ ತೆರೆದು 3,94,486 ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿದೆಯಾದರೂ ಅವರಿಗೆ ಶಾಶ್ವತ ನೆಲೆ ಒದಗಿಸಿ ತಲೆ ಮೇಲೆ ಸೂರು ಕಲ್ಪಿಸಬೇಕಾಗಿದೆ.
ಕಳೆದ ವರ್ಷ ಕೊಡಗಿನಲ್ಲಿ ನಡೆದ ಭೂ ಕುಸಿತದಿಂದ ಮನೆ ಕಳೆದು ಕೊಂಡವರಿಗೆ 800 ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ಇನ್ನೂ ಪೂರ್ಣಗೊಂಡಿಲ್ಲ. ಮಾದರಿ ಮನೆ ನಿರ್ಮಾಣ ಮಾಡಿ ತೋರಿಸಿ ಒಂದು ವರ್ಷ ಅವಧಿಯಲ್ಲಿ ಶಾಶ್ವತ ಮನೆ ನಿರ್ಮಿಸಿಕೊಡುವುದಾಗಿ ಹೇಳಲಾಗಿತ್ತು. ಪ್ರತಿ ಮನೆಯ ವೆಚ್ಚ ಹತ್ತು ಲಕ್ಷ ರೂ. ಎಂದು ತಿಳಿಸಲಾಗಿತ್ತು. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ.
ಹೀಗಾಗಿ, ಇದೀಗ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾದ ಪ್ರಯತ್ನ ನಡೆಸಬೇಕಾಗಿದೆ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರಾದರೂ ಅಷ್ಟು ಸುಲಭಕ್ಕೆ ಮನೆ ನಿರ್ಮಾಣವಾಗುವುದಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳನ್ನು ಕ್ರೋಡೀಕರಿಸಿ ಅನುದಾನ ಒಟ್ಟುಗೂಡಿಸಿ ದಕ್ಷ ಹಾಗೂ ಕ್ರಿಯಾಶೀಲ ಅಧಿಕಾರಿಗಳ ತಂಡ ರಚಿಸಿ ವಸತಿ ವ್ಯವಸ್ಥೆ ಕಲ್ಪಿಸುವ ಹೊಣೆಗಾರಿಕೆ ನೀಡಬೇಕಾಗಿದೆ. ವಸತಿ ಕಾಮಗಾರಿಗೆ ಕೆಟಿಟಿಪಿ ಕಾಯ್ದೆಯಿಂದ ವಿನಾಯಿತಿ ಪಡೆದು ತ್ವರಿತಗತಿಯಲ್ಲಿ ಮನೆ ನಿರ್ಮಿಸಿಕೊಡಬೇಕು. ಅದಕ್ಕಾಗಿ ವಿಶೇಷ ಯೋಜನೆ ರೂಪಿಸಬೇಕಾಗಿದೆ. 2217 ಗ್ರಾಮಗಳಲ್ಲಿ ಕಂದಾಯ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಿ ಮನೆ ನಿರ್ಮಿಸುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕಾಗಿದೆ.
ಕೊಡಗು ವಿಚಾರದಲ್ಲಿ ಬದಲಿ ಸ್ಥಳದಲ್ಲಿ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. ಆದರೆ, ಇದೀಗ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ಥಳೀಯರು ಹೊಲ, ಗದ್ದೆ, ತೋಟ ಹೊಂದಿರುವುದರಿಂದ ಆಯಾ ಗ್ರಾಮಗಳಲ್ಲೇ ಮನೆಗಳ ನಿರ್ಮಾಣ ಆಗಬೇಕಾಗಿದೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವೂ ಹೌದು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟ ವಿಸ್ತರಣೆಗೆ ಪ್ರವಾಹ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆವರು ಒಬ್ಬರೇ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳ ಜತೆಗೂಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಬಗ್ಗೆ ನಿಗಾ ವಹಿಸಿದ್ದಾರೆ. ನಿರಾಶ್ರಿತರಿಗೆ ತಾತ್ಕಾಲಿಕವಾಗಿ 1224 ಆಶ್ರಯ ಕೇಂದ್ರಗಳಲ್ಲಿ ವ್ಯವಸ್ಥೆಯನ್ನೂ ಮಾಡುವಲ್ಲಿ ಮುತುವರ್ಜಿ ವಹಿಸಿದ್ದಾರೆ.
ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ನೀಡಿ ನೀವೇ ಮನೆ ನಿರ್ಮಿಸಿಕೊಳ್ಳಿ ಎಂದರೆ ಈ ಸಂದರ್ಭದಲ್ಲಿ ಕಷ್ಟವಾಗಬಹುದು. ಜತೆಗೆ, ಸರ್ಕಾರದ ವತಿಯಿಂದ ನೀಡುವ ಹಣ ಫಲಾನುಭವಿಗೆ ತಲುಪುವಲ್ಲಿ ವ್ಯತ್ಯಾಸಗಳೂ ಆಗುವ ಸಾಧ್ಯತೆಯಿದೆ. ಹೀಗಾಗಿ, ಮುಖ್ಯಮಂತ್ರಿಯವರೇ ಖುದ್ದಾಗಿ ಈ ಬಗ್ಗೆ ಕಾಳಜಿ ವಹಿಸಿ ವಸತಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುದಾನದಡಿ ಪಕ್ಕಾ ಮನೆ ನಿರ್ಮಿಸಿಕೊಡುವ ಬಗ್ಗೆ ಕ್ರಮ ಕೈಗೊಂಡರೆ ಸೂಕ್ತವಾಗಬಹುದು.
ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರಾದರೂ ಅಷ್ಟು ಸುಲಭಕ್ಕೆ ಮನೆ ನಿರ್ಮಾಣವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.