Public Examination: ವಿವೇಕಯುತ ನಡೆ ಇರಲಿ
Team Udayavani, May 29, 2024, 6:02 AM IST
ಮುಂದಿನ ಅಂದರೆ 2024-25ರ ಶೈಕ್ಷಣಿಕ ವರ್ಷದಲ್ಲಿಯೂ 5, 8 ಮತ್ತು 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ಅಂದರೆ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಹೇಳಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಮೌಲ್ಯಾಂಕನ ಪರೀಕ್ಷೆ -1 ಮತ್ತು ಮಾರ್ಚ್ ತಿಂಗಳಿನಲ್ಲಿ ಮೌಲ್ಯಾಂಕನ ಪರೀಕ್ಷೆ-2 ನಡೆಸಿ ಎಪ್ರಿಲ್ ತಿಂಗಳಿನಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಇಲಾಖೆ ತಿಳಿಸಿದೆ. 2023-24ರ ಸಾಲಿನಲ್ಲಿ ಇದೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗಿತ್ತು, ಅದು ಕಾನೂನು ಬಿಕ್ಕಟ್ಟಿಗೆ ಸಿಲುಕಿಕೊಂಡು ಪ್ರಸ್ತುತ ಫಲಿತಾಂಶ ಪ್ರಕಟಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರ ನಡುವೆಯೇ ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಮೌಲ್ಯಾಂಕನ ಪರೀಕ್ಷೆ ನಡೆ ಸುವ ಇಂಗಿತವನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿರುವುದು ಅಚ್ಚರಿಯೂ ಹೌದು.
ಬಿಜೆಪಿ ಸರಕಾರದ ಅವಧಿಯಲ್ಲಿ 5 ಮತ್ತು 8ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹಾಲಿ ಕಾಂಗ್ರೆಸ್ ಸರಕಾರ ಇದನ್ನು 9 ಮತ್ತು 11ನೇ ತರಗತಿಗಳಿಗೆ ವಿಸ್ತರಿಸಿತ್ತು. ಅಲ್ಲಿಂದ ಈ ಪರೀಕ್ಷೆ ಸುದೀರ್ಘ ಕಾನೂನು ತೊಳಲಾಟಕ್ಕೆ ಸಿಲುಕಿದೆ. ಈ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದರ ವಿರುದ್ಧ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವಾಗಿರುವ “ರುಪ್ಸಾ’ ಮೊದಲು ರಾಜ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ವಿಚಾರಣೆ ನಡೆಸಿ ಪರೀಕ್ಷೆ ನಡೆಸುವ ಸರಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿತ್ತು. ಇದನ್ನು ರಾಜ್ಯ ಸರಕಾರ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿಯ ಮೂಲಕ ಪ್ರಶ್ನಿಸಿತ್ತು. ದ್ವಿಸದಸ್ಯ ಪೀಠವು ಎರಡೂ ಕಡೆಯವರ ವಾದವನ್ನು ಆಲಿಸಿ ಪರೀಕ್ಷೆಗಳನ್ನು ನಡೆಸಲು ಸರಕಾರಕ್ಕೆ ಷರತ್ತುಬದ್ಧ ಅನುಮತಿ ನೀಡಿತ್ತು. ಹೀಗಾಗಿ ಕಾನೂನು ಸಮರದ ನಡುವೆಯೇ ಪರೀಕ್ಷೆಗಳು ನಡೆದಿದ್ದವು. ಈ ಮಧ್ಯೆ ಹೈಕೋರ್ಟ್ ದ್ವಿಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ “ರುಪ್ಸಾ’ವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಪರ್ಯಾ ಸವೆಂದರೆ ನಡೆದ ಮೌಲ್ಯಾಂಕನ ಪರೀಕ್ಷೆಗಳ ಫಲಿತಾಂಶ ಪ್ರಕಟನೆಯ ದಿನವಾದ ಎಪ್ರಿಲ್ 8ರಂದೇ ಸುಪ್ರೀಂ ಕೋರ್ಟ್ ಫಲಿತಾಂಶ ಪ್ರಕಟನೆಗೆ ತಡೆ ನೀಡಿತ್ತಲ್ಲದೆ ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಆಟವಾಡುತ್ತಿದೆ ಎಂದು ಕಟುವಾಗಿ ಆಕ್ರೋಶ ವ್ಯಕ್ತಪಡಿಸಿತ್ತು. ಜತೆಗೆ 2 ವಾರಗಳಲ್ಲಿ ಈ ಬಗ್ಗೆ ಉತ್ತರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು.
ಹೀಗೆ ರುಪ್ಸಾ ಸಲ್ಲಿಸಿದ ಮೇಲ್ಮನವಿಯ ಅಂತಿಮ ವಿಲೇವಾರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಕಳೆದ ಶೈಕ್ಷಣಿಕ ವರ್ಷಗಳಲ್ಲಿ ಈ ಮೌಲ್ಯಾಂಕನ ಪರೀಕ್ಷೆಯ ಕಾನೂನು ಸಮರದ ನಡುವೆ ಸಿಲುಕಿ ಮೂರು ತರಗತಿಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತವರು ಅನುಭವಿಸಿದ ಸಂಕಟ, ಗೊಂದಲ ಕಣ್ಣಮುಂದೆಯೇ ಇದೆ. ಸರಕಾರ-ಖಾಸಗಿ ಎಂಬ ಎರಡು ತುದಿಗಳಲ್ಲಿ ಈ ವಿಷಯ ಹಗ್ಗಜಗ್ಗಾಟಕ್ಕೆ ಒಳಗಾಗಿರುವುದರ ನೇರ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕರ ಮೇಲಾಗಿದೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕೆಲವು ಅನುದಾನಿತ ಶಾಲೆಗಳಲ್ಲಿ ಇದೇ ಗೊಂದಲದಿಂದ ವಿದ್ಯಾರ್ಥಿಗಳು ಎರಡೆರಡು ಬಾರಿ ಪರೀಕ್ಷೆ ಬರೆಯುವಂತಾಗಿತ್ತು. ಈ ಬಾರಿ ಆರಂಭದಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಯುತ್ತಿರುವಾಗಲೇ ಹೈಕೋರ್ಟ್ ಸುತ್ತೋಲೆಗೆ ತಡೆಯಾಜ್ಞೆ ನೀಡಿದ್ದರಿಂದ ಪರೀಕ್ಷೆಯ ವೇಳಾಪಟ್ಟಿ ಯಲ್ಲಿ ಹಲವು ಬಾರಿ ಹಠಾತ್ ವ್ಯತ್ಯಯಗಳು ಉಂಟಾದವು. ಕೊನೆಗೂ ಪರೀಕ್ಷೆಗಳು ನಡೆದು ಫಲಿತಾಂಶ ಪ್ರಕಟವಾಗಬೇಕು ಎನ್ನುವಾಗ ಅದಕ್ಕೆ ತಡೆಯಾಜ್ಞೆ ಬಂತು. ಇವೆಲ್ಲದರ ಪ್ರತಿಕೂಲ ಪರಿಣಾಮ ವಿದ್ಯಾರ್ಥಿಗಳ ಮೇಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ವಿವೇಚಿಸಿ, ವಿವೇಕಯುತವಾದ ಹೆಜ್ಜೆ ಇರಿಸುವುದು ವಿಹಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.