Repo Rate ಯಥಾಸ್ಥಿತಿ: ಸಾಲಗಾರರು ಕೊಂಚ ನಿರಾಳ
Team Udayavani, Apr 7, 2023, 5:55 AM IST
ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು ರೆಪೊ ದರವನ್ನು ಯಥಾಸ್ಥಿತಿಯಲ್ಲಿರಿಸಲು ತೀರ್ಮಾನಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಸತತ 6 ಬಾರಿ ರೆಪೊ ದರವನ್ನು ಹೆಚ್ಚಿಸುತ್ತಲೇ ಬರುವ ಮೂಲಕ ಆರ್‌ಬಿಐ, ಏರುಗತಿಯಲ್ಲಿದ್ದ ದೇಶದ ಹಣದುಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಸುತ್ತಲೇ ಬಂದಿತ್ತು. ಆದರೆ ಈಗ ಹಣದುಬ್ಬರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಕಾಣದಿದ್ದರೂ ಒಂದಿಷ್ಟು ಸ್ಥಿರತೆಯನ್ನು ಕಂಡುಕೊಂಡಿರುವ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೊ ದರದಲ್ಲಿ ಈ ಬಾರಿ ಯಾವುದೇ ಏರಿಳಿತ ಮಾಡದಿರಲು ತೀರ್ಮಾನಿಸಿದೆ. ಆರ್‌ಬಿಐಯ ಈ ನಿರ್ಧಾರ ಜನಸಾಮಾನ್ಯರು ಅದರಲ್ಲೂ ಸಾಲಗಾರರಲ್ಲಿ ಕೊಂಚ ನಿರಾಳತೆಯ ಭಾವ ಮೂಡಿಸಿದೆ.
ಈ ಹಿಂದೆ ಸತತವಾಗಿ ರೆಪೊ ದರವನ್ನು ಹೆಚ್ಚಿಸಿದ ಪರಿಣಾಮ 250 ಮೂಲಾಂಶಗಳಷ್ಟು ಏರಿಕೆಯಾಗಿ ಸದ್ಯ ರೆಪೊ ದರ ಶೇ. 6.5ರಷ್ಟಿದೆ. ಇದರಿಂದಾಗಿ ಸಾಲದ ಮೇಲಣ ಬಡ್ಡಿದರ ಮತ್ತು ಮಾಸಿಕ ಕಂತುಗಳ ಸಂಖ್ಯೆ ಏರಿಕೆಯಾದ ಪರಿಣಾಮ ಸಾಲಗಾರರ ಮೇಲೆ ಹೆಚ್ಚಿನ ಹೊರೆ ಬೀಳುವಂತಾಗಿದೆ. ಈ ಬಾರಿಯೂ ರೆಪೊ ದರ ಹೆಚ್ಚಳದ ಸಾಧ್ಯತೆಗಳ ಬಗೆಗೆ ಕಳೆದೊಂದು ವಾರದಿಂದ ಚರ್ಚೆ ನಡೆಯುತ್ತಿದ್ದುದರಿಂದ ಸಾಲಗಾರರು ಒಂದಿಷ್ಟು ಆತಂಕಿತರಾಗಿದ್ದರು.
ಈ ಬಾರಿಯ ಹಣಕಾಸು ಪರಾಮರ್ಶೆ ಸಮಿತಿ ಸಭೆಗೂ ಮುನ್ನ ರೆಪೊ ದರದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದರೆ ಆರ್‌ಬಿಐ ಕೂಡ ಇದೇ ಇಂಗಿತವನ್ನು ವ್ಯಕ್ತಪಡಿಸಿತ್ತು. ಭೌಗೋಳಿಕ ಮತ್ತು ಜಾಗತಿಕ ಅನಿಶ್ಚತ ತೆಗಳು, ಜಾಗತಿಕ ಮಟ್ಟದಲ್ಲಿನ ಆರ್ಥಿಕ ತಲ್ಲಣಗಳು, ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿ ರುವ ಹಣದುಬ್ಬರ ಪ್ರಮಾಣ, ಹಣದುಬ್ಬರದಿಂದ ಪಾರಾಗಲು ಅಮೆರಿಕ, ಬ್ರಿಟನ್ ಆದಿಯಾಗಿ ಜಗತ್ತಿನ ಆರ್ಥಿಕ ಬಲಾಡ್ಯ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಹೆಚ್ಚಿಸುತ್ತಲೇ ಬಂದಿರುವುದು, ವಿಶ್ವದ ಕೆಲವೊಂದು ಬ್ಯಾಂಕ್‌ಗಳು ನಷ್ಟಕ್ಕೊಳಗಾಗಿ ಬಾಗಿಲು ಮುಚ್ಚುತ್ತಿರುವುದು, ಸಣ್ಣ ದೇಶಗಳು ಆರ್ಥಿಕವಾಗಿ ದಿವಾಳಿಯಾಗಿರುವುದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳುತ್ತಿರುವಂತೆಯೇ ಕೆಲವೊಂದು ತೈಲೋತ್ಪನ್ನ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿರುವುದು… ಮತ್ತಿತರ ಜಾಗತಿಕ ಬೆಳವಣಿಗೆಗಳ ಪರಿಣಾಮ ಆರ್‌ಬಿಐ ಈ ಬಾರಿಯೂ ತನ್ನ ಕಠಿನ ನಿಲುವಿ ನಲ್ಲಿ ಸಡಿಲಿಕೆ ಮಾಡುವ ಸಾಧ್ಯತೆ ಕಡಿಮೆ ಎಂದೇ ಭಾವಿಸಲಾಗಿತ್ತು. ಇವೆಲ್ಲದರ ಹೊರತಾಗಿಯೂ ದೇಶೀಯವಾಗಿ ಹಣದುಬ್ಬರ ಪ್ರಮಾಣದಲ್ಲಿ ಒಂದಿಷ್ಟು ಇಳಿಕೆ ಕಂಡುಬಂದಿರುವುದು, ನೇರ, ಪರೋಕ್ಷ, ಕಾರ್ಪೊರೇಟ್, ಜಿಎಸ್‌ಟಿ ಸಹಿತ ಬಹು ತೇಕ ತೆರಿಗೆಗಳ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ದಾಖಲಾಗಿ ದೇಶದ ಆರ್ಥಿಕತೆ ಚೇತೋಹಾರಿಯಾಗಿರುವುದರಿಂದ ಆರ್‌ಬಿಐನ ಹಣಕಾಸು ಪರಾಮರ್ಶೆ ಸಮಿತಿ ಈ ಬಾರಿಯ ತನ್ನ ಸಭೆಯಲ್ಲಿ ಕಳೆದೊಂದು ವರ್ಷದಿಂದ ಅನುಸರಿಸಿಕೊಂಡು ಬಂದ ಸುಧಾರಣ ಕ್ರಮದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಜನಸಾಮಾನ್ಯರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಲಭಿಸೀತು ಎಂಬ ಆಶಾವಾದವೊಂದು ಮೂಡಿತ್ತು. ಇದಕ್ಕೆ ಪೂರಕವೆಂಬಂತೆ ಆರ್‌ಬಿಐಯಿಂದ ಈ ನಿರ್ಧಾರ ಹೊರಬಿದ್ದಿದೆ.
ಆದರೂ ಮುಂದಿನ ದಿನಗಳಲ್ಲಿ ದೇಶದ ಮತ್ತು ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಅಗತ್ಯವಾದರೆ ಮತ್ತೆ ರೆಪೊ ದರ ಹೆಚ್ಚಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಆರ್‌ಬಿಐ ಮುನ್ನೆಚ್ಚರಿಕೆಯನ್ನೂ ನೀಡಿದೆ.
ಒಟ್ಟಿನಲ್ಲಿ ಆರ್‌ಬಿಐ ಹಣದುಬ್ಬರದ ನಿಯಂತ್ರಣದ ಜತೆಯಲ್ಲಿ ದೇಶದ ಆರ್ಥಿಕತೆ, ಹಣಕಾಸು ವ್ಯವಹಾರಗಳ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರ ದಂತೆ ಎಚ್ಚರಿಕೆ ಹೆಜ್ಜೆ ಇರಿಸಿದೆ. ರೆಪೊ ದರದಲ್ಲಿ ಇಳಿಕೆ ಮಾಡಿದಲ್ಲಿ ಈಗ ಇಳಿಕೆಯ ಹಾದಿಯಲ್ಲಿರುವ ಹಣದುಬ್ಬರ ಮತ್ತೆ ಏರುಗತಿಯತ್ತ ಸಾಗಿ ದೇಶದ ಒಟ್ಟಾರೆ ಆರ್ಥಿ ಕತೆಯ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಜಾಣನಡೆಯನ್ನು ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.