ಮಳೆ ಸಂಕಷ್ಟ ನಿವಾರಿಸಿ, ಬೆಂಗಳೂರಿನ ಹಿರಿಮೆ ಉಳಿಸಿ
Team Udayavani, Sep 7, 2022, 6:00 AM IST
ಇತ್ತೀಚೆಗಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಕೆಲವು ಬಡಾವಣೆಗಳು ದ್ವೀಪದಂತೆ ಬದಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ಸಿಟಿಯ ಮರ್ಯಾದೆ ಹರಾಜಾಗುತ್ತಿದೆ. ರವಿವಾರ ರಾತ್ರಿ ಸುರಿದ ಮಳೆಯಂತೂ ಬೆಂಗಳೂರು ಪೂರ್ವದಲ್ಲಿರುವ ಬಡಾವಣೆಗಳಲ್ಲಿ ನೀರು ತುಂಬಿ, ಉದ್ಯಾನನಗರಿಯ ಸ್ಥಿತಿಯನ್ನು ಜಗಜ್ಜಾಹೀರು ಮಾಡಿದೆ.
ಹವಾಮಾನ ಇಲಾಖೆಯ ಪ್ರಕಾರ 75 ವರ್ಷದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಮಾಣದ ಮಳೆ ಸುರಿದಿದೆ. ಏಕಾಏಕಿ ಮಳೆ ಸುರಿದದ್ದರಿಂದ ಭಾರೀ ಹಾನಿಯಾಗಿದೆ. ವಿಚಿತ್ರವೆಂದರೆ ಇದುವರೆಗೆ ಮಳೆಹಾನಿಯನ್ನೇ ಕಾಣದಿದ್ದ ಬಡಾವಣೆಗಳಿಗೂ ನೀರು ನುಗ್ಗಿ ಭಾರೀ ನಷ್ಟ ಉಂಟಾಗಿರುವುದು.
ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಟೆಕ್ ಕಂಪೆನಿಗಳು ಹೆಚ್ಚಾಗಿರುವೆಡೆ ಅಧಿಕ ಮಳೆಹಾನಿ ಸಂಭವಿಸಿರುವುದರಿಂದ ಈ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಅಲ್ಲದೆ ಮೂಲ ಸೌಕರ್ಯ ನೀಡುವಲ್ಲಿ ಬೆಂಗಳೂರು ಸೋತಿರುವುದೇ ಇದಕ್ಕೆಲ್ಲ ಕಾರಣ ಎಂಬಿತ್ಯಾದಿಯಾಗಿ ವಿಶ್ಲೇಷಣೆಗಳೂ ನಡೆಯುತ್ತಿವೆ.
ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಈ ಪರಿಯ ಹಾನಿಗೆ ಸರಕಾರಗಳು ಮತ್ತು ಜನರೇ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು. ನಗರ ಯೋಜನೆ ರೂಪಿಸುವಾಗ ಎಲ್ಲೆಲ್ಲಿ ನೀರು ನಿಲ್ಲುವ ಸಾಧ್ಯತೆಗಳಿವೆ, ನೀರು ಸರಾಗವಾಗಿ ಹರಿದುಹೋಗುವಂತೆ ಏನು ಮಾಡಬೇಕು ಎಂಬ ಬಗ್ಗೆ ಹೆಚ್ಚು ಯೋಚಿಸಿಯೇ ಇಲ್ಲವೆಂಬಂತೆ ಕಾಣುತ್ತದೆ. ಅಲ್ಲದೆ ರಾಜಕಾಲುವೆಯ ಒತ್ತುವರಿಯೇ ಈ ಪರಿಯ ವಿಕೋಪಕ್ಕೆ ಕಾರಣವೂ ಆಗಿದೆ. ಪ್ರತೀ ಬಾರಿಯ ಮಳೆಗಾಲದಲ್ಲೂ ಬಡಾವಣೆಗಳಿಗೆ, ಮನೆಗಳಿಗೆ ನೀರು ನುಗ್ಗಿದಾಗ ಸರಕಾರಗಳು, ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುತ್ತೇವೆ ಎಂಬ ಭರವಸೆ ನೀಡುತ್ತಲೇ ಬರುತ್ತವೆ. ಆದರೆ ಮಳೆಗಾಲ ಕಳೆದ ಮೇಲೆ ಸರಕಾರ ನೀಡಿದ್ದ ಭರವಸೆ ಕರಗಿಹೋಗಿ ಜನರೂ ಮರೆತು ಬಿಡುತ್ತಾರೆ. ಒಂದು ರೀತಿಯಲ್ಲಿ ಇದು ಪ್ರತೀ ಮಳೆಗಾಲದ ಭರವಸೆಯಂತೆ ಆಗಿಹೋಗಿದೆ.
ಸದ್ಯ ಇಡೀ ಜಗತ್ತೇ ಒಂದಿಲ್ಲೊಂದು ರೀತಿಯ ಪ್ರಾಕೃತಿಕ ವಿಕೋಪಗಳಿಂದಾಗಿ ತತ್ತರಿಸುತ್ತಿದೆ. ಹೀಗಾಗಿ ಸದ್ಯ ಇಲ್ಲಿ ಏಕೆ ಇಷ್ಟು ಜೋರಾಗಿ ಮಳೆ ಬಂತು ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಮ್ಮ ಸರಕಾರಗಳು ಮಾತ್ರ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಬೇಕು ಮಾತ್ರವಲ್ಲದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರನ್ನು ಯಾವುದೇ ಮುಲಾಜಿಲ್ಲದೆ ತೆರವು ಮಾಡುವ ಕೆಲಸಕ್ಕೆ ಮುಂದಾಗಲೇಬೇಕು.
ಈಗಾಗಲೇ ಖ್ಯಾತ ಐಟಿ ಉದ್ಯಮಿ ಮೋಹನದಾಸ್ ಪೈ ಅವರು ರಿಂಗ್‌ರೋಡ್‌ನ ಅವ್ಯವಸ್ಥೆಗಳನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಮೂಲಸೌಕರ್ಯಗಳನ್ನು ಸರಿಪಡಿಸದೆ ಹೋದರೆ ಬೆಂಗಳೂರಿನಲ್ಲಿರುವ ಐಟಿ ಕಂಪೆನಿಗಳು ಬೇರೆಡೆಗೆ ವಲಸೆ ಹೋಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಮೋಹನದಾಸ್ ಪೈ ಅವರ ಈ ಎಚ್ಚರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಹೋದರೆ ಯಾವುದೇ ಅಂತಾರಾಷ್ಟ್ರೀಯ ಕಂಪೆನಿಗಳೂ ಇಲ್ಲಿಗೆ ಬರುವುದಿಲ್ಲ. ಹಾಗೆಯೇ ಇಲ್ಲಿ ಉಳಿಯುವುದೂ ಇಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.