ಉಳಿದಿರುವುದು ಒಂದೇ ವರ್ಷದ ಆಳ್ವಿಕೆ: ಚುರುಕು ಆಡಳಿತ ನೀಡಿ
Team Udayavani, Apr 18, 2017, 11:12 AM IST
ಇನ್ನೊಂದು ಅವಧಿಯ ಜಯದ ಕನಸು ನನಸಾಗಬೇಕಾದರೆ ಉಪಚುನಾವಣೆಯ ವಿಜಯದ ಗೆಲುವಿನಿಂದ ಹೊರಬಂದು ಜನರ ವಿಶ್ವಾಸ ಗಳಿಸುವಂತಹ ಆಡಳಿತ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಆ ದಿಶೆಯಲ್ಲಿ ಕೆಲಸ ಆರಂಭಿಸಿರುವುದು
ಒಳ್ಳೆಯ ಸಂಕೇತ.
ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸಿ ನಿರಾಳರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ 3-4 ತಿಂಗಳು ಚುನಾವಣೆಯ ತಯಾರಿ, ಪ್ರಚಾರ, ಓಡಾಟ ಎಂದೆಲ್ಲ ಪೂರ್ತಿ ವ್ಯಸ್ತರಾಗಿದ್ದ ಸಚಿವರಿಗೂ ಈಗ ಆಡಳಿತದತ್ತ ಗಮನ ಹರಿಸಲು ಪುರುಸೊತ್ತು ಸಿಕ್ಕಿದೆ ಎನ್ನುವುದೇ ಸಮಾಧಾನದ ಸಂಗತಿ. ಬರವೂ ಸೇರಿದಂತೆ ರಾಜ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವು ಇಲಾಖೆಗಳಿಗೆ ಸಿಬ್ಬಂದಿ ನೇಮಕ ಕೆಲಸ ಇನ್ನೂ ಆಗಿಲ್ಲ. ಅದರಲ್ಲೂ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆಯಿಂದ ಇನ್ನಿಲ್ಲಧಿದಂತೆ ಹೈರಾಣಾಗಿದೆ. ಹೀಗಾಗಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಇದು ಸಕಾಲವೂ ಹೌದು. ಈ ನಿಟ್ಟಿನಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆಗೆ ನಿರಂತರ ಸಭೆ ನಡೆಸಲು ನಿರ್ಧರಿಸಿರುವುದು ಉತ್ತಮ ನಡೆ. ಆಡಳಿತ ಯಂತ್ರದಲ್ಲಿ ಸಹಭಾಗಿಗಳಾಗಿರುವ ಪ್ರತಿಯೊಬ್ಬರನ್ನು ಕಾರ್ಯತತ್ಪರರಾಗುವಂತೆ ಮಾಡುವುದೇ ಆಡಳಿತ ಯಂತ್ರ ಚುರುಕುಗೊಳಿಸುವುದು. ಆಳುವವರಿಗೇ ಜಡ ಹಿಡಿದರೆ ಅವರ ಕೈಕೆಳಗಿನ ಅಧಿಕಾರಿಗಳೂ ಉದಾಸೀನರಾಗುತ್ತಾರೆ. ಇದಾಗಬಾರದಾಗಿದ್ದರೆ ಮೇಲಿನಿಂದಲೇ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವಾಗಬೇಕು.
ಸದ್ಯ ರಾಜ್ಯದ ದೊಡ್ಡ ಸಮಸ್ಯೆ ಬರ. 139 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತವೆಂದು ಘೋಷಿಸಿದ್ದರೂ ಉಳಿದ ತಾಲೂಕುಗಳಲ್ಲಿ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ. ರಾಜ್ಯದ ಶೇ. 90 ಭಾಗ ಬರದ ಹೊಡೆತಕ್ಕೆ ತತ್ತರಿಸಿದೆ ಎಂದು ವರದಿಗಳು ಹೇಳುತ್ತಿವೆ. ಕೇಂದ್ರ ಸರಕಾರ ಬರ ಪರಿಹಾರಕ್ಕೆಂದು 1685 ಕೋ. ರೂ. ಬಿಡುಗಡೆ ಮಾಡಿದೆ. ರಾಜ್ಯ ತನ್ನ ಪಾಲನ್ನೂ ಸೇರಿಸಿ ರೈತರ ಖಾತೆಗಳಿಗೆ ಪರಿಹಾರದ ಹಣವನ್ನು ಜಮೆ ಮಾಡಬೇಕಾಗಿದೆ. ಹಣ ರೈತರ ಖಾತೆಗೆ ಜಮೆಯಾಗಿದೆಯೇ? ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿವೆಯೇ? ಜನರಿಗೆ ಮತ್ತು ಜಾನುವಾರುಗಳಿಗೆ ಸಾಕಷ್ಟು ಕುಡಿಯುವ ನೀರಿನ ಪೂರೈಕೆಯಾಗುತ್ತಿದ್ದೆಯೇ ? ಇತ್ಯಾದಿ ವಿಚಾರಗಳ ಪರಿಶೀಲನೆ ತುರ್ತಾಗಿ ಆಗಬೇಕಿದೆ. ಬೆಂಗಳೂರಿನಲ್ಲಿ ಝಂಡಾ ಹೂಡಿರುವ ಉಸ್ತುವಾರಿ ಸಚಿವರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲು ಸಿಎಂ ಕಠಿಣ ನಿಲುವು ಕೈಗೊಳ್ಳಬೇಕು.
ಮುಂದೆ ಮಳೆಗಾಲದ ತಯಾರಿಯಾಗಬೇಕು. ಮಳೆಗಾಲ ಬರುವ ತನಕ ಬರಿಪರಿಹಾರವೇ ಮುಗಿಯದಿದ್ದರೆ ಪರಿಹಾರ ಕೊಟ್ಟೂ ಪ್ರಯೋಜನವಿಲ್ಲದಾಗಬಹುದು. ಜೂನ್‌ನಲ್ಲಿ ಶಾಲಾರಂಭದ ಒತ್ತಡವೂ ಇರುತ್ತದೆ. ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಸೈಕಲ್ ಎಂದು ಘೋಷಿಸಿರುವ ಹತ್ತಾರು ಭಾಗ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಮೇ 13ಕ್ಕೆ ಸರಕಾರಕ್ಕೆ ನಾಲ್ಕು ವರ್ಷ ತುಂಬುತ್ತದೆ. ತನ್ನದು ಅತ್ಯುತ್ತಮ ಆಡಳಿತ ಎಂದು ಸಿದ್ದರಾಮಯ್ಯ ಎಷ್ಟೇ ತುತ್ತೂರಿ ಊದಿಕೊಂಡರೂ ಅಲ್ಲಲ್ಲಿ ಲೋಪಗಳಾಗಿವೆ. ಅನೇಕ ಕಳಂಕಗಳು ಸರಕಾರಕ್ಕೆ ಅಂಟಿಕೊಂಡಿವೆ.
ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪದಿಂದಾಗಿ ಪೊಲೀಸರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆಯಿದೆ. ಅಂತೆಯೇ ಕಳೆದ ವರ್ಷ ನಡೆಸಿದ ಬರ ಪರಿಹಾರದ ಬಗ್ಗೆಯೂ ಅಪಸ್ವರಗಳಿವೆ. ಹೂಡಿಕೆ ಆಕರ್ಷಣೆಯ ಗುರಿ ಸಾಧಿಸಲು ಸರಕಾರ ಮಾಡುತ್ತಿರುವ ಪ್ರಯತ್ನ ಏನೇನೂ ಸಾಲದು ಎನ್ನಲಾಗುತ್ತಿದೆ. ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳಲು ಸರಕಾರಕ್ಕೆ ಇರುವುದು ಇನ್ನೊಂದೇ ವರ್ಷ. ಈಗ ಚುರುಕಾಗದ ಆಡಳಿತ ಯಂತ್ರ ಇನ್ಯಾವಾಗ ಚುರುಕಾಗುವುದು?
ಉಳಿದಿರುವುದು ಇನ್ನೊಂದು ವರ್ಷದ ಆಳ್ವಿಕೆ. ವಾಸ್ತವವಾಗಿ ಇದು ಚುನಾವಣೆಗೆ ತಯಾರಿ ನಡೆಸುವ ವರ್ಷ. ಹಿಂದೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಜನರ ಬದುಕನ್ನು ತಕ್ಕಮಟ್ಟಿಗೆ ಸಹನೀಯವಾಗಿಸುವ ಆಡಳಿತ ನೀಡಿದರೆ ಮಾತ್ರ ಮತ ಕೇಳಲು ಧೈರ್ಯವಾಗಿ ಜನರ ಮುಂದೆ ಹೋಗಬಹುದು. ಉಪ ಚುನಾವಣೆಯ ಫಲಿತಾಂಶ ಗೆಲುವು ಆತ್ಮವಿಶ್ವಾಸ ತುಂಬಿರಬಹುದು. ಹಾಗೆಂದು ಈ ಗೆಲುವನ್ನು ನಂಬಿಕೊಂಡು ಮೈಮರೆಯುವ ಕಾಲ ಇದಲ್ಲ. ಇನ್ನೊಂದು ಅವಧಿಗೆ ಸರಕಾರ ರಚಿಸುವ ಕನಸು ನನಸಾಗಬೇಕಾದರೆ ಜನರ ವಿಶ್ವಾಸ ಗಳಿಸುವಂತೆ ಕೆಲಸ ಮಾಡುವುದು ಅನಿವಾರ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.