ಮೇಲ್ಜಾತಿಯ ಬಡವರಿಗೆ ಮೀಸಲಾತಿ ಸ್ವಾಗತಾರ್ಹ ನಿರ್ಧಾರ
Team Udayavani, Jan 11, 2019, 5:25 AM IST
ಮೇಲ್ಜಾತಿಯ ಬಡವರಿಗೆ ಶೇ.10 ಮೀಸಲಾತಿ ಒದಗಿಸುವ ಮೋದಿ ಸರಕಾರದ ನಡೆ ಸದ್ಯ ಬಹುಚರ್ಚಿತ ವಿಷಯ. ಚುನಾವಣೆಯ ಹೊಸ್ತಿಲಲ್ಲಿ ಮೋದಿ ಕೈಗೊಂಡಿರುವ ಈ ನಿರ್ಧಾರ ಒಂದು ಚಾಣಾಕ್ಷ ನಡೆ ಎಂಬೆಲ್ಲ ಪ್ರಶಂಸೆಗಳಿಗೂ ಒಳಗಾಗಿದೆ. ರಾಜಕೀಯವಾಗಿ ಇದು ಜಾಣ ನಡೆಯೇ. ಸದ್ಯವೇ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಇಂಥದೊಂದು ನಿರ್ಧಾರ ಕೈಗೊಂಡಿರಬಹುದು. ವಿಶೇಷವೆಂದರೆ ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆ ಅಂಗೀಕಾರಗೊಂಡಿರುವುದು.
ಲೋಕಸಭೆಯಲ್ಲಂತೂ ಬರೀ ಮೂರು ಮತಗಳು ಮಾತ್ರ ವಿರುದ್ಧವಾಗಿ ಬಿದ್ದವು. ಮರುದಿನ ರಾಜ್ಯಸಭೆಯಲ್ಲಿ ತುಸು ವಿರೋಧ ವ್ಯಕ್ತವಾದರೂ ಮಸೂದೆ ಮಂಜೂರಾತಿಗೇನೂ ಸಮಸ್ಯೆಯಾಗಲಿಲ್ಲ. ಹಾಗೆಂದು ವಿಪಕ್ಷಗಳಿಗೆಲ್ಲ ಸರಕಾರದ ಈ ಮೀಸಲಾತಿ ಅಸ್ತ್ರದ ಬಗ್ಗೆ ಸಹಮತ ಇತ್ತು ಎಂದು ಭಾವಿಸಿದರೆ ತಪ್ಪಾದೀತು. ವಿಪಕ್ಷಗಳ ಪಾಲಿಗೆ ಈ ಮಸೂದೆಯನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಏಕೆಂದರೆ ಮಹಾರಾಷ್ಟ್ರ, ಗುಜರಾತ್ ಸೇರಿ ಕೆಲವು ರಾಜ್ಯಗಳಲ್ಲಿ ಮೇಲ್ವರ್ಗದವರು ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ಹೋರಾಟವನ್ನು ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ಬಹಿರಂಗವಾಗಿ ಬೆಂಬಲಿಸಿದ್ದವು. ಇದೀಗ ಆ ಬೇಡಿಕೆಯನ್ನು ಈಡೇರಿಸುವ ಕೇಂದ್ರದ ನಡೆಯನ್ನು ವಿರೋಧಿಸಿದರೆ ತಮ್ಮ ಇಬ್ಬಂದಿತನ ಬಯಲಾಗಬಹುದೆಂಬ ಆತಂಕ ವಿಪಕ್ಷಗಳಿಗಿತ್ತು.
ಹಾಗೆಂದು ಬಿಜೆಪಿ ಮೇಲ್ವರ್ಗದವರಿಗೆ ಮೀಸಲಾತಿ ಒದಗಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. 2016ರಲ್ಲಿ ಗುಜರಾತಿನ ಬಿಜೆಪಿ ಸರಕಾರ ಶೇ. 10 ಮೀಸಲಾತಿ ನೀಡಿತ್ತು. ಆದರೆ ಹೈಕೋರ್ಟ್ ತಕ್ಷಣವೇ ಇದನ್ನು ರದ್ದುಗೊಳಿಸಿತ್ತು. ಇದಕ್ಕೂ ಮೊದಲು 1991ರಲ್ಲಿ ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಮಂಡಲ ವಿವಾದದ ಕಾವು ತಗ್ಗಿಸಲು ಉದ್ದೇಶದಿಂದ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿ ಒದಗಿಸಿದ್ದರು. ಇದನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಸಂವಿಧಾನದಲ್ಲಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಒದಗಿಸಲು ಅವಕಾಶವಿಲ್ಲ ಎನ್ನುವುದು ಒಂದಾದರೆ ಒಟ್ಟು ಮೀಸಲಾತಿ ಶೇ. 50ರ ಗಡು ದಾಟಬಾರ ದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೀಗ ಮೋದಿ ಸರಕಾರದ ಶೇ. 10 ಮೀಸಲಾತಿ ಕೊಡುಗೆಯೂ ಈ ಎರಡು ಅಗ್ನಿಪರೀಕ್ಷೆಗಳನ್ನು ದಾಟಿ ಬರಬೇಕಿದೆ. ಈಗಾಗಲೇ ಮೀಸಲಾತಿ ನಿರ್ಧಾರ ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ದಾಖಲಾಗಿರುವುದರಿಂದ ಮೋದಿಯ ಮಾಸ್ಟರ್‌ಸ್ಟ್ರೋಕ್‌ನ ಚೆಂಡು ನ್ಯಾಯಾಲಯದ ಅಂಗಳಕ್ಕೆ ಬಿದ್ದಂತಾಗಿದೆ. ಸುಪ್ರೀಂಕೋರ್ಟ್ ಯಾವ ಬಗೆಯ ನಿಲುವನ್ನು ತಳೆಯಬಹುದೆಂಬುದನ್ನು ಕಾದು ನೋಡಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇಂಥದೊಂದು ನಿರ್ಧಾರಕ್ಕೆ ಮುಂದಾದದ್ದು ಸ್ವಾಗತಾರ್ಹವೆನ್ನುವುದರಲ್ಲಿ ಸಂಶಯವಿಲ್ಲ.
ಸಾಮಾಜಿಕ ಸಮಾನತೆಯನ್ನು ತರಲು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸೀಮಿತ ಅವಧಿಗೆ ಮೀಸಲಾತಿಯ ಸೌಲಭ್ಯ ನೀಡಬೇಕೆಂದು ಸಂವಿಧಾನ ಕತೃìಗಳು ಹೇಳಿದ್ದರು. ಆದರೆ ಸ್ವಾತಂತ್ರಾéನಂತರ ಮೀಸಲಾತಿ ಎನ್ನುವುದು ಮತಗಳಿಕೆಯ ಅಸ್ತ್ರವಾಗಿ ಬದಲಾಯಿತೆಂಬ ಆರೋಪವಿರುವುದು ಸುಳ್ಳಲ್ಲ. ಮೀಸಲಾತಿಯ ಲಾಭಕ್ಕಾಗಿ ಹಿಂದುಳಿಯಲು ಪೈಪೋಟಿ ಏರ್ಪಡುವ ಸನ್ನಿವೇಶವೂ ನಡೆಯಿತು. ಒಂದು ಉತ್ತಮ ಚಿಂತನೆ ನೈಜ ಫಲಾನುಭವಿಗಳ ಬದುಕಿಗೆ ನೆರವಾಗುವುದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂಬುದೂ ಈಗ ಚರ್ಚೆಯಾಗುತ್ತಿರುವ ಸಂಗತಿ.
ಇದೇ ವೇಳೆ ಮೇಲ್ವರ್ಗದಲ್ಲೂ ಬಡವರಿದ್ದಾರೆ. ಮೇಲ್ಜಾತಿಯಲ್ಲಿ ಜನಿಸಿದ್ದಾರೆ ಎಂಬ ಕಾರಣಕ್ಕಾಗಿ ಆರ್ಥಿಕವಾಗಿ ಸಶಕ್ತರಲ್ಲದವರು ಸರಕಾರದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿ ಜೀವನ ಪರ್ಯಂತ ಬಡವರಾಗಿಯೇ ಉಳಿಯಬೇಕೆ ಎನ್ನುವ ಪ್ರಶ್ನೆಯೂ ಇದೆ. ಈ ದೃಷ್ಟಿಯಿಂದ ಹೇಳುವುದಾದರೆ ಕೇಂದ್ರದ ನಿರ್ಧಾರ ಸೂಕ್ತವೆನಿಸಿದೆ. ಆದರೆ ಮೀಸಲಾತಿ ಸೌಲಭ್ಯಕ್ಕೆ ಅರ್ಹರಾಗಲು ವಾರ್ಷಿಕ 8 ಲ. ರೂ. ಆದಾಯ ಮಿತಿ ನಿಗದಿಪಡಿಸಿದ್ದು ಕೊಂಚ ಹೆಚ್ಚಾಯಿತೆಂಬ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಅಗತ್ಯವೆನಿಸಿದರೆ ಕೇಂದ್ರ ಸರಕಾರ ಮರುಪರಿಶೀಲಿಸಲಿ.
ಸರಕಾರಗಳ ಮತ್ತೂಂದು ಪ್ರಮುಖ ಕರ್ತವ್ಯವೆಂದರೆ ಸಾಮುದಾಯಿಕ ಹಿತವನ್ನು ಕಾಪಾಡುವಲ್ಲಿ ಕೈಗೊಳ್ಳುವ ಪ್ರತಿ ಯೋಜನೆಗಳು, ತೀರ್ಮಾನಗಳು ಹಾಗೂ ಇಂಥ ಕಾಯಿದೆಗಳ ದುರುಪಯೋಗವಾಗದಂತೆ ಕಟ್ಟೆಚ್ಚರ ವಹಿಸುವಂಥದ್ದು. ಈ ಹೊಣೆಗಾರಿಕೆಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು ಹಾಗೂ ಅದಕ್ಕೆ ಅವಕಾಶ ಕಲ್ಪಿಸಬಾರದು. ಇಲ್ಲವಾದರೆ ಒಂದು ನೀತಿಯ ನೈಜ ಫಲ ಅರ್ಹರಿಗೆ ಸಿಗುವುದಿಲ್ಲ. ಆಗ ಉದ್ದೇಶವೂ ಈಡೇರುವುದಿಲ್ಲ ಎಂಬುದನ್ನು ಮೊದಲು ಮನಗಾಣಬೇಕು. ಅದು ನೀತಿ ನಿರೂಪಿಸುವುದಕ್ಕಿಂತ ಹೆಚ್ಚಿನ ಆದ್ಯತೆಯದ್ದು ಎಂಬುದು ಸರಕಾರದ ನೆನಪಿನಲ್ಲಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.