ಚಿತ್ತಾಕರ್ಷಕ ವ್ಯಕ್ತಿತ್ವದ ನಾಯಕ ಎಸ್.ಎಂ.ಕೃಷ್ಣ
Team Udayavani, Dec 11, 2024, 6:00 AM IST
ರಾಜ್ಯ ರಾಜಕಾರಣದಲ್ಲಿ ಚಿತ್ತಾಕರ್ಷಕ ವ್ಯಕ್ತಿತ್ವ ಹೊಂದಿದ್ದ ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರು ರಾಷ್ಟ್ರ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಲೋಕಸಭೆ ಸ್ಪೀಕರ್ ಸ್ಥಾನಗಳನ್ನು ಹೊರತುಪಡಿಸಿ ರಾಜಕೀಯ ನಾಯಕರೊಬ್ಬರು ಅಲಂಕರಿಸಬಹುದಾದ ಎಲ್ಲ ಹುದ್ದೆಗಳನ್ನು ನಿರ್ವಹಿಸಿ, ಸೈ ಎನಿಸಿಕೊಂಡಿದ್ದರು. ಅಂಥ ಮಹಾನ್ ನಾಯಕರೊಬ್ಬರನ್ನು ಕಳೆದುಕೊಂಡ ಕರ್ನಾಟಕ ಈಗ ಅಕ್ಷರಶಃ ಬಡವಾಗಿದೆ.
ಸಂಸದೀಯ ರಾಜಕಾರಣದಲ್ಲಿ ಶಾಸಕರಿಂದ ಹಿಡಿದು ಮುಖ್ಯಮಂತ್ರಿ ತನಕ, ವಿಧಾನಸಭೆ ಸಭಾಧ್ಯಕ್ಷ ಸ್ಥಾನದಿಂದ ರಾಜ್ಯಪಾಲರ ತನಕ, ರಾಜ್ಯ ಸಚಿವರಿಂದ ಹಿಡಿದು ವಿದೇಶಾಂಗ ಸಚಿವರ ಹುದ್ದೆ ತನಕ ಹಲವು ಜವಾಬ್ದಾರಿಯನ್ನು ನಿರ್ವಹಿಸಿ, ಆಯಾ ಸ್ಥಾನಗಳಿಗೆ ನ್ಯಾಯ ಸಲ್ಲಿಸಿದ ಧೀಮಂತ ರಾಜಕಾರಣಿ ಎಸ್.ಎಂ.ಕೃಷ್ಣ ಅವರು. 1962ರಲ್ಲಿ ವಿದೇಶದಿಂದ ಉನ್ನತ ಶಿಕ್ಷಣ ಮುಗಿಸಿಕೊಂಡು ಮಂಡ್ಯಕ್ಕೆ ಬಂದು, ಮದ್ದೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ರಾಜಕಾರಣವನ್ನು ಶುರು ಮಾಡಿದರು. ನಂತರ ಲೋಕಸಭೆಗೆ ಆಯ್ಕೆಯಾದರು. ಬಳಿಕ ಕಾಂಗ್ರೆಸ್ ಸೇರಿದರು.
1972ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿ ದೇವರಾಜು ಅರಸು ಸಂಪುಟದಲ್ಲಿ ಕೈಗಾರಿಕೆ ಸಚಿವರಾದರು. ಹೀಗೆ ಅವರ ರಾಜಕೀಯ ಏರುಗತಿ ತಡೆಯಿಲ್ಲದೇ ಸಾಗಿ, ಮುಂದೆ 1999ರಲ್ಲಿ ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ರಾಜ್ಯದಲ್ಲಿ ಅಧಿಕಾಕ್ಕೇರಿದಾಗ, ಪಕ್ಷದ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ಈ ಅವಧಿಯು ಕರ್ನಾಟಕದ ಪಾಲಿಗೆ ಟರ್ನಿಂಗ್ ಪಾಯಿಂಟ್. ಆಗಷ್ಟೇ ಭಾರತವು ಜಾಗತಿಕವಾಗಿ ತೆರೆದು ಕೊಳ್ಳುತ್ತಿತ್ತು. ಇದರ ಗರಿಷ್ಠ ಲಾಭವನ್ನು ಕರ್ನಾಟಕಕ್ಕೆ ತಂದುಕೊಡುವಲ್ಲಿ ಕೃಷ್ಣ ಯಶಸ್ವಿಯಾದರು.
ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಕೇಂದ್ರವನ್ನಾಗಿಸಿ, ಜಗತ್ತಿನ ನಕಾಶೆಯಲ್ಲಿ ಎದ್ದು ಕಾಣುವಂತೆ ಮಾಡಿದರು.
ಭೂಮಿ ಯೋಜನೆ, ನಮ್ಮ ಮೆಟ್ರೋ, ಮಧ್ಯಾಹ್ನದ ಬಿಸಿಯೂಟ, ಪಾನೀಯ ನಿಗಮ ಸ್ಥಾಪನೆ, ಸ್ವತ್ಛ ಗ್ರಾಮ ಯೋಜನೆ, ಯಶಸ್ವಿನಿ ವಿಮಾ ಯೋಜನೆ, ಬಂಡವಾಳ ಹೂಡಿಕ ಸಮಾವೇಶ, ರೈತರಿಗೆ ಕಿಸಾನ್ ಕಾರ್ಡ್, ಸಿŒ ಶಕ್ತಿ ಸ್ವ-ಸಹಾಯ ಸಂಘ ಸ್ಥಾಪನೆ… ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಡಾ.ರಾಜಕುಮಾರ್ ಅಪಹರಣ, ಕಾವೇರಿ ವಿವಾದ, ರೈತರ ಆತ್ಮಹತ್ಯೆ, ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆ, ಸತತ ಬರಗಾಲ… ಹೀಗೆ ಹಲವು ಸವಾಲುಗಳನ್ನು ಅವರು ಎದುರಿಸಿದರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಭಾರತದ ನಂ.1 ಮುಖ್ಯಮಂತ್ರಿ ಎನಿಸಿಕೊಂಡಿದ್ದರು.
ಟೆನಿಸ್ ಆಟವನ್ನು ಇಷ್ಟಪಡುತ್ತಿದ್ದ ಕೃಷ್ಣ ಅವರದ್ದು ಶಿಸ್ತುಬದ್ಧ ಜೀವನ. ತಮ್ಮ ವೇಷಭೂಷಣದಲ್ಲಿ ಸಾಕಷ್ಟು ಶಿಸ್ತು ಅನುಸರಿಸುತ್ತಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿರ್ಗಳವಾಗಿ ಮಾತನಾಡುತ್ತಿದ್ದ ಅವರು, ಸದನಗಳ ಕಲಾಪದಲ್ಲಿ ಆಗಾಗ ಹಾಸ್ಯ ಚಟಾಕಿಗಳನ್ನು ಹಾರಿಸುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು, ಮುಂದಿನ ಪೀಳಿಗೆಯ ನಾಯಕರನ್ನು ಗುರುತಿಸಿದರು. ಡಿ.ಕೆ.ಶಿವಕುಮಾರ್‌ರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಿದರು. ತಮ್ಮ ಇಡೀ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿ ಕಳೆದ ಕೃಷ್ಣ ಅವರು 2017ರಲ್ಲಿ ಬಿಜೆಪಿ ಸೇರಿದ್ದರು. 92 ವರ್ಷ ತುಂಬು ಜೀವನ ನಡೆಸಿದ ಎಸ್.ಎಂ.ಕೃಷ್ಣ ಅವರನ್ನು ಕರ್ನಾಟಕವು ಹಲವು ಕಾರಣಕ್ಕೆ ನೆನಪಿಟ್ಟುಕೊಳ್ಳಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.