ಶಬರಿಮಲೆ ವಿವಾದ: ಆಡಳಿತಗಾರರ ವೈಫಲ್ಯ
Team Udayavani, Oct 20, 2018, 9:52 AM IST
ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟಿನ ಇತ್ತೀಚೆಗಿನ ತೀರ್ಪು ವಿವಾದದ ಸರಮಾಲೆಯನ್ನೇ ಸೃಷ್ಟಿಸಿದೆ.10ರಿಂದ 50 ವಯಸ್ಸಿನ ನಡುವಿನ ಮಹಿಳೆಯರಿಗೆ ಶಬರಿಮಲೆ ಕ್ಷೇತ್ರಕ್ಕೆ ಪ್ರವೇಶವಿಲ್ಲ ಎಂಬ ಶತಮಾನಗಳ ಹಿಂದಿನ ಪದ್ಧತಿಯನ್ನು ಸುಪ್ರೀಂ ಕೋರ್ಟಿನ ತೀರ್ಪು ಒಂದೇಟಿಗೆ ರದ್ದುಗೊಳಿಸಿರುವುದು ಈ ವಿವಾದಕ್ಕೆ ಕಾರಣ. ಧರ್ಮ ಮತ್ತು ಕಾನೂನಿನ ನಡುವಿನ ಸಂಘರ್ಷ ಹೊಸದೇನಲ್ಲ. ಧರ್ಮದ ಜತೆಗೆ ಕಾನೂನು ಸಂಘರ್ಷ ನಡೆಸಬಹುದು. ಆದರೆ ಜನರ ಧಾರ್ಮಿಕ ನಂಬಿಕೆಯ ಜತೆಗೆ ಸಂಘರ್ಷಕ್ಕಿಳಿದರೆ ಪರಿಣಾಮ ತೀವ್ರವಾಗಿರುತ್ತದೆ ಎನ್ನುವುದಕ್ಕೆ ಈ ವಿವಾದವೇ ನಿದರ್ಶನ.
ಆದರೆ ಕಾನೂನಿನ ಎದುರು ನಂಬಿಕೆಗೆ ಬೆಲೆಯಿಲ್ಲ. ಕಾನೂನು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಸಂವಿಧಾನ ಎಲ್ಲರಿಗೂ ಸಮಾನವಾದ ಧಾರ್ಮಿಕ ಹಕ್ಕುಗಳನ್ನು ನೀಡಿರುವುದರಿಂದ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು ತಾರತಮ್ಯ ಮಾತ್ರವಲ್ಲದೆ ಸಂವಿಧಾನ ದತ್ತವಾಗಿರುವ ಹಕ್ಕಿನ ನಿರಾಕರಣೆಯೂ ಆಗುತ್ತದೆ ಎನ್ನುವ ನೆಲೆಯಲ್ಲಿ ಸುಪ್ರೀಕೋರ್ಟಿನ ಪೀಠ 4:1 ಬಹುಮತದ ತೀರ್ಪಿನಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ ತೀರ್ಪು ನೀಡಿದೆ. ಈ ಪಂಚ ಸದಸ್ಯ ಪೀಠದಲ್ಲಿದ್ದ ಏಕೈಕ ಮಹಿಳೆ ನ್ಯಾ| ಇಂದೂ ಮಲ್ಹೋತ್ರ. ಮಹಿಳೆಯರಿಗೆ ಪ್ರವೇಶ ನೀಡುವ ತೀರ್ಪಿನ ವಿರುದ್ಧ ಆಕ್ಷೇಪ ಎತ್ತಿದವರು ಅವರು ಎನ್ನುವುದು ಗಮನಾರ್ಹ ಅಂಶ.
ನ್ಯಾಯಾಲಯ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥಪಡಿಸುತ್ತಾ ಹೋದರೆ ಈ ಮಾದರಿಯ ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಬಹುದು. ಪ್ರತಿ ಧರ್ಮದ ಪ್ರತಿಯೊಂದು ಧರ್ಮದ ಬಗ್ಗೆಯೂ ಆಸ್ತಿಕರು ಮಾತ್ರವಲ್ಲದೆ ನಾಸ್ತಿಕರೂ ದಾವೆ ಹೂಡುವ ಸಾಧ್ಯತೆಯಿದೆ. ನ್ಯಾಯಾಲಯಗಳು ಮತ್ತು ದೇಶ ಈ ಮಾದರಿಯ ದಾವೆಗಳನ್ನು ಎದುರಿಸಲು ಸಿದ್ಧವಾಗಿದೆಯೇ ಮತ್ತು ಇದಕ್ಕಾಗಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯಯವಾಗಬೇಕೆ ಎಂದು ಅವರು ಪ್ರಶ್ನಿಸಿದ್ದರು. ಅವರ ಮಾತು ಇಷ್ಟರಲ್ಲೇ ನಿಜವಾಗುತ್ತಿದೆ.
ಈ ನಡುವೆ ರಾಜಕೀಯ ಪಕ್ಷಗಳು ತೀರ್ಪಿನ ಹಿನ್ನೆಲೆಯಲ್ಲಿ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ. ವಿಪರ್ಯಾಸವೆಂದರೆ ತೀರ್ಪನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಒಂದು ನಿಲುವು ಹೊಂದಿದ್ದರೆ ಕೇಂದ್ರದಲ್ಲಿ ಬೇರೆಯದ್ದೇ ನಿಲುವು ತಳೆದಿವೆ. ಇದು ರಾಜಕೀಯ ಪಕ್ಷಗಳ ಅವಕಾಶವಾದಿತನವನ್ನು ಬಯಲುಗೊಳಿಸಿದೆ. ವಿವಾದ ನಿಧಾನವಾಗಿ ಎಡಪಂಥೀಯ, ಬಲಪಂಥೀಯರ ನಡುವಿನ ಸಂಘರ್ಷವಾಗಿ ಬದಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪರಿಸ್ಥಿತಿ ಕೈಮೀರಿ ಹೋಗುವ ಮೊದಲೇ ಸೂಕ್ತ ನಿರ್ಧಾರ ಕೈಗೊಳ್ಳುವ ಹೊಣೆ ಸಂಬಂಧಪಟ್ಟವರ ಮೇಲಿದೆ. ಇದೀಗ ಶಬರಿಮಲೆ ಬೆಟ್ಟ ದಾವಾನಲವಾಗಿ ಬದಲಾಗಿದೆ. ತೀರ್ಪನ್ನು ವಿರೋಧಿಸುತ್ತಿರುವವರು ದೇಗುಲ ಪ್ರವೇಶಿಸಲು ಬರುತ್ತಿರುವ ಮಹಿಳೆಯ ರನ್ನು ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ವಿರೋಧದ ಮುಂಚೂಣಿಯಲ್ಲಿ ಮಹಿಳೆಯರೇ ಇದ್ದಾರೆ. ಪ್ರತಿಯೊಂದು ವಾಹನವನ್ನು ಅವರು ತಪಾಸಿಸುತ್ತಿ ದ್ದಾರೆ. ಲಾಠಿ ಚಾರ್ಜ್ ಮತ್ತು ಹಿಂಸಾಚಾರಕ್ಕೂ ಶಬರಿಮಲೆ ಸಾಕ್ಷಿಯಾಗಿದ್ದು, ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವಂತೆ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕೇರಳದ ಎಡರಂಗ ಸರಕಾರ ಅನುಷ್ಠಾ ನಿಸುವುದು ಅನಿವಾರ್ಯವಾಗಿತ್ತು. ತೀರ್ಪಿನ ಅನುಷ್ಠಾನಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಬಹುದು ಎಂದು ಗೊತ್ತಿದ್ದರೂ ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಢಾಳಾಗಿ ಗೋಚರಿಸುತ್ತಿದೆ. ಶಬರಿಮಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲ ಹಿಂಸಾಚಾರಕ್ಕೂ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಕನಿಷ್ಠ ಸಾಕಷ್ಟು ಸಂಖ್ಯೆಯ ಮಹಿಳಾ ಪೊಲೀಸರನ್ನು ನಿಯೋಜಿಸುವ ಕೆಲಸವನ್ನೂ ಸರಕಾರ ಮಾಡಿಲ್ಲ.
ಪ್ರಸ್ತುತ ಶಬರಿಮಲೆ ಯಾತ್ರೆಗೈಯ್ಯುತ್ತಿರುವ ಮಹಿಳೆಯರು ಹಕ್ಕಿನ ಪ್ರತಿಪಾ ದನೆಗಾಗಿಯೇ ಅಲ್ಲಿಗೆ ಗುವಂತಿದೆ. ಇರುಮುಡಿಯೊಂದಿಗೆ ಶಬರಿಮಲೆ ಯಾತ್ರೆಗೈಯ್ಯಬೇಕಾದರೆ 41 ದಿನಗಳ ಕಠಿನ ವ್ರತ ಪಾಲಿಸಬೇಕೆಂಬ ನಿಯಮ ವಿದೆ. ಆದರೆ ತೀರ್ಪು ಬಂದು ಇನ್ನೂ ತಿಂಗಳೂ ಆಗಿಲ್ಲ, ಆಗಲೇ ಮಹಿಳೆಯರು ಯಾತ್ರೆಗೆ ಮುಂದಾಗಿರುವುದು ಅವರ ನೈಜ ಉದ್ದೇಶವನ್ನು ಅನುಮಾನಿಸುವಂತೆ ಮಾಡುತ್ತಿದೆ. ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಪಿನ ಅನುಷ್ಠಾ ನವನ್ನು ಯಾವ ರೀತಿ ಮಾಡಬಹುದು ಎನ್ನುವ ಕುರಿತು ಚರ್ಚಿಸುವ ಅವಕಾಶ ವನ್ನು ಸರಕಾರ ಬಳಸಿಕೊಳ್ಳಲೇ ಇಲ್ಲ. ಅಂತೆಯೇ ತೀರ್ಪಿನ ಪರ ಮತ್ತು ವಿರುದ್ಧವಾಗಿರುವ ಅಭಿಪ್ರಾಯವನ್ನು ಕೇಳಿ ಮುಂದುವರಿಯಬಹುದಿತ್ತು. ಅಲ್ಲದೆ ತೀರ್ಪನ್ನು ಅನುಷ್ಠಾನಿಸಲು ನ್ಯಾಯಾಲಯದಿಂದ ಹೆಚ್ಚುವರಿ ಸಮಯವನ್ನು ಕೇಳಬಹುದಿತ್ತು. ಇದ್ಯಾವುದನ್ನೂ ಮಾಡದೆ ಪರಿಸ್ಥಿತಿ ಕೈಮೀರಲು ಬಿಟ್ಟಿರುವುದು ಆಡಳಿತ ನಡೆಸುವವರಿಗಿರುವ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ. ಧಾರ್ಮಿಕ ನಂಬಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಾ ಹೋದರೆ ಅದಕ್ಕೆ ಕೊನೆಮೊದಲಿರುವುದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.