ಸರ್ವಂ ಮೋದಿಮಯ; ಆತ್ಮಾವಲೋಕನ ಮಾಡಿಕೊಳ್ಳಲು ವಿಪಕ್ಷಗಳಿಗೆ ಸಕಾಲ
Team Udayavani, Mar 13, 2017, 11:10 AM IST
ಲ್ಯಾಪ್‌ಟಾಪ್, ಮೊಬೈಲ್ ಹಂಚಿದರೆ ಗೆಲ್ಲಬಹುದು ಎಂಬ ನಂಬಿಕೆಯನ್ನು ಮತದಾರರು ಹುಸಿಗೊಳಿಸಿದ್ದಾರೆ. ಓಲೈಕೆ ರಾಜಕೀಯ ಮಾಡುವವರಿಗೂ ಫಲಿತಾಂಶದಲ್ಲಿ ನಿಚ್ಚಳವಾದೊಂದು ಸಂದೇಶವಿದೆ.
ರಾಜಕೀಯದ ಮಟ್ಟಿಗೆ ದೇಶದ ಹೃದಯ ಎಂದು ಹೇಳಲಾಗುವ ಉತ್ತರ ಪ್ರದೇಶ ಮತ್ತು ಪಕ್ಕದ ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ದೊರಕಿಸಿಕೊಟ್ಟಿರುವ ನರೇಂದ್ರ ಮೋದಿ ಪ್ರಧಾನಿಯಾಗಿ ಮೂರು ವರ್ಷ ಉರುಳಿದರೂ ತಮ್ಮ ಜನಪ್ರಿಯತೆ ಇನ್ನೂ ಮಸುಕಾಗಿಲ್ಲ ಎನ್ನುವುದನ್ನು ಎದುರಾಳಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಎರಡು ರಾಜ್ಯಗಳ ಜತೆಗೆ ಮಣಿಪುರ, ಗೋವಾ ಮತ್ತು ಪಂಜಾಬ್ ಚುನಾವಣೆ ಫಲಿತಾಂಶವನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೆ ಒಂದು ವಿಚಾರದಲ್ಲಿ ಎಲ್ಲರಲ್ಲಿ ಒಮ್ಮತವಿದೆ. ಅದೆಂದರೆ ಮೋದಿ ಮತ್ತು ಅಮಿತ್ ಶಾ ಜೋಡಿಗೆ ಸರಿಸಾಟಿಯಾಗುವ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಇಲ್ಲ.
ಐದು ರಾಜ್ಯಗಳಲ್ಲೂ ಆಡಳಿತಾರೂಢ ಸರಕಾರಗಳು ಉರುಳಿವೆ. ಆಡಳಿತ ವಿರೋಧಿ ಅಲೆ ಬಲವಾಗಿ ಬೀಸಿದ್ದೇ ಇದಕ್ಕೆ ಕಾರಣ. ಜತೆಗೆ ಬಿಜೆಪಿ ಮತ್ತು ಮೋದಿ ವಿರೋಧಿಗಳ ನಕಾರಾತ್ಮಕ ಧೋರಣೆ ಇನ್ನೊಂದು ಕಾರಣ. ಉ. ಪ್ರದೇಶ ಮತ್ತು ಉತ್ತರಾಖಂಡದ ಮಟ್ಟಿಗೆ ಹೇಳುವುದಾದರೆ ಮತದಾರರು ಜಾತಿ, ಧರ್ಮಗಳ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಗಳ ಜೊತೆಗೆ, ಇತರ ಜಾತಿಗಳ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೆಚ್ಚೇಕೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿಲುವಿಗೆ ಮುಸ್ಲಿಂ ಮಹಿಳೆಯರು ಬೆಂಬಲ ವ್ಯಕ್ತಪಡಿಸಿರುವುದರಿಂದ ಇದು ಸಾಧ್ಯವಾಗಿದೆ ಎನ್ನುವುದು ನಿಜವಾಗಿದ್ದರೂ ಇದರೊಂದಿಗೆ ಮೋದಿಯ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಜೆಂಡಾವನ್ನು ಜನರು ಒಪ್ಪಿಕೊಂಡಿದ್ದಾರೆ ಎನ್ನುವುದು ಸಾಬೀತಾಗಿದೆ. ಹೀಗಾಗಿ ಈ ಗೆಲುವನ್ನು ಬರೀ ಮೋದಿ ಜನಪ್ರಿಯತೆಯ ಗೆಲುವು ಎಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. ಒಟ್ಟಾರೆಯಾಗಿ ಇದು ಕೇಂದ್ರ ಸರಕಾರದ ಅಭಿವೃದ್ಧಿ ಮಂತ್ರಕ್ಕೆ ಸಿಕ್ಕಿದ ಗೆಲುವು.
ಜನಪ್ರಿಯತೆ, ತಂತ್ರಗಾರಿಕೆ, ಮತ ಧ್ರುವೀಕರಣ, ದುರ್ಬಲ ಎದುರಾಳಿಗಳು ಇವೆಲ್ಲ ಪೂರಕವಾದ ಕಾರಣಗಳು ಮಾತ್ರ. ಪಂಚರಾಜ್ಯಗಳ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಹಲವು ಪಾಠಗಳನ್ನು ಕಲಿಸಿದೆ. ನೋಟು ರದ್ದುಗೊಳಿಸಿದ ನಿರ್ಧಾರವನ್ನು ಹಿಡಿದುಕೊಂಡು ಟೀಕಿಸಿದರೆ ಮತಗಳು ಸಿಗುವುದಿಲ್ಲ ಎನ್ನುವುದನ್ನು ವಿಪಕ್ಷಗಳು ಈಗಲಾದರೂ ಅರ್ಥಮಾಡಿಕೊಳ್ಳಬೇಕು.
ಕಾಳ ಧನ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಮೋದಿ ಕೈಗೊಂಡಿರುವ ಕಠಿಣ ನಿರ್ಧಾರ ಇದು ಎನ್ನುವುದು ಜನರಿಗೆ ಅರ್ಥವಾಗಿದೆ. ಅಲ್ಲದೆ ಲ್ಯಾಪ್‌ಟಾಪ್, ಮೊಬೈಲ್, ಟಿವಿಗಳನ್ನು ಪುಕ್ಕಟೆ ಹಂಚಿದರೆ ಗೆಲ್ಲಬಹುದು ಎಂಬ ನಂಬಿಕೆಯನ್ನು ಮತದಾರರು ಹುಸಿಗೊಳಿಸಿದ್ದಾರೆ. ಜಾತಿ, ಧರ್ಮಗಳನ್ನು ಓಲೈಸಿ ರಾಜಕೀಯ ಮಾಡುವವರಿಗೂ ಫಲಿತಾಂಶದಲ್ಲಿ ನಿಚ್ಚಳವಾದೊಂದು ಸಂದೇಶವಿದೆ.
ಅಲ್ಲದೆ ಫಲಿತಾಂಶ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಮುಂದೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡು 105 ಸ್ಥಾನಗಳಿಗೆ ಸ್ಪರ್ಧಿಸಿದ ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿರುವುದು ಬರೀ 7 ಸ್ಥಾನಗಳನ್ನು. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೇಳಲಾಗುವ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿಯೂ ಪಕ್ಷ ಮಣ್ಣುಮುಕ್ಕಿದೆ. ಪಂಜಾಬಿನಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಪಡೆದುಕೊಂಡಿದ್ದರೂ ಇದರಲ್ಲಿ ರಾಹುಲ್ ಪಾತ್ರ ಇಲ್ಲ. ಆಡಳಿತ ವಿರೋಧಿ ಅಲೆ ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ವರ್ಚಸ್ಸಿಗೆ ಸಿಕ್ಕಿರುವ ಗೆಲುವು ಇದು. ಬೇರೆ ಯಾವುದೇ ಪಕ್ಷವಾಗಿದ್ದರೂ ಈ ರೀತಿ ವೈಫಲ್ಯ ಕಂಡಿರುವ ನಾಯಕನ ಕೈಗೆ ಸಾರಥ್ಯವನ್ನು ಕೊಡಲು ಮುಂದಾಗುತ್ತಿರಲಿಲ್ಲ. ಫಲಿತಾಂಶ ಏನೇ ಆಗಿದ್ದರೂ ರಾಹುಲ್ ಗಾಂಧಿಯೇ ನಮ್ಮ ನಾಯಕ ಎಂದೇ ಕಾಂಗ್ರೆಸ್ ನಾಯಕರು ಜಪಿಸುತ್ತಿದ್ದಾರೆ. ಇದೀಗ ಈ ಫಲಿತಾಂಶ ಕರ್ನಾಟಕವೂ ಸೇರಿದಂತೆ ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ರಾಜ್ಯಗಳ ರಾಜಕೀಯ ಪರಿಸ್ಥಿತಿಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಮೋದಿಯನ್ನೇ ನೆಚ್ಚಿಕೊಂಡಿರುತ್ತದೆ. ಉಳಿದ ಪಕ್ಷಗಳು ಇದಕ್ಕೆ ತಂತ್ರಗಾರಿಕೆಯನ್ನು ರೂಪಿಸಿದರೆ ದಡ ಸೇರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.