ಹೂಡಿಕೆಸ್ನೇಹಿ ವಾತಾವರಣ ತೃಪ್ತಿಕರ ನಿರ್ವಹಣೆ
Team Udayavani, Sep 30, 2019, 5:43 AM IST
ನವೋದ್ಯಮಗಳಿಗೆ ಸರಕಾರದಿಂದ ಧಾರಾಳ ಉತ್ತೇಜನ ಮತ್ತು ನೆರವು ಸಿಗುತ್ತಿದೆ. ಕಾರ್ಪೊರೇಟ್ ತೆರಿಗೆ ದರದಲ್ಲಿನ ಸುಧಾರಣೆಯು ಮುಂದಿನ ದಿನಗಳಲ್ಲಿ ದೇಶವನ್ನು ಉದ್ಯಮ ಸ್ನೇಹಿಯನ್ನಾಗಿಸುತ್ತದೆ.
ಭಾರತದಲ್ಲಿ ಹೂಡಿಕೆಸ್ನೇಹಿ ವಾತಾವರಣ ಇನ್ನಷ್ಟು ಉತ್ತಮಗೊಳ್ಳುತ್ತಿದೆ ಎನ್ನುತ್ತಿದೆ ವಿಶ್ವಬ್ಯಾಂಕ್‌ನ ವರದಿ. ಹೂಡಿಕೆಸ್ನೇಹಿ ವಾತಾವರಣದಲ್ಲಿ ಗಣನೀಯ ಸುಧಾರಣೆಯಾಗುತ್ತಿರುವ 20 ದೇಶಗಳ ಪಟ್ಟಿಯೊಂದನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು ಇದರಲ್ಲಿ ಭಾರತದ ಹೆಸರು ಇದೆ. ಆರ್ಥಿಕತೆ ಮಂದಗತಿಯಲ್ಲಿರುವ ಸಂದರ್ಭದಲ್ಲಿ ಬಂದಿರುವ ಈ ವರದಿ ಉದ್ಯಮ ವಲಯದ ಅಂತೆಯೇ ನೀತಿನಿರೂಪಕರ ಮನೋಸ್ಥೈರ್ಯವನ್ನು ಖಂಡಿತ ಹೆಚ್ಚಿಸುವಂಥದ್ದು. ಹಾಗೆಂದು ಇದು ಹೂಡಿಕೆ ಸ್ನೇಹಿ ದೇಶಗಳ ಶ್ರೇಯಾಂಕವಲ್ಲ. ಈ ಪಟ್ಟಿಯನ್ನು ವಿಶ್ವಬ್ಯಾಂಕ್ ಅ.24ರಂದು ಬಿಡುಗಡೆ ಗೊಳಿಸಲಿದೆ. ಇದಕ್ಕೆ ಪೂರ್ವಭಾವಿಯಾಗಿ ದೇಶಗಳು ಯಾವೆಲ್ಲ ಕ್ಷೇತ್ರದಲ್ಲಿ ಹೂಡಿಕೆಸ್ನೇಹಿಯಾಗುವಂಥ ಸುಧಾರಣಾ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿಸುವ ವರದಿಯಿದು.
ಹೊಸ ಉದ್ಯಮದ ಪ್ರಾರಂಭ, ದಿವಾಳಿತನದ ನಿರ್ಣಯ, ಗಡಿಯಾಚೆಗಿನ ವಾಣಿಜ್ಯ ಮತ್ತು ನಿರ್ಮಾಣ ಪರವಾನಿಗೆ ವಿಭಾಗಗಳಲ್ಲಿ ಭಾರತದ ಸಾಧನೆಯನ್ನು ಪರಿಗಣಿಸಿ ತ್ವರಿತವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವ 20 ದೇಶಗಳ ಯಾದಿಯಲ್ಲಿ ಸೇರಿಸಲಾಗಿದೆ.
ದೇಶದಲ್ಲಿ ಹೊಸ ಉದ್ಯಮ ಪ್ರಾರಂಭಿಸಲು ಈಗ ಸಾಕಷ್ಟು ಉತ್ತೇಜನ ಸಿಗುತ್ತಿದೆ ಎನ್ನುವುದು ಢಾಳಾಗಿಯೇ ಗೋಚರಿಸುತ್ತಿದೆ. ಜಟಿಲ ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಹಳೆ ನಿಯಮಗಳನ್ನು ರದ್ದುಗೊಳಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರ ಪರಿಣಾಮವಾಗಿ ಹೂಡಿಕೆದಾರರಲ್ಲಿ ಹೊಸ ಉತ್ಸುಕತೆ ಕಾಣಿಸಿಕೊಂಡಿದೆ.
ಸ್ವತಹ ಪ್ರಧಾನಿಯೇ ದೇಶವನ್ನು ಉದ್ಯಮಸ್ನೇಹಿಯನ್ನಾಗಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಅದರಲ್ಲೂ ನವೋದ್ಯಮಗಳಿಗೆ ಸರಕಾರದ ವತಿಯಿಂದ ಧಾರಾಳ ಉತ್ತೇಜನ ಮತ್ತು ನೆರವು ಸಿಗುತ್ತಿದೆ. ಕಾರ್ಪೊರೇಟ್ ತೆರಿಗೆ ದರದಲ್ಲಿ ಮಾಡಿರುವ ಇತ್ತೀಚೆಗಿನ ಸುಧಾರಣೆಯಿಂದ ಕಾರ್ಪೋರೇಟ್ ವಲಯದವರು ಬಹಳ ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ದೇಶವನ್ನು ಇನ್ನಷ್ಟು ಉದ್ಯಮಸ್ನೇಹಿಯನ್ನಾಗಿ ಮಾಡಲಿದೆ.
ಹಲವು ಸರಕಾರಿ ಏಜೆನ್ಸಿಗಳನ್ನು ಸಂಯೋಜಿಸಿದ್ದು ಮತ್ತು ಆನ್‌ಲೈನ್ ವ್ಯವಸ್ಥೆಗೆ ಹೆಚ್ಚು ಒತ್ತುಕೊಟ್ಟಿರುವುದು ಹೂಡಿಕೆಗೆ ಪೂರಕವಾಗಿರುವ ಇನ್ನೊಂದು ಕ್ರಮ. ಸಾಗಾಟ ವ್ಯವಸ್ಥೆಯಲ್ಲಾಗಿರುವ ಸುಧಾರಣೆ, ಕಾರ್ಮಿಕ ಕಾನೂನಿನ ಮಾರ್ಪಾಡು ಇತ್ಯಾದಿ ಕ್ರಮಗಳ ಮೂಲಕ ಸರಕಾರ ಉದ್ಯಮಗಳಿಗೆ ಪೂರಕವಾಗಿರುವ ವಾತಾವರಣವನ್ನು ಕಲ್ಪಿಸಿದೆ.
ಅದಾಗ್ಯೂ ಕೆಲವು ಸುಧಾರಣೆಗಳಲ್ಲಿ ದೇಶ ಇನ್ನೂ ಹಿಂದುಳಿದಿದೆ ಎನ್ನುವ ವಾಸ್ತವ ಕೂಡ ನಮ್ಮ ಎದುರು ಇದೆ. ಆಸ್ತಿಗಳ ನೋಂದಣಿ ಈ ಪೈಕಿ ಮುಖ್ಯವಾದದ್ದು. ದೇಶದಲ್ಲಿ ಒಂದು ಆಸ್ತಿ ನೋಂದಣಿ ಮಾಡಿಕೊಳ್ಳಲು ಸುಮಾರು 60 ದಿನಗಳು ಹಿಡಿಯುತ್ತವೆ ಹಾಗೂ ಆಸ್ತಿಮೌಲ್ಯದ ಶೇ. 8 ಖರ್ಚು ತಗಲುತ್ತದೆ. ಉದ್ಯಮ ಸ್ನೇಹಿತ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿರುವ ಕೆಲವು ದೇಶಗಳಲ್ಲಿ 20 ದಿನಗಳೊಳಗೆ ಆಸ್ತಿ ನೊಂದಣಿಯಾಗುತ್ತದೆ ಹಾಗೂ ಖರ್ಚು ಕೂಡ ನಮ್ಮ ಅರ್ಧದಷ್ಟು. ನ್ಯೂಜಿಲ್ಯಾಂಡ್‌ನಲ್ಲಿ ಬರೀ ಒಂದು ದಿನದಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಹಾಂಕಾಂಗ್‌ನಲ್ಲಿ ವ್ಯಾಪಾರಿಗಳು ವರ್ಷಕ್ಕೆ ಮೂರು ಪಾವತಿಗಳನ್ನು ಮಾಡಿದರೆ ಸಾಕು. ಸಿಂಗಾಪುರದಲ್ಲಿ ತೆರಿಗೆ ಪಾವತಿಸಲು 40 ತಾಸುಗಳು ಸಾಕು ಎಂಬಂಥ ಕೆಲವು ಉದಾಹರಣೆಗಳು ಇವೆ. ಹೂಡಿಕೆಸ್ನೇಹಿ ದೇಶಗಳ ಪಟ್ಟಿಯಲ್ಲಿ ಅಗ್ರ 50ಕ್ಕೇರುವುದು ಮೋದಿ ಸರಕಾರದ ಗುರಿ. ಇದು ಸಾಧ್ಯವಾಗಬೇಕಾದರೆ ಅಗ್ರಸ್ಥಾನದಲ್ಲಿರುವ ದೇಶಗಳ ವ್ಯವಸ್ಥೆಯತ್ತ ಕಣ್ಣಾಡಿಸುವುದು ಅಗತ್ಯ.
ಹೂಡಿಕೆಸ್ನೇಹಿ ವಾತಾವರಣದ ಪಟ್ಟಿಯಲ್ಲಿ ದೇಶ ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದೆ ಎನ್ನುವುದು ಸ್ವಾಗತಾರ್ಹವಾದ ಅಂಶ. 2018ರಲ್ಲಿ ದೇಶ 23 ಸ್ಥಾನಗಳ ಜಿಗಿತ ದಾಖಲಿಸಿ 77ನೇ ಸ್ಥಾನಕ್ಕೇರಿತ್ತು. ಸುಧಾರಣಾ ಕ್ರಮಗಳನ್ನು ಇದೇ ವೇಗದಲ್ಲಿ ಜಾರಿಯಲ್ಲಿಟ್ಟರೆ ಅಗ್ರ 50 ದೇಶಗಳ ನಡುವೆ ಸ್ಥಾನ ಪಡೆದುಕೊಳ್ಳುವುದು ಕಷ್ಟವೇನಲ್ಲ. ಈ ನಿಟ್ಟಿನಲ್ಲಿ ಸರಕಾರ ನಿರಂತರವಾಗಿ ಪ್ರಯತ್ನಶೀಲವಾಗಿರುವುದರಿಂದ ಅಕ್ಟೋಬರ್‌ನಲ್ಲಿ ಪ್ರಕಟವಾಗಲಿರುವ ವರದಿಯಲ್ಲಿ ಖಂಡಿತ ಇನ್ನಷ್ಟು ಸ್ಥಾನಗಳ ಜಿಗಿತವನ್ನು ನಿರೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.