ಉದಾರತೆಯತ್ತ ಸೌದಿ; ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ ದಿಟ್ಟ ಕ್ರಮ
Team Udayavani, Nov 7, 2017, 11:59 AM IST
ಸೌದಿ ಅರೇಬಿಯದಲ್ಲಿ ಕಳೆದ ಶನಿವಾರದಿಂದೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಇಡೀ ವಿಶ್ವದ ಕುತೂಹಲ ಕೆರಳಿಸಿದೆ. ಸೌದಿಯ ದೊರೆ ಸಲ್ಮಾನ್ ಅವರ ಮಮತೆಯ ಪುತ್ರ, ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಪಟ್ಟಕ್ಕೇರುವ ಮೊದಲೇ ತನಗೊಂದು ಇಮೇಜ್
ಸೃಷ್ಟಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಆ ಕಟ್ಟಾ ಸಂಪ್ರದಾಯಸ್ಥ ದೇಶದಲ್ಲಿ ಭಾರೀ ಪ್ರಮಾಣದ ಸಂಚಲನವುಂಟು ಮಾಡಿದೆ.
ಸೌದಿಯನ್ನು ಶತಮಾನಗಳ ಸಾಂಪ್ರದಾಯಿಕ ಕಟ್ಟಳೆಗಳಿಂದ ಬಿಡುಗಡೆಗೊಳಿಸುವ ಸಲುವಾಗಿ ಸಲ್ಮಾನ್ ಇತ್ತೀಚೆಗೆ ಮಹಿಳೆಯರಿಗೆ ಕಾರು ಚಲಾಯಿಸುವ ಮತ್ತು ಆಟದ ಸ್ಟೇಡಿಯಂಗಳಿಗೆ ಹೋಗುವ ಹಕ್ಕುಗಳನ್ನು ನೀಡಲು ಮುಂದಾಗಿದ್ದಾರೆ. ರಸ್ತೆಯಲ್ಲಿ ಮಹಿಳೆಯರು
ಕಾರು ಚಲಾಯಿಸಬಾರದು ಎಂಬ ನಿಯಮವಿರುವ ಏಕೈಕ ದೇಶ ಸೌದಿ ಅರೇಬಿಯ. ಮುಂದಿನ ವರ್ಷದಿಂದ ಈ ನಿಯಮ ಇತಿಹಾಸಕ್ಕೆ ಸೇರಲಿದ್ದು, ಎಲ್ಲ ದೇಶಗಳಂತೆಯೇ ಸೌದಿಯ ಮಹಿಳೆಯರು ಕಾರು ಚಲಾಯಿಸುವ ಮೂಲಕ ಸ್ವಾತಂತ್ರ್ಯದ ಹೊಸ ಗಾಳಿಯನ್ನು ಉಸಿರಾಡಲು ಸಜ್ಜಾಗಿದ್ದಾರೆ. ಇದೇ ವೇಳೆ ಸೌದಿಯ ಧಾರ್ಮಿಕ ಪೊಲೀಸರ ಅಧಿಕಾರವನ್ನು ಸೀಮಿತಗೊಳಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
ಇವೆಲ್ಲ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗಳಾದರೆ ಶನಿವಾರ ರಾತ್ರಿ ಭ್ರಷ್ಟಾಚಾರ ನಿಗ್ರಹ ಸಮಿತಿ ಜಗತ್ತಿನ ಅತಿ ಶ್ರೀಮಂತ ಪೈಕಿ ಒಬ್ಬರಾಗಿರುವ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಸೇರಿ 11 ರಾಜಕುಮಾರರು, ನಾಲ್ವರು ಹಾಲಿ ಸಚಿವರು, 10 ಮಾಜಿ ಸಚಿವರು ಹಾಗೂ ರಾಜಮನೆತನಕ್ಕೆ ಸೇರಿದ ಇತರ ಹಲವಾರು ಮಂದಿಯನ್ನು ಹಾಗೂ ಕೆಲವು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿರುವ ಕ್ರಮ ಭಾವೀ
ದೊರೆಯ ನೈಜ ಉದ್ದೇಶ ಏನು ಎಂಬ ಪ್ರಶ್ನೆಯನ್ನೆಬ್ಬಿಸಿದೆ.
ಅಲ್ವಲೀದ್ ರಾಜಮನೆತನದವರ ಕಿಂಗ್‌ಡಮ್ ಹೋಲ್ಡಿಂಗ್ ಕಂಪೆನಿಯ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ನ್ಯೂಸ್ ಕಾರ್ಪ್, ಸಿಟಿ ಗ್ರೂಪ್, ಟ್ವಿಟ್ಟರ್ ಈ ಮುಂತಾದ ಜಗತ್ತಿನ ದೈತ್ಯ ಕಂಪೆನಿಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಅಲ್ವಲೀದ್ ಬಂಧನ ಸಂಚಲನಕ್ಕೆ ಕಾರಣವಾಗಿದೆ.
ಕಳೆದ ಜುಲೈಯಲ್ಲಷ್ಟೇ ಇನ್ನೋರ್ವ ರಾಜಕುಮಾರ ಮೊಹಮ್ಮದ್ ಬಿನ್ ನಯೇಫ್ ಅಲ್ ಸೌದ್ ಅವರನ್ನು ಇದೇ ರೀತಿ ಗೃಹ ಬಂಧನದಲ್ಲಿಡಲಾಗಿತ್ತು. ಸೌದಿಯ ಸೇನೆ, ವಿದೇಶಾಂಗ ವ್ಯವಹಾರ, ಆರ್ಥಿಕತೆ ಮತ್ತು ಸಾಮಾಜಿಕ ನೀತಿಗಳಲ್ಲಿ ಈಗಾಗಲೇ ತನ್ನ ಪ್ರಾಬಲ್ಯ ಸಾಧಿಸಿರುವ ಮೊಹಮ್ಮದ್ ಬಿನ್ ಸಲ್ಮಾನ್ ಒಂದೆಡೆ ಸೌದಿಯನ್ನು ಆಧುನೀಕರಣಗೊಳಿಸುವ ಕನಸು ಇರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಉದಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದು ಈ ಕನಸು ನನಸು ಮಾಡುವ ಪ್ರಯತ್ನ ಎಂದು ಭಾವಿಸಲಾಗಿದೆ. ಜತೆಗೆ ಸೌದಿಗಿರುವ ತೈಲ ರಫ್ತು ರಾಷ್ಟ್ರ ಎಂಬ ಇಮೇಜ್‌ನ್ನು ಬದಲಾಯಿಸಿ ಜಗತ್ತಿನ ಇತರ ಉದ್ದಿಮೆಗಳು ಕಾಲೂರಲು ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಜಗತ್ತಿನ ಆಡ್ಯ ದೇಶಗಳ ಪೈಕಿ ಒಂದಾಗಿ ಸೌದಿಯನ್ನು ರೂಪಿಸುವುದು ಅವರು ಇರಿಸಿಕೊಂಡಿರುವ ಗುರಿ. ಇದಕ್ಕಾಗಿಯೇ ಅವರು ಮಿಶನ್- 2030 ಎಂಬ ಅಭಿವೃದ್ಧಿಯ ಸಂಕಲ್ಪವನ್ನು ಅನಾವರಣಗೊಳಿಸಿದ್ದಾರೆ. ಇವೆಲ್ಲ ಸಾಕಾರವಾಗಬೇಕಾದರೆ ಆಡಳಿತದಲ್ಲಿ ಸುಧಾರಣೆಗಳನ್ನು ತರುವುದು ಅನಿವಾರ್ಯ. ಶತಮಾನಗಳಿಂದ ರಾಜನ ಆಳ್ವಿಕೆಗೆ ಒಳಪಟ್ಟಿರುವ ಸೌದಿಯಲ್ಲಿ ಭ್ರಷ್ಟಾಚಾರವೂ ಆಳವಾಗಿ ಬೇರು ಬಿಟ್ಟಿದೆ. ಇದರಿಂದಾಗಿ ರಾಜ ಬೊಕ್ಕಸ ಖಾಲಿಯಾಗುತ್ತಿದೆ ಮಾತ್ರವಲ್ಲದೆ, ಸುಧಾರಣಾ ಕ್ರಮಗಳಿಗೂ ಗ್ರಹಣ ಹಿಡಿದಿದೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧ ರಾಜಕುಮಾರ
ಕೈಗೊಂಡಿರುವ ದಿಟ್ಟ ಕ್ರಮಗಳು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ.
ರಾಜಕುಮಾರ ಸಲ್ಮಾನ್ ನಡೆ ಕೆಲ ಸಮಯದ ಹಿಂದೆ ಚೀನದಲ್ಲಿ ಕ್ಸಿಜಿನ್‌ಪಿಂಗ್ ಅನುಸರಿಸಿದ ನಡೆಗಳನ್ನು ನೆನಪಿಸುತ್ತದೆ. ಕ್ಸಿ ಕೂಡ ಭ್ರಷ್ಟಾಚಾರ ನಿರ್ಮೂಲನೆಯ ನೆಪವೊಡ್ಡಿ ವಿರೋಧಿಗಳ ಧ್ವನಿಗಳನ್ನೆಲ್ಲ ದಮನಿಸಿ ಸರಕಾರ ಮತ್ತು ಸೇನೆಯ ಆಯಕಟ್ಟಿನ ಜಾಗಗಳಿಗೆ ತನ್ನ
ನಂಬುಗೆಯವರನ್ನು ನೇಮಿಸಿಕೊಂಡಿದ್ದಾರೆ. ಅಲ್ಲಿರುವುದು ಪ್ರಜಾ ಪ್ರಭುತ್ವದ ಮುಸುಕು ಹೊದ್ದಿರುವ ಕಮ್ಯುನಿಸಂ ಸರ್ವಾಧಿಕಾರ. ಇದೀಗ ಸೌದಿಯಲ್ಲೂ ಇಂಥದ್ದೇ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ.
ಎದುರಾಳಿಗಳಾಗುವ ಸಾಧ್ಯತೆಯಿರುವವರನ್ನು ಸೆರೆಮನೆಗೆ ತಳ್ಳಿ ಎಲ್ಲ ಅಧಿಕಾರಗಳನ್ನು ಹಿಡಿತದಲ್ಲಿರಿಸುವ ಮೂಲಕ ಸರ್ವಾಧಿಕಾರಿಯಾಗುವ ಪ್ರಯತ್ನದಲ್ಲಿದ್ದಾರೆ ಸಲ್ಮಾನ್. ಈಗಿನ ಅವರ ನಡೆಯನ್ನು ನೋಡುವಾಗ ಉದಾರತೆಯ ಮುಖವಾಡ ಧರಿಸಿದ ಸರ್ವಾಧಿಕಾರದತ್ತ ಸೌದಿಯನ್ನು
ಕೊಂಡೊಯ್ಯುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ ಈ ಪ್ರಯತ್ನದಲ್ಲಿ ಅವರು ಒಂದೆಡೆಯಿಂದ ಪ್ರಬಲ ರಾಜಮನೆತನವನ್ನು ಎದುರು ಹಾಕಿಕೊಂಡಿದ್ದಾರೆ, ಇನ್ನೊಂದೆಡೆಯಿಂದ ಕಟ್ಟಾ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗೆ ಏಕಕಾಲದಲ್ಲಿ ಹಲವು ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಅವರಿಗೆ ಮುಂದಿನ ನಡೆ ಸುಲಲಿತವಂತೂ ಅಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.