ಮಾದರಿಯಾದ ಶ್ರೀಗಳು ಸನ್ಮಾರ್ಗ ತೋರಿಸಿದ ಸಂತ
Team Udayavani, Jan 22, 2019, 12:50 AM IST
ಕರ್ನಾಟಕ ರಾಜ್ಯದಲ್ಲಿ ಮಠ-ಮಾನ್ಯಗಳು ಸೇವೆಯ ಕ್ರಾಂತಿಯನ್ನೇ ಮಾಡಿದ್ದು, ಆ ಪೈಕಿ ಸಿದ್ಧಗಂಗಾ ಮಠ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ನಡೆದಾಡುವ ದೇವರು ಶತಾಯುಷಿ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದ ಹೆಸರು ಅಜರಾಮರವಾಗುವಂತೆ ಮಾಡಿದವರು. ಮೌನವಾಗಿ ಶಿಕ್ಷಣ ಕ್ರಾಂತಿ ಮೂಲಕ ಲಕ್ಷಾಂತರ ಮಕ್ಕಳಿಗೆ ವಿದ್ಯೆಯ ಕೊಡುಗೆ ನೀಡಿದವರು. ಶ್ರೀ ಶಿವಕುಮಾರ ಸ್ವಾಮೀಜಿಗಳು ಇಡೀ ವಿಶ್ವಕ್ಕೆ ಅನ್ನ, ಅಕ್ಷರ ಹಾಗೂ ವಸತಿ ಎಂಬ ತ್ರಿವಿಧ ದಾಸೋಹಕ್ಕೆ ಮಾದರಿಯಾದವರು.
ನಾಡಿನೆಲ್ಲೆಡೆ ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಅನ್ನ ಹಾಗೂ ಅಕ್ಷರ ಕಲಿತವರು ಅತ್ಯುನ್ನತ ಹುದ್ದೆಗೇರಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ. 1975 ರಲ್ಲಿ ಶಿಕ್ಷಣ ಕ್ರಾಂತಿ ಆರಂಭಿಸಿದ ಶ್ರೀಗಳು ಮೊದಲಿಗೆ ಎರಡು ಸಾವಿರ ವಿದ್ಯಾರ್ಥಿಗಳ ಶಾಲೆ ತೆರೆದು ನಂತರ 1977ರಲ್ಲಿ 4 ಸಾವಿರ ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಯಾಗಿ ಪ್ರಸ್ತುತ 15 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ 128 ಶಿಕ್ಷಣ ಸಂಸ್ಥೆಗಳಾಗಿವೆ. ನಿತ್ಯ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ವಸತಿ ವ್ಯವಸ್ಥೆಯಿದೆ. ತಾಂತ್ರಿಕ ವಿಶ್ವವಿದ್ಯಾಲಯ, 57 ಪ್ರೌಢಶಾಲೆ, 12 ಪದವಿಪೂರ್ವ ಕಾಲೇಜು, 7 ಹಿರಿಯ ಪ್ರಾಥಮಿಕ ಶಾಲೆಗಳು ಮಠದ ವತಿಯಿಂದ ನಡೆಸಲ್ಪಡುತ್ತಿವೆ.
ತ್ರಿವಿಧ ದಾಸೋಹ ಮೂರ್ತಿಯಾದ ಶಿವಕುಮಾರಸ್ವಾಮಿಗಳು ಸದಾ ಹಸನ್ಮುಖೀ ಹಾಗೂ ಪ್ರಣವ ಸ್ವರೂಪಿಯಾಗಿದ್ದವರು. ಭಕ್ತರು ಅವರಲ್ಲಿ ಭಗವಂತನನ್ನು ಕಂಡರೆ ಶ್ರೀಗಳು ಭಕ್ತರಲ್ಲಿ ಭಗವಂತನ ಕಾಣುತ್ತಿದ್ದರು.•ಜಾತಿ -ಮತ -ಪಂಥದ ಭೇದ-ಭಾವ ಇಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಿದ್ದರು.
ರಾಜ್ಯದಲ್ಲಿರುವ ಮಠಾಧೀಶರಿಗೂ ಮಾರ್ಗದರ್ಶಕರಾಗಿ ಸದಾ ಸಮಾಜ ಸೇವಾ ಕಾರ್ಯಗಳು, ಶಿಕ್ಷಣ ಹಾಗೂ ಅನ್ನ ದಾಸೋಹ ಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಣೆ ನೀಡುತ್ತಿದ್ದರು. ಶ್ರೀಗಳ ಪ್ರೇರಣೆಯಿಂದ ಮಠ-ಮಾನ್ಯಗಳಷ್ಟೇ ಅಲ್ಲದೆ ಖಾಸಗಿ ಸಂಸ್ಥೆಗಳೂ ಉಚಿತ ಶಿಕ್ಷಣ, ಊಟ-ವಸತಿ ವ್ಯವಸ್ಥೆ ಕಲ್ಪಿಸಿರುವ ಉದಾಹರಣೆಗಳೂ ಇವೆ. ಸಿದ್ಧಗಂಗಾ ಮಠದ ಸೇವಾ ಕಾರ್ಯ, ಶಿಕ್ಷಣ ಕ್ರಾಂತಿಗೆ ಜಗತ್ತಿನ ದಿಗ್ಗಜರೇ ಅಚ್ಚರಿಪಟ್ಟಿದ್ದಾರೆ.
ಸಿದ್ಧಗಂಗಾ ಕ್ಷೇತ್ರದ ಬೆಟ್ಟ ಪ್ರದೇಶಗಳಲ್ಲಿರುವ ಗುಹೆಗಳಲ್ಲಿ ಹಲವು ಸಿದ್ಧªರು ತಪ ಆಚರಿಸಿದ ಫಲವಾಗಿ ಪವಿತ್ರಭೂಮಿಯಾಗಿರುವ ಆ ತಾಣ ಶಾರದೆಯ ನೆಲೆವೀಡೂ ಆಗಿದೆ. ವಿದ್ಯಾ ವಿಹೀನ ಪಶುಃ ಎಂದು ವಿದ್ಯೆಯ ಮಹತ್ವ ವಿದ್ಯಾದಾನದ ಅಗತ್ಯ ಸಾರಿದವರು ಶಿವಕುಮಾರಸ್ವಾಮಿಗಳು. ಇದರ ಫಲವಾಗಿ ಸಿದ್ಧಗಂಗೆ ಜ್ಞಾನದ ದೇಗುಲವಾಗಿದೆ ಎಂದು ಹಿರಿಯರು ಹೇಳುವುದುಂಟು.
ನೂರು ವರ್ಷಗಳ ಹಿಂದೆ ಪಾಕಶಾಲೆಯಲ್ಲಿ ಅನ್ನದಾಸೋಹಕ್ಕಾಗಿ ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎಂದರೆ ಇಲ್ಲಿಯ ಅನ್ನದಾಸೋಹದ ಪರಿ ಅರ್ಥವಾದೀತು. ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತ ಊಟ ಮಾಡಬಹುದಾದಷ್ಟು ಸುಸಜ್ಜಿತ ಪ್ರಸಾದ ನಿಲಯ, ಮೂರು ಸಾವಿರ ಕೊಠಡಿಗಳ ವ್ಯವಸ್ಥೆ ಮಠದ ಸೇವೆಗೆ ಸಾಕ್ಷಿಯಾಗಿದೆ. ಇಂಥದ್ದೊಂದು ವ್ಯವಸ್ಥೆ ಕಲ್ಪಿಸಿದವರು ಶಿವಕುಮಾರಸ್ವಾಮಿಗಳು.
ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ನಡೆಯುವ ಜಾನುವಾರ ಜಾತ್ರೆಗೆ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಿಂದ ಜಾನುವಾರುಗಳು ಬರುತ್ತ¤ವೆ. ಉತ್ತಮ ರಾಸುಗಳಿಗೆ ಬಹುಮಾನ ಸಹ ನೀಡಲಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ರೈತರಿಗೆ ಕೃಷಿ, ಕೈಗಾರಿಕೆ ಕ್ಷೇತ್ರದ ಸಂಶೋಧನೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. 16 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ನಾಡಿನಾದ್ಯಂತ ಮನೆ ಮಾತಾಗಿದೆ.
ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳೂ ಪಾಲ್ಗೊಳ್ಳುವುದು ವಿಶೇಷ. ಆ ಮಟ್ಟಿಗೆ ಸಿದ್ಧಗಂಗಾ ಮಠದಲ್ಲಿ ನಡೆಯುವ ಜಾತ್ರೆ ಜನೋಪಯೋಗಿ. ಇದನ್ನು ಆರಂಭಿಸಿದವರು ಶಿವಕುಮಾರಸ್ವಾಮಿಗಳು.
ಶ್ರೀಮಠದಿಂದ ನಾಲ್ಕು ದಶಕಗಳಿಂದ ಹೊರತರುತ್ತಿರುವ “ಸಿದ್ಧಗಂಗಾ’ ಮಾಸಪತ್ರಿಕೆಯು ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಅಧ್ಯಾತ್ಮಿಕ ಮಾಹಿತಿ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ನೈತಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.
ಶಿವಕುಮಾರ ಸ್ವಾಮಿಗಳ ಸಾಧನೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರವು ಪರಮೋತ್ಛ ನಾಗರಿಕ ಗೌರವ ಕರ್ನಾಟಕ ರತ್ನ ಪ್ರಶಸ್ತಿ ನೀಡಿತ್ತು. ಕೇಂದ್ರ ಸರ್ಕಾರ 2015 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದ ಹಾಗೂ ನಾಡಿನ ಸಮಸ್ತರಿಂದ ಭಾರತರತ್ನ ನೀಡುವಂತೆ ವಿನಮ್ರ ಮನವಿಯೂ ಇತ್ತು-ಇದೆ.
ಒಟ್ಟಾರೆ, ಶಿವಕುಮಾರಸ್ವಾಮಿಗಳ ಸೇವೆಯನ್ನು, ಅವರ ತೋರಿಸಿಕೊಟ್ಟ ಮಾರ್ಗವನ್ನು ನಾಡಿನ ಜನತೆ ಎಂದಿಗೂ ಮರೆಯುವುದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.