ಸಿದ್ದರಾಮಯ್ಯನವರೂ ಅತಂತ್ರ ಪರಾಮರ್ಶೆಯ ಅಗತ್ಯವಿದೆ
Team Udayavani, May 17, 2018, 6:00 AM IST
ತವರು ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಿರುವ, ಬಾದಾಮಿಯಲ್ಲಿ ಪ್ರಯಾಸದ ಗೆಲುವು ಸಾಧಿಸಿರುವ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಒಂಟಿಯಾಗುತ್ತಿದ್ದಾರೆಯೇ? ಅವರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗಿಯಿತೆ? ಹೀಗೊಂದು ಪ್ರಶ್ನೆ ಫಲಿತಾಂಶ ಪ್ರಕಟವಾದ ಬಳಿಕ ಸುಳಿದಾಡುತ್ತಿದೆ. ಸಿದ್ದರಾಮಯ್ಯ ಮೇಲೆ ಹಿರಿಯ ನಾಯಕ ಕೋಳಿವಾಡ ಹರಿಹಾಯ್ದ ರೀತಿಯನ್ನು ನೋಡುವಾಗ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮೂಲೆಗುಂಪಾಗಲಿದ್ದಾರೆ ಎಂಬ ಭಾವನೆ ಮೂಡುತ್ತಿದೆ.
ಕಾಂಗ್ರೆಸ್‌ನ ಹಿನ್ನಡೆಗೆ ಸಿದ್ದರಾಮಯ್ಯನವರೇ ಕಾರಣ ಎಂಬ ದಟ್ಟ ಭಾವನೆಯೊಂದು ಕೆಲವು ಕಾಂಗ್ರೆಸ್ ನಾಯಕರಲ್ಲಿದೆ. ಅವರೆಲ್ಲ ಸೇರಿ ಬಿದ್ದವನ ಮೇಲೊಂದು ಕಲ್ಲು ಎಂಬಂತೆ ಸಿದ್ದರಾಮಯ್ಯ ಮೇಲೆ ಮುಗಿಬೀಳಲು ಕಾಯುತ್ತಿದ್ದಾರೆ. ವಲಸೆ ಬಂದ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್‌ನ ಹಿರಿ ತಲೆಗಳಿಗೆ ಆರಂಭದಿಂದಲೂ ಒಂದು ರೀತಿಯ ಅಸಮಾಧಾನವಿತ್ತು. ಪಕ್ಷ ಮೂಲ ಕಾಂಗ್ರೆಸ್ ಮತ್ತು ವಲಸಿಗರ ಕಾಂಗ್ರೆಸ್ ಎಂದು ಇಬ್ಭಾಗವಾಗಿತ್ತು. ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಅಂತರವನ್ನು ನಿವಾರಿಸುವ ಬದಲು ಅವಕಾಶ ಸಿಕ್ಕಿದಾಗಲೆಲ್ಲ ಮೂಲ ಕಾಂಗ್ರೆಸಿಗರನ್ನು ಹಣಿಯಲು ಪ್ರಯತ್ನಿಸಿದರು.
ಹೈಕಮಾಂಡ್ ಕೂಡಾ ಸಿದ್ದರಾಮಯ್ಯನವರ ಮಾತಿಗೇ ಹೆಚ್ಚು ಬೆಲೆ ಕೊಡುತ್ತಾ ಬಂತು. ಅದರಲ್ಲೂ ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕವಂತೂ ಸಿದ್ದರಾಮಯ್ಯನವರ ಮಾತೇ ನಡೆಯುತ್ತಿತ್ತು. ಒಂದು ಹಂತದಲ್ಲಿ ಹೈಕಮಾಂಡನ್ನೇ ಮೀರಿ ನಿಂತರು. ಹೀಗೆ ಸರಕಾರದಲ್ಲೂ, ಪಕ್ಷದಲ್ಲೂ ತನ್ನ ಹಿಡಿತವನ್ನು ಬಲಪಡಿಸಿ ಕೊಂಡ ಸಿದ್ದರಾಮಯ್ಯನವರನ್ನು ಒಪ್ಪಿಕೊಳ್ಳದಿದ್ದರೂ ಸಹಿಸಿಕೊಳ್ಳುವುದು ಮೂಲ ಕಾಂಗ್ರೆಸಿಗರಿಗೆ ಅನಿವಾರ್ಯವಾಗಿತ್ತು. ಆದರೆ ಅವರ ಮೇಲಿನ ಸಿಟ್ಟು ಮಾತ್ರ ಗುಪ್ತಗಾಮಿನಿಯಂತೆ ಹರಿಯುತ್ತಲೇ ಇತ್ತು.
ಒಟ್ಟಾರೆಯಾಗಿ ಕಾಂಗ್ರೆಸ್‌ನ ಮತ್ತು ವೈಯಕ್ತಿಕವಾಗಿ ಸಿದ್ದರಾಮಯ್ಯ ಸೋಲಿಗೆ ಅವರ ಆಡಳಿತ ಶೈಲಿಯೇ ಕಾರಣ ಎನ್ನುವ ವಾದವನ್ನು ಪರಾಮರ್ಶಿಸಬೇಕು. ಭಾಗ್ಯಗಳ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಗಮನ ಹರಿಸಿದರು, ಜತೆಗೆ ಮೋದಿ ಮತ್ತು ಆರ್‌ಎಸ್‌ಎಸ್‌ನ್ನು ವಿರೋಧಿಸುವ ಭರದಲ್ಲಿ ಬಹುಸಂಖ್ಯಾತರ ಭಾವನೆಗಗಳಿಗೆ ಧಕ್ಕೆ ತಂದರು ಎಂಬ ಆರೋಪವೂ ಇದೆ. ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳು ಬಹುಸಂಖ್ಯಾತ ಭಾವನೆಗಳನ್ನು ಘಾಸಿಗೊಳಿಸುತ್ತಿದೆ ಎಂದು ತಿಳಿದಿದ್ದರೂ ಪುನರ್ ವಿಮರ್ಶಿಸುವ ಬುದ್ಧಿವಂತಿಕೆ ತೋರಿಸಲಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಕೆಲವು ಸಚಿವರಿಗೆ ಉದ್ದೇಶಪೂರ್ವಕವಾಗಿಯೇ ರಕ್ಷಣೆ ನೀಡಿದರು. ಆರೋಪ ಬಂದಾಗ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವ ದಿಟ್ಟತವನ್ನು ತೋರಿಸಿದ್ದರೆ ಕನಿಷ್ಠ ಕಟ್ಟುನಿಟ್ಟಿನ ಮುಖ್ಯಮಂತ್ರಿ ಎಂಬ ಹೆಸರಾದರೂ ಬರುತ್ತಿತ್ತು. ಹಾಗೇನೂ ಮಾಡದೆ ತೀರಾ ಒತ್ತಡ ಬಿದ್ದಾಗ ರಾಜೀನಾಮೆ ಪಡೆದು ಅನಂತರ ಕ್ಲೀನ್‌ಚಿಟ್ ನೀಡುವ ನಾಟಕವಾಡಿದರು. ಸಿದ್ದರಾಮಯ್ಯ ಸರಕಾರದಲ್ಲಿ ತನಿಖೆ ಎದುರಿಸಿದ ಎಲ್ಲ ಸಚಿವರು ಕ್ಲೀನ್‌ಚಿಟ್ ಪಡೆದುಕೊಂಡು ಇದು ಕ್ಲೀನ್‌ಚಿಟ್ ಸರಕಾರ ಎಂಬ ಕುಖ್ಯಾತಿಗೆ ಗುರಿಯಾಯಿತು. ಸರಕಾರಿ ಅಧಿಕಾರಿಗಳನ್ನೂ ಕೆಟ್ಟದಾಗಿ ನಡೆಸಿಕೊಂಡ ಆರೋಪ ಸಿದ್ದರಾಮಯ್ಯ ಸರಕಾರ ಮೇಲಿದೆ.
ಚುನಾವಣೆ ಘೋಷಣೆಯಾದ ಮೇಲೂ ಸಚಿವರೊಬ್ಬರು ಜಿಲ್ಲಾಧಿಕಾರಿಯ ವಿರುದ್ಧ ಬಹಿರಂಗ ಹೋರಾಟಕ್ಕೆ ನಿಂತಾಗ ಅದನ್ನು ಸರಿಪಡಿಸುವ ಗೋಜಿಗೆ ಸಿದ್ದರಾಮಯ್ಯ ಹೋಗಲಿಲ್ಲ. ಜತೆಗೆ ಸಿದ್ದರಾಮಯ್ಯ ಸುತ್ತಲಿದ್ದ ಸಲಹೆಗಾರರು ಕಾಲಕಾಲಕ್ಕೆ ಅವರ ದಾರಿ ತಪ್ಪಿಸುವ ಕೆಲಸವನ್ನು ಮಾಡಿದರು. ಈ ಎಲ್ಲ ಅಂಶಗಳು ರಾಜ್ಯದಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆಯನ್ನು ಹುಟ್ಟು ಹಾಕಿತ್ತು. ಆದರೆ ಕೊನೆಯವರೆಗೂ ಅದು ಅವರಿಗೆ ಅರ್ಥವಾಗಲೇ ಇಲ್ಲ. ದೇವರಾಜ ಅರಸು ಅಥವಾ ರಾಮಕೃಷ್ಣ ಹೆಗಡೆ ಅವರಂತೆ ಶಾಶ್ವತವಾಗಿ ಜನರ ಬದುಕನ್ನು ಬದಲಾಯಿಸುವ ಯಾವ ಉತ್ತಮ ಕಾರ್ಯಕ್ರಮವಾಗಲಿ, ಯೋಜನೆಯಾಗಲಿ ಸಿದ್ದರಾಮಯ್ಯ ಸರಕಾರದಿಂದ ಬರಲಿಲ್ಲ. ಅವರ ಒಟ್ಟು ಆಡಳಿತವನ್ನು ಜನಪ್ರಿಯ ಆಡಳಿತ ಎನ್ನಬಹುದೇ ಹೊರತು ಜನಪರವಾದ ಆಡಳಿತ ಎನ್ನಲು ಸಾಧ್ಯವಿಲ್ಲ. ಸಮರ್ಥ, ದೂರದೃಷ್ಟಿಯ ಮುಖ್ಯಮಂತ್ರಿ ಎಂಬ ಹೆಸರು ಸಂಪಾದಿಸುವ ಎಲ್ಲ ಅವಕಾಶ ಇದ್ದರೂ ಅದನ್ನು ಅವರು ಬಳಸಿಕೊಳ್ಳಲಿಲ್ಲ. ತುಸು ದಾಷ್ಟéì, ಒಂದಿಷ್ಟು ಅಹಂ ಜನತಾಪರಿವಾರ ಮೂಲದ ನಾಯಕರ ಸಹಜ ಗುಣ. ಆದರೆ ಪಕ್ಷ ಬದಲಾದಾಗ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಈ ಸ್ವಭಾವದಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಂಡಿದ್ದರೆ ಸಿದ್ದರಾಮಯ್ಯ ಕುರಿತು ಇನ್ನಷ್ಟು ಉತ್ತಮ ಅಭಿಪ್ರಾಯ ರೂಪುಗೊಳ್ಳುತ್ತಿತ್ತು. ಬಹುಮತ, ಸ್ವಾತಂತ್ರ್ಯ, ಬೆಂಬಲ ಎಲ್ಲ ಇದ್ದರೂ ವಿಫಲಗೊಂಡ ಸಿದ್ದರಾಮಯ್ಯ ಮುಂದಿನ ನಾಯಕರಿಗೆ ಪಾಠವಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.