ಸಿದ್ದರಾಮಯ್ಯ-ಪರಮೇಶ್ವರ್ ಕಚ್ಚಾಟ: ಗೆಲ್ಲುವ ಮಾನದಂಡ ಯಾವುದು?
Team Udayavani, Dec 6, 2017, 12:09 PM IST
ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುತ್ತದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಮುಂದಿನ ಚುನಾವಣೆಗಾಗುವಾಗ ಕಾಂಗ್ರೆಸ್‌ನ ಸ್ಥಿತಿ ಯಾವ ರೀತಿ ಇರಬಹುದು ಎಂಬುದನ್ನು ಊಹಿಸಲು ಒಂದಷ್ಟು ಸರಕನ್ನು ನೀಡಿದೆ. ಟಿಕೇಟ್ ನೀಡಿಕೆಗೆ ಗೆಲ್ಲುವ ಮಾನದಂಡವೇ ಮುಖ್ಯ ಎಂದಿದ್ದಾರೆ ಸಿದ್ದರಾಮಯ್ಯ. ಇದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ನೇರವಾಗಿ ನೀಡಿದ ಟಾಂಗ್ ಎನ್ನುವುದು ಯಾರಿಗಾದರೂ ಅರಿವಾಗುತ್ತದೆ. ಒಂದು ಕುಟುಂಬಕ್ಕೆ ಒಂದೇ ಟಿಕೇಟ್ ನಿಯಮವನ್ನು ಮುಂದಿನ ಚುನಾವಣೆಯಲ್ಲಿ ಪಾಲಿಸಬೇಕೆನ್ನುವುದು ಪರಮೇಶ್ವರ್ ಇಂಗಿತ. ಆದರೆ ಈ ನಿಯಮ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ವುಂಟುಮಾಡಿದೆ.
ಮುಂದಿನ ವರ್ಷ ನಡೆಯುವ ಚುನಾವಣೆ ತನ್ನ ಪುತ್ರ ಡಾ| ಯತೀಂದ್ರ ಅವರ ಪಾಲಿಗೆ ಅಧಿಕೃತವಾಗಿ ರಾಜಕೀಯ ಆರಂಗೇಟ್ರಂ ಆಗಬೇಕೆನ್ನುವುದು ಸಿದ್ದರಾಮಯ್ಯನವರ ಮನದಾಳದ ಆಸೆ. ಹಾಗೆಂದು ಮಗನಿಗಾಗಿ ಸದ್ಯಕ್ಕೆ ರಾಜಕೀಯ ನಿವೃತ್ತಿ ಪಡೆಯುವ ಉದ್ದೇಶವಂತೂ ಇಲ್ಲವೇ ಇಲ್ಲ. ಹಿಂದೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ ಮುಖ್ಯಮಂತ್ರಿಯಾದ ಬಳಿಕ ಅವರ ವರಸೆ ಬದಲಾಗಿದೆ. ಅಧಿಕಾರದ ರೀತಿಯೇ ಹಾಗೇ. ಒಂದು ಸಲ ಅಧಿಕಾರ ಅನುಭವಿಸಿದರೆ ಶಾಶ್ವತವಾಗಿ ಅದಕ್ಕಂಟಿಕೊಂಡಿರಬೇಕೆಂಬ ವಾಂಛೆಯನ್ನು ಅದು ಹುಟ್ಟಿಸುತ್ತದೆ. ಅಧಿಕಾರ ಎನ್ನುವುದು ತೀರದ ದಾಹ. ಇನ್ನಷ್ಟು ಬೇಕು ಎಂಬ ಹಂಬಲ ಹುಟ್ಟಿಸುವುದೇ ಅಧಿಕಾರದ ಗುಣ. ಇದಕ್ಕೆ ಸಿದ್ದರಾಮಯ್ಯನವರೂ ಹೊರತಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿರುವುದು ಸಿದ್ದರಾಮಯ್ಯನವರೇ. ಚುನಾವಣೆ ಯಲ್ಲಿ ಪರಮೇಶ್ವರ ಅವರ ಕುಟುಂಬಕ್ಕೊಂದೇ ಟಿಕೇಟ್ ನಿಯಮ ಪಾಲಿಸಿದರೆ ತಾನು ಮತ್ತು ಪುತ್ರ ಇಬ್ಬರೂ ಚುನಾವಣೆಗೆ ಸ್ಪರ್ಧಿಸುವುದು ಅಸಾಧ್ಯವಾಗುತ್ತದೆ.
ಈಗಾಗಲೇ ಅವರು ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಿಂದ ತಾನು ಸ್ಪರ್ಧಿಸಲು ಪೂರ್ಣ ತಯಾರಿ ನಡೆಸಿದ್ದಾರೆ. ಹಾಗೆಂದು ವಂಶಪಾರಂಪರ್ಯ ರಾಜಕೀಯ ಕಾಂಗ್ರೆಸ್ ಪಾಲಿಗೆ ಹೊಸತೇನೂ ಅಲ್ಲ. ಪಕ್ಷದ ಅಧ್ಯಕ್ಷ ಹುದ್ದೆಯೇ ಒಂದು ನಿರ್ದಿಷ್ಟ ಕುಟುಂಬಕ್ಕೆ ಮೀಸಲಾಗಿರುವಾಗ ಈ ವಿಚಾರದಲ್ಲಿ ಉಳಿದ ನಾಯಕರು ಭಿನ್ನ ನಿಲುವು ಅನುಸರಿಸುತ್ತಾರೆ ಎಂದು ಅಪೇಕ್ಷಿಸಲು ಸಾಧ್ಯವಿಲ್ಲ. ಅಂತೆಯೇ ಪರಮೇಶ್ವರ್ ನಡೆ ಕಾಂಗ್ರೆಸ್‌ನ ವಂಶ ಪಾರಂಪರ್ಯ ಅಧಿಕಾರ ಸರಣಿಯನ್ನು ಮುರಿಯುವ ದಿಟ್ಟತನವೂ ಅಲ್ಲ. ಅವರ ನೈಜ ಉದ್ದೇಶ ಈ ಮೂಲಕ ಡಾ|ಯತಿಂದ್ರ ಅವರಿಗೆ ಟಿಕೇಟ್ ತಪ್ಪಿಸುವುದಷ್ಟೇ ಆಗಿದೆ. ಅಪ್ಪ-ಮಗ ಇಬ್ಬರೂ ಸ್ಪರ್ಧಿಸಿ ಇಬ್ಬರೂ ಗೆದ್ದರೆ ಸಿದ್ದರಾಮಯ್ಯ ಇನ್ನಷ್ಟು ಬಲಿಷ್ಠರಾಗುತ್ತಾರೆ. ಹೀಗೆ ಅವರು ಬಲಿಷ್ಠರಾಗುತ್ತಾ ಹೋದಂತೆ ಮುಖ್ಯಮಂತ್ರಿ ಪಟ್ಟ ತನ್ನಿಂದ ದೂರ ಸರಿಯುತ್ತಾ ಹೋಗುತ್ತದೆ. ಹೀಗಾಗಿ ಸಿದ್ದರಾಮಯ್ಯ ನಾಗಾಲೋಟವನ್ನು ಯಾವ ರೀತಿಯಲ್ಲೂ ತಡೆಯ ಬೇಕೆಂಬ ಲೆಕ್ಕಾಚಾರ ಪರಮೇಶ್ವರ್ ಬಣದ್ದು. ಈ ಕಾರಣದಿಂದ ಕಾಂಗ್ರೆಸ್ ಒಳಜಗಳ ತೇಪೆ ಹಾಕಿದಷ್ಟು ಹೆಚ್ಚುತ್ತಾ ಹೋಗುತ್ತಿದೆ. ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಮುಂದಕ್ಕೆ ಹೋಗಲು ಕೂಡ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಧ್ಯೆ ತಾಳಮೇಳ ಹೊಂದಾಣಿಕೆಯಾಗದಿರುವುದೇ ಕಾರಣ ಎನ್ನುವುದು ಗುಟ್ಟಿನ ವಿಚಾರವಲ್ಲ.
ಹಿಂದೆ ನಿರ್ಧರಿಸಿದ ಪ್ರಕಾರ ಡಿ. 13ರಂದು ಜನಾಶೀರ್ವಾದ ಯಾತ್ರೆ ಪ್ರಾರಂಭವಾಗಬೇಕಿತ್ತು. ಆದರೆ ಈಗ ಏನೇನೋ ಸಬೂಬು ಹೇಳಿ ಯಾತ್ರೆಯನ್ನು ಮುಂದೂಡಲಾಗಿದೆ. ಮುಂಬರುವ ಮಾರ್ಚ್‌ನಲ್ಲಿ ಯಾತ್ರೆ ಹೊರಡುವ ಉದ್ದೇಶವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಈ ಯಾತ್ರೆಯಲ್ಲಿ ಪರಮೇಶ್ವರ್ ಭಾಗವಹಿಸುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಆದರೆ ಒಂದಂತೂ ಸತ್ಯ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ ಯಾತ್ರೆ ಹೊರಟರೆ ಕಾಂಗ್ರೆಸ್ ಮನಸುಗಳು ಇನ್ನೂ ಒಂದಾಗಿಲ್ಲ ಎನ್ನುವುದನ್ನು ಡಂಗೂರ ಸಾರಿಕೊಂಡಂತಾಗುತ್ತದೆ. ಸಿದ್ದರಾಮಯ್ಯ ಎಂದಲ್ಲ ಕಾಂಗ್ರೆಸ್‌ನ ಹಲವು ಹಿರಿತಲೆಗಳು ಮುಂದಿನ ಚುನಾವಣೆಯಲ್ಲಿ ತಮ್ಮ ಕುಟುಂಬದವರನ್ನು ಆಖಾಡಕ್ಕಿಳಿಸಲು ತಯಾರಿ ಮಾಡುತ್ತಿದ್ದಾರೆ.
ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದರೆ ಕೆಲವರು ರಹಸ್ಯ ತಯಾರಿ ನಡೆಸುತ್ತಿದ್ದಾರೆ. ಎಲ್ಲರಿಗೂ ತಮ್ಮ ಉತ್ತರಾಧಿಕಾರಿಗಳು ರಾಜಕೀಯದಲ್ಲಿ ಮುಂದುವರಿಯಬೇಕೆನ್ನುವ ಅಪೇಕ್ಷೆ ಇದೆ. ವರುಣಾದಲ್ಲಿ ಯತೀಂದ್ರ ಅವರನ್ನು ಗೆಲ್ಲಿಸಲು ಸುಮಾರು 2 ವರ್ಷಗಳ ಹಿಂದಿನಿಂದಲೇ ತಳಮಟ್ಟದ ತಯಾರಿ ನಡೆಸಲಾಗಿದೆ. ಹೀಗೆ ವೇದಿಕೆ ಸಿದ್ಧವಾದ ಬಳಿಕ ಸಿದ್ದರಾಮಯ್ಯ ಗೆಲ್ಲುವ ಮಾನದಂಡ ಎಂಬ ಮಾತನ್ನು ತೇಲಿ ಬಿಟ್ಟಿದ್ದಾರೆ. ಏನೇ ಮಾನದಂಡ ನಿಗದಿಪಡಿಸಿದರೂ ಅಂತಿಮವಾಗಿ ಗೆಲ್ಲಿಸುವುದು ಮಾತ್ರ ಮತದಾರ ಪ್ರಭುಗಳು ಎನ್ನುವುದನ್ನು ಮಾತ್ರ ನೆನಪಿಟ್ಟುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.