ಗ್ರಾಹಕ ರಕ್ಷಣೆಗೆ ಮಹತ್ವದ ತೀರ್ಪು
Team Udayavani, Nov 5, 2020, 6:16 AM IST
ನಗರ ಹಾಗೂ ಮಹಾನಗರಗಳಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಬೇಕು ಎನ್ನುವ ಕನಸು ಬಹುತೇಕರಿಗೆ ಇರುತ್ತದೆ. ಹೀಗಾಗಿಯೇ ಅನೇಕರು ಕಷ್ಟಪಟ್ಟು ದುಡಿದ ಹಣವನ್ನು ಒಟ್ಟುಗೂಡಿಸಿಯೋ ಅಥವಾ ಸಾಲ ಮಾಡಿಯೋ ಫ್ಲ್ಯಾಟ್ ಖರೀದಿಸಲು ನಿರ್ಧರಿಸುತ್ತಾರೆ. ಇದಕ್ಕಾಗಿ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಮುಂಗಡ ನೀಡಿರುತ್ತಾರೆ. ಆದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಫ್ಲ್ಯಾಟ್ ನಿಮ್ಮದಾಗುತ್ತದೆ ಎಂದು ಭರವಸೆ ನೀಡುವ ಕಂಪೆನಿಗಳು ಅನಂತರ ಏನೇನೋ ನೆಪ ಮುಂದಿಟ್ಟು, ವಿತರಣೆಯಲ್ಲಿ ವಿಳಂಬ ಮಾಡುತ್ತಾ ಹೋಗುವ ಪ್ರವೃತ್ತಿ ಹೆಚ್ಚುತ್ತಲೇ ಇದೆ.
ಕೋವಿಡ್ ಸಾಂಕ್ರಾಮಿಕ ತಡೆಗಾಗಿ ತರಲಾದ ಲಾಕ್‌ಡೌನ್ ಹಾಗೂ ಈಗ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅನೇಕ ರಿಯಲ್ ಎಸ್ಟೇಟ್ ಕಂಪೆನಿಗಳು ಅನಿವಾರ್ಯವಾಗಿಯೂ ನಿರ್ಮಾಣ ಕಾರ್ಯವನ್ನು ವಿಳಂಬಿಸುವಂತಾಗಿದೆ. ಹೀಗಾಗಿಯೇ, ಹಣ ಕೊಟ್ಟು, ಫ್ಲ್ಯಾಟ್‌ಗಳ ನಿರೀಕ್ಷೆಯಲ್ಲಿರುವವರಿಗೆ ನಿರಾಸೆ
ಹೆಚ್ಚುತ್ತಲೇ ಇದೆ.
ಹೀಗೆ ಅತಿಯಾದ ವಿಳಂಬದಿಂದಾಗಿ ನಿರಾಶರಾಗುವ ಜನರು ಫ್ಲ್ಯಾಟ್ ಪಡೆಯುವ ಕನಸನ್ನು ಕೈ ಬಿಟ್ಟು, ತಾವು ಕೊಟ್ಟ ಹಣ ಹಿಂಪಡೆಯಲು ನಿರ್ಧರಿಸುತ್ತಾರೆ. ಆದರೆ ಕೆಲವೊಮ್ಮೆ ಕಂಪೆನಿಗಳು ಈ ವಿಚಾರದಲ್ಲೂ ಗ್ರಾಹಕರಿಗೆ ನೆಪ ಹೇಳಿ ತೊಂದರೆ ಮಾಡಿಬಿಡುತ್ತವೆ. ಇದಷ್ಟೇ ಅಲ್ಲ, “ಮನೆಯ ಖರೀದಿ ಮತ್ತು ವಿಳಂಬಕ್ಕೆ ಸಂಬಂಧಿಸಿದ ವಿವಾದಗಳ ವಿಚಾರದಲ್ಲಿ ಗ್ರಾಹಕರು ಕೇವಲ “ರೇರಾ’ ಕಾಯ್ದೆಯ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ) ಮೊರೆ ಹೋಗಬೇಕು ಹಾಗೂ ಈ ಜಟಿಲ ಪ್ರಕ್ರಿಯೆಯಿಂದಾಗಿ ತಮಗೆ ಮತ್ತಷ್ಟು ಸಮಯ ಸಿಗುತ್ತದೆ ಎಂಬ ಧೈರ್ಯದಲ್ಲಿ ರಿಯಲ್ ಎಸ್ಟೇಟ್ ಕಂಪೆನಿಗಳಿರುತ್ತವೆ. ಈ ಕಾರಣಕ್ಕಾಗಿಯೇ, ಗ್ರಾಹಕರೀಗ ಬೇಸತ್ತು ಗ್ರಾಹಕ ರಕ್ಷಣ ಕಾಯ್ದೆಯ ಮೊರೆ ಹೋಗಲಾರಂಭಿಸಿದ್ದಾರೆ.
ಇದಕ್ಕೂ ಕಂಪೆನಿಗಳು ತಗಾದೆ ತೆಗೆಯಲಾರಂಭಿಸಿವೆ. ಇತ್ತೀಚೆಗೆ ಇಂಥದ್ದೇ ಪ್ರಕರಣವೊಂದರಲ್ಲಿ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿ ವಿರುದ್ಧ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಜನರು ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ನಡೆಸಿದ ಆಯೋಗ, ಫ್ಲ್ಯಾಟ್ ನೀಡುವಲ್ಲಿ ವಿಳಂಬವಾಗುತ್ತಿದ್ದು, ಗ್ರಾಹಕರು ಪಾವತಿಸಿರುವ ಹಣವನ್ನು ಕೂಡಲೇ ಹಿಂದಿರುಗಿಸಿ ಎಂದು ಆ ನಿರ್ಮಾಣ ಕಂಪೆನಿಗೆ ಆದೇಶ ನೀಡಿತ್ತು. ಆದರೆ, “”ಈ ಯೋಜನೆಯನ್ನು ರೇರಾ ಅಡಿ ನೋಂದಣಿ ಮಾಡಲಾಗಿದ್ದು. ಈ ಕಾರಣಕ್ಕಾಗಿಯೇ ಗ್ರಾಹಕ ರಕ್ಷಣಾ ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಮಾನ್ಯ ಮಾಡಬಾರದು ” ಎಂದು ಈ ಕಂಪೆನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಗಮನಾರ್ಹ ಸಂಗತಿಯೆಂದರೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು: “”ಇನ್ಮುಂದೆ ಫ್ಲ್ಯಾಟ್‌ಗಳ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ರೇರಾ ಜತೆಯಲ್ಲೇ ಗ್ರಾಹಕ ರಕ್ಷಣ ಕಾಯ್ದೆಯ ಅಡಿಯಲ್ಲೂ ಪರಿಹಾರ ಪಡೆಯಬಹುದು” ಎಂದು ಮಹತ್ವದ ಆದೇಶ ನೀಡಿದೆ.
ಗ್ರಾಹಕರ ಹಿತರಕ್ಷಣೆಯಲ್ಲಿ ನಿಸ್ಸಂಶಯವಾಗಿಯೂ ಈ ತೀರ್ಪು ಗಮನಾರ್ಹ ಪಾತ್ರ ವಹಿಸಲಿದೆ. ಫ್ಲ್ಯಾಟ್ ಖರೀದಿಸಬೇಕೆಂಬ ಕನಸು ಹೊತ್ತು, ಕಂಪೆನಿಗಳ ಭರವಸೆಯ ಮಾತುಗಳನ್ನು ನಂಬಿ ಹಣ ತೆರುವ ಗ್ರಾಹಕರು, ಅನಂತರ ವರ್ಷಗಟ್ಟಲೇ ಕಾಯುತ್ತ ಕುಳಿತುಕೊಳ್ಳುವಂಥ ಪರಿಸ್ಥಿತಿ ಇದರಿಂದ ಕಡಿಮೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.