ಕಾಶ್ಮೀರದಲ್ಲಿ ಕುದಿಮೌನ
Team Udayavani, Aug 5, 2019, 5:11 AM IST
ಕಾಶ್ಮೀರದಲ್ಲೇನಾಗುತ್ತಿದೆ? ಈ ಪ್ರಶ್ನೆಯನ್ನು ದೇಶದ ಕೋಟ್ಯಂತರ ಜನರು ಕುತೂಹಲದಿಂದ ಕೇಳುತ್ತಿದ್ದಾರೆ. ಆದರೆ ಯಾರಿಗೂ ಉತ್ತರ ಸಿಗುತ್ತಿಲ್ಲ. ಕಾಶ್ಮೀರದಲ್ಲಿ ಏನೋ ಒಂದು ಮಹತ್ತರವಾದುದು ಸಂಭವಿಸಲಿದೆ ಎನ್ನುವುದನ್ನು ಸದ್ಯದ ಬೆಳವಣಿಗೆಗಳು ಸೂಚಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಕಣಿವೆ ರಾಜ್ಯದಲ್ಲಿ ಅನೂಹ್ಯವಾದ ಬೆಳವಣಿಗೆಗಳು ಸಂಭವಿಸುತ್ತಿವೆ. ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾಶ್ಮೀರ ಭೇಟಿ, ಕೇಂದ್ರ ಸರಕಾರ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದು, ಅಮರನಾಥ ಯಾತ್ರೆಯನ್ನು 14 ದಿನಗಳ ಮುಂಚಿತವಾಗಿಯೇ ದಿಢೀರ್ ಎಂದು ರದ್ದುಗೊಳಿಸಿದ್ದು, ಅದರ ಬೆನ್ನಿಗೆ ಮಾಚಿಲ್ ಮಾತೆಯ ಯಾತ್ರೆ ರದ್ದಾಗಿರುವುದು, ಪ್ರವಾಸಿಗರನ್ನು ವಾಪಸು ಹೋಗಲು ಸೂಚಿಸಿರುವುದೆಲ್ಲ ದೊಡ್ಡದೊಂದು ಕಾರ್ಯಾಚರಣೆಗೆ ನಡೆಸಿದ ಪೂರ್ವ ತಯಾರಿಯಂತೆ ಕಾಣಿಸುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಹಿಂದಿನ ಕಾರಣವನ್ನು ರಹಸ್ಯವಾಗಿಡಲಾಗಿದೆ. ಕೇಂದ್ರದಲ್ಲಿ ಮೂರ್‍ನಾಲ್ಕು ಮಂದಿಯನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಇದರ ಸುಳಿವು ಇಲ್ಲ. ವಿಪಕ್ಷಗಳು ಪದೇ ಪದೇ ಒತ್ತಾಯಿಸಿದರೂ ಕೇಂದ್ರ ಬಾಯಿ ಬಿಡುತ್ತಿಲ್ಲ. ಹೀಗಾಗಿ ಕುತೂಹಲ ಇನ್ನಷ್ಟು ಹೆಚ್ಚುತ್ತಿದೆ.
ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಲು ಮತ್ತು ಆ.15ರಂದು ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಭಂಗಗೊಳಿಸಲು ಪಾಕಿಸ್ತಾನಿ ಉಗ್ರರು ಭಾರೀ ಷಡ್ಯಂತ್ರವನ್ನು ರಚಿಸಿರುವ ಕುರಿತು ಖಚಿತ ಗುಪ್ತಚರ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಲಾಗಿದೆ ಎಂದು ಸರಕಾರ ಹೇಳುತ್ತಿದ್ದರೂ ಇದು ಅರ್ಧ ಸತ್ಯ. ಏಕೆಂದರೆ ಅಮರನಾಥ ಯಾತ್ರಿಗಳ ಮೇಲೆಯೇ ದಾಳಿ ನಡೆದರೂ ಯಾತ್ರೆಯನ್ನು ರದ್ದುಗೊಳಿಸಿದ ನಿದರ್ಶನವಿಲ್ಲ. ಅದಲ್ಲದೆ ಈ ಸಲ ಮಾಚಿಲ್ ಮಾತಾ ಯಾತ್ರೆಯನ್ನೂ ರದ್ದುಗೊಳಿಸಿರುವುದು ಸಾರ್ವಜನಿಕರ ಮನಸಿನಲ್ಲಿ ಅನೇಕ ಅನುಮಾನಗಳನ್ನು ಹುಟ್ಟುವಂತೆ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನದ ಕಡೆಯಿಂದ ಗಡಿ ನುಸುಳುವಿಕೆಯೂ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಆ.15ರಂದು ಎಲ್ಲ ಪಂಚಾಯಿತಿ ಕೇಂದ್ರಗಳಲ್ಲಿ ತ್ರಿವರ್ಣ ಧ್ವಜ ಅರಳಿಸಬೇಕೆಂದು ಕೇಂದ್ರ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ ಎನ್ನುವ ವಾದವೂ ಇದೆ. ಈ ಮೂಲಕ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಇಲ್ಲಿ ನಡೆಯುವುದು ಭಾರತದ ಕಾನೂನು ಎಂಬ ಸಂದೇಶವನ್ನು ರವಾನಿಸುವುದು ಕೇಂದ್ರದ ಉದ್ದೇಶವಾಗಿರಬಹುದು. ಅಂತೆಯೇ ಕಳೆದ ಸುಮಾರು ಒಂದು ವರ್ಷದಿಂದ ಕಾಶ್ಮೀರ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. ವರ್ಷಾಂತ್ಯಕ್ಕಾಗುವಾಗ ಚುನಾವಣೆ ಘೋಷಿಸಲು ನಡೆಸುತ್ತಿರುವ ತಯಾರಿ ಇದು ಎನ್ನುವ ತರ್ಕವೂ ಇದೆ. ಇದು ನಿಜವೇ ಆಗಿದ್ದರೆ ಸ್ವಾಗತಾರ್ಹ ನಡೆಯೇ ಸರಿ. ಏಕೆಂದರೆ ಚುನಾಯಿತ ಸರಕಾರವೊಂದು ಆಡಳಿತ ನಡೆಸಬೇಕಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ಧರ್ಮ. ಆದರೆ ಚುನಾವಣೆ ಮತ್ತು ಸ್ವಾತಂತ್ರ್ಯ ದಿನಕ್ಕಾಗಿ ಇಷ್ಟೊಂದು ಭದ್ರತೆ ಕೈಗೊಳ್ಳಲಾಗಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿರುವ 370 ಮತ್ತು 35ಎ ಪರಿಚ್ಛೇದಗಳನ್ನು ರದ್ದುಪಡಿಸಲು ಮಾಡುತ್ತಿರುವ ಸಿದ್ಧತೆ ಎಂಬ ವಾದವೇ ಈಗ ಹೆಚ್ಚು ಪ್ರಬಲವಾಗಿ ಕೇಳಿ ಬರುತ್ತಿದೆ. ಇದನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರದ್ದುಪಡಿಸಲು ಪ್ರಯತ್ನಿಸುವುದರಲ್ಲಿ ವಿಶೇಷವೇನೂ ಇಲ್ಲ. ಏಕೆಂದರೆ ಅದರ ಚುನಾವಣಾ ಪ್ರಣಾಳಿಕೆಯಲ್ಲಿ ಇದು ಉಲ್ಲೇಖವಾಗಿತ್ತು.
ಕಣಿವೆ ರಾಜ್ಯಕ್ಕೆ ನೀಡಿದ ವಿಶೇಷ ಸ್ಥಾನಮಾನದಿಂದಾಗಿಯೇ ಅದಿನ್ನೂ ಭಾರತದ ಜೊತೆಗೆ ಸಂಪೂರ್ಣವಾಗಿ ವಿಲೀನಗೊಂಡಿಲ್ಲ ಎನ್ನುವ ಭಾವನೆ ಕೇಂದ್ರ ಸರಕಾರದ್ದು. ತಾತ್ಕಾಲಿಕ ನೆಲೆಯಲ್ಲಿ ಈ ವಿಶೇಷ ಸೌಲಭ್ಯವನ್ನು ಕಾಶ್ಮೀರಕ್ಕೆ ನೀಡಲಾಗಿದ್ದರೂ ರಾಜಕೀಯವೂ ಸೇರಿ ವಿವಿಧ ಕಾರಣಗಳಿಂದಾಗಿ ಅದು ಖಾಯಂ ಆಗಿ ಉಳಿದುಕೊಂಡು ಬಂದಿದೆ. ಭಯೋತ್ಪಾದನೆ ಸೇರಿದಂತೆ ಕಾಶ್ಮೀರ ಈಗ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಈ ವಿಶೇಷ ಸ್ಥಾನಮಾನ ಕಾರಣ ಎನ್ನುವುದು ನಿಜವೇ. ಹಾಗೆಂದು ಅದನ್ನು ರದ್ದುಪಡಿಸುವುದು ಎಣಿಸಿದಷ್ಟು ಸುಲಭವಲ್ಲ. ಈ ವಿಚಾರವಾಗಿ ಇಡುವ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದಲೂ ವಿವೇಚನೆಯಿಂದಲೂ ಕೂಡಿರಬೇಕಾಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಯಾವುದೇ ನಿರ್ಧಾರದಲ್ಲಿ ಆ ರಾಜ್ಯದ ಜನತೆಯೂ ಸಹಭಾಗಿಯಾಗಿರುವುದು ಅಗತ್ಯ. ಬಂದೂಕಿನ ಮೊನೆಯಲ್ಲಿ ಬಹುಕಾಲ ರಾಜ್ಯಭಾರ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಜನಾಧಿಪತ್ಯವೇ ಅಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದೆ.ಈಗ ನಡೆಯುತ್ತಿರುವ ಬೆಳವಣಿಗೆಗಳೆಲ್ಲ ಇದಕ್ಕೆ ಪೂರಕವಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.