ಸ್ಮಾರ್ಟ್‌ಸಿಟಿ ಅನುಷ್ಠಾನ ವಿಳಂಬ: ಅಸಹಕಾರ ಸರಿಯಲ್ಲ
Team Udayavani, Jul 14, 2018, 6:00 AM IST
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಸ್ಮಾರ್ಟ್‌ಸಿಟಿ. ದೇಶದ ನೂರು ನಗರಗಳನ್ನು ಮಾದರಿ ನಗರಗಳನ್ನಾಗಿ ರೂಪಿಸುವುದು ಈ ಯೋಜನೆ ಹಿಂದಿನ ಆಶಯ. ಸ್ಮಾರ್ಟ್‌ಸಿಟಿಗಳೆಂದರೆ ಹೆಸರೇ ಹೇಳುವಂತೆ ತಾಂತ್ರಿಕವಾಗಿ ಬಹಳ ಅಭಿವೃದ್ಧಿ ಹೊಂದಿದ ಸುಸ್ಥಿರ ನಗರಗಳು. ಶುದ್ಧ ಕುಡಿಯುವ ನೀರು, ಸ್ವತ್ಛತೆ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಒತ್ತು ಹೀಗೆ ಜನಜೀವನ ಸುಗಮವಾಗಿ ಸಾಗಲು ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಸ್ಮಾರ್ಟ್‌ಸಿಟಿಗಳು ಹೊಂದಿರುತ್ತವೆ.2015, ಜೂ.25ರಂದು ಮೋದಿ ಈ ಯೋಜನೆಯನ್ನು ಘೋಷಿಸಿದ್ದರು. ನಗರಗಳ ನಡುವೆ ಸ್ಪರ್ಧೆ ಏರ್ಪಡಿಸುವ ವಿನೂತನ ವಿಧಾನದ ಮೂಲಕ 100 ನಗರಗಳನ್ನು ಈಗಾಗಲೇ ಈ ಯೋಜನೆಗಾಗಿ ಆರಿಸಲಾಗಿದೆ. ಆದರೆ 2 ವರ್ಷ ಕಳೆದಿದ್ದರೂ ಸ್ಮಾರ್ಟ್‌ಸಿಟಿ ಯೋಜನೆ ಆಮೆಗತಿಯಲ್ಲಿ ಸಾಗಿರುವುದು ದುರದೃಷ್ಟಕರ. ಹೀಗಾದರೆ 2022ಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ.
ಕರ್ನಾಟಕದಿಂದ ಮಂಗಳೂರು, ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ, – ಧಾರವಾಡ, ತುಮಕೂರು, ದಾವಣಗೆರೆ ಮತ್ತು ಬೆಂಗಳೂರು ನಗರಗಳನ್ನು ಈ ಯೋಜನೆಗಾಗಿ ಆರಿಸಲಾಗಿದೆ. ಆದರೆ ಯಾವ ನಗರದಲ್ಲೂ ಇನ್ನೂ ಪೂರ್ವಭಾವಿ ತಯಾರಿಯೂ ಆಗಿಲ್ಲ. ಇಡೀ ದೇಶದಲ್ಲಿ ಬಹುತೇಕ ಇದೇ ಪರಿಸ್ಥಿತಿಯಿದೆ. ಮೊದಲ ಹಂತದಲ್ಲಿ ಆಯ್ಕೆಯಾದ ಭುವನೇಶ್ವರ, ಪುಣೆ, ಜೈಪುರ, ಸೂರತ್ ಮತ್ತು ಕೊಚ್ಚಿ ನಗರಗಳೇ ಯೋಜನೆ ಅನುಷ್ಠಾನದಲ್ಲಿ ಕುಂಟುತ್ತಿವೆ. ಕೊಚ್ಚಿಯಲ್ಲಿ ಬರೀ ಎರಡು ಯೋಜನೆಗಳು ಮಾತ್ರ ಪ್ರಾರಂಭವಾಗಿವೆ. ಪುಣೆಯಲ್ಲಿ ನಾಲ್ಕು ಯೋಜನೆಗಳಾಗಿವೆ. ಈ ಪೈಕಿ ಜೈಪುರ ಮತ್ತು ಸೂರತ್ ಪರವಾಗಿಲ್ಲ. ಜೈಪುರದಲ್ಲಿ 47 ಯೋಜನೆಗಳು ಪೂರ್ಣಗೊಂಡಿದ್ದರೆ, ಸೂರತ್‌ನಲ್ಲಿ 52 ಯೋಜನೆಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಸ್ಮಾರ್ಟ್ ಸಿಟಿ 2.04 ಲಕ್ಷ ಕೋ. ರೂ. ವೆಚ್ಚದ ಬೃಹತ್ ಯೋಜನೆ. ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಖಾಸಗಿ-ಸರಕಾರಿ ಸಹಭಾಗಿತ್ವ, ವಿದೇಶಿ ಹೂಡಿಕೆ, ಬಾಂಡ್ ಇತ್ಯಾದಿ ವಿಧಾನಗಳ ಮೂಲಕ ಹಣ ಸಂಗ್ರಹಿಸುವ ಗುರಿಯಿರಿಸಿಕೊಳ್ಳಲಾಗಿದೆ. ಈಗಾಗಲೇ 1.45 ಲಕ್ಷ ಕೋ. ರೂ. ಮೊತ್ತದ 3000ಕ್ಕೂ ಅಧಿಕ ಯೋಜನೆಗಳು ಅನುಷ್ಠಾನಗೊಳ್ಳಬೇಕಿದ್ದು, ಈ ಪೈಕಿ ಇಷ್ಟರ ತನಕ ಪೂರ್ತಿಯಾಗಿರುವ ಬರೀ 4960 ಕೋ. ರೂ.ಯ ಯೋಜನೆಗಳು ಮಾತ್ರ. ಉಳಿದಂತೆ 23,200 ಕೋ. ರೂ.ಯೋಜನೆಗಳು ಈಗಷ್ಟೇ ಪ್ರಾರಂಭವಾಗಿದೆ. 17,213 ಕೋ. ರೂ. ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ. ಇದು ಸ್ಮಾರ್ಟ್‌ಸಿಟಿಯ ಸದ್ಯದ ಸ್ಥಿತಿ. ಯೋಜನೆಯ ಗಾತ್ರಕ್ಕೂ ಅನುಷ್ಠಾನದ ವೇಗಕ್ಕೂ ಬಹಳ ಅಂತರವಿರುವುದು ಸ್ಪಷ್ಟ.
ಯೋಜನೆ ವಿಳಂಬವಾಗಲು ಹಲವು ಕಾರಣಗಳಿರಬಹುದು. ಮೊದಲಾಗಿ ಇಂಥ ಬೃಹತ್ ಯೋಜನೆಯನ್ನು ಅನುಷ್ಠಾನಿಸುವ ಅನುಭವ ವಾಗಲಿ, ಪ್ರತಿಭೆಯಾಗಲಿ ನಮಗಿಲ್ಲ. ಸ್ಮಾರ್ಟ್‌ಸಿಟಿಗಳನ್ನು ಸೃಷ್ಟಿಸುವುದೆಂದರೆ ಟೌನ್ ಪ್ಲಾನಿಂಗ್‌ನ್ನು ಅರ್ಥ ಮಾಡಿಕೊಳ್ಳಬೇಕು, ಸುಸ್ಥಿರ ಅಭಿವೃದ್ಧಿ ಏನೆಂದು ತಿಳಿದಿರಬೇಕು, ಇಂಥ ಪರಿಕಲ್ಪನೆಗಳಿಗೆಲ್ಲ ದೇಶ ತೆರೆದುಕೊಂಡದ್ದೇ ಇತ್ತೀಚೆಗಿನ ವರ್ಷಗಳಲ್ಲಿ. ಹೀಗಾಗಿ ಸಹಜವಾಗಿಯೇ ಅನುಭವದ ಕೊರತೆ ಢಾಳಾಗಿ ಗೋಚರಿಸುತ್ತಿದೆ. ಚಂಡೀಗಢ, ನೋಯ್ಡಾದಂತಹ ತುಸು ವ್ಯವಸ್ಥಿತ ನಗರಗಳನ್ನು ನಿರ್ಮಿಸಿದ್ದು ಬಿಟ್ಟರೆ ದೇಶದಲ್ಲಿ ಸ್ಮಾರ್ಟ್‌ಸಿಟಿ ಎನ್ನಬಹುದಾದಂಥ ನಗರಗಳು ಇನ್ನೂ ನಿರ್ಮಾಣವಾಗಿಲ್ಲ. ಟ್ರಾಫಿಕ್ ನಿರ್ವಹಣೆ, ಪಾರ್ಕಿಂಗ್, ಪಾರ್ಕ್‌ಗಳು, ಸ್ವತ್ಛತೆ, ಸೌಂದಯೀìಕರಣ, ಇವೆಲ್ಲ ಸ್ಮಾರ್ಟ್‌ಸಿಟಿಗಳಲ್ಲಿ ಅಗತ್ಯವಾಗಿ ಇರಲೇಬೇಕಾದ ಸೌಲಭ್ಯಗಳು. ನಮ್ಮ ಈಗಿನ ನಗರಗಳಲ್ಲಿ ಇಂಥ ಮೂಲಸೌಕರ್ಯಗಳು ಯಾವ ರೀತಿ ಎನ್ನುವುದು ಗೊತ್ತೇ ಇದೆ. ಇದೇ ಮಾದರಿಯ ನಗರಗಳನ್ನು ರೂಪಿಸಿದವರೇ ಸ್ಮಾರ್ಟ್‌ಸಿಟಿ ಯೋಜನೆಗಳನ್ನೂ ತಯಾರಿಸುತ್ತಿದ್ದಾರೆ. ಹೀಗಾಗಿ ನೀತಿ ರೂಪಣೆ ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಕಂಡುಬರುತ್ತಿದೆ. ಸ್ಮಾಟ್‌ಸಿಟಿ ಅನುಷ್ಠಾನಕ್ಕೆ ಸ್ಪೆಷಲ್ ಪರ್ಪಸ್ ವೆಹಿಕಲ್ ರಚಿಸಬೇಕೆಂಬ ನಿಯಮವಿದ್ದರೂ ಅನೇಕ ನಗರಗಳಲ್ಲಿ ರಚನೆಯಾಗಿಲ್ಲ.
ಇವೆಲ್ಲವುಗಳಿಂತ ಮುಖ್ಯವಾಗಿ ಬೇಕಾಗಿರುವುದು ಪ್ರಬಲ ರಾಜಕೀಯ ಇಚ್ಛಾಶಕ್ತಿ. ಸ್ಮಾರ್ಟ್‌ಸಿಟಿ ಅನುಷ್ಠಾನದಲ್ಲಿ ಇದುವೇ ಕಾಣಿಸುತ್ತಿಲ್ಲ. ಕೇಂದ್ರವೇನೋ ಅತ್ಯುತ್ಸಾಹದಿಂದ ಇದ್ದರೂ ರಾಜ್ಯಗಳ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳು ತುಸು ಉತ್ತಮ ಪ್ರತಿಸ್ಪಂದನೆ ತೋರಿಸುತ್ತಿವೆ. ಆದರೆ ವಿಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ತೀರಾ ನಿರಾಸಕ್ತಿಯಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯೋಜನೆ ಕೇಂದ್ರದ್ದೇ ಆದರೂ ಇದರ ಅಂತಿಮ ಫಲಾನುಭವಿಗಳು ಪ್ರಜೆಗಳು. ಜನರಿಗೆ ಒಳಿತಾಗುವಂಥ ಯೋಜನೆಗಳಲ್ಲಿ ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಹಾಕುವುದು ಸರಿಯಲ್ಲ. ನಗರಗಳ ಅಭಿವೃದ್ಧಿಯಲ್ಲಿ ರಾಜ್ಯಗಳ ಪಾತ್ರವೂ ಇದ್ದು, ಈ ಹೊಣೆಯನ್ನು ರಾಜ್ಯಗಳು ಅರಿತುಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.