ಹಲವು ನಿರೀಕ್ಷೆಗಳ ಟ್ರಂಪ್ ಭೇಟಿ
Team Udayavani, Feb 24, 2020, 6:33 AM IST
ರಾಜತಾಂತ್ರಿಕವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಮೋದಿ ಮತ್ತು ಟ್ರಂಪ್ ನಡುವೆ ಆತ್ಮೀಯತೆಯ ಸೆಲೆಯೊಂದು ಇದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗುಣಾತ್ಮಕವಾದ ಪರಿಣಾಮವನ್ನು ಬೀರಿದರೆ ಅದರಿಂದ ಲಾಭವಾಗುವುದು ದೇಶಕ್ಕೇನೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೊಚ್ಚಲ ಭಾರತ ಭೇಟಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಚರ್ಚೆಯಲ್ಲಿರುವ ವಿಚಾರ ಮಾತ್ರವಲ್ಲದೆ ಜಾಗತಿಕವಾಗಿ ಕುತೂಹಲ ಮೂಡಿಸಿರುವ ಘಟನೆಯೂ ಹೌದು. ಫೆ. 24 ಮತ್ತು 25ರಂದು ಟ್ರಂಪ್ ಭಾರತದಲ್ಲಿರುತ್ತಾರೆ. ಜೊತೆಗೆ ಅವರ ಪತ್ನಿ ಮತ್ತು ಪುತ್ರಿ, ಅಳಿಯನೂ ಆಗಮಿಸುತ್ತಿರುವುದು ಈ ಪ್ರವಾಸಕ್ಕೊಂದು ಕೌಟುಂಬಿಕ ಆಯಾಮವನ್ನೂ ನೀಡಿದೆ. ಟ್ರಂಪ್ ಭೇಟಿಗಾಗಿ ಗುಜರಾತಿನಲ್ಲಿ ಸುಮಾರು ಮೂರು ತಿಂಗಳಿಂದಲೇ ತಯಾರಿ ಆರಂಭವಾಗಿದೆ.
ನೂತನವಾಗಿ ನಿರ್ಮಾಣವಾಗಿರುವ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಅವರ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಯಲಿದೆ. ಜಗತ್ತಿನ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಮುಖ್ಯಸ್ಥರ ಭೇಟಿಗೆ ವೇದಿಕೆಯಾಗಲಿರುವ ಈ ಕಾರ್ಯಕ್ರಮ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಹಾಗೂ ಒಂದಷ್ಟು ವಿವಾದಗಳನ್ನೂ ಒಳಗೊಂಡಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಅಮೆರಿಕದ ಹೂಸ್ಟನ್‌ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನು ಅಲ್ಲಿನ ಅನಿವಾಸಿ ಭಾರತೀಯರು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಇಲ್ಲಿಯೇ ಟ್ರಂಪ್ ಭಾರತ ಪ್ರವಾಸದ ಬೀಜಾಂಕುರವಾಗಿತ್ತು.
ಇಂಥ ಬೃಹತ್ ಕಾರ್ಯಕ್ರಮಗಳ ಖರ್ಚುವೆಚ್ಚಗಳು, ಪ್ರಯೋಜನ ಇತ್ಯಾದಿಗಳ ಬಗ್ಗೆ ಟೀಕೆಗಳೇನೆ ಇದ್ದರೂ ಅಂತಾರಾಷ್ಟ್ರೀಯ ಸಂಬಂಧ ಸಂವರ್ಧನೆಗೆ ಇಂಥ ಕಾರ್ಯಕ್ರಮಗಳು ಪೂರಕ ಎನ್ನುವುದರಲ್ಲಿ ಅನುಮಾನವಿಲ್ಲ. ರಾಜತಾಂತ್ರಿಕವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಮೋದಿ ಮತ್ತು ಟ್ರಂಪ್ ನಡುವೆ ಆತ್ಮೀಯತೆಯ ಸೆಲೆಯೊಂದು ಇದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗುಣಾತ್ಮಕವಾದ ಪರಿಣಾಮವನ್ನು ಬೀರಿದರೆ ಅದರಿಂದ ಲಾಭವಾಗುವುದು ದೇಶಕ್ಕೇನೆ.
ಟ್ರಂಪ್ ಭಾರತ ಭೇಟಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಿಷ್ಠಗೊಳಿಸಲು ಸಿಗುವ ಉತ್ತಮ ಅವಕಾಶ ಎಂದು ಭಾವಿಸಬಹುದು. ಈ ಮೂಲಕ ಆರ್ಥಿಕ ಅಭಿವೃದ್ಧಿ, ಜಾಗತಿಕ ಶಾಂತಿ ಇತ್ಯಾದಿ ಕ್ಷೇತ್ರಗಳಲ್ಲಿ ಧನಾತ್ಮಕವಾದ ಪರಿಣಾಮಗಳನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ವ್ಯವಹಾರಗಳಲ್ಲಿರುವ ಅಡೆತಡೆಗಳ ನಿವಾರಣೆಗೆ ಈ ಭೇಟಿ ನೆರವಾಗಬೇಕೆಂಬುದು ಎರಡೂ ದೇಶಗಳ ಅಪೇಕ್ಷೆ.
ಹಾಗೇ ನೋಡಿದರೆ ಇರಾನ್ ವಿಚಾರವೊಂದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಅಮೆರಿಕ ಮತ್ತು ಭಾರತ ಸಮಾನ ನಿಲುವನ್ನು ಹೊಂದಿವೆ. ದಶಕಗಳಿಂದ ನಮ್ಮ ಮಗ್ಗುಲ ಮುಳ್ಳಾಗಿರುವ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಟ್ರಂಪ್ ನೀಡಿರುವ ಹೇಳಿಕೆಯೂ ಈ ಸಂದರ್ಭದಲ್ಲಿ ಗಮನಾರ್ಹವಾಗುತ್ತದೆ.
ಭಾರತದ ಮತ್ತು ಪಾಕ್ ನಡುವಣ ಯಾವುದೇ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಬೇಕಾದರೆ ಪಾಕ್ ಮೊದಲು ತನ್ನ ನೆಲದಲ್ಲಿ ಹುಟ್ಟಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆಯನ್ನು ದಮನಿಸಬೇಕೆಂದು ಸ್ಪಷ್ಟ ಮಾತುಗಳಲ್ಲಿ ತಾಕೀತು ಮಾಡಿದ್ದಾರೆ ಟ್ರಂಪ್.ಭಾರತ ಬಹಳ ಹಿಂದಿನಿಂದಲೇ ಹೇಳಿಕೊಂಡು ಬರುತ್ತಿರುವ ಮಾತಿದು. ಭಾರತ ನಡೆಸುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಈ ಮೂಲಕ ಟ್ರಂಪ್ ಆನೆಬಲ ತುಂಬಿದ್ದಾರೆ.
ಭಯೋತ್ಪಾದನೆ ನಿಗ್ರಹದಲ್ಲಿ ಪರಸ್ಪರ ಸಹಕಾರ, ಇಂಡೊ-ಫೆಸಿಫಿಕ್ ವಲಯಕ್ಕೆ ಸಂಬಂಧಪಟ್ಟಂತೆ ಚೀನ ಪ್ರಾಬಲ್ಯವನ್ನು ತಗ್ಗಿಸುವ ವ್ಯೂಹಾತ್ಮಕ ತಂತ್ರಗಾರಿಕೆ, ರಕ್ಷಣಾ ಮತ್ತು ವಾಣಿಜ್ಯ ಸಂಬಂಧ ಸಂವರ್ಧನೆ ಈ ಮುಂತಾದ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಕಾಡುತ್ತಿರುವ ಎಚ್-1ಬಿ ವಿಸಾ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಇವೆಲ್ಲ ದೇಶದ ಭದ್ರತೆ ಮತ್ತು ಹಿತಾಸಕ್ತಿಗೆ ಪೂರಕವಾಗಿರುವ ವಿಚಾರಗಳು.
ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ಟ್ರಂಪ್‌ಗೆ ತುಸು ಮುನಿಸು ಇದೆ. ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕೆಲವೊಂದು ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸುತ್ತಿರುವುದು ಅಮೆರಿಕದ ಮುನಿಸಿಗೆ ಕಾರಣ. ಈ ಹಿನ್ನೆಲೆಯಲ್ಲಿ ಯಾವುದೇ ವಾಣಿಜ್ಯ ಒಪ್ಪಂದಕ್ಕೆ ಅಂಕಿತ ಹಾಕುವ ಸಾಧ್ಯತೆಯಿಲ್ಲ ಎನ್ನುವ ಅನುಮಾನವೊಂದು ಇತ್ತು.
ಈ ಕುರಿತು ಅಮೆರಿಕ ಸ್ಪಷ್ಟವಾಗಿ ಏನನ್ನೂ ಹೇಳದಿದ್ದರೂ ಈ ಕಗ್ಗಂಟು ಬಗೆಹರಿಯುವ ನಿರೀಕ್ಷೆ ಇದೆ. ಜಗತ್ತಿನ ದೊಡ್ಡಣ್ಣನೆಂದೇ ಅರಿಯಲ್ಪಡುವ ಅಮೆರಿಕ ಈಗ ಹಿಂದೆಂಗಿಂತಲೂ ಭಾರತಕ್ಕೆ ಹೆಚ್ಚು ನಿಕಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಮೋದಿ ಸರಕಾರದ ರಾಜ ತಾಂತ್ರಿಕ ನೈಪುಣ್ಯತೆ ಫಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿಯನ್ನು ರಾಜತಾಂತ್ರಿಕವಾಗಿ ಭಾರತದ ಚತುರ ನಡೆಯೆಂದು ಹೇಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.