ಎಸ್‌ಎಸ್‌ಎಲ್‌ಸಿ ಪರೀಕ್ಷೆ ; ಗಹನವಾಗಿ ಯೋಚಿಸಿ
Team Udayavani, Jun 11, 2020, 7:41 AM IST
ಸಾಂದರ್ಭಿಕ ಚಿತ್ರ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿಚಾರದಲ್ಲಿ ರಾಜ್ಯಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಅದರಲ್ಲೂ ತಮಿಳುನಾಡು, ಪುದುಚೆರಿ, ತೆಲಂಗಾಣದಲ್ಲಿ ಎಸ್‌ಎಸ್
ಎಲ್‌ಸಿ ಪರೀಕ್ಷೆ ರದ್ದಾದ ನಂತರದಿಂದ, ರಾಜ್ಯದಲ್ಲೂ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂಬ ಆಗ್ರಹ ಅಧಿಕವಾಗಿದೆ. ಈ ವಿಚಾರವು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪರೀಕ್ಷೆಯನ್ನು ರದ್ದು ಮಾಡಿ, ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಮತ್ತು ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನೇ ಪರಿಗಣಿಸಿ ಅಂತಿಮ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದೇ ವೇಳೆಯಲ್ಲೇ ಒಂದು ವರ್ಗ- “ಆಂತರಿಕ ಮೌಲ್ಯಮಾಪನ ಹಾಗೂ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನೇ ಮಾನದಂಡವಾಗಿಸಿಕೊಳ್ಳಬೇಕು ಎನ್ನುವುದು ಸರಿಯಲ್ಲ. ಪರೀಕ್ಷೆ ನಡೆಸದೆಯೇ ಪಾಸು ಮಾಡಿದರೆ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಭಾರೀ ತೊಂದರೆಯಾಗಲಿದೆ’ ಎನ್ನುತ್ತದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಂತೂ ನಿಗದಿತ ದಿನಾಂಕದಂದೇ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿ ಪೋಷಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಒಂದು ವೇಳೆ ಮೂರು ದಿನಗಳ ಮುನ್ನ ಪರೀಕ್ಷಾ ಕೇಂದ್ರವಿರುವ ಪರಿಸರ ಕಂಟೈನ್ಮೆಂಟ್ ವಲಯವಾಗಿ ಘೋಷಣೆಯಾದರೆ, ಪರೀಕ್ಷಾ ಕೇಂದ್ರವನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸುವುದಾಗಿ ಹೇಳಿದ್ದಾರೆ. ಪರೀಕ್ಷೆ ಆರಂಭವಾದ ಬಳಿಕ ಕಂಟೈನ್ಮೆಂಟ್ ವಲಯವಾದರೆ, ಜುಲೈಯಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಈ ಕೇಂದ್ರದ ವಿದ್ಯಾರ್ಥಿಗಳನ್ನು ಹೊಸ ಅಭ್ಯರ್ಥಿಗಳೆಂದು ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು ಎಂಬುದು ಶಿಕ್ಷಣ ಇಲಾಖೆಯಯೋಚನೆ-ಯೋಜನೆ. ಆದರೆ, ಆರೋಗ್ಯ ಸಮಸ್ಯೆಯು ದಟ್ಟೈಸಿರುವ ಈ ಸಮಯದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.
ಸುರಕ್ಷತಾ ಕ್ರಮಗಳು ಸೂಕ್ತವಾಗಿ ಪಾಲನೆಯಾದರೂ ಸಹ, ವಿದ್ಯಾರ್ಥಿ-ಪೋಷಕರ ಭಯವನ್ನು ಹಾಗೂ ಮಾನಸಿಕ ತೊಳಲಾಟವನ್ನೂ ಪರಿಗಣಿಸಬೇಕಾದ ಅಗತ್ಯವಿರುತ್ತದೆ. ಕಂಟೈನ್ಮೆಂಟ್ ವಲಯಗಳನ್ನು ಬದಲಿಸುವುದಾಗಲಿ, ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡುವುದಾಗಲಿ ಕೇಳುವುದಕ್ಕೆ ಚೆನ್ನಾಗಿರುತ್ತದೆಯೇ ಹೊರತು, ಇದೆಲ್ಲ ವಿದ್ಯಾರ್ಥಿಗಳ ಮೇಲೆ, ಅವರ ಪರೀಕ್ಷಾ ಸಾಮರ್ಥ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗೆಂದು, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎನ್ನುವ ವಾದವೂ ಪ್ರಶ್ನಾರ್ಹ. ಇದರ ಬದಲು, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಯೋಚಿಸುವುದು ಒಳಿತೆನಿಸುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತೂಮ್ಮೆ ಗಹನವಾಗಿ ಯೋಚಿಸಲಿ.
ಇದೇ ವೇಳೆಯಲ್ಲಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕದಲ್ಲಿ 50 ಪ್ರತಿಶತ ವಿನಾಯಿತಿ ನೀಡಲು ಖಾಸಗಿ, ಅನುದಾನಿತ ಶಾಲಾಡಳಿತಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಬೇಕು ಎಂಬ ಆಗ್ರಹ ರಾಜ್ಯಾದ್ಯಂತ ಕೇಳಿಬರುತ್ತಿದ್ದು, ಈ ಕುರಿತೂ ಗಂಭೀರ ಚಿಂತನೆ ನಡೆಯಬೇಕಿದೆ. ಮತ್ತೂಂದು ಸಂಗತಿಯೆಂದರೆ, ಈಗ ದೇಶವಾಸಿಗಳ ಆರ್ಥಿಕ ಸ್ಥಿತಿಯೂ ಹದಗೆಟ್ಟಿದ್ದು, ಅನೇಕರು ನಿರುದ್ಯೋಗಿಗಳಾಗಿದ್ದಾರೆ/ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವಾಸ್ತವವನ್ನು ಪರಿಗಣಿಸಿ, ಶುಲ್ಕ ಕಡಿತಗೊಳಿಸುವ ವಿಚಾರದಲ್ಲಿ ಚಿಂತನೆ ನಡೆಸುವುದೊಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.