Reservoir ವಾಕ್ಸಮರ ನಿಲ್ಲಿಸಿ, ಜಲಾಶಯಗಳ ಸುರಕ್ಷೆಯತ್ತ ಲಕ್ಷ್ಯ ಹರಿಸಿ
Team Udayavani, Aug 15, 2024, 6:00 AM IST
ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ಗೇಟ್ ಮುರಿದ ಘಟನೆಗೆ ಸಂಬಂಧಿಸಿ ದಂತೆ ಈಗ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಆಡಳಿತ ಮತ್ತು ವಿಪಕ್ಷ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳ ವಿನಿಮಯದಲ್ಲಿ ತೊಡಗಿ ಕೊಂಡಿದ್ದಾರೆ. ರಾಜಕೀಯ ನಾಯಕರ ಈ ಕಚ್ಚಾಟದ ನಡುವೆಯೇ ಜಲಾಶಯದ ಮುರಿದಿರುವ ಗೇಟ್‌ಗೆ ಹೊಸದಾಗಿ ಗೇಟ್ ಅಳವಡಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಹೊಸ ಗೇಟ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡಿ ರುವ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ಜಲಾಶಯದ ಗೇಟ್ ಮುರಿದ ಕ್ಷಣದಲ್ಲಿ ನಮ್ಮ ರಾಜಕೀಯ ನಾಯಕರು ತೋರಿದ್ದ ಒಂದಿಷ್ಟು ಮುತ್ಸದ್ಧಿತನ ಎರಡು ದಿನಗಳ ಬಳಿಕ ಮರೆತು ಹೋದಂತೆ ಕಾಣುತ್ತಿದೆ. ಸದ್ಯ ಏನಿದ್ದರೂ ಜಲಾಶಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೀರನ್ನು ಉಳಿಸಿಕೊಂಡು ಹೊಸ ಗೇಟ್ ಅಳವಡಿಸಿ, ಮತ್ತೆ ಜಲಾಶಯ ತುಂಬುವಂತೆ ಮಾಡುವುದು ನಮ್ಮ ನಾಯಕರ ಆದ್ಯತೆಯಾಗಬೇಕಿತ್ತೇ ವಿನಾ ಪರಸ್ಪರ ದೂಷಣೆ ಯಲ್ಲ. ದುರದೃಷ್ಟವಶಾತ್ ನಮ್ಮ ನಾಯಕರು ಇಲ್ಲೂ ಎಂದಿನ ಚಾಳಿಯನ್ನು ಬಿಡಲೇ ಇಲ್ಲ. ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯದ ಹಿರಿಯ ಸಚಿವರಾದಿ ಯಾಗಿ ಎಲ್ಲರೂ ತುಂಗಭದ್ರಾ ಜಲಾಶಯದ ಗೇಟ್ ಮುರಿದ ಘಟನೆಯನ್ನು ಮುಂದಿಟ್ಟು ರಾಜಕೀಯ ಚರ್ಚೆ ಮಾಡಿದ್ದಾರೆ. ಆಡಳಿತದಲ್ಲಿರುವವರಾದರೂ ಒಂದಿಷ್ಟು ತಾಳ್ಮೆ, ವಿವೇಚನೆಯಿಂದ ವರ್ತಿಸಿ, ತನ್ನ ಹೊಣೆಗಾರಿಕೆ, ಉತ್ತರದಾಯಿತ್ವವನ್ನು ನಿಭಾಯಿಸಿಯಾರು ಎಂಬ ರಾಜ್ಯದ ಪ್ರಜ್ಞಾವಂತ ಜನರ ನಿರೀಕ್ಷೆ ಹುಸಿಯಾಗಿದೆ. ಸದ್ಯಕ್ಕಂತೂ ಹೊಸ ಗೇಟ್ ಅಳವಡಿಕೆ ಕಾರ್ಯಕ್ಕಿಂತ ಹೆಚ್ಚಾಗಿ ರಾಜಕೀಯ ನಾಯಕರ ವಾಕ್ಸಮರವೇ ಭಾರೀ ಸದ್ದು ಮಾಡುತ್ತಿರುವುದು ಮಾತ್ರ ವಿಪರ್ಯಾಸ.ಜಲಾಶಯದ ಮುರಿದು ಹೋಗಿರುವ ಗೇಟ್‌ನ ಬದಲಾಗಿ ಹೊಸ ಗೇಟ್ ಅಳವಡಿಕೆ ಕಾರ್ಯವೇನೋ ನಡೆಯುತ್ತಿದೆ. ಇದು ಶೀಘ್ರ ಪೂರ್ಣವಾಗಿ ಜಲಾಶ ಯದಲ್ಲಿ ಮತ್ತೆ ನೀರಿನ ಸಂಗ್ರಹ ಹೆಚ್ಚಿ, ಮುಂದಿನ ಬೆಳೆಗೆ ನೀರು ಲಭಿಸುವಂತಾಗಲಿ ಎಂಬ ಆಶಯದೊಂದಿಗೆ ರೈತರು ಆಗಸದತ್ತ ದೃಷ್ಟಿ ಬೀರಿದ್ದಾರೆ.
ರೈತರಿಗೆ ತಮ್ಮ ಬೆಳೆ ಉಳಿಸಿಕೊಳ್ಳುವ ಚಿಂತೆಯಾದರೆ ರಾಜಕೀಯ ಪಕ್ಷಗಳು ಮತ್ತವುಗಳ ನಾಯಕರಂತೂ ಈ ಘಟನೆಯಿಂದ ಎಷ್ಟರಮಟ್ಟಿಗೆ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರಕ್ಕೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿದೆ.
ಇನ್ನಾದರೂ ನಾಯಕರು ಒಂದಿಷ್ಟು ವಿವೇಚನೆಯಿಂದ ವರ್ತಿಸಿ, ಇಡೀ ಘಟನಾ ವಳಿಯ ಬಗೆಗೆ ಸಮಗ್ರ ಅವಲೋಕನ ನಡೆಸಬೇಕಿದೆ. ತುಂಗಭದ್ರಾ ಜಲಾಶಯದ ಗೇಟ್ ಮುರಿದ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಲುದೊಡ್ಡ ದುರ್ಘಟನೆಯೊಂದು ಸಣ್ಣದರಲ್ಲಿ ಘಟಿಸಿ, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿಹೋಯಿತು ಎಂಬುದು ಯಾರಿಗೂ ಅರ್ಥವಾಗದ ವಿಷಯವೇನಲ್ಲ. ಈ ಘಟನೆಯಿಂದಲಾದರೂ ನಮ್ಮನ್ನಾಳುವವರು, ನೀರಾವರಿ ಇಲಾಖಾ ಅಧಿಕಾರಿಗಳು, ಸಂಬಂಧಿತ ಇಲಾಖೆಯ ತಜ್ಞರು ಎಚ್ಚೆತ್ತುಕೊಂಡು ಭವಿಷ್ಯದಲ್ಲಿ ಇಂತಹ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲೇಬೇಕು. ರಾಜ್ಯದಲ್ಲಿನ ಬಹುತೇಕ ಅಣೆಕಟ್ಟುಗಳು ಸೂಕ್ತ ಮತ್ತು ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗಿವೆ. ಒಂದೆಡೆಯಿಂದ ಹವಾಮಾನ ವೈಪರೀತ್ಯದ ಪರಿಣಾಮ ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದೆಲ್ಲೆಡೆ ಭಾರೀ ಮಳೆಯಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ನಮ್ಮ ಅಣೆಕಟ್ಟುಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಜ್ಞಾಪೂರ್ವಕವಾಗಿ ಚಿಂತಿಸಿ, ಇರುವ ಸಮಸ್ಯೆಗಳು ಮತ್ತು ಲೋಪದೋಷಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು. ಬರಿಯ ತಜ್ಞರ ಸಮಿತಿ ನೇಮಕ ಮಾಡಿ, ವರದಿ ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಸರಕಾರ ತನ್ನ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ತೋರಿದಾಗ ಮಾತ್ರ ಇಂತಹ ದುರ್ಘಟನೆಗಳನ್ನು ತಪ್ಪಿಸಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.