ಅಂತರ್ಜಾಲದ ಅವಾಂತರ ನಿಲ್ಲಲಿ
Team Udayavani, Jul 4, 2018, 8:40 AM IST
ಮಹಾರಾಷ್ಟ್ರದ ಧುಲೆ ನಗರಿಯಲ್ಲಿ ಮಕ್ಕಳ ಕಳ್ಳರು ಎಂದು ಭಾವಿಸಿ ಐವರು ಅಮಾಯಕರನ್ನು ಜನರು ಹೊಡೆದು ಕೊಂದಿದ್ದಾರೆ. ನಮ್ಮ ಬೆಂಗಳೂರಿನಲ್ಲೂ ಅಮಾಯಕನೊಬ್ಬ ಮಕ್ಕಳ ಕಳ್ಳನೆಂಬ ಆರೋಪ ಹೊತ್ತು ಹತ್ಯೆಗೀಡಾದ ಘಟನೆಯನ್ನೂ ನೋಡಿದ್ದೇವೆ. ಕಳೆದ ಆರು ತಿಂಗಳಿಂದ “ಮಕ್ಕಳ ಕಳ್ಳರ’ ವದಂತಿಗಳು ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು, ಒಂದೊಂದು ದಿನ ಒಂದೊಂದು ಜಾಗದಿಂದ ಹತ್ಯೆಗಳ ಸುದ್ದಿಗಳು ಹೊರ ಬರುತ್ತಲೇ ಇವೆ.
ಪ್ರತಿಯೊಂದು ಘಟನೆಯಲ್ಲೂ ಹತ್ಯೆಗೊಳಗಾದವರು ಅಮಾಯಕರೆನ್ನುವುದು ಸಾಬೀತಾಗುತ್ತಿದೆ. “ದೇಶ ದಿನೇ ದಿನೇ ಹಿಂಸೆಯತ್ತ ವಾಲುತ್ತಿದೆ, ಜನರು ಅಸಹಿಷ್ಣುಗಳಾಗುತ್ತಿದ್ದಾರೆ’ ಎಂದು ಗೋಳಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಈ ರೀತಿಯ ಘಟನೆಗಳು ನಿಲ್ಲಬೇಕೆಂದರೆ ಹಿಂಸೆಗೆ ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.
ಮೊದಲನೆಯದಾಗಿ ಮಕ್ಕಳ ಕಳ್ಳಸಾಗಣೆ ಎನ್ನುವುದು ದೇಶ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಆದಿವಾಸಿ ಪ್ರದೇಶಗಳಲ್ಲಿ, ಅಂದರೆ ಅತ್ಯಂತ ಹಿಂದುಳಿದ ಪ್ರದೇಶಗಳಿಂದ ಮಕ್ಕಳ ಕಳ್ಳಸಾಗಣೆ/ ಪೋಷಕರಿಗೆ ಹಣ ಕೊಟ್ಟು ಮಕ್ಕಳನ್ನು ತಂದು ನಗರಗಳಲ್ಲಿ ಭಿûಾಟನೆಗೆ ಬಿಡುವುದು, ಶೋಷಣೆ ಮಾಡುವ ಪ್ರಕರಣಗಳು ಅಧಿಕ. ಹೀಗೆ ಕಾಣೆಯಾದ ಮಕ್ಕಳಿಗೆ ಮುಂದೇನಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ.
ಹಣದ ಆಸೆಗೆ ಬಿದ್ದು ಮಕ್ಕಳನ್ನು ಮಾರಿದವರೂ ಮುಂದೆ ತಮ್ಮ ಮಕ್ಕಳ ಕುರುಹೇ ಸಿಗದಂತಾದಾಗ ಕಂಗಾಲಾಗುತ್ತಾರೆ, ವ್ಯಗ್ರರಾಗುತ್ತಾರೆ. ಈ ಕಾರಣಕ್ಕಾಗಿಯೇ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅಪರಿಚಿತ ವ್ಯಕ್ತಿಗಳೆಡೆಗೆ ಯಾವಾಗಲೂ ಅನುಮಾನದ, ಭಯದ ಕಣ್ಣುಗಳು ಜಾಸ್ತಿಯಿರುತ್ತವೆ. ಜನರ ಈ ದುರ್ಬಲ ಸ್ಥಿತಿಯನ್ನೇ ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾವುದೋ ದೇಶದಲ್ಲಿ, ಯಾವುದೋ ಕಾರಣಕ್ಕಾಗಿ ಕೊಲೆಯಾದ ಮಕ್ಕಳ ಚಿತ್ರಗಳನ್ನು ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಿಬಿಡುವ ವಿಕೃತ ಮತಿಗಳು “ಪಕ್ಕದ ಊರಿನ ಮಕ್ಕಳಿವು. ಮಕ್ಕಳ ಕಳ್ಳರು ನಿಮ್ಮೂರಿಗೂ ಬರಬಹುದು. ಎಚ್ಚರಿಕೆಯಿಂದ ಇರದಿದ್ದರೆ ನಿಮ್ಮ ಮಕ್ಕಳಿಗೂ ಇಂಥದ್ದೇ ಪರಿಸ್ಥಿತಿ ಬರಬಹುದು’ ಎಂದು ಹೆದರಿಸುತ್ತಾರೆೆ. ಇದನ್ನು ನೋಡಿದವರು ನಡುಗಿಹೋಗುತ್ತಾರೆ. ಅವರ ಭಯ ಆಕ್ರೋಶದ ರೂಪ ತಾಳುತ್ತದೆ.
ಸತ್ಯಕ್ಕಿಂತಲೂ ಸುಳ್ಳಿಗೇ ವೇಗವಾಗಿ ಹರಡುವ ಶಕ್ತಿಯಿದೆ. ಇದೀಗ ಉಚಿತ ಅಂತರ್ಜಾಲ, ಅಗ್ಗದ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಮನೆಗೂ ತಲುಪಿವೆ. ಕೆಲ ವರ್ಷಗಳ ಹಿಂದೆ ಅಂತರ್ಜಾಲವೆಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನೂ ತಿಳಿಯದ ಜನರೀಗ ಅದರ ದಾಸರಾಗಿದ್ದಾರೆ. ಅದರಲ್ಲಿ ಬರುವುದೆಲ್ಲ ನಿಜವೇ ಇರುತ್ತದೆ ಎನ್ನುವ ನಂಬಿಕೆ ಬಹುತೇಕರಿಗೆ. ಹೀಗಾಗಿ ಸುಳ್ಳು ಸುದ್ದಿಗಳಿಗೂ ಸತ್ಯದ ಪೋಷಾಕು ಸಿಗುತ್ತಿದೆ. ಯಾವ ಸ್ಥಳದಲ್ಲಿ, ಯಾವ ವಾಟ್ಸಾಪ್ ಸಂದೇಶವು ಹಠಾತ್ ಹಿಂಸೆಗೆ ಕಾರಣವಾಗಿದೆ ಎನ್ನುವುದು ಪತ್ತೆಹಚ್ಚಲು ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಅವರಿಗೆ ಅರಿವಾಗುವ ಮುನ್ನವೇ ಅನಾಹುತಗಳು ಸಂಭವಿಸುತ್ತಿವೆ.
ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ವಾಟ್ಸ್‌ಆ್ಯಪ್‌ನಲ್ಲಿ ಇಂಥ ವದಂತಿಗಳನ್ನು ಸೃಷ್ಟಿಸುವವರ ಮೇಲೆ ಕ್ರಮಕೈಗೊಳ್ಳುವ ಪ್ರಶಂಶನೀಯ ನಿರ್ಧಾರಕ್ಕೆ ಬಂದಿದೆ. ಆದರೆ ಒಮ್ಮೆ ಸೃಷ್ಟಿಯಾದ ಸುಳ್ಳು ಸುದ್ದಿಯ ಹರಿವನ್ನು ತಡೆಯುವುದು ಅಷ್ಟು ಸುಲಭವಲ್ಲ. ಹೀಗಾಗಿ ಇಂಥ ಹಿಂಸಕ ಘಟನೆಗಳನ್ನು ತಪ್ಪಿಸುವುದಕ್ಕೆ ಪರ್ಯಾಯ ಮಾರ್ಗದ ಅಗತ್ಯವಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ “ಕಾನೂನು ಸುವ್ಯವಸ್ಥೆಯ ಕರ್ತವ್ಯದಿಂದ ನೀವು ನುಣುಚಿಕೊಳ್ಳುವಂತಿಲ್ಲ’ ಎಂದು ರಾಜ್ಯ ಸರ್ಕಾರಗಳಿಗೆ ಎಚ್ಚರಿಸಿದೆ. ರಾಜ್ಯ ಸರ್ಕಾರಗಳು ಕೂಡಲೇ ಸೋಷಿಯಲ್ ಮೀಡಿಯಾ ವದಂತಿಗಳನ್ನು ನಂಬದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸುಶಿಕ್ಷಿತರನ್ನು ಆರಿಸಿ ಸೋಷಿಯಲ್ ಮೀಡಿಯಾ ಕಣ್ಗಾವಲು ಸಮಿತಿಯನ್ನು ರಚಿಸಬೇಕು, ಅವರ ಮೂಲಕ ಜನರಿಗೆ ಸೋಷಿಯಲ್ ಮೀಡಿಯಾ ಬಳಕೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸ್ ಇಲಾಖೆ ಮಕ್ಕಳ ಕಳ್ಳಸಾಗಣೆ ತಡೆಯುವ ಕೆಲಸಕ್ಕೆ ವೇಗ ನೀಡಬೇಕಿದೆ. ಇನ್ನು ಮುಖ್ಯವಾಹಿನಿ ಮಾಧ್ಯಮಗಳೂ ಜನಾಭಿಪ್ರಾಯದ ಮೇಲೆ ಬಹಳ ಪ್ರಭಾವ ಬೀರುತ್ತವಾದ್ದರಿಂದ ಅವೂ ಇಂಥ ಸುಳ್ಳು ಸುದ್ದಿಗಳ ವಿರುದ್ಧ ನಿತ್ಯವೂ ಸಮರ ಸಾರಬೇಕು. ಸಮಾಜದ ಹಿತರಕ್ಷಣೆಯಲ್ಲಿ ಸರಕಾರದಷ್ಟೇ ಮಾಧ್ಯಮಗಳ ಜವಾಬ್ದಾರಿಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.