ಕಾರ್ಯತಂತ್ರ ಬದಲಾವಣೆ ಅನಿವಾರ್ಯ
Team Udayavani, Dec 24, 2019, 6:46 AM IST
ಸ್ಥಳೀಯ ಚುನಾವಣೆಗಳಿಗೆ ಬೇರೆಯದ್ದೇ ಕಾರ್ಯ ತಂತ್ರ ರೂಪಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಅರ್ಥ ಮಾಡಿಕೊಂಡಿವೆ. ಅರ್ಥವಾಗದಿರುವುದು ಬಿಜೆಪಿಗೇ.
ಜಾಖಂìಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. 2014ರಲ್ಲಿ 37 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ 25 ಸ್ಥಾನಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿದೆ.
ಇದೇ ವೇಳೆ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ನಿಚ್ಚಳ ಬಹುಮತ ಗಳಿಸಿ ಅಧಿಕಾರದತ್ತ ದಾಪುಗಾಲಿಟ್ಟಿದೆ.
ಜಾಖಂìಡ್‌ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭವಿಷ್ಯವಾಣಿ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ವ್ಯಕ್ತವಾಗಿತ್ತು. ಅನಂತರ ನಡೆಸಿದ ಸಮೀಕ್ಷೆಗಳಲ್ಲೂ ಬಿಜೆಪಿ ಸೋಲಲಿದೆ ಎಂಬ ಅಂಶವೇ ಮುಖ್ಯವಾಗಿತ್ತು. ಹೀಗಾಗಿ ಈ ಫಲಿತಾಂಶ ತೀರಾ ಅಚ್ಚರಿಯನ್ನೇನೂ ಉಂಟು ಮಾಡಿಲ್ಲ. ಆದರೆ ಬಿಜೆಪಿಗೆ ಕನಿಷ್ಠ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲೂ ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ 13ರಲ್ಲಿ ಗೆದ್ದಿದ್ದ ಪಕ್ಷವೊಂದು ಇಷ್ಟು ಕ್ಷಿಪ್ರವಾಗಿ ಜನಾದರ ಕಳೆದುಕೊಂಡಿರುವುದು ಮಾತ್ರ ಅಚ್ಚರಿಯುಂಟು ಮಾಡುವ ಅಂಶ.
ಕಳೆದ ವರ್ಷ ಬಿಜೆಪಿ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ಕಳೆದುಕೊಂಡಿತ್ತು. ಈ ವರ್ಷ ಹರ್ಯಾಣದಲ್ಲಿ ನಿಚ್ಚಳ ಬಹುಮತ ಸಿಗದೆ ಪ್ರಾದೇಶಿಕ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು.
ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಶಿವಸೇನೆ ಕೈಗೊಟ್ಟ ಕಾರಣ ಅಧಿಕಾರ ವಂಚಿತವಾಗಿದೆ. ಹೀಗೆ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿಯೇ ಈಗ ಬಿಜೆಪಿ ಅಧಿಕಾರದಿಂದ ದೂರವುಳಿದಿದೆ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಜಾರ್ಖಂಡ್ ದೊಡ್ಡ ರಾಜ್ಯವೇನೂ ಅಲ್ಲ. ಆದರೆ ಗಣಿ ಸಮೃದ್ಧವಾಗಿರುವ ಈ ರಾಜ್ಯದ ಫಲಿತಾಂಶ ಉಳಿದೆಲ್ಲ ಪಕ್ಷಗಳಿಗಿಂತ ಬಿಜೆಪಿಗೆ ಮುಖ್ಯವಾಗಿತ್ತು. ಅಯೋಧ್ಯೆ ತೀರ್ಪು ಪ್ರಕಟವಾದ ಬಳಿಕ ನಡೆದ ಮೊದಲ ಚುನಾವಣೆಯಿದು. ಐದು ಹಂತದ ಚುನಾವಣಾ ಪ್ರಕ್ರಿಯೆಯ ನಡುವೆಯೇ ಕೇಂದ್ರ ಪೌರತ್ವ ಕಾಯಿದೆಯನ್ನು ಜಾರಿಗೊಳಿಸಿತು. ಈ ಎರಡು ಬೆಳವಣಿಗೆಗಳ ಲಾಭವನ್ನು ಚುನಾವಣೆಯಲ್ಲಿ ಎತ್ತಿಕೊಳ್ಳಲು ಬಿಜೆಪಿ ಶಕ್ತಿಮೀರಿ ಪ್ರಯತ್ನಿಸಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಚುನಾವಣಾ ರ್ಯಾಲಿಗಳಲ್ಲಿ ಈ ವಿಚಾರಗಳನ್ನೇ ಪ್ರಧಾನವಾಗಿ ಎತ್ತಿದ್ದರು. ಅದಾಗ್ಯೂ ಜಾರ್ಖಂಡ್ ಮತದಾರರು ಬಿಜೆಪಿಯತ್ತ ಒಲವು ತೋರಿಸಲಿಲ್ಲ.ಇದು ಏಕೆ ಎನ್ನುವುದರ ಕುರಿತು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾರರ ಆದ್ಯತೆ ಬೇರೆಯಾಗುತ್ತಿದೆಯೇ ಎಂಬ ಅಂಶ ಜಾರ್ಖಂಡ್ ಫಲಿತಾಂಶದಿಂದ ಮತ್ತೂಮ್ಮೆ ಚರ್ಚೆಯ ವಸ್ತುವಾಗಿದೆ. ಲೋಕಸಭೆ ಚುನಾವಣೆ ಬಳಿಕ ನಡೆದಿರುವ ವಿಧಾನಸಭೆ ಫಲಿತಾಂಶಗಳೆಲ್ಲ ಬಿಜೆಪಿಗೆ ವಿರುದ್ಧವಾಗಿ ಬಂದಿರುವುದು ಈಗ ಮತದಾರರು ಪ್ರಬುದ್ಧರಾಗಿದ್ದಾರೆ ಎಂಬುದರ ಸಂಕೇತವಾಗಿದ್ದರೆ ಇದೊಂದು ಧನಾತ್ಮಕ ಬೆಳವಣಿಗೆಯೇ ಸರಿ. ಏಕೆಂದರೆ ಪ್ರಜಾತಂತ್ರಕ್ಕೆ ಬೇಕಾಗಿರುವುದು ಇಂಥ ಪ್ರಬುದ್ಧ ಮತದಾರರು. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳು ಮುಖ್ಯವಾಗಬೇಕು ಎಂಬ ಸಂದೇಶ ಮತದಾರ ನೀಡಿದ್ದಾನೆಂದರೆ ಈ ಮತದಾರ ಅಭಿನಂದನೆಗೆ ಅರ್ಹನಾಗುತ್ತಾನೆ.
ಸ್ಥಳೀಯ ಚುನಾವಣೆಗಳಿಗೆ ಬೇರೆಯದ್ದೇ ಕಾರ್ಯತಂತ್ರವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಜಾರ್ಖಂಡ್ ಸೇರಿದಂತೆ ಇತ್ತೀಚೆಗೆ ನಡೆದಿರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ತೋರಿಸಿಕೊಟ್ಟಿವೆ. ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಂಡಿವೆ.
ಅರ್ಥವಾಗದಿರುವುದು ಬಿಜೆಪಿಗೆ. ಎಲ್ಲ ಚುನಾವಣೆಗೂ ರಾಷ್ಟ್ರೀಯ ವಿಚಾರವನ್ನು ಎಳೆದು ತರುವುದರಿಂದ ಲಾಭವಾಗದು ಎನ್ನುವುದನ್ನು ಪಕ್ಷದ ನಾಯಕರು ತಿಳಿದುಕೊಳ್ಳಬೇಕು. ಮುಂದಿನ ವರ್ಷ ದಿಲ್ಲಿ ವಿಧಾನಸಭೆ ಚುನಾವಣೆೆಯಲ್ಲಿ ಪಕ್ಷ ಮತ್ತೂಮ್ಮೆ ಅಗ್ನಿಪರೀಕ್ಷೆಯನ್ನು ಎದುರಿಸಲಿದೆ. ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಬಿಜೆಪಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.