ಪಡಿತರ ವ್ಯವಸ್ಥೆ ಸುಧಾರಿಸಲೇ ಬೇಕು: ಅಕ್ರಮ ಕೊನೆಗಾಣಲಿ
Team Udayavani, Feb 28, 2017, 3:50 AM IST
ಪಡಿತರ ವ್ಯವಸ್ಥೆಯಲ್ಲಿ ಅಕ್ರಮ, ಅಶಿಸ್ತು, ವಂಚನೆಯನ್ನು ಸಮೂಲ ನಾಶ ಮಾಡಿ ಅದನ್ನು ಜನಸ್ನೇಹಿಯಾಗಿ ಪರಿವರ್ತಿಸುವುದು ಸವಾಲಿನ ಕೆಲಸ ನಿಜ. ಆದರೆ ಹಾಗೆ ಮಾಡುವುದು ಸರಕಾರದ ಕರ್ತವ್ಯ. ಸರಕಾರದ ಕೆಲಸವೇ ಅದು ತಾನೆ!
ಪಡಿತರ ವಿತರಣೆಯಲ್ಲಾಗುತ್ತಿರುವ ಅಕ್ರಮಗಳನ್ನು ತಡೆಯಲು ಸರಕಾರ ಹಲವಾರು ಪ್ರಯೋಗಗಳನ್ನು ನಡೆಸುತ್ತಿದೆ. ಆದರೆ ರಂಗೋಲಿ ಕೆಳಗೆ ತೂರುವ ಚಾಣಾಕ್ಷತೆ ಹೊಂದಿರುವ ಕಳ್ಳರು ವ್ಯವಸ್ಥೆಯಲ್ಲಿರುವ ಯಾವುದಾದರೊಂದು ಲೋಪವನ್ನು ಬಳಸಿಕೊಂಡು ತಮ್ಮ ಉದ್ದೇಶ ಸಾಧಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಈಗ ಬೆಳಕಿಗೆ ಬಂದಿರುವ ಪಡಿತರ ಕೂಪನ್‌ಗಳ ಅಕ್ರಮ. ಪಡಿತರ ಚೀಟಿ ಹೊಂದಿರುವ ವ್ಯಕ್ತಿ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಮಾಡಲು ಕೆಲ ಸಮಯದ ಹಿಂದೆ ಕೂಪನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ರೇಷನ್ ಪೋರ್ಟೆಬಿಲಿಟಿ ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡ ಈ ವ್ಯವಸ್ಥೆಯಲ್ಲಿ ಮೊದಲು ಮೂರು ತಿಂಗಳಿಗೊಮ್ಮೆ ಕೂಪನ್ ಪಡೆದುಕೊಂಡರೆ ಸಾಕು ಎಂಬ ನಿಯಮವಿತ್ತು. ಪ್ರಾರಂಭದಲ್ಲಿ ಇದು ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು. ದಿನಕ್ಕೊಂದರಂತೆ ಜಾರಿಯಾಗುವ ನಿಯಮಗಳು ಅರ್ಥವಾಗದೆ ಜನರು ಕಂಗಾಲಾದರು. ಜನರಿಗೆ ಎದುರಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆಗಾಗ ನಿಯಮಗಳನ್ನು ಪರಿಷ್ಕರಿಸಿದ ಬಳಿಕ ಅಂತೂ ಇಂತೂ ಕೂಪನ್ ಸೌಲಭ್ಯ ಕ್ರಮಬದ್ಧವಾಯಿತು ಎಂದುಕೊಳ್ಳುವಷ್ಟರಲ್ಲಿ ನಕಲಿ ಕೂಪನ್‌ಗಳನ್ನು ಸೃಷ್ಟಿಸಿ ರೇಷನ್ ಸಾಮಗ್ರಿಗಳನ್ನು ಕೊಳ್ಳೆ ಹೊಡೆದಿರುವ ಬೃಹತ್ ಅಕ್ರಮ ಬೆಳಕಿಗೆ ಬಂದಿದೆ.
ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೂಪನ್ ವ್ಯವಸ್ಥೆಯನ್ನೇ ದಲ್ಲಾಳಿಗಳು ಹೈಜಾಕ್ ಮಾಡಿದ್ದಾರೆ. ವರದಿಗಳು ತಿಳಿಸುವ ಪ್ರಕಾರ 54 ಸಾವಿರ ಕ್ವಿಂಟಾಲ್ ಆಹಾರ ಧಾನ್ಯ, 2.39 ಲಕ್ಷ ಲೀಟರ್ ತಾಳೆಎಣ್ಣೆ ಕಂಡವರ ಪಾಲಾಗಿದೆ. ರಾಜ್ಯವನ್ನು ಹಸಿವು ಮುಕ್ತಗೊಳಿಸುವ ಮಹತ್ವಾಂಕಾಂಕ್ಷೆಯೊಂದಿಗೆ ಸರಕಾರ ಜಾರಿಗೆ ತಂದಿರುವ ಬಡವರಿಗೆ ಉಚಿತವಾಗಿ ಪಡಿತರ ವಿತರಿಸುವ ಅನ್ನಭಾಗ್ಯ ಯೋಜನೆ ಲೂಟಿಕೋರರು, ಬೋಗಸ್ ಕಾರ್ಡುದಾರರು ಮತ್ತು ದಲ್ಲಾಳಿಗಳ ಪಾಲಿಗೆ ಅಕ್ಷಯ ಪಾತ್ರೆಯಂತಾಗಿದೆ.
ಈ ದೇಶದಲ್ಲಿ ಪಡಿತರ ಅಕ್ರಮಗಳಿಗೆ ಕೊನೆಯೆಂಬುದೇ ಇಲ್ಲವೆ ಎನ್ನುವುದು ಎದುರಾಗಿರುವ ಪ್ರಶ್ನೆ. ಏಕೆಂದರೆ ಪಡಿತರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎನ್ನುವುದು ಕರ್ನಾಟಕಕ್ಕೆ ಮಾತ್ರ ಮೀಸಲಾಗಿಲ್ಲ. ಹಾಗೆ ನೋಡಿದರೆ ಈ ಪಿಡುಗು ಇಲ್ಲದ ರಾಜ್ಯವೇ ಇಲ್ಲ.
ರಾಜ್ಯದಲ್ಲಿ ಸುಮಾರು 1.3 ಕೋಟಿ ಬಿಪಿಎಲ್ ಕಾರ್ಡುಗಳಿವೆ. ಸರಕಾರ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸಿದ ಬಳಿಕವಂತೂ ಬಿಪಿಎಲ್ ಕಾರ್ಡುಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಬಂಗಲೆ, ಕಾರು ಇರುವವರು ಕೂಡ ಪುಕ್ಕಟೆ ಅಕ್ಕಿಯ ಆಸೆಗೆ ಯಾರ್ಯಾರಿಗೋ ಲಂಚ ತಿನ್ನಿಸಿ ಬಿಪಿಎಲ್ ಕಾರ್ಡುಗಳನ್ನು ಪಡೆಯುತ್ತಿರುವುದು ಈ ನಾಡಿನ ದೌರ್ಭಾಗ್ಯ. ನಕಲಿ ಪಡಿತರ ಕಾರ್ಡುಗಳ ಹಾವಳಿ ಎಷ್ಟು ಮಿತಿಮೀರಿತ್ತೆಂದರೆ ಇದನ್ನು ಪತ್ತೆಹಚ್ಚುವ ಸಲುವಾಗಿಯೇ ಅಭಿಯಾನ ನಡೆಸಬೇಕಾಯಿತು. ಅಧಿಕಾರಿಗಳ ಸಹಕಾರವಿಲ್ಲದೆ ನಕಲಿ ಪಡಿತರ ಕಾರ್ಡು ಪಡೆಯುವುದು ಅಸಾಧ್ಯ. ಪಡಿತರ ಇಲಾಖೆಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಇದು. ಬರೀ ನಕಲಿ ಬಿಪಿಎಲ್ ಕಾರ್ಡುಗಳನ್ನು ಪತ್ತೆಹಚ್ಚಿರುವುದರಿಂದ ಸರಕಾರದ ಬೊಕ್ಕಸಕ್ಕೆ 590 ಕೋ. ರೂ. ಉಳಿತಾಯವಾಗಿತ್ತು. ಪಡಿತರ ಇಲಾಖೆ ಭ್ರಷ್ಟರಿಗೆ ಹುಲುಸಾಗಿ ಮೇಯಲು ಸಿಗುವ ಮೈದಾನ ಎನ್ನುವುದಕ್ಕೆ ಇದು ಒಂದು ನಿದರ್ಶನ ಮಾತ್ರ.
ಅನ್ನಭಾಗ್ಯದ ನೈಜ ಫಲಾನುಭವಿಗಳೇ ಪಡಿತರ ಸಾಮಗ್ರಿ ಪಡೆದು ಅದನ್ನು ಹಣಕ್ಕೆ ಮಾರಿಕೊಳ್ಳುತ್ತಿರುವುದು ಇನ್ನೊಂದು ಸಮಸ್ಯೆ. ಪ್ರಾದೇಶಿಕ ಆಹಾರ ಪದ್ಧತಿಯನ್ನು ಪರಿಗಣಿಸದೆ ಎಲ್ಲ ಕಡೆಗೂ ಒಂದೇ ರೀತಿಯ ಪಡಿತರ ಸಾಮಗ್ರಿ ವಿತರಿಸುತ್ತಿರುವುದು ಇದಕ್ಕೆ ಕಾರಣ. ಕರಾವಳಿ ಭಾಗದಲ್ಲಿ ಗೋಧಿ ಬಳಕೆ ಬಹಳ ಕಡಿಮೆ. ಈಗ ಅಕ್ಕಿಯ ಜತೆಗೆ ಸಿಗುವ ಗೋಧಿಯನ್ನು ಜನರು ಗಿರಣಿಗಳಿಗೆ ಮಾರುತ್ತಾರೆ. ಇದು ಗೋಧಿ ಹಿಟ್ಟಾಗಿ ಪೊಟ್ಟಣಗಳಲ್ಲಿ ಮಾರಾಟವಾಗುತ್ತದೆ. ಹೀಗಾಗುವುದರಿಂದ ಸರಕಾರವೇ ಅಕ್ರಮಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಇಂತಹ ಹಲವು ಅಸಮರ್ಪಕತೆಗಳನ್ನು ನಿವಾರಿಸಿಕೊಂಡು ಪಡಿತರ ಪೂರೈಕೆಯನ್ನು ಜನಸ್ನೇಹಿಯಾಗಿಸಬೇಕು. ವಂಚನೆ, ಅಶಿಸ್ತು, ಅಕ್ರಮ ತುಂಬಿ ತುಳುಕುಧಿತ್ತಿರುವ ಪಡಿತರ ವ್ಯವಸ್ಥೆಯನ್ನು ಸುಧಾರಿಸುವುದು ಸವಾಲಿನ ಕೆಲಸ ನಿಜ. ಈ ಸವಾಲನ್ನು ಮೆಟ್ಟಿನಿಲ್ಲುವ ದಿಟ್ಟತನವನ್ನು ಸರಕಾರ ತೋರಿಸಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.