ಉಚಿತ ಕೊಡುಗೆ ಮೇಲೆ ನಿಯಂತ್ರಣ ಹೆಜ್ಜೆ ಸ್ವಾಗತಾರ್ಹ
Team Udayavani, Aug 5, 2022, 6:00 AM IST
ಮತದಾನಕ್ಕೂ ಮುನ್ನ ಮತದಾರರಿಗೆ ನೀಡುವ ಉಚಿತ ಆಶ್ವಾಸನೆಗಳ ವಿಚಾರದಲ್ಲಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಂದರೆ, ಸರ್ವೋಚ್ಚ ನ್ಯಾಯಾಲಯ ಹೇಳಿರುವಂತೆ, ನೀತಿ ಆಯೋಗ, ಹಣಕಾಸು ಆಯೋಗ, ಕಾನೂನು ಆಯೋಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರನ್ನು ಒಳಗೊಂಡ ಒಂದು ತಜ್ಞರ ಸಮಿತಿ ರಚಿಸಿ, ಇದು ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ನೀಡುವುದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಸಲಹೆ ನೀಡಬೇಕಾಗಿದೆ.
ಸರ್ವೋಚ್ಚ ನ್ಯಾಯಾಲಯದ ಈ ಹೆಜ್ಜೆ ಸದ್ಯದ ಮಟ್ಟಿಗೆ ಸ್ವಾಗ ತಾರ್ಹವೇ ಆಗಿದೆ. ಈ ಉಚಿತ ಆಶ್ವಾಸನೆಗಳ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚರ್ಚೆಗೆ ಸಿದ್ಧವಿಲ್ಲ ಎಂಬುದು ಕೋರ್ಟ್‌ನ ಬೇಸರದ ಮಾತು. ಕೋರ್ಟ್‌ನ ಪ್ರಕಾರ, ಸದ್ಯದ ವಿಚಾರ, ಚುನಾವಣೆಗೆ ಮುನ್ನ ಈ ಉಚಿತ ಭರವಸೆಗಳನ್ನು ನೀಡುವುದನ್ನು ಸ್ಥಗಿತಗೊಳಿಸಬಹುದೇ ಅಥವಾ ಬೇಡವೇ ಎಂಬುದು ಮಾತ್ರ,.
ಇತ್ತೀಚೆಗಷ್ಟೇ ನಡೆದ ವಿಚಾರಣೆ ವೇಳೆಯಲ್ಲೇ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿತ್ತು. ಚುನಾವಣೆಗೆ ಮುನ್ನ ಘೋಷಿಸುವ ಇಂಥ ಆಶ್ವಾಸನೆಗಳು ಮತದಾರರಿಗೆ ಲಂಚ ನೀಡಿದಂತೆ ಅಲ್ಲವೇ ಎಂಬ ಪ್ರಶ್ನೆಯನ್ನೂ ಕೇಳಿತ್ತು. ಮತದಾನದಂಥ ಒಂದು ಪವಿತ್ರ ಕರ್ತವ್ಯವನ್ನು ಕಲುಷಿತ ಮಾಡಿದಂತೆ ಅಲ್ಲವೇ? ಸಾರ್ವಜನಿಕರ ಹಣವನ್ನು ಬಳಸಿಕೊಂಡು ಮುಂದೊಂದು ದಿನ ನಿಮಗೆ ಉಚಿತವಾಗಿ ವಸ್ತು ಅಥವಾ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯೂ ಸಂವಿಧಾನದ ಆರ್ಟಿಕಲ್ 14ರ ಪ್ರಕಾರ ತಪ್ಪಲ್ಲವೇ ಎಂಬ ಪ್ರಶ್ನೆಯನ್ನೂ ಹಾಕಿತ್ತು.
ಇನ್ನೊಂದು ವಿಚಾರವೆಂದರೆ, ಯಾವುದೇ ಸರ್ಕಾರಗಳು ಬಂದರೂ, ಈ ಉಚಿತ ಕೊಡುಗೆಗಳ ಬಗ್ಗೆ ಚರ್ಚಿಸುವುದೇ ಇಲ್ಲ. ನೀವು ಮಾತ್ರ ನನ್ನ ಕೈಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಕೈ ಎತ್ತ ಬೇಡಿ ಎಂದು ಆಯೋಗಕ್ಕೆ ಹೇಳಿರುವುದು ಸೂಕ್ತವಾದ ಕ್ರಮವೇ ಆಗಿದೆ. ಈಗ ಮಾಡಬೇಕಾಗಿರುವುದು ಇಷ್ಟೇ. ಸುಪ್ರೀಂಕೋರ್ಟ್ ಹೇಳಿರುವಂತೆ ಕೇಂದ್ರ ಚುನಾವಣಾ ಆಯೋಗವೇ ಆಸ್ಥೆ ವಹಿಸಿ, ಮೇಲೆ ಹೇಳಿರುವ ಎಲ್ಲರನ್ನು ಒಳಗೊಂಡ ಒಂದು ಸಮಿತಿ ರಚಿಸಿ, ಉಚಿತ ಕೊಡುಗೆಗಳ ಕುರಿತಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಬೇಕು. ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕು.
ಇದೇ ವಿಚಾರಣೆ ವೇಳೆ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಒಂದು ವಾದ ಮುಂದಿಟ್ಟಿದ್ದಾರೆ. ಕೆಲವೊಮ್ಮೆ ಉಚಿತ ಕೊಡುಗೆಗಳು ಜನರಿಗೆ ಉತ್ತಮವಾಗಿರುತ್ತವೆ. ಬಡವರಿಗೆ ಅನುಕೂಲವಾಗುತ್ತದೆ. ಹೀಗಾಗಿ, ಸಾರಾಸಗಟಾಗಿ ಎಲ್ಲವನ್ನು ನಿಷೇಧಿಸುವುದು ತರವಲ್ಲ ಎಂದಿದ್ದಾರೆ. ಅಂದರೆ ಉಚಿತ ಅಕ್ಕಿ, ವಿದ್ಯುತ್ ನೀಡುವಂಥವು ಉತ್ತಮವಾದ ಯೋಜನೆಗೇಳೇ ಎಂಬುದು ಅವರ ವಾದ.
ಇದನ್ನು ಒಪ್ಪಬಹುದಾದರೂ, ಈ ಘೋಷಣೆಗಳನ್ನು ಚುನಾವಣೆಗೆ ಮುನ್ನ ಮಾಡಬೇಕೇ ಎಂಬುದು ಆಲೋಚಿಸಬೇಕಾದ ಸಂಗತಿ. ಯಾವುದೇ ಸರ್ಕಾರ ಬರಲಿ, ಈ ಬಗ್ಗೆ ಆಲೋಚಿಸಿ ಯೋಜನೆಗಳನ್ನು ಜಾರಿ ಮಾಡಬಹುದು. ಹೀಗಾಗಿ, ಮತದಾನಕ್ಕೂ ಮುನ್ನವೇ ಏಕೆ ಆಮಿಷ ನೀಡಬೇಕು? ಈ ಬಗ್ಗೆಯೂ ಚಿಂತನೆ ನಡೆಸುವ ಅಗತ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.