ಸ್ತ್ರೀ ಶಕ್ತಿಗೆ ಸುಪ್ರೀಂ ಗೌರವ
Team Udayavani, Feb 19, 2020, 7:15 AM IST
ಮಹಿಳೆಯರನ್ನು ಏಕೆ ಕಮಾಂಡ್ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್ ಆಗಿ ಸ್ವೀಕರಿಸಲು ಸೇನೆಯಲ್ಲಿರುವ ಪುರುಷರು ಮಾನಸಿಕವಾಗಿ ಸಿದ್ಧರಿಲ್ಲ. ಅಲ್ಲದೇ ದೈಹಿಕ ಬಲಹೀನತೆಗಳು, ಗರ್ಭಧರಿಸುವಿಕೆ, ವೈವಾಹಿಕ ಸ್ಥಿತಿ, ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಮಹಿಳೆಯರಿಗೂ ಈ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದಿತ್ತು ಸರಕಾರ.
ಲಿಂಗ ಸಮಾನತೆ, ಮಹಿಳಾ ಸಬಲೀಕರಣದ ಮಾತನಾಡುತ್ತಲೇ ಸೇನೆಯಲ್ಲಿ ತಾರತಮ್ಯವನ್ನು ಕಾಪಾಡುತ್ತಾ ಬಂದಿರುವ ವ್ಯವಸ್ಥೆಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡು, ತಪ್ಪನ್ನು ಸರಿಪಡಿಸಲು ಆದೇಶಿಸಿರುವುದು ಶ್ಲಾಘನೀಯ ವಿಚಾರ. ಹೆಣ್ಣು ತಾನು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮಾನಳು ಎಂದು ಸಾಬೀತು ಮಾಡುತ್ತಲೇ ಬರುತ್ತಿದ್ದಾಳೆ. ಸೇನೆಯಲ್ಲಿ ತನಗೆ ವಹಿಸಿದ ವಿವಿಧ ಭೂಮಿಕೆಗಳನ್ನೂ ಮಹಿಳೆಯರು ಎಷ್ಟು ಸಕ್ಷಮವಾಗಿ ನಿಭಾಯಿಸಿದ್ದಾರೆಂದರೆ, ಅದು ಅವರ ಶಕ್ತಿ-ಸಾಮರ್ಥ್ಯಕ್ಕೆ ಪುರಾವೆಯಾಗಿದೆ. ಹೀಗಿರುವಾಗಲೂ ಕೇಂದ್ರ ಸರಕಾರ ಮಹಿಳೆಯರ ಕ್ಷಮತೆಯನ್ನು ಕಟಕಟೆಯಲ್ಲಿ ನಿಲ್ಲಿಸಿದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ. ಮಹಿಳಾ ಅಧಿಕಾರಿಗಳ ಶಾರೀರಿಕ ಮಿತಿಗಳು ಹಾಗೂ ಪುರುಷ ಸಿಬ್ಬಂದಿಯ ಪೂರ್ವಗ್ರಹಗಳನ್ನೇ ನೆಪವಾಗಿಟ್ಟುಕೊಂಡು ಮಹಿಳೆಯರಿಗೆ ಕಮಾಂಡ್ ಹುದ್ದೆ ನೀಡಲು ನಿರಾಕರಿಸುತ್ತಾ ಬಂದಿದ್ದ ಕೇಂದ್ರ ಸರಕಾರಕ್ಕೆ ಈ ನಿಟ್ಟಿನಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್ “ತಪ್ಪನ್ನು’ ಸರಿಪಡಿಸುವಂತೆ ನಿರ್ದೇಶನ ನೀಡಿದೆ. ಇದರಿಂದಾಗಿ, ಸಶಸ್ತ್ರ ಪಡೆಗಳಲ್ಲಿನ ಲಿಂಗ ತಾರತಮ್ಯಕ್ಕೆ ಕೊನೆ ಹಾಡಬೇಕೆಂಬ ಮಹಿಳಾ ಸಿಬ್ಬಂದಿಯ ಬಹುದಿನದ ಹೋರಾಟಕ್ಕೆ ಜಯ ದೊರಕಿದಂತಾಗಿದೆ.
ಸೇನೆಯಲ್ಲಿರುವ ಎಲ್ಲಾ ಮಹಿಳಾ ಅಧಿಕಾರಿಗಳನ್ನು 3 ತಿಂಗಳೊಳಗಾಗಿ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಮಹಿಳೆಯರಿಗೆ ಕಮಾಂಡ್ ಹುದ್ದೆ ನೀಡುವುದಕ್ಕೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂಬ ಐತಿಹಾಸಿಕ ತೀರ್ಪು ನೀಡಿದೆ ಸುಪ್ರೀಂಕೋರ್ಟ್. ಆದರೆ, ಯುದ್ಧದಲ್ಲಿ ಅವರು ನೇರವಾಗಿ ಭಾಗವಹಿಸಬಹುದೇ ಎನ್ನುವ ವಿಚಾರವನ್ನು ಸರಕಾರ ಮತ್ತು ಸೇನೆಗೆ ಬಿಟ್ಟಿದೆ.
ಅಲ್ಲದೇ, ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಅವರ ಸೇವಾವಧಿ ಪರಿಗಣಿಸದೇ, ಯುದ್ಧ ಹೊರತಾದ ಎಲ್ಲ 10 ವಿಭಾಗಗಳಲ್ಲೂ 3 ತಿಂಗಳಲ್ಲಿ ಕಾಯಂ ನೇಮಕಾತಿ ಮಾಡಬೇಕೆಂದೂ ನ್ಯಾ| ಡಿ.ವೈ. ಚಂದ್ರ ಚೂಡ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ. ಒಟ್ಟಲ್ಲಿ ಸಶಸ್ತ್ರ ಪಡೆಗಳಲ್ಲಿ ಪುರುಷರಿಗಿರುವಷ್ಟೇ ಸಮಾನ ಅವಕಾಶ ಪಡೆಯಲು ಮಹಿಳೆಯರೂ ಅರ್ಹರು ಎಂಬ ಸುಪ್ರೀಂ ತೀರ್ಪು, ನಿಜಕ್ಕೂ ಸಮಾನತೆಯ ದಿಸೆಯಲ್ಲಿ ಬೃಹತ್ ಹೆಜ್ಜೆಯೇ ಸರಿ.
ಆಘಾತ ಮೂಡಿಸುವ ಸಂಗತಿಯೆಂದರೆ, ಮಹಿಳೆಯರನ್ನು ಏಕೆ ಕಮಾಂಡ್ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್ ಆಗಿ ಸ್ವೀಕರಿಸಲು ಸೇನೆಯಲ್ಲಿರುವ ಪುರುಷರು ಮಾನಸಿಕವಾಗಿ ಸಿದ್ಧರಿಲ್ಲ. ಅಲ್ಲದೇ ದೈಹಿಕ ಬಲ ಹೀನತೆಗಳು, ಗರ್ಭಧರಿಸುವಿಕೆ, ವೈವಾಹಿಕ ಸ್ಥಿತಿ, ಕೌಟುಂಬಿಕ ಜವಬ್ದಾರಿಗಳಿಂದಾಗಿ ಮಹಿಳೆಯರಿಗೂ ಈ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದಿತ್ತು ಸರಕಾರ.
ಒಂದೆಡೆ ಸರಕಾರವು ಸಬಲೀಕರಣ, ಸಮಾನತೆಯ ಮಾತನಾಡುತ್ತಲೇ ಅದೇ ಮಹಿಳೆಯರ ಕ್ಷಮತೆಯನ್ನು ಪ್ರಶ್ನಿಸುವಂಥ ವಾದವನ್ನು ಇಟ್ಟದ್ದು ಹಾಗೂ ಪುರುಷ ಸಿಬ್ಬಂದಿಯ ಹಿಂದುಳಿದ ಯೋಚನೆಯನ್ನೇ ತರ್ಕದ ರೂಪದಲ್ಲಿ ಪ್ರತಿಪಾದಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಯೂನಿಟ್‌ನಲ್ಲಿರುವ ಸೈನಿಕರಲ್ಲಿ ಹೆಚ್ಚಿನ ಪುರುಷರು ಗ್ರಾಮೀಣ ಭಾಗಗಳಿಂದ ಬಂದವರು, ಅವರು ಮಹಿಳಾ ಆಫೀಸರ್‌ಗಳ ಆದೇಶ ಪಾಲಿಸಲು “ಸಂಕೋಚ’ ಪಡುತ್ತಾರೆ ಎನ್ನುವ ಸರಕಾರದ ವಾದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ, ಇದು ಗ್ರಾಮೀಣ ಭಾಗದ ಜನರ ಬಗೆಗಿನ ಪೂರ್ವಗ್ರಹವನ್ನು ಸೂಚಿಸುತ್ತದೆ ಹಾಗೂ ಎರಡನೆಯದಾಗಿ, ಸೇನೆಯಲ್ಲಿ ಪುರುಷ ಸೈನಿಕರಿಗೆ “ಮಹಿಳೆಯರನ್ನು ಗೌರವಿಸಬೇಕು, ಸಮಾನವಾಗಿ ಕಾಣಬೇಕು’ ಎಂಬ ಶಿಕ್ಷಣ ಸಿಗುತ್ತಿಲ್ಲವೇ ಎಂಬ ಗಂಭೀರ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.
ಸೇನೆಯಲ್ಲಿನ ಅವಕಾಶಗಳು ಮತ್ತು ಭೂಮಿಕೆಗಳನ್ನು ನಿಭಾಯಿಸಲು ಮಹಿಳೆಯರಿಗೆ ಆಗುವುದಿಲ್ಲ ಎಂಬರ್ಥದ ವಾದಗಳನ್ನು ಮಂಡಿಸುವುದು, ಅನುಮಾನ ವ್ಯಕ್ತಪಡಿಸುವುದು ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ಸೇನೆಗೂ ಮಾಡುವ ಅಪಮಾನವಾಗಿದೆ. ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷಿ$¾àಬಾಯಿಯಂಥ ವೀರ ಮಹಿಳೆಯರನ್ನು ಸ್ಮರಿಸುತ್ತಲೇ, ಇಂದಿಗೂ ದೇಶದ ಆಳುವ ವರ್ಗ ಈ ರೀತಿಯ ಮನಸ್ಥಿತಿಯಿಂದ ಮುಕ್ತವಾಗಿಲ್ಲವೆನ್ನುವುದು ನಿಜಕ್ಕೂ ಕಳವಳದ ವಿಚಾರ. ಮಹಿಳೆಯರು ತಮಗಿಂತ ಮೇಲ್ ಸ್ತರಕ್ಕೆ ಏರಬಾರದು ಎಂಬ ಪುರುಷ ಪ್ರಧಾನ ಮನಸ್ಥಿತಿ ಇನ್ನೂ ಜೀವಂತವಾಗಿದೆ ಎಂದರ್ಥ ಬರುತ್ತದಲ್ಲವೇ? ಭಾರತ ವಿಶ್ವ ಶಕ್ತಿಯಾಗಬೇಕು, 5 ಟ್ರಿಲಿಯನ್ ಆರ್ಥಿಕತೆಯಾಗಬೇಕು ಎಂಬ ಕನಸುಕಂಡರೆ ಸಾಲದು, ಸಮಾನತೆಯ ಅಂಶಗಳನ್ನು ನಿಜಕ್ಕೂ ಮೈಗೂಡಿಸಿಕೊಂಡಾಗ ಮಾತ್ರ ದೇಶ ಬೆಳೆಯುತ್ತದೆ, ಬೆಳಗುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ತೀರ್ಪು ಶ್ಲಾಘ ನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.