ರಾಜಕೀಯದಲ್ಲಿ ಮಹಿಳೆ ಬಿಜೆಡಿ ಮಾದರಿ ನಡೆ
Team Udayavani, Mar 14, 2019, 12:30 AM IST
ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಲೋಕಸಭಾ ಚುನಾವಣೆಯ ಶೇ. 33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ತೀರ್ಮಾನಿಸಿದ್ದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಒಂದು ಮಾದರಿ ನಡೆಯೆಂದೇ ಹೇಳಬಹುದು. ಮಹಿಳಾ ಮೀಸಲಾತಿ ಮಸೂದೆ ಕಳೆದ 25 ವರ್ಷಗಳಿಂದ ಮಂಜೂರಾಗದೆ ಅತಂತ್ರ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ನವೀನ್ ಯಾವ ಮಸೂದೆಯ ಬೆಂಬಲವಿಲ್ಲದೆ ತಮ್ಮ ಪಕ್ಷದ ಶೇ. 33 ಸ್ಥಾನಗಳನ್ನು ಮಹಿಳೆಯರಿಗೆ ನೀಡಿದ್ದಾರೆ. ಇವರೆಲ್ಲ ಗೆಲ್ಲುತ್ತಾರೋ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ ರಾಜಕೀಯದಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೀಗೊಂದು ಐತಿಹಾಸಿಕ ವೇದಿಕೆ ಕಲ್ಪಿಸಿದ ಹಿರಿಮೆ ನವೀನ್‌ಗೆ ಸಲ್ಲುತ್ತದೆ.
ಮಹಿಳೆಯರಿಗೆ ಇನ್ನಷ್ಟು ಅವಕಾಶ ನೀಡಬೇಕೆನ್ನುವುದು ರಾಜಕೀಯದಲ್ಲಿ ಚರ್ಚಿಸಿ ಸವಕಲಾಗಿರುವ ವಿಷಯ. ಚರ್ಚೆಯ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರಬೇಕೆಂದು ಪ್ರತಿಪಾದಿಸುತ್ತಿವೆಯಾದರೂ ಸೀಟು ಹಂಚಿಕೆಗಾಗುವಾಗ ಮಾತ್ರ ಮಹಿಳೆ ಮೂಲೆಗುಂಪಾಗುತ್ತಾಳೆ. ಈಗ ಅಭ್ಯರ್ಥಿಗಳ ಆಯ್ಕೆಗೆ ಗೆಲ್ಲುವ ಸಾಮರ್ಥ್ಯವೇ ಮುಖ್ಯ ಮಾನದಂಡ. ಮಹಿಳೆಯ ಗೆಲ್ಲುವ ಸಾಮರ್ಥ್ಯದ ಬಗ್ಗೆ ಅನುಮಾನಗಳಿರುವುದರಿಂದಲೇ ಪುರುಷರಿಂದ ನಿಯಂತ್ರಿಸಲ್ಪಡುವ ಪಕ್ಷಗಳು ಮಹಿಳೆಯರನ್ನು ಕಣಕ್ಕಿಳಿಸಲು ಹಿಂದೇಟು ಹಾಕುತ್ತಿವೆ. ನಮ್ಮ ರಾಜಕೀಯ ಹಲವು ಪ್ರಭಾವಿ ಮಹಿಳೆಯರನ್ನು ಕಂಡಿವೆಯಾದಾರೂ ಇವರಲ್ಲಿ ಕೆಲವೇ ಮಂದಿ ಮಾತ್ರ ಸ್ವಸಾಮರ್ಥ್ಯದಿಂದ ಅವಕಾಶ ಪಡೆದವರು. ಹೆಚ್ಚಿನವರು ಕುಟುಂಬ ಬಲದಿಂದಲೋ ಅಥವಾ ಇನ್ನಿತರ ಪ್ರಭಾವದಿಂದಲೋ ಅವಕಾಶ ಪಡೆದವರು ಎಂಬುದು ವಾಸ್ತವ.
ದೇಶದ ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಒಟ್ಟಾರೆ ರಾಜಕೀಯದಲ್ಲಿ ಅವರ ಪಾಲು ಶೇ.15ರಷ್ಟೂ ಇಲ್ಲ. 543 ಸದಸ್ಯ ಬಲದ 16ನೇ ಲೋಕಸಭೆಯಲ್ಲಿ ಇದ್ದದ್ದು ಬರೀ ಶೇ.11.6 ಮಹಿಳಾ ಸಂಸದರು. ಅಂತೆಯೇ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಶೇ. 11 ಮಹಿಳೆಯರಿದ್ದರು. ಇವರಲ್ಲೇ ಕೆಲವರು ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎನ್ನುವುದು ಬೇರೆ ಮಾತು. ಬಹುತೇಕ ವಿಧಾನಸಭೆಗಳಲ್ಲೂ ಈ ಚಿತ್ರಣ ಭಿನ್ನವಾಗೇನೂ ಇಲ್ಲ. ಹಾಗೇ ನೋಡುವುದಾದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದು ಳಿದ ರಾಜ್ಯಗಳೆಂದು ಪರಿಗಣಿಸಲ್ಪಡುವ ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚು ಇತ್ತು ಎನ್ನುವುದು ಸೋಜಿಗವಾದರೂ ಸತ್ಯ.
ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ನೀಡುವ ವಿಚಾರ ಬಂದಾಗಲೆಲ್ಲ ಜಗತ್ತಿನ ಮೊದಲ ಮಹಿಳಾ ಪ್ರಧಾನಮಂತ್ರಿಯನ್ನು ನೀಡಿದ ದೇಶ ಎಂಬೆಲ್ಲ ಹಿರಿಮೆಗಳನ್ನು ಉಲ್ಲೇಖೀಸಿ ವಾಸ್ತವವನ್ನು ಮರೆಮಾಚಲು ಪ್ರಯತ್ನಿಸಲಾಗುತ್ತದೆ. ಮಹಿಳೆ ಪ್ರಧಾನಿಯಾಗಿದ್ದಾಳೆ, ರಕ್ಷಣಾ ಸಚಿವೆಯಾಗಿದ್ದಾಳೆ, ವಿದೇಶಾಂಗ ಸಚಿವೆಯಾಗಿಯೂ ಯಾವ ಪುರಷನಿಗೆ ಕಡಿಮೆಯಿಲ್ಲದಷ್ಟು ಸಮರ್ಥವಾಗಿ ಕಾರ್ಯಭಾರ ನಿರ್ವಹಿಸಿದ್ದಾರೆ ಎನ್ನು ವುದೆಲ್ಲ ನಿಜ. ಆದರೆ ಮಹಿಳಾ ಮೀಸಲಾತಿ ಮಸೂದೆಯ ವಿಚಾರಕ್ಕೆ ಬಂದಾಗ ಬಹುತೇಕ ಪಕ್ಷಗಳಿಗೆ ಮಹಿಳೆ ಮಾಡಿದ ಈ ಸಾಧನೆಗಳು ಕಾಣಿಸು ವುದಿಲ್ಲ. 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಡನೆಯಾಗಿದ್ದ ಈ ಮಸೂದೆಗೆ ಲೋಕಸಭೆಯಲ್ಲಿನ್ನೂ ಮಂಜೂರಾಗುವ ಭಾಗ್ಯ ಸಿಕ್ಕಿಲ್ಲ. ಲೋಕಸಭೆಯಲ್ಲಿ ಪೂರ್ಣ ಬಹುಮತ ಹೊಂದಿದ್ದ ನರೇಂದ್ರ ಮೋದಿ ಸರಕಾರ ಮನಃಪೂರ್ವಕ ಪ್ರಯತ್ನಿಸಿದ್ದರೆ ಮಸೂದೆ ಅಂಗೀಕಾರ ಗೊಳ್ಳ ಬಹುದಿತ್ತು. ಮಹಿಳಾ ಸಬಲೀಕರಣದ ಬಗ್ಗೆ ಸುದೀರ್ಘ ಭಾಷಣ ಬಿಗಿ ಯುವ ಪಕ್ಷಗಳು ಬಿಜೆಡಿಯ ನಡೆಯನ್ನು ಮೇಲ್ಪಂಕ್ತಿಯಾಗಿ ಸ್ವೀಕರಿಸಿದರೆ ಮಸೂದೆ ಮಂಜೂರಾಗುವುದು ಕಷ್ಟದ ಸಂಗತಿಯೇನಲ್ಲ. ಕಡು ಸಂಪ್ರದಾಯ ವಾದಿ ಎಂದು ಭಾವಿಸಲಾಗಿರುವ ಅಫಘಾನಿಸ್ಥಾನದ ಸಂಸತ್ತು ಕೂಡಾ ಮಹಿಳೆಯರಿಗೆ ಶೇ. 25 ಸ್ಥಾನಗಳನ್ನು ಮೀಸಲಿರಿಸಿದೆ. ಸ್ವೀಡನ್‌ನಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಶೇ. 45 ಮಹಿಳೆಯರು ಸಂಸತ್ತಿನಲ್ಲಿದ್ದಾರೆ. ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಹೊಂದಿರುವ ಅಗ್ರ ದೇಶಗಳು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಮಾನದಂಡದಲ್ಲೂ ಉಳಿದ ದೇಶಗಳಿಗಿಂತ ಬಹಳ ಮುಂದೆ ಇವೆ ಎನ್ನುವ ಕುತೂಹಲಕಾರಿ ಅಂಶವೂ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಮಹಿಳೆಯರ ನೇತೃತ್ವ ಹೊಂದಿರುವ ಪಂಚಾಯತುಗಳು ಕುಡಿಯುವ ನೀರು, ನೈರ್ಮಲ್ಯ ಇನ್ನಿತರ ವಿಚಾರಗಳಲ್ಲಿ ಶೇ. 62ರಷ್ಟು ಉತ್ತಮ ಸಾಧನೆ ಮಾಡಿವೆ ಎನ್ನುತ್ತದೆ ವಿಶ್ವಸಂಸ್ಥೆಯ ಅಧ್ಯಯನ. ಮಹಿಳೆಯರಿಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಲ್ಲ ಎನ್ನುವವರಿಗೆ ಈ ಅಧ್ಯಯನಗಳೇ ಉತ್ತರ ನೀಡುತ್ತದೆ. ಮತ ಗಳನ್ನು ಗೆಲ್ಲಲು ಮಹಿಳೆಯರಿಗೆ ನಾನಾ ರೀತಿಯ ಸವಲತ್ತುಗಳನ್ನು ನೀಡುವ ಆಮಿಷವೊಡ್ಡುವ ಬದಲು ರಾಜಕೀಯದಲ್ಲಿ ಮಹಿಳೆಗೆ ಹೆಚ್ಚಿನ ಅವಕಾಶ ನೀಡುವ ಕುರಿತು ಮಾತನಾಡಲು ಈಗ ಕಾಲ ಪ್ರಶಸ್ತವಾಗಿದೆ. ಆದರೆ ಯಾವ ಪಕ್ಷವೂ ಈ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಿಲ್ಲ ಎನ್ನುವುದು ದುರದೃಷ್ಟಕರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.