ಸುಸೂತ್ರವಾಗಿ ನಡೆಯಲಿ ಸಂಸತ್‌ನ ಬಜೆಟ್ ಅಧಿವೇಶನ
Team Udayavani, Feb 3, 2022, 6:00 AM IST
ಜ. 31ರಿಂದ ಸಂಸತ್‌ನ ಉಭಯ ಸದನಗಳ ಕಲಾಪ ಆರಂಭವಾಗಿದ್ದು, ಸೋಮವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಾತನಾಡಿದ್ದಾರೆ. ಮಾರನೇ ದಿನವಾದ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನೂ ಮಂಡಿಸಿದ್ದಾರೆ. ಸದ್ಯ ಶುರುವಾಗಿರುವ ಬಜೆಟ್ ಅಧಿವೇಶನ ಎರಡು ಭಾಗವಾಗಿ ನಡೆಯಲಿದೆ. ಮೊದಲನೇ ಭಾಗದಲ್ಲಿ ಫೆ. 11ರವರೆಗೆ ಅಧಿವೇಶನ ನಡೆಯಲಿದ್ದು, ಈ ವೇಳೆ ರಾಷ್ಟ್ರಪತಿ ಭಾಷಣದ ಮೇಲಿನ ವಂದನ ನಿರ್ಣಯ ಚರ್ಚೆ ನಡೆಯಲಿದೆ. ಇನ್ನು ಎರಡನೇ ಭಾಗದ ಅಧಿವೇಶನ ಮಾ. 14ರಿಂದ ಎ. 8ರ ವರೆಗೆ ನಡೆಯಲಿದೆ.
ಬುಧವಾರ ಬೆಳಗ್ಗೆಯಿಂದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆ ಶುರುವಾಗಿದೆ. ಕೊರೊನಾ ಕಾರಣದಿಂದಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ರಾಜ್ಯಸಭೆ ಕಲಾಪ ನಡೆಯುತ್ತಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಲೋಕಸಭೆ ಕಲಾಪ ಜರಗುತ್ತಿದೆ.
ಈ ಬಾರಿಯ ಬಜೆಟ್ ಅಧಿವೇಶನವನ್ನು ಅತ್ಯಂತ ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕು ಎನ್ನುವುದು ಆಡಳಿತ ಪಕ್ಷದ ಇಚ್ಛೆ. ಇದಕ್ಕಾಗಿ, ವಿಪಕ್ಷಗಳ ಸಹಕಾರವನ್ನೂ ಕೇಳಿಕೊಂಡಿದೆ. ಅದೂ ಅಲ್ಲದೆ, ಪಂಚರಾಜ್ಯಗಳ ಚುನಾವಣೆ ನಡುವೆಯೇ ಈ ಅಧಿವೇಶನ ನಡೆಯುತ್ತಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಜತೆಗೆ ಈ ರಾಜ್ಯಗಳ ಸಮಸ್ಯೆಗಳ ಕುರಿತಾಗಿ ವಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಅಧಿವೇಶನದ ಮೊದಲಾರ್ಧದಲ್ಲೇ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಎಲ್ಲ ರೀತಿಯ ತಯಾರಿ ಮಾಡಿವೆ. ಇತ್ತೀಚೆಗಷ್ಟೇ ಅಮೆರಿಕದ ಪತ್ರಿಕೆಯೊಂದು ಪೆಗಾಸಸ್ ಕುರಿತಂತೆ ವರದಿಯೊಂದನ್ನು ಪ್ರಕಟಿಸಿದ್ದು, ಇದರ ಬಗ್ಗೆ ಚರ್ಚೆಗಾಗಿ ವಿಪಕ್ಷಗಳು ಪಟ್ಟು ಹಿಡಿಯುವ ಎಲ್ಲ ಸಾಧ್ಯತೆಗಳಿವೆ. ಆದರೆ ಈ ಕುರಿತಂತೆ ಕೇಂದ್ರ ಸರಕಾರ ಚರ್ಚೆಗೆ ಒಪ್ಪುವ ಸಾಧ್ಯತೆಗಳು ಕಡಿಮೆ ಇವೆ. ಇದು ತೀವ್ರ ಗದ್ದಲಕ್ಕೂ ಕಾರಣವಾಗಬಹುದಾಗಿದೆ.
ಏನೇ ಆಗಲಿ ಇತ್ತೀಚಿನ ವರ್ಷಗಳಲ್ಲಿ ಸಂಸತ್ ಅಧಿವೇಶನ ಸರಾಗವಾಗಿ ನಡೆದ ಉದಾಹರಣೆಗಳು ತೀರಾ ಕಡಿಮೆ ಅನ್ನುವಂತಿದೆ. ಸಂಸತ್ ಕಲಾಪ ಇರುವುದೇ ಗದ್ದಲ ಮಾಡುವುದಕ್ಕೆ ಎಂಬ ಅಭಿಪ್ರಾಯಗಳೂ ಜನರಲ್ಲಿ ಮೂಡಿವೆ. ಅಷ್ಟೇ ಅಲ್ಲ, ಈ ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ರೀತಿಯಲ್ಲಿ ವಿಷಯಗಳ ಮೇಲಿನ ಸುದೀರ್ಘ ಚರ್ಚೆಯ ದಿನಗಳೂ ಮರೆಯಾಗಿವೆ. ಎಲ್ಲೋ ಒಂದು ಕಡೆ ಸಂಸದರೂ ಚರ್ಚೆಗಳ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬ ಭಾವನೆಯೂ ಮೂಡುತ್ತಿದೆ.
ನಿಜವಾಗಿಯೂ ಸಂಸತ್ ತನ್ನ ಮಹತ್ವವನ್ನು ಹಾಗೆಯೇ ಉಳಿಸಿಕೊಳ್ಳಬೇಕಾದರೆ ದೇಶವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲೇಬೇಕು. ಅಷ್ಟೇ ಅಲ್ಲ, ಯಾವುದೇ ಮಸೂದೆಗಳು ಅಂಗೀಕಾರವಾಗುವ ಮುನ್ನವೂ ಚರ್ಚೆಯಾಗಬೇಕು. ಇಲ್ಲಿ ಸರಕಾರಕ್ಕಾಗಲಿ ಅಥವಾ ವಿಪಕ್ಷಗಳಿಗಾಗಲಿ ಯಾವುದೇ ಸ್ವಪ್ರತಿಷ್ಠೆ ಇರಬಾರದು. ಒಂದು ವೇಳೆ ಈ ವಿಚಾರವನ್ನೇ ಸ್ವಪ್ರತಿಷ್ಠೆಯಾಗಿ ತೆಗೆದುಕೊಂಡರೆ ಸಂಸತ್‌ನಲ್ಲಿ ಅರ್ಥಗರ್ಭಿತ ಚರ್ಚೆ ನಡೆಯುವ ದಿನಗಳೇ ಕಣ್ಮರೆಯಾಗಬಹುದು. ಹೀಗಾಗಿ ಆಡಳಿತ ಮತ್ತು ವಿಪಕ್ಷಗಳು ಜನರ ಹಿತದೃಷ್ಟಿಯಿಂದ ಸಂಸತ್‌ನಲ್ಲಿ ಉತ್ತಮವಾದ ಚರ್ಚೆ ನಡೆಸಬೇಕು. ಈ ಮೂಲಕವಾದರೂ ದೇಶದ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.