ನ್ಯಾಯಾಂಗದ ಕರಾಳ ದಿನ ನಂಬಿಕೆಗೆ ಕೊಡಲಿಯೇಟು
Team Udayavani, Jan 13, 2018, 8:56 AM IST
ದೇಶದ ನ್ಯಾಯಾಂಗದ ಪಾಲಿಗೆ ಜ.12 ಕರಾಳ ದಿನ. ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ವಿರುದ್ಧ ಸಿಡಿದೆದ್ದು ಪತ್ರಿಕಾಗೋಷ್ಠಿ ಕರೆದು ತಮ್ಮ ಅಳಲು ತೋಡಿಕೊಂಡಿ ರುವುದು ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲನೆಯದ್ದು. ಇದು ಅತ್ಯಂತ ಅಘಾತಕಾರಿ ಬೆಳವಣಿಗೆ ಮಾತ್ರವಲ್ಲದೆ ನ್ಯಾಯಾಂಗದ ಮೇಲೆ ಜನರಿಟ್ಟಿರುವ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಹಿರಿತನದಲ್ಲಿ ದ್ವಿತೀಯ ಸ್ಥಾನದಲ್ಲಿರುವ ನ್ಯಾ. ಚಲಮೇಶ್ವರ, ನ್ಯಾ. ರಂಜನ್ ಗೊಗೋಯ್, ನ್ಯಾ. ಎಂ. ಬಿ. ಲೋಕುರ್ ಮತ್ತು ನ್ಯಾ. ಕುರಿಯನ್ ಜೋಸೆಫ್ ಗಂಭೀರವಾದ ಆಪಾದನೆಗಳನ್ನು ಮಾಡಿದ್ದಾರೆ. ನ್ಯಾ. ದೀಪಕ್ ಮಿಶ್ರಾ ಕಾರ್ಯಶೈಲಿ ಪಾರದರ್ಶಕ ಮತ್ತು ಸಮರ್ಪಕವಾಗಿಲ್ಲ ಎನ್ನುವುದು ಅವರ ಮುಖ್ಯ ದೂರು. ಮುಖ್ಯ ನ್ಯಾಯಮೂರ್ತಿಯವರು ಮಹತ್ವದ ಪ್ರಕರಣಗಳನ್ನು ತಮಗಿಂತ ಕಿರಿಯ ನ್ಯಾಯಮೂರ್ತಿಗಳುಳ್ಳ ವಿಭಾಗೀಯ ಪೀಠಗಳಿಗೆ ಒಪ್ಪಿಸುವುದು ಈ ನಾಲ್ವರು ಹಿರಿಯರಿಗೆ ಅಸಮಾಧಾನ ತಂದಿದೆ. ಈ ಕುರಿತು ಎರಡು ತಿಂಗಳ ಹಿಂದೆಯೇ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದೇವೆ. ಅವರಿಂದ ಯಾವುದೇ ಪ್ರತಿಸ್ಪಂದನೆ ಬಾರದಿರು ವುದರಿಂದ ಮಾಧ್ಯಮದ ಎದುರು ಬರಬೇಕಾಯಿತು ಎಂದು ತಮ್ಮ ಕ್ರಮಕ್ಕೆ ಅವರು ಸಮರ್ಥನೆಯನ್ನು ಕೊಟ್ಟುಕೊಂಡಿದ್ದಾರೆ. ನ್ಯಾಯಾಂಗದಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಅಕ್ರಮಗಳನ್ನು ತಡೆಯಬೇಕೆನ್ನುವುದು ತಮ್ಮ ಕಾಳಜಿ ಎಂದಿದ್ದಾರೆ.
ಎಲ್ಲ ಸರಿ. ನ್ಯಾಯಮೂರ್ತಿಗಳೂ ಮನುಷ್ಯರೇ. ತಮಗಿಂತ ಕಿರಿಯರಿಗೆ ಹೆಚ್ಚಿನ ಮಹತ್ವ ಲಭಿಸಿದಾಗ ಅವರಿಗೆ ನೋವಾಗುವುದು ಸಹಜ. ಹಿರಿತನಕ್ಕೆ, ಸೇವಾ ಅನುಭವಕ್ಕೆ ಆದ್ಯತೆ ಸಿಗಬೇಕೆನ್ನುವ ಅವರ ವಾದವನ್ನು ಒಪ್ಪಿ ಕೊಳ್ಳೋಣ. ಆದರೆ ಮುಖ್ಯ ನ್ಯಾಯಮೂರ್ತಿರ ವಿರುದ್ಧ ಆರೋಪಗಳನ್ನು ಮಾಡಲು ಅವರು ಆರಿಸಿಕೊಂಡ ವಿಧಾನ ಮಾತ್ರ ಸರಿಯೇ ಎನ್ನುವುದು ಪ್ರಶ್ನೆ. ಈ ರೀತಿ ಮಾಡುವ ಮೂಲಕ ತಾವು ಸಾಂವಿಧಾನಿಕ ವ್ಯವಸ್ಥೆಗೆ ಇನ್ನಿಲ್ಲದ ಹಾನಿ ಮಾಡುತ್ತಿದ್ದೇವೆ ಎಂಬ ಜ್ಞಾನ ಅವರಿಗಿರಲಿಲ್ಲವೆ? ನಾಲ್ವರು ನ್ಯಾಯಮೂರ್ತಿಗಳ ಈ ನಡೆಯಿಂದ ನ್ಯಾಯಾಂಗ ವ್ಯವಸ್ಥೆಗೆ ಸರಿಪಡಿಸಲಾಗದಷ್ಟು ಹಾನಿಯಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸೊಲಿ ಸೊರಾಬ್ಜಿ ಮುಂತಾದವರು ಸರಿಯಾಗಿಯೇ ಹೇಳಿದ್ದಾರೆ. ಈಗಾಗಲೇ ಜನರಿಗೆ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲಿರುವ ನಂಬಿಕೆ ಹೋಗಿದೆ. ಆದರೆ ನ್ಯಾಯಾಂಗದ ವಿರುದ್ಧ ಏನೇ ದೂರುಗಳಿದ್ದರೂ ಅದರ ಮೇಲೆ ಅಚಲವಾದ ನಂಬಿಕೆಯಿತ್ತು. ಈ ನಂಬಿಕೆಗೆ ಚ್ಯುತಿ ಬರುವಂತಹ ಬೆಳವಣಿಗೆ ಇಂದು ಸಂಭವಿಸಿದೆ. ನ್ಯಾಯಾಂಗ ಮತ್ತು ನ್ಯಾಯಮೂರ್ತಿರನ್ನು ಟೀಕಿಸಬಾರದು. ಅವರು ಎಲ್ಲ ಟೀಕೆಗಳಿಗೆ ಅತೀತರು ಎಂಬ ನಂಬಿಕೆಯಿತ್ತು. ಇದೀಗ ನ್ಯಾಯಮೂರ್ತಿಗಳ ಪರಸ್ಪರ ಟೀಕಿಸಿಕೊಳ್ಳುವ ಮೂಲಕ ಈ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ.
ನ್ಯಾಯಾಲಯ ಒಂದು ಕುಟುಂಬದಂತೆ. ಈ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಾಗ ಅವರವರೇ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕೆ ಹೊರತು ಜಗಳವನ್ನು ಬೀದಿಗೆ ಎಳೆದು ತರಬಾರದು. ಈಗ ನಾಲ್ವರು ನ್ಯಾಯಮೂರ್ತಿಗಳು ಮಾಡಿದ್ದು ಈ ಕೆಲಸವನ್ನು. ಇದರಿಂದ ಅವರು ತಮಗೆ ಮಾತ್ರವಲ್ಲದೆ ಇಡೀ ವ್ಯವಸ್ಥೆಗೆ ಹಾನಿ ಉಂಟು ಮಾಡಿದ್ದಾರೆ. ಸೂಕ್ಷ್ಮ ಪ್ರಕರಣಗಳಲ್ಲಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಆಕ್ಷೇಪಿಸುತ್ತಿದ್ದ, ಮಾಧ್ಯಮಗಳೇ ವಿಚಾರಣೆ ನಡೆಸಿ ತೀರ್ಪು ನೀಡುತ್ತಿವೆ ಎಂದು ಟೀಕಿಸುತ್ತಿದ್ದ ನ್ಯಾಯಮೂರ್ತಿಗಳೇ ಇಂದು ಮಾಧ್ಯಮ ಗಳ ಎದುರು ಬಂದು ನಮಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಹೇಳುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವಲ್ಲವೆ? ನ್ಯಾಯ ಮೂರ್ತಿಗಳಿಗೆ ರಾಷ್ಟ್ರಪತಿಯವರಿಗೆ ದೂರು ನೀಡುವ ಅವಕಾಶವಿತ್ತು. ಅದನ್ನು ಅವರೇಕೆ ಬಳಸಿಕೊಂಡಿಲ್ಲ? ಅಂತೆಯೇ ಒಟ್ಟೂ ಬೆಳವಣಿಗೆಯ ಹಿಂದೆ ರಾಜಕೀಯದ ವಾಸನೆಯೂ ಹೊಡೆಯು ತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವಾಗ ಕೇಂದ್ರ ಸರಕಾರ ನ್ಯಾಯಾಂಗ ದಲ್ಲೂ ಹಸ್ತಕ್ಷೇಪ ಮಾಡುತ್ತಿದೆ ಎಂಬ ಭಾವನೆ ಉಂಟು ಮಾಡುವ ಹುನ್ನಾರವೇನಾದರೂ ಇದರ ಹಿಂದಿದೆಯೇ ಎಂಬ ಅನುಮಾನವೂ ಇದೆ. ಇದಕ್ಕೆ ಕಾರಣವಾಗಿ ರುವುದು ನಾಲ್ವರು ನ್ಯಾಯಮೂರ್ತಿಗಳು ಕೆಲವು ಪ್ರಕರಣಗಳನ್ನು ನಿರ್ದಿಷ್ಟ ವಾಗಿ ಉಲ್ಲೇಖೀಸಿದ್ದು, ಈ ಪೈಕಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ ಸಾವಿನ ಪ್ರಕರಣವೂ ಇದೆ. ನ್ಯಾಯಾಂಗದಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ಅದಕ್ಕೆ ಉನ್ನತ ನ್ಯಾಯಾಂಗವೂ ಹೊರತಾಗಿಲ್ಲ ಎನ್ನುವುದು ಈ ಪ್ರಕರಣದಿಂದ ಮತ್ತೂಮ್ಮೆ ಸಾಬೀತಾದಂತಾಗಿದೆ. ಮುಖ್ಯವಾಗಿ ನ್ಯಾಯಮೂರ್ತಿಗಳ ನೇಮಕಾತಿ ವಿಧಾನದಲ್ಲಿ ಆಮೂಲಾಗ್ರ ಬದಲಾವಣೆ ಯಾಗಬೇಕು ಮತ್ತು ಅದು ತುರ್ತಾಗಿ ಆಗ ಬೇಕು.ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ತರಬೇಕೆಂಬ ಬೇಡಿಕೆ ಇಂದು ನಿನ್ನೆಯದ್ದಲ್ಲ. ನಮ್ಮ ನ್ಯಾಯಾಂಗ ಈಗಲೂ ಬ್ರಿಟಿಷರ ಬಿಟ್ಟು ಹೋದ ವ್ಯವಸ್ಥೆಯ ಪಳೆಯುಳಿಕೆಯಂತೆಯೇ ಇದೆ. ಇದನ್ನು ಸಮಗ್ರವಾಗಿ ಬದಲಾಯಿಸುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.