ಪ್ರಜಾತಂತ್ರದ ಹಬ್ಬ: ಸಾಂಸ್ಕೃತಿಕ ಸ್ಪರ್ಶ ಸ್ವಾಗತಾರ್ಹ
Team Udayavani, Apr 14, 2018, 7:00 AM IST
ಚುನಾವಣೆಯನ್ನು ಪ್ರಜಾತಂತ್ರದ ಹಬ್ಬ ಎನ್ನುತ್ತಾರೆ. ಆದರೆ ಉಳಿದ ಹಬ್ಬಗಳಂತೆ ಪ್ರಜಾತಂತ್ರದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳುವುದಿಲ್ಲ. ಮತದಾನ ಮಾಡಲು ಜನರಿಗೇಕೋ ಉದಾಸೀನ. ಇದಕ್ಕೆ ಕಾರಣ ಹಲವಾರು ಇರಬಹುದು. ಉಳಿದ ಸಾಂಸ್ಕೃತಿಕ ನೆಲೆಗಟ್ಟಿನ ಹಬ್ಬಗಳಂತೆ ಪ್ರಜಾತಂತ್ರದ ಹಬ್ಬವನ್ನೂ ಜನರ ಸಮೀಪಕ್ಕೆ ಒಯ್ಯುವುದು ಅಥವಾ ಎಲ್ಲರನ್ನೂ ಈ ಹಬ್ಬದಲ್ಲಿ ಒಳಗೊಳ್ಳುವಂತೆ ಮಾಡುವುದು ತ್ರಾಸದಾಯಕ ಕೆಲಸ. ಇದೀಗ ಚುನಾವಣಾ ಆಯೋಗ ಕೆಲವು ಸೃಜನಶೀಲ ಪ್ರಯೋಗಗಳ ಮೂಲಕ ಪ್ರಜಾತಂತ್ರದ ಹಬ್ಬಕ್ಕೆ ಸಾಂಸ್ಕೃತಿಕ ಲೇಪ ಹಚ್ಚಲು ಹೊರಟಿರುವುದು ಸ್ವಾಗತಾರ್ಹ ನಡೆ.
ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗಬೇಕೆಂಬ ಉದ್ದೇಶದಿಂದ ಪ್ರತಿ ಚುನಾವಣೆಯಲ್ಲಿ ರಾಯಭಾರಿಯನ್ನು ನೇಮಿಸುವ ಪದ್ಧತಿ ಜಾರಿಗೆ ಬಂದು ಕೆಲವು ವರ್ಷಗಳೇ ಆಗಿವೆ. ಸಾಮಾನ್ಯವಾಗಿ ಜನಪ್ರಿಯ ವ್ಯಕ್ತಿಗಳನ್ನು ರಾಯಭಾರಿಗಳನ್ನಾಗಿ ನೇಮಿಸಲಾಗುತ್ತದೆ. ಇಂತಹ ಜನಪ್ರಿಯ ವ್ಯಕ್ತಿಗಳು ಹೆಚ್ಚಾಗಿ ಇರುವುದು ಸಿನೆಮಾ ಮತ್ತು ಕ್ರೀಡಾ ಕ್ಷೇತ್ರದಲ್ಲಿ. ಈ ಸಲ ರಾಜ್ಯದ ಚುನಾವಣೆಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂಬಾಸಿಡರ್ ಆಗಿದ್ದಾರೆ. ಐಕಾನ್‌ಗಳು ಎಂದು ಅರಿಯಲ್ಪಡುವ ಈ ವ್ಯಕ್ತಿಗಳಿಂದ ಹೇಳಿಸಿದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬಹುದು ಎಂಬ ಲೆಕ್ಕಾಚಾರವಿದು. ಈ ಪ್ರಯತ್ನ ತುಸು ಫಲನೀಡಿದ್ದರೂ ಪೂರ್ಣವಾಗಿ ಯಶಸ್ಸಾಗಿದೆ ಎನ್ನುವಂತಿಲ್ಲ. ಇದೀಗ ಚುನಾವಣಾ ಆಯೋಗ ಚುನಾವಣೆಗೆ ಸಾಂಸ್ಕೃತಿಕ ಸ್ಪರ್ಷ ನೀಡುವ ಮೂಲಕ ಅದನ್ನು ನಿಜವಾಗಿಯೂ ಹಬ್ಬವನ್ನಾಗಿ ಮಾಡಲು ಮುಂದಾಗಿದೆ. ಮತಗಟ್ಟೆಗಳನ್ನು ಜನಪದೀಯ ಥೀಂ ಇಟ್ಟುಕೊಂಡು ಅಲಂಕರಿಸುವುದು ಇಂತಹ ಪ್ರಯತ್ನಗಳಲ್ಲಿ ಒಂದು. ಕೆಲವು ಮತಗಟ್ಟೆ ಗಳನ್ನು ವಿವಿಧ ಬುಡಕಟ್ಟು ಜನಾಂಗದವರ ಕಸುಬು, ಜನಜೀವನ, ಜನಪದೀಯ ಸೊಗಡನ್ನು ಬಿಂಬಿಸುವಂತೆ ಅಲಂಕರಿಸಲಾಗುತ್ತದೆ. ಈ ಮೂಲಕ ಬುಡಕಟ್ಟು ಜನಾಂಗದವರ ಸಂಸ್ಕೃತಿಗೆ ರಾಜಕೀಯದ ಮುಖ್ಯ ವಾಹಿನಿ ಯಲ್ಲೊಂದು ಮಹತ್ವದ ಸ್ಥಾನವನ್ನೂ ನೀಡಿದ ಹಾಗಾಯಿತು. ಜತೆಗೆ ಈ ಸಂಸ್ಕೃತಿಯ ಪರಿಚಯವನ್ನು ಉಳಿದವರಿಗೆ ಮಾಡಿದಂತಾಯಿತು ಎಂಬ ಆಶಯ ಇದರ ಹಿಂದಿನದ್ದು. ಅಂತೆಯೇ ಚುನಾವಣೆಗೆ ಯಕ್ಷಗಾನದ ಮಾಧ್ಯಮ, ಹಾಡು,ನಾಟಕ ಇತ್ಯಾದಿಗಳನ್ನು ಬಳಸಿಕೊಳ್ಳು ವುದು ಕೂಡ ಸಾಂಸ್ಕೃತಿಕ ಸ್ಪರ್ಷ ನೀಡುವ ಪ್ರಯತ್ನಗಳೇ. ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳ ಹೆಸರುಗಳನ್ನು ಕ್ರಮಬದ್ಧವಾಗಿ ತಪ್ಪಿಲ್ಲದೆ ಹೇಳುವ ಆರು ವರ್ಷದ ಬಾಲಕನನ್ನು ಚುನಾವಣಾ ರಾಯಭಾರಿಯನ್ನಾಗಿ ನೇಮಿಸಿದ್ದನ್ನು ಕೂಡಾ ಈ ದೃಷ್ಟಿಯಲ್ಲಿ ನೋಡಬೇಕು.
ಕೆಲವು ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಪರಿಗಣಿಸಿರುವುದು ಕೂಡಾ ಈ ನೆಲೆಯಲ್ಲಿ ಕಾಣುವ ಇನ್ನೊಂದು ಮಹತ್ವದ ವಿಚಾರ. ಪಿಂಕ್ ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಾರೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಮತಗಟ್ಟೆ ಮಹಿಳಾ ಮತಗಟ್ಟೆ ಯಾಗಿರಲಿದೆ. ಈ ಮತಗಟ್ಟೆಗಳು ಸಂಪೂರ್ಣ ಗುಲಾಬಿ ಬಣ್ಣದಿಂದ ಅಲಂಕೃತವಾಗಲಿವೆ. ಗುಲಾಬಿ ಬಣ್ಣ ಮಹಿಳಾ ಸಬಲೀಕರಣದ ಸಂಕೇತ. ಪಿಂಕ್ ಮತಗಟ್ಟೆಗಳ ಮೂಲಕ ಚುನಾವಣಾ ಆಯೋಗ ಮಹಿಳಾ ಸಬಲೀಕರಣದ ಸಂದೇಶ ನೀಡುವುದು ಒಂದು ಹೊಸ ಪ್ರಯೋಗವೇ. ಕೆಲ ರಾಜ್ಯಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಗಳನ್ನು ಆಡಿಸಲಾಗಿತ್ತು. ಹೀಗೆ ಜನರ ಸಾಂಸ್ಕೃತಿಕ ಬದುಕಿನ ಜತೆಗೆ ಬೆರೆತು ಹೋಗಿರುವ ನಾಟಕ, ಹಾಡು, ನೃತ್ಯ ಇತ್ಯಾದಿ ಕಲೆಗಳನ್ನು ಮತದಾನ ಜಾಗೃತಿಗೆ ಬಳಸಿಕೊಳ್ಳುವುದು ಒಂದು ಅರ್ಥಪೂರ್ಣವಾದ ನಡೆ.
ದೇಶದ ಮಟ್ಟಿಗಂತೂ ಇಂತಹ ಆಕರ್ಷಣೆಗಳು ಹೊಸತು. ಹಿಂದೆ ಚುನಾವಣೆ ಎಂದರೆ ಒಂದು ರೀತಿಯಲ್ಲಿ ನೀರಸ ಪ್ರಕ್ರಿಯೆ. ರಾಜಕೀಯದಲ್ಲಿ ತೀವ್ರ ಆಸಕ್ತಿ ಇದ್ದವರಿಗೆ ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹುಮ್ಮಸ್ಸು ಇರುತ್ತಿತ್ತು. ಮತದಾನ ಪ್ರಮಾಣ ಶೇ. 70 ದಾಟಿದರೆ ಅದೇ ದೊಡ್ಡ ವಿಷಯ ಎನ್ನುವ ಪರಿಸ್ಥಿತಿಯಿತ್ತು. ಚುನಾವಣಾ ಆಯೋಗವೂ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ನೀಡಿದಷ್ಟು ಪ್ರಾಮುಖ್ಯವನ್ನು ಮತದಾನ ಪ್ರಮಾಣ ಹೆಚ್ಚಳವಾಗಲು ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗಿನ ಕೆಲ ವರ್ಷಗಳಿಂದ ಆಯೋಗದ ಕಾರ್ಯಶೈಲಿ ಬದಲಾಗಿದೆ. ಆಯಾಯ ಪ್ರದೇಶಗಳ ವಿಶೇಷತೆಯನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ವಿನೂತನ ಪ್ರಯೋಗವನ್ನದು ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ, ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಜನಪದೀಯ ಹಿನ್ನೆಲೆಯನ್ನು ಹೊಂದಿರುವ ನಮ್ಮ ದೇಶಕ್ಕೆ ಇಂತಹ ಒಂದು ಪ್ರಯೋಗ ಸರಿಹೊಂದುತ್ತದೆ. ಇದೇ ರೀತಿ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಕರ್ಷಿಸಲು ಹೊಸ ಉಪಕ್ರಮಗಳನ್ನು ಪ್ರಾರಂಭಿಸಿ ಪ್ರಜಾ ತಂತ್ರದ ಹಬ್ಬದ ಸವಿಯನ್ನು ಎಲ್ಲರೂ ಅನುಭವಿಸುವಂತೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.