ದುರಹಂಕಾರ ಪ್ರತಿಫಲಿಸುವ ಪಾಕ್ ಕೃತ್ಯ: ಮರೆಯದಂಥ ಮದ್ದರೆಯಿರಿ
Team Udayavani, May 2, 2017, 10:21 AM IST
ಸೇನಾ ಮುಖ್ಯಸ್ಥರಂಥ ಹುದ್ದೆಯಲ್ಲಿರುವವರು ಬಹಿರಂಗವಾಗಿ ಕಾಶ್ಮೀರಿ ಹೋರಾಟಗಾರರಿಗೆ ನೆರವು ನೀಡುವ ಭರವಸೆ ನೀಡುವುದು, ಗಡಿಯೊಳಕ್ಕೆ ನುಗ್ಗಿ ಭಾರತದ ಸೈನಿಕರ ಹತ್ಯೆ, ಶಿರಚ್ಛೇದ ನಡೆಸುವುದು ಪಾಕ್ ದುರಹಂಕಾರದ ಸಂಕೇತ. ಭಾರತದ ಪ್ರತ್ಯುತ್ತರ ದೀರ್ಘಕಾಲ ಪಾಕ್‌ನ ನೆನಪಿನಲ್ಲಿ ಇರುವಂತಿರಲಿ.
ಪಾಕಿಸ್ಥಾನದ ಯೋಧರು ಪೂಂಛ…ನಲ್ಲಿ ಭಾರತದ ಗಡಿಯೊಳಕ್ಕೆ 250 ಮೀಟರುಗಳಷ್ಟು ಅಕ್ರಮವಾಗಿ ನುಗ್ಗಿ ಆಕ್ರಮಣ ನಡೆಸಿದ್ದಷ್ಟೇ ಅಲ್ಲದೆ ಎಲ್ಲ ಸೇನಾ ನಿಯಮಗಳನ್ನು ಗಾಳಿಗೆ ತೂರಿ ಈರ್ವರು ಭಾರತೀಯ ಯೋಧರ ಶಿರಚ್ಛೇದನ ನಡೆಸಿದ್ದಾರೆ. ಆಗಾಗ ಕದನ ವಿರಾಮ ಉಲ್ಲಂಘನೆ, ತೀರಾ ಇತ್ತೀಚೆಗಷ್ಟೇ ಉಗ್ರರ ಮೂಲಕ ಭಾರತೀಯ ಮಿಲಿಟರಿ ಶಿಬಿರದ ಮೇಲೆ ದಾಳಿ, ಅತ್ತ ಕುಲಭೂಷಣ್ ಯಾದವ್ ವಿಚಾರದಲ್ಲಿ ಪ್ರದರ್ಶಿಸುತ್ತಿರುವ ಹಠಮಾರಿತನ ಇತ್ಯಾದಿಗಳು ಪಾಕಿಸ್ಥಾನ ಪಾಠ ಕಲಿತಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತವೆ. ಭಾರತ ಸರ್ಜಿಕಲ್ ದಾಳಿಯ ಮೂಲಕ ನಾಶ ಮಾಡಿರುವ ಉಗ್ರರ ಲಾಂಚ್‌ಪ್ಯಾಡ್‌ಗಳು ಮತ್ತೆ ಸಕ್ರಿಯವಾಗಿವೆ ಎಂಬ ವರದಿಗಳಿವೆ. ಪಾಕಿಸ್ಥಾನ ಮತ್ತೆ ಮತ್ತೆ ಕಾಲು ಕೆದರಿ ಕೆಣಕುತ್ತಿರುವ ವಿಧಾನವನ್ನು ಗಮನಿಸಿದರೆ ಅದಕ್ಕೆ ಕೊಟ್ಟಿರುವ ಪೆಟ್ಟು ಸಾಕಾಗಿಲ್ಲ ಅಥವಾ ಇನ್ನಷ್ಟು ಪೆಟ್ಟು ತಿನ್ನಲು ಅದು ಕಾತರವಾಗಿದೆ. ಹೊಡೆತ ತಿನ್ನಬೇಕಾದವರು ಅದಕ್ಕಾಗಿ ಕಾತರಿಸುತ್ತಿದ್ದಾರಾದರೆ ಅದನ್ನು ಕೊಡಲೇಬೇಕಲ್ಲವೆ? ಭಾರತ ಸುಮ್ಮನುಳಿಯದೆ ಖಂಡಿತ ಕಠಿಣ ಪ್ರತ್ಯುತ್ತರವನ್ನು ನೀಡಲೇಬೇಕು.
ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ರವಿವಾರದಂದು ಭಾರತ ಮತ್ತು ಪಾಕಿಸ್ಥಾನ ನಡುವಣ ಗಡಿ ನಿಯಂತ್ರಣ ರೇಖೆಯ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡಿ ಕಾಶ್ಮೀರಿ ಹೋರಾಟಗಾರರಿಗೆ ಬೆಂಬಲ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಪಾಕಿಸ್ಥಾನಿ ಪಡೆಗಳಿಂದ ಈ ದಾಳಿ ನಡೆದಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಪಾಕಿಸ್ಥಾನ ಗಡಿಯಲ್ಲಿ ನಡೆಸಿದ ಎಂಟನೇ ಕದನ ವಿರಾಮ ಉಲ್ಲಂಘನೆ ಇದು. ಜಮ್ಮು-ಕಾಶ್ಮೀರ ವಿಚಾರವನ್ನು ಜೀವಂತವಾಗಿಡುವ ಪ್ರಯತ್ನವಾಗಿ ಪಾಕಿಸ್ಥಾನ ಭಾರತದೊಂದಿಗೆ ಮಾಡಿಕೊಂಡಿರುವ ಕದನ ವಿರಾಮ ಒಪ್ಪಂದವನ್ನು ಪದೇಪದೆ ಉಲ್ಲಂಘನೆ ಮಾಡುತ್ತಿದೆಯಲ್ಲದೆ ಜಮು-ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗಳಿಗೆ ನೆರವು ನೀಡಿ ವಿಶ್ವಮಟ್ಟದಲ್ಲಿ ಕಾಶ್ಮೀರ ವಿವಾದವನ್ನು ಗಂಭೀರ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಪಾಕಿಸ್ಥಾನದ ಸತತ ಪ್ರಯತ್ನಗಳು ಫಲ ನೀಡದಿದ್ದರೂ ಅದು ತನ್ನ ಚಾಳಿಯನ್ನು ಮಾತ್ರ ಬಿಟ್ಟಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಷರಶಃ ಮೂಲೆಗುಂಪಾಗಿರುವ ಪಾಕ್ ಇನ್ನೂ ಪಾಠ ಕಲಿಯದಿರುವುದು ಆ ದೇಶದ ದುರಂತವೇ ಸರಿ.
ನೆರೆ ರಾಷ್ಟ್ರದ ಈ ಎಲ್ಲ ಬೀಭತ್ಸ ಮತ್ತು ರಣಹೇಡಿ ಕೃತ್ಯಗಳ ಹೊರತಾಗಿಯೂ ಭಾರತ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದರೂ ಅದರ ತಿಳಿಗೇಡಿ ವರ್ತನೆಗಳಿಂದಾಗಿ ಈ ಪ್ರಯತ್ನಗಳು ಫಲಿಸಿಲ್ಲ. ಕದನ ವಿರಾಮ ಉಲ್ಲಂಘನೆ, ಉಗ್ರರ ದಾಳಿಗೆ ಪ್ರೇರಣೆ… ಹೀಗೆ ಪಾಕಿಸ್ಥಾನದ ಪ್ರತಿಯೊಂದೂ ಕುಕೃತ್ಯಗಳಿಗೂ ಭಾರತ ಸೂಕ್ತ ತಿರುಗೇಟನ್ನು ನೀಡುತ್ತಾ ಬಂದಿದೆಯಾದರೂ ಉಭಯ ದೇಶಗಳ ನಡುವೆ ಸಂಬಂಧ ವೃದ್ಧಿಯ ಪ್ರಸ್ತಾವ ಬಂದಾಗಲೆಲ್ಲಾ ಮುಂಚೂಣಿಯಲ್ಲಿ ನಿಂತು ಶಾಂತಿಯ ಹಸ್ತವನ್ನು ಚಾಚಿದೆ. ಆದರೆ ಪಾಕಿಸ್ಥಾನ ಒಂದೆಡೆಯಿಂದ ಶಾಂತಿಯ ಮಾತುಗಳನ್ನಾಡಿದರೆ ಮತ್ತೂಂದೆಡೆಯಿಂದ ಭಾರತವನ್ನು ಪ್ರಚೋದಿಸುವ ಕಾರ್ಯದಲ್ಲಿ ನಿರತವಾಗುತ್ತಿರುವುದರಿಂದಾಗಿ ಉಭಯ ದೇಶಗಳ ನಡುವೆ ಶಾಂತಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಭಯೋತ್ಪಾದಕರಿಗೆ ಆಶ್ರಯ ಮತ್ತು ನೆರವು ನೀಡುತ್ತಿರುವ ವಿಚಾರದಲ್ಲಿಯೂ ಪಾಕಿಸ್ಥಾನ ಈಗಾಗಲೇ ವಿಶ್ವರಾಷ್ಟ್ರಗಳ ಮುಂದೆ ನಗ್ನವಾಗಿದೆ. ಭಾರತದ ನಿರಂತರ ಒತ್ತಡ ಮತ್ತು ಅಮೆರಿಕದ ಕಟ್ಟೆಚ್ಚರಿಕೆಗೆ ಬೆದರಿ ಪಾಕಿಸ್ಥಾನ ಮುಂಬಯಿ ದಾಳಿ ರೂವಾರಿ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ ಸಹಚರರ ಗೃಹಬಂಧನ ಅವಧಿಯನ್ನು ಇನ್ನೂ ಮೂರು ತಿಂಗಳುಗಳ ಕಾಲ ವಿಸ್ತರಿಸಿದೆಯಾದರೂ ಪಾಕಿಸ್ಥಾನದ ಈ ನಡೆ ಸೋಗಿನದು ಅಷ್ಟೆ.
ಸೇನಾ ಮುಖ್ಯಸ್ಥನಂಥ ಉನ್ನತ ಹುದ್ದೆಯಲ್ಲಿರುವವರು ಗಡಿಯ ಆಸುಪಾಸಿಗೆ ಆಗಮಿಸಿ ಕಾಶ್ಮೀರಿ ಹೋರಾಟಗಾರರಿಗೆ ನೆರವು ನೀಡುವ ಮಾತಾಡುವುದು, ಗಡಿಯೊಳಕ್ಕೆ ನುಗ್ಗಿ ಸೈನಿಕರ ಹತ್ಯೆಗೈದು ಶಿರಚ್ಛೇದನದಂತಹ ಕೃತ್ಯಗಳು ದುರಹಂಕಾರದವು. ಏನಾಗುವುದೋ ನೋಡೋಣ ಎಂಬ ಕೆಟ್ಟ ಹಠದ ಚರ್ಯೆಗಳೂ ಹೌದು. ಪಾಕಿಸ್ಥಾನ ತನ್ನ ಈ ಪೈಶಾಚಿಕ ಮತ್ತು ಅಮಾನವೀಯ ಕುಕೃತ್ಯಗಳನ್ನು ನಿಲ್ಲಿಸುವ ಮನಸ್ಥಿತಿಯಲ್ಲಿಲ್ಲ. ಪ್ರಾಯಃ ಚೀನದ ಕುಮ್ಮಕ್ಕು ಕೂಡ ಅದಕ್ಕಿದೆ. ದುರ್ಮಾರ್ಗಿ ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡಲೇ ಬೇಕು. ಭೇದೋಪಾಯದ ಮೂಲಕ ರಾಜತಾಂತ್ರಿಕವಾಗಿ ಅದನ್ನು ಒಂಟಿಯಾಗಿಸಿ ದಂಡ ಪ್ರಯೋಗಿಸಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Poshan: ಶಾಲಾ ಮಕ್ಕಳ ಮೊಟ್ಟೆಗೂ ಕನ್ನ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.