ಮಾತುಕತೆಯ ಮೂಲಕ ಪರಿಹಾರ ಸಾಧ್ಯ
Team Udayavani, Mar 7, 2022, 6:00 AM IST
ನದಿ ನೀರಿನ ಹಂಚಿಕೆ ಹಾಗೂ ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ದೇಶದಲ್ಲಿ ಮೇಲಿಂದ ಮೇಲೆ ರಾಜ್ಯ ರಾಜ್ಯಗಳ ನಡುವೆ ನಿರಂತರವಾಗಿ ವ್ಯಾಜ್ಯಗಳು ನಡೆಯುತ್ತಲೇ ಇವೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ, ಮಹದಾಯಿ ವಿಚಾರಗಳಲ್ಲಿ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ಈಗ ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳೊಂದಿಗೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ವಿಶೇಷವಾಗಿ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡಿನೊಂದಿಗೆ ಶತಮಾನಗಳಿಂದಲೂ ಸಂಘರ್ಷ ನಡೆಯುತ್ತಲೇ ಇದೆ.
ಈಗ ಕರ್ನಾಟಕ ಸರಕಾರ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವಾಗ ತಮಿಳುನಾಡು ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದೆ. ಆದರೆ ರಾಜ್ಯ ಸರಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಈಗಾಗಲೇ ವಿಸ್ತೃತ ಯೋಜನ ವರದಿ ಸಿದ್ದಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಈ ಯೋಜನೆಗೆ 1,000 ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಯೋಜನೆ ಜಾರಿಗೆ ಸರಕಾರ ಸಿದ್ದವಿರುವುದನ್ನು ಪ್ರತಿಪಾದಿಸಿದ್ದಾರೆ.
ಆದರೆ ಈ ಯೋಜನೆಗೆ ಪ್ರಮುಖವಾಗಿ ಬೇಕಾಗಿರುವ ಕೇಂದ್ರ ಸರಕಾರದಿಂದ ಪರಿಸರ ಇಲಾಖೆಯ ಅನುಮತಿ ಪಡೆಯುವ ಕೆಲಸವಾಗಬೇಕಿದೆ. ಆದರೆ ಕೇಂದ್ರ ಸರಕಾರ ತಮಿಳುನಾಡಿನ ತಗಾದೆ ಹಿನ್ನೆಲೆಯಲ್ಲಿ ಈ ವಿಷಯವನ್ನು ಎರಡೂ ರಾಜ್ಯಗಳು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ವೇದಿಕೆ ಸೃಷ್ಟಿಸುವುದಾಗಿ ಹೇಳಿದೆ.
ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಭಾವನಾತ್ಮಕವಾಗಿಯೇ ಹೆಚ್ಚು ಸಂಘರ್ಷಕ್ಕಿಳಿದು, ಅದರ ಮೂಲಕ ಎರಡೂ ರಾಜ್ಯಗಳಲ್ಲಿನ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭವನ್ನೂ ಮಾಡಿಕೊಂಡಿರುವ ಇತಿಹಾಸ ಇದೆ.
ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳು ರಾಜಕೀಯ ಲೆಕ್ಕಾಚಾರಕ್ಕಿಂತ ಜನರ ಜೀವನದ ಬಗ್ಗೆ ಆಲೋಚಿ ಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ಎರಡೂ ರಾಜ್ಯಗಳನ್ನು ಒಂದೇ ವೇದಿಕೆಯಲ್ಲಿ ಕೂಡಿಸಿ ಸಂಘರ್ಷವಿಲ್ಲದೇ ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡಿಸುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಕೇಂದ್ರ ಹಾಗೂ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಈ ವಿಚಾರದಲ್ಲಿ ರಾಜಕೀಯದ ಹೊರತಾಗಿ ಆಲೋಚನೆ ಮಾಡಿ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ನಾಡು, ನುಡಿ ಹಾಗೂ ನೀರಿನ ವಿಚಾರದಲ್ಲಿ ಪ್ರತಿಪಕ್ಷಗಳೂ ಕೂಡ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬಿಟ್ಟು ಸರಕಾರಕ್ಕೆ ಸಕಾರಾತ್ಮಕ ಸಲಹೆ ನೀಡಿ, ಯೋಜನೆ ಸುಗಮವಾಗಿ ಆರಂಭವಾಗುವಂತೆ ಮಾಡಲು ಪ್ರತಿಪಕ್ಷವೂ ಪ್ರಾಮಾಣಿಕ ಜಾವಾಬ್ದಾರಿ ತೋರುವ ಅಗತ್ಯವಿದೆ.
ಯಾವುದೇ ರಾಜ್ಯದ ನದಿ ನೀರಿನ ಹಂಚಿಕೆ ವಿಚಾರದಲ್ಲಿ ದೇಶದಲ್ಲಿ ಶತಮಾನಗಳಿಂದಲೂ ಸಂಘರ್ಷ, ಹೋರಾಟ ನಡೆಯುತ್ತಿರುವುದು, ಆಳುವ ಆಳ್ವಿಕೆ ನಡೆಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಕ್ಕೆ ಹೆಚ್ಚಿನ ಮಾನ್ಯತೆ ನೀಡುತ್ತಿರು ವುದು ಪ್ರಮುಖ ಕಾರಣವಾಗುತ್ತಿದೆ. ಈಗ ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರಕಾರ ಎರಡೂ ರಾಜ್ಯಗಳಿಗೆ ಮಾತುಕತೆಗೆ ವೇದಿಕೆ ಸೃಷ್ಟಿಸುವುದಾಗಿ ಹೇಳಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ಮಾತುಕತೆಯ ಮೂಲಕ ಮೇಕೆದಾಟು ಸಮಸ್ಯೆಗೆ ಪರಿಹಾರ ಕಂಡುಕೊಂಡು, ಸೌಹಾರ್ದಯುತ ಜೀವನಕ್ಕೆ ಮುನ್ನುಡಿ ಬರೆಯಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.