ರಾಜ್ಯಕ್ಕೆ ಸುಭದ್ರ ಸರಕಾರ ಬೇಕು
Team Udayavani, Jul 24, 2019, 5:40 AM IST
ರಾಜ್ಯ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪರಸ್ಪರ ಅಪನಂಬಿಕೆಯಿಂದಲೇ ಕುಂಟುತ್ತಾ ಸಾಗುತ್ತಿದ್ದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ 14 ತಿಂಗಳ ಆಡಳಿತವನ್ನು ಕೊನೆಗೊಳಿಸಿದೆ. ಸಂಪುಟ ವಿಸ್ತರಣೆ, ವರ್ಗಾವಣೆ, ನಿಗಮ ಮಂಡಳಿ ಅಧ್ಯಕ್ಷಗಿರಿ ವಿಚಾರದಲ್ಲಿ ಆಕಾಂಕ್ಷಿಗಳು-ಶಾಸಕರಲ್ಲಿ ಅತೃಪ್ತಿ, ಅಸಮಾಧಾನ ಸ್ಫೋಟಗೊಂಡು ಅದು ಸರಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿತು.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆ ಬೆನ್ನಿಗೆ ಅಂಟಿಕೊಂಡೇ ಇತ್ತು. 119 ಸಂಖ್ಯಾಬಲದ ಸರಕಾರ ಮುನ್ನಡೆಸಿಕೊಂಡು ಹೋಗುವುದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೊಡ್ಡ ಸವಾಲೇ ಆಗಿತ್ತು. 105 ಸ್ಥಾನ ಗೆದ್ದಿದ್ದ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕೂರುವ ಮನಃಸ್ಥಿತಿಯಲ್ಲಿ ಇರಲಿಲ್ಲ. ಅಧಿಕಾರಕ್ಕೇರುವ ತವಕದಲ್ಲೇ ಇತ್ತು. ಇದೆಲ್ಲದರ ನಡುವೆ ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನವೂ ಆರಂಭವಾಯಿತು. ರಾಜೀನಾಮೆಯ ವಿಚಾರ ಇದ್ದಕ್ಕಿದ್ದಂತೆ ಶುರುವಾಗಿದ್ದು ಅಲ್ಲ. ಸರಿ ಸುಮಾರು ಒಂದು ವರ್ಷದಿಂದ ಆಗ್ಗಿಂದಾಗ್ಗೆ ಅತೃಪ್ತಿ, ಅಸಮಾಧಾನ, ಆಕ್ರೋಶ ಬಹಿರಂಗವಾಗಿಯೇ ಸ್ಫೋಟಗೊಂಡು ಅದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮದ್ದು ನೀಡುವ ಕೆಲಸವನ್ನೂ ಮಾಡುತ್ತಿದ್ದರು. ಆದರೂ ಲೋಕಸಭೆ ಚುನಾವಣೆ ಅನಂತರದ ವಿದ್ಯಮಾನಗಳು ಸರಕಾರ ಉಳಿಯುವ ಬಗ್ಗೆ ಅನುಮಾನಕ್ಕೆ ಕಾರಣವಾಗಿದ್ದವು. ಇದೇನೇ ಇದ್ದರೂ, ಕಳೆದ 20 ದಿನಗಳಿಂದ ಡೋಲಾಯಮಾನವಾಗಿದ್ದ ರಾಜ್ಯ ರಾಜಕೀಯ ಬಿಕ್ಕಟ್ಟು ಈಗ ತಾರ್ಕಿಕ ಅಂತ್ಯ ಕಂಡಿದೆ. ಈ ಮೂರು ವಾರಗಳಲ್ಲಿ ರಾಜ್ಯ ರಾಜಕೀಯದ ಮೇಲೆ ಇಡೀ ದೇಶದ ದೃಷ್ಟಿ ನೆಟ್ಟಿತ್ತು. ಆದರೆ ಇಂದು, ನಾಳೆ ಎನ್ನುತ್ತಾ ತಂತ್ರ- ಪ್ರತಿತಂತ್ರಗಳೇ ಸದ್ದು ಮಾಡಿದವು. ವಿಶ್ವಾಸಮತದ ವಿಚಾರದಲ್ಲಿ ಎಷ್ಟು ವಿಳಂಬವಾಯಿತೆಂದರೆ, ವಿಶ್ವಾಸ ಮತದ ಮೇಲೆಯೇ ರಾಜ್ಯದ ಜನರಿಗೆ ಅವಿಶ್ವಾಸ ಮೂಡಿದ್ದು ಸುಳ್ಳಲ್ಲ. ಕಲಾಪವೆನ್ನುವುದು ಕಾಲಹರಣ ಎಂಬಂತಾಗಿತ್ತು. ಇನ್ನು ಶಾಸಕರ, ಅದರಲ್ಲೂ ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಅಗೌರವ ತೋರುತ್ತಿವೆಯೇ ಎಂಬ ಪ್ರಶ್ನೆ ಎದ್ದಿತು. ಸತ್ಯವೇನೆಂದರೆ, ಲೋಕಸಭಾ ಚುನಾವಣೆಗೆ ಪೂರ್ವತಯಾರಿ ಆರಂಭವಾದ ಸಮಯದಿಂದಲೂ ರಾಜ್ಯದ ಜನರ ಪಾಡನ್ನು ಯಾರೂ ನೋಡದಂತಾಗಿದೆ. ಅತಿವೃಷ್ಟಿ- ಅನಾವೃಷ್ಟಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಿವೆ. ಜನ ಸಾಗರೋಪಾದಿಯಲ್ಲಿ ಗುಳೆ ಹೊರಟಿದ್ದಾರೆ. ಇವರೆಲ್ಲರ ಕಷ್ಟಗಳಿಗೆ ಕಿವಿಗೊಡುವವರೇ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದ್ದು ದುರಂತ.
ಮುಂಬರುವ ಬಿಜೆಪಿ ಸರಕಾರ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆಡಳಿತ ಮಾಡುವ ಅನಿವಾರ್ಯತೆ ಎದುರಿಸಲಿದೆ. ಸದ್ಯ 105 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಪೂರ್ಣಪ್ರಮಾಣದ ವಿಧಾನಸಭೆಯಲ್ಲಿ ಅಗತ್ಯ ಸ್ಥಾನಗಳನ್ನು ಹೊಂದಬೇಕಾದರೆ, ಕನಿಷ್ಠ 8 ಸ್ಥಾನಗಳನ್ನು (ಮ್ಯಾಜಿಕ್ ಸಂಖ್ಯೆ 113 ಮುಟ್ಟಲು) ಗೆಲ್ಲಲೇಬೇಕು. ಅಂದರೆ, ಈಗ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಕನಿಷ್ಟ 10 ಕ್ಷೇತ್ರಗಳಲ್ಲಾದರು ಗೆಲ್ಲುವ ಸವಾಲು ಹೊಂದಿದೆ. ಎಲ್ಲದ್ದಕ್ಕಿಂತ ಮುಖ್ಯವಾಗಿ ಕಳೆದ 14 ತಿಂಗಳಲ್ಲಿ ರಾಜಕೀಯ ಕಸರತ್ತನ್ನು ನೋಡಿ ರೋಸಿಹೋಗಿರುವ ಜನತೆಗೆ ಸುಭದ್ರ ಸರಕಾರ ನೀಡುವ ವಿಶ್ವಾಸವನ್ನು ನೀಡುವುದು ಅಗತ್ಯ. ಜತೆಗೆ ರಾಜ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ತಾನು ಉತ್ತರ ನೀಡಬಲ್ಲೆ ಎನ್ನುವ ಭರವಸೆಯನ್ನು ಬಿಜೆಪಿ ಸರಕಾರ ಮೂಡಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.