ಸುಪ್ರೀಂ ಕೋರ್ಟ್ ಸ್ವಾಗತಾರ್ಹ ಆದೇಶ: ಮುಷ್ಕರಗಳಿಗೆ ಲಗಾಮು
Team Udayavani, Nov 30, 2017, 8:27 AM IST
ಗಲಭೆ, ಮುಷ್ಕರ, ಬಂದ್ ಸಂದರ್ಭದಲ್ಲಿ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದರೆ ಆ ನಷ್ಟಗಳಿಗೆ ಮುಷ್ಕರಕ್ಕೆ ಕರೆ ಕೊಟ್ಟವರನ್ನೇ ಹೊಣೆ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ದೇಶದ ಪ್ರಚಲಿತ ರಾಜಕೀಯ ವ್ಯವಸ್ಥೆಯಲ್ಲಿ ಅತ್ಯಂತ ಸ್ವಾಗತಾರ್ಹ. ಗಲಭೆ -ಮುಷ್ಕರಗಳ ಸಂದರ್ಭದಲ್ಲಿ ಸಂಭವಿಸಿದ ಹಾನಿಯಿಂದಾಗುವ ನಷ್ಟವನ್ನು ಅಂದಾಜಿಸಲು ಹಾಗೂ ಸಾವಿಗೀಡಾದವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಸೂಕ್ತ ಪರಿಹಾರವನ್ನು ನಿಗದಿಪಡಿಸಲು ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜತೆಗೆ ಹಿಂಸಾತ್ಮಕ ಮುಷ್ಕರ ನಡೆಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಕಠಿಣ ಕ್ರಮ ಜರಗಿಸಲು ಸೂಚನೆ ನೀಡಿದೆ. ತೀರಾ ಕ್ಷುಲ್ಲಕ ಕಾರಣಗಳಿಗೂ ಬಂದ್, ಮುಷ್ಕರ ನಡೆಸುವ ರಾಜಕೀಯ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ಇದು ಸಿಡಿಲಾಘಾತದಂತಹ ಆದೇಶವೇ ಆಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಈ ಮಾದರಿ ಕಠಿಣ ನಡೆಯ ಅಗತ್ಯವಿದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಹಾಗೆಂದು ದೇಶದ ನ್ಯಾಯಾಲಯಗಳು ಈ ರೀತಿ ಆದೇಶ ನೀಡಿರುವುದು ಇದೇ ಮೊದಲೇನಲ್ಲ. 2009ರಲ್ಲಿಯೇ ಸುಪ್ರೀಂ ಕೋರ್ಟ್ ಹಿಂಸಾತ್ಮಕ ಗಲಭೆಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳನ್ನು ರಚಿಸಬೇಕೆಂಬ ತೀರ್ಪು ನೀಡಿತ್ತು. ಆ ತೀರ್ಪು ಇನ್ನೂ ಜಾರಿಯಾಗಿಲ್ಲ. ಮಾಮೂಲು ನ್ಯಾಯಾಲಯಗಳಲ್ಲಿ ವಿಚಾರಣೆ ಮುಗಿದು ತೀರ್ಪು ಪ್ರಕಟವಾಗುವಷ್ಟರಲ್ಲಿ ಮುಷ್ಕರ/ ಗಲಭೆಗಳಲ್ಲಿ ಸತ್ತವರ ನೆನಪು ಕೂಡ ಉಳಿದಿರುವುದಿಲ್ಲ ಎನ್ನುವುದು ನ್ಯಾಯಾಲಯಕ್ಕೆ ಚೆನ್ನಾಗಿ ಗೊತ್ತಿದೆ, ಇದು ಸುಪ್ರೀಂ ಕೋರ್ಟಿನ ಆದೇಶದಿಂದ ಖಚಿತವಾಗಿದೆ.
ಕೇರಳ ಹೈಕೋರ್ಟ್ 1998ರಲ್ಲೇ ಬಂದ್‌ಗಳನ್ನು ಬಂದ್ ಮಾಡಲು ಆದೇಶಿಸಿತ್ತು. ಆ ಕಾಲದಲ್ಲಿ ಇದು ಅತ್ಯಂತ ಮಹತ್ವದ ಆದೇಶ ಎಂದೇ ಪರಿಗಣಿತವಾಗಿತ್ತು. ಹೇಳಿಕೇಳಿ ಕೇರಳ ಮುಷ್ಕರಗಳ ನಾಡು. ಚಿಕ್ಕಪುಟ್ಟ ಕಾರಣಗಳಿಗೂ ಬಂದ್ ಆಚರಿಸುವುದು ಆ ರಾಜ್ಯದ ಜೀವನ ಧರ್ಮವೇ ಆಗಿತ್ತು. ಇದರಿಂದ ಆಗುತ್ತಿರುವ ದುಷ್ಪರಿಣಾಮವನ್ನು ಮನಗಂಡು ಹೈಕೋರ್ಟ್ ಬಂದ್‌ಗಳಿಗೆ ಲಗಾಮು ಹಾಕುವ ತೀರ್ಪು ನೀಡಿತು. ಆದರೆ ಇದರಿಂದ ಬಂದ್ ಆಚರಣೆಗಳು ಮಾತ್ರ ನಿಂತಿಲ್ಲ ಎನ್ನುವುದು ವಿಷಾದಿಸಬೇಕಾದ ಸಂಗತಿ. ಈಗಲೂ ಅಲ್ಲಿ ಪ್ರತಿ ತಿಂಗಳು ಸರಾಸರಿ ಐದು ಮುಷ್ಕರಗಳಾದರೂ ನಡೆಯುತ್ತದೆ. ಬಂದ್ ಅಥವಾ ಮುಷ್ಕರಗಳು ಈಗ ಹರತಾಳ ಎಂಬ ಹೆಸರಿನಲ್ಲಿ ನಡೆಯುತ್ತಿವೆ. ಹೆಸರು ಮಾತ್ರ ಬದಲಾಗಿದೆಯೇ ಹೊರತು ಬಂದ್‌ಗಳ ಸ್ವರೂಪ ಮಾತ್ರ ಬದಲಾಗಿಲ್ಲ. ಅದು ಹಿಂದಿಗಿಂತಲೂ ಹೆಚ್ಚು ತೀವ್ರವೂ ಹಿಂಸಾತ್ಮಕವೂ ಆಗಿದೆ. ಅದೇ ರೀತಿ 2007ರಲ್ಲಿ ತಮಿಳುನಾಡು ಹೈಕೋರ್ಟ್ ಕೂಡ ಇದೇ ಮಾದರಿಯ ಆದೇಶವನ್ನು ನೀಡಿದೆ. ಅಲ್ಲೂ ಪರಿಸ್ಥಿತಿ ಕೇರಳಕ್ಕಿಂತ ಹೆಚ್ಚು ಭಿನ್ನವಾಗಿಯೇನೂ ಇಲ್ಲ. ಸಾಕ್ಷಾತ್ ನ್ಯಾಯಾಲಯದ ಆದೇಶವನ್ನೇ ಕಸದ ಸಮಾನ ಮಾಡುವ ತಂತ್ರಗಳು ನಮ್ಮ ರಾಜಕೀಯ ಪಕ್ಷಗಳಿಗೆ ಕರಗತವಾಗಿದೆ. ಹೀಗಾಗಿ ಮುಷ್ಕರ ಯಥಾಪ್ರಕಾರ ನಡೆಯುತ್ತಿದೆ. ಈಗೀಗ ಬಂದ್ ಅಥವಾ ಮುಷ್ಕರ ಹೆಚ್ಚು ಪರಣಾಮಕಾರಿಯಾಗಬೇಕಾದರೆ ಭಾರೀ ಪ್ರಮಾಣದಲ್ಲಿ ಹಿಂಸೆ ನಡೆಯಲೇಬೇಕೆಂಬ ಅಲಿಖೀತ ನಿಯಮವಿರುವಂತೆ ಕಾಣಿಸುತ್ತಿದೆ. ಹೀಗಾಗಿ ವಾಹನಗಳಿಗೆ ಕಿಚ್ಚಿಕ್ಕುವುದು, ಪೊಲೀಸರತ್ತ ಕಲ್ಲು ತೂರುವುದು, ರಸ್ತೆತಡೆ ಮಾಡುವುದೆಲ್ಲ ಮುಷ್ಕರ ಅಥವ ಬಂದ್ ಸಂದರ್ಭದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯ ತನಕ ಕಾಣಸಿಗುವ ಸಾಮಾನ್ಯ ದೃಶ್ಯ.
ಮುಷ್ಕರ ಅಥವಾ ಹರತಾಳ ಮತ್ತು ಬಂದ್ ನಡುವಿನ ವ್ಯತ್ಯಾಸವೇ ಹೆಚ್ಚಿನವರಿಗೆ ತಿಳಿದಿಲ್ಲ. ಮುಷ್ಕರ ಎಂದರೆ ಸಾರ್ವಜನಿಕ ಜೀವನಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ, ಶಾಂತ ರೀತಿಯಲ್ಲಿ ಆಳುವ ವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುವ ವಿಧಾನ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಷ್ಕರ ಅಥವಾ ಹರತಾಳಕ್ಕೆ ಅತ್ಯಂತ ಮಹತ್ವವಿದೆ. ಆಳುವವರಿಗೆ ತಮ್ಮ ಬೇಡಿಕೆಯನ್ನು ಪರಿಣಾಮಕಾರಿಯಾಗಿ ತಿಳಿಸಲು ಜನರ ಕೈಯಲ್ಲಿರುವ ಪ್ರಬಲ ಅಸ್ತ್ರವಿದು. ಮಹಾತ್ಮಾ ಗಾಂಧಿ ಈ ಅಸ್ತ್ರ ಬಳಸಿಯೇ ಬ್ರಿಟಿಷರನ್ನು ಮಣಿಸಿದ್ದರು. 19ನೇ ಶತಮಾನದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗಿದ್ದ ಅಸ್ತ್ರವಿದು. ಮುಷ್ಕರ ಸಂಪೂರ್ಣ ಸ್ವಯಂ ಪ್ರೇರಿತ. ಬಂದ್ ಎಂಬ ಪರಿಕಲ್ಪನೆ ಬಂದದ್ದು ಆ ಬಳಿಕ. ಇಡೀ ಜನಜೀವನವನ್ನು ಸ್ತಬ್ಧಗೊಳಿಸಿ ಆಳುವವರಿಗೆ ಬಿಸಿ ಮುಟ್ಟಿಸುವ ಈ ಅಸ್ತ್ರಕ್ಕೆ ಅನಂತರ ಹಿಂಸಾಚಾರವೂ ಸೇರಿಕೊಂಡ ಪರಿಣಾಮ ಈಗ ಬಂದ್ ಎಂದರೆ ಜನರು ನಡುಗುವಂತಾಗಿದೆ.
ಬಂದ್‌ಗೆ ಕರೆಕೊಟ್ಟ ಬಳಿಕ ಅದನ್ನು ಯಶಸ್ವಿಗೊಳಿಸುವ ಸಲುವಾಗಿ ಯಾವುದೇ ರೀತಿಯ ಬಲಪ್ರಯೋಗಿಸಲು ಕರೆ ಕೊಟ್ಟವರು ಹಿಂಜರಿಯುವುದಿಲ್ಲ. ಸ್ವಯಂಪ್ರೇರಿತ, ಅಹಿಂಸಾತ್ಮಕ ಎಂಬುದು ಇಲ್ಲಿ ಕೇಳುವವರಿಲ್ಲದ ಅನಾಥಕೂಸು. ಕೆಲವೊಮ್ಮೆ ಸರಕಾರವೇ ಬಂದ್‌ಗೆ ಕರೆ ನೀಡುವ ವಿಚಿತ್ರಗಳಿಗೂ ಈ ದೇಶ ಸಾಕ್ಷಿಯಾಗಿದೆ. ಮುಷ್ಕರ ಎಂದರೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಆಳುವವರ ವಿರುದ್ಧ ಉಪಯೋಗಿಸುವ ಅಸ್ತ್ರ. ಅಧಿಕಾರದಲ್ಲಿರುವ ಪಕ್ಷವೇ ಮುಷ್ಕರಕ್ಕೆ ಅಥವಾ ಬಂದ್‌ಗೆ ಕರೆ ನೀಡುವುದರ ಅರ್ಥ ಏನು? ತನ್ನ ವಿರುದ್ಧ ತಾನೇ ಮುಷ್ಕರ ಹೂಡುವುದೇ? ಕನಿಷ್ಠ ಮುಷ್ಕರ ನಡೆಸುವ ಮೊದಲು ಅಧಿಕಾರದಿಂದ ಕೆಳಗಿಳಿಯುವ ನೈತಿಕತೆಯಾದರೂ ರಾಜಕೀಯ ಪಕ್ಷಗಳಿದೆಯೇ? ಈ ಎಲ್ಲ ಪ್ರಶ್ನೆಗಳು ರಾಜಕೀಯ ಪ್ರಶ್ನೆಗಳ ಪಾಲಿಗೆ ಅಪ್ರಸ್ತುತ. ಪರಿಸ್ಥಿತಿ ಇಷ್ಟು ಹದಗೆಟ್ಟಿರುವುದರಿಂದಲೇ ಪ್ರತಿಭಟಿಸುವ ಮೂಲಭೂತ ಹಕ್ಕಿಗೆ ಸಂಬಂಧಪಟ್ಟ ವಿಚಾರದಲ್ಲೂ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಬೇಕಾಗಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್