ಸಜ್ಜನ ಮುಖಂಡನನ್ನು ಅಗಲಿದೆ ನಾಡು ರಾಜಕೀಯ ನಿಷ್ಠೆಯ ಒಂದು ಕೊಂಡಿ
Team Udayavani, Jul 28, 2017, 7:26 AM IST
ಜೇವರ್ಗಿ ಜನರಿಗೆ ಧರಂ ಸಿಂಗ್ ಮೇಲೆ ಅದೆಂತಹ ವಿಶ್ವಾಸ ಇತ್ತೆಂದರೆ ಅವರು ನಾಮಪತ್ರ ಸಲ್ಲಿಸಿದರೆ ಸಾಕಿತ್ತು. ಪ್ರಚಾರ ಮಾಡುವ ಅಗತ್ಯವೇ ಇರಲಿಲ್ಲ. ಮತ ಹಾಕಿ ಗೆಲ್ಲಿಸುತ್ತಿದ್ದರು.
ರಾಜ್ಯ ರಾಜಕೀಯದಲ್ಲಿ ಅಜಾತಶತ್ರು ಎಂಬ ಅಭಿಧಾನಕ್ಕೆ ಪಾತ್ರರಾಗಿದ್ದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ನಿಧನರಾಗುವುದರೊಂದಿಗೆ ಕಾಂಗ್ರೆಸಿನ ಹಳೆ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಪ್ರಸ್ತುತ ರಾಜಕಾರಣದಲ್ಲಂತೂ ಅಜಾತಶತ್ರು ಎಂದು ಕರೆಯಬಹುದಾದ ನಾಯಕರು ಕಾಣಿಸುವುದಿಲ್ಲ. ರಾಜ್ಯ ರಾಜಕಾರಣದ ಮಟ್ಟಿಗೆ ಧರಂ ಸಿಂಗ್ ಇಂತಹ ಒಂದು ಹಿರಿಮೆಗೆ ಪಾತ್ರರಾಗಿದ್ದರು ಎನ್ನುವುದೇ ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ. ಅಜಾತಶತ್ರು ಎಂದರೆ ಶತ್ರುಗಳೇ ಇಲ್ಲದವನು. ಧರಂ ಸಿಂಗ್ ಪಾಲಿಗೆ ರಾಜಕೀಯದಲ್ಲಿ ವಿರೋಧಿಗಳಿದ್ದಿರಬಹುದು, ಆದರೆ ಶತ್ರುಗಳಿರಲಿಲ್ಲ. ಶತ್ರುವನ್ನು ಮಿತ್ರನನ್ನಾಗಿ ಮಾಡಿಕೊಳ್ಳುವ ಕಲೆ ಅವರಿಗೆ ಒಲಿದಿತ್ತು. ಎಲ್ಲ ಪಕ್ಷಗಳಲ್ಲೂ ಅವರಿಗೆ ಆತ್ಮೀಯರು ಎಂದು ಕರೆಯಬಹುದಾದ ಅನೇಕ ಮುಖಂಡರಿದ್ದಾರೆ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ನಡುವಿನ ಸ್ನೇಹ ಇಡೀ ದೇಶಕ್ಕೆ ತಿಳಿದಿರುವಂಥದ್ದು. ಧರಂ ಸಿಂಗ್ ಸ್ನೇಹಾಚಾರ ಕಾಲಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರಲಿಲ್ಲ. ಅವರು ಸ್ನೇಹವನ್ನು ಮನಃಪೂರ್ವಕವಾಗಿ ನಂಬುತ್ತಿದ್ದರು.
ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿಯಲ್ಲಿ ಜನಿಸಿದ ಧರಂ ಸಿಂಗ್ ಒಂದು ಪಕ್ಷ ಮತ್ತು ಒಂದೇ ಸಿದ್ಧಾಂತ ಎಂಬ ತಣ್ತೀಕ್ಕೆ ಅಂಟಿಕೊಂಡಿದ್ದ ಹಳೇ ತಲೆಮಾರಿನ ರಾಜಕಾರಣಿ. ಜಾತಿ ಬೆಂಬಲವಿಲ್ಲದೆ ರಾಜಕೀಯದಲ್ಲಿ ಅತ್ಯುನ್ನತ ಪದವಿ ತನಕ ತಲುಪಿದ ರಾಜಕಾರಣಿ ಎನ್ನುವುದು ಅವರ ಹಿರಿಮೆ. ಧರಂ ಸಿಂಗ್‌ರ ಸಮಕಾಲೀನ ಹಾಗೂ ಅನಂತರದ ಯಾವ ರಾಜಕಾರಣಿಯನ್ನು ನೋಡಿದರೂ ಅವರ ಹಿಂದೆ ಅವರು ಜನಿಸಿದ ಜಾತಿಯ ಬೆಂಬಲ ದೊಡ್ಡ ಮಟ್ಟದಲ್ಲಿರುವುದನ್ನು ಕಾಣಬಹುದು. ಆದರೆ ತೀರಾ ನಗಣ್ಯ ಸಂಖ್ಯೆಯಲ್ಲಿರುವ ರಜಪೂತ ಸಮುದಾಯದಲ್ಲಿ ಹುಟ್ಟಿದ ಧರಂ ಸಿಂಗ್ ಜಾತಿ ಬೆಂಬಲವಿಲ್ಲದೆಯೇ ಸತತ ಏಳು ಸಲ ಜೇವರ್ಗಿಯಿಂದ ಶಾಸಕರಾಗಿರುವುದು ಮತ್ತು ಎರಡು ಸಲ ಸಂಸದರಾಗಿರುವುದು ಕಡಿಮೆ ಸಾಧನೆ ಏನಲ್ಲ. ಜೇವರ್ಗಿ ಜನರಿಗೆ ಧರಂ ಸಿಂಗ್ ಮೇಲೆ ಅದೆಂತಹ ವಿಶ್ವಾಸ ಇತ್ತೆಂದರೆ ಅವರು ನಾಮಪತ್ರ ಸಲ್ಲಿಸಿದರೆ ಸಾಕಿತ್ತು. ಪ್ರಚಾರ ಮಾಡುವ ಅಗತ್ಯವೇ ಇರಲಿಲ್ಲ. ಮತ ಹಾಕಿ ಗೆಲ್ಲಿಸುತ್ತಿದ್ದರು. ಪ್ರತಿಯೊಬ್ಬ ಮತದಾರನ ಗುರುತು ಪರಿಚಯ ಅವರಿಗಿತ್ತು ಮಾತ್ರವಲ್ಲದೆ, ಅವರೆಲ್ಲ ಹೆಸರುಗಳು ಗೊತ್ತಿದ್ದವು. ಜನರನ್ನು ಭೇಟಿಯಾಗುವ ಸಂದರ್ಭದಲ್ಲಿ ಸಹಾಯಕರು ಜನರ ಹೆಸರು ಹೇಳುವ ಮೊದಲೇ ಧರಂ ಸಿಂಗ್ ಹೆಸರಿಡಿದು ಕೂಗುತ್ತಿದ್ದರು.
ಮುಖ್ಯಮಂತ್ರಿಯಾಗಬೇಕಾದರೆ ಅವರು 2004ರ ತನಕ ಕಾಯಬೇಕಾಯಿತು. ಅದೂ ಯಾರಿಗೂ ಬಹುಮತ ಸಿಗದೆ ಮೈತ್ರಿ ಸರಕಾರ ಅನಿವಾರ್ಯವಾಗಿ ಜೆಡಿಎಸ್ ಬೆಂಬಲದಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದೆಂದು ತೀರ್ಮಾನವಾದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ದೇವೇ ಗೌಡರು, ಧರಂ ಸಿಂಗ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ಪಟ್ಟು ಹಿಡಿದ ಕಾರಣ. ಖರ್ಗೆ ಅಥವಾ ಎಚ್.ಕೆ. ಪಾಟೀಲ್‌ರನ್ನು ಮುಖ್ಯಮಂತ್ರಿ ಮಾಡಿದರೆ ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಯುವುದಿಲ್ಲ ಎನ್ನುವುದು ಗೌಡರಿಗೆ ತಿಳಿದಿತ್ತು. ಧರಂ ಸಿಂಗ್ ಮುಖ್ಯಮಂತ್ರಿಯಾದರೆ ಸರಕಾರದ ಜುಟ್ಟು ತನ್ನ ಕೈಯಲ್ಲಿರುತ್ತದೆ ಎನ್ನುವುದು ದೇವೇ ಗೌಡರ ಲೆಕ್ಕಾಚಾರವಾಗಿತ್ತು ಮತ್ತು ಆ ಪ್ರಕಾರವೇ ಎಲ್ಲವೂ ನಡೆಯಿತು. ಆದರೆ ಈ ಸರಕಾರವೂ ಬಹಳ ಕಾಲ ಬಾಳಲಿಲ್ಲ. ಹೀಗಾಗಿ ಐದು ದಶಕ ರಾಜಕಾರಣ ಮಾಡಿದ ಧರಂ ಸಿಂಗ್‌ಗೆ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸುವ ಅವಕಾಶ ಸಿಕ್ಕಿದ್ದು ಬರೀ 20 ತಿಂಗಳು. ಧರಂ ಸಿಂಗ್‌ರ ಪಕ್ಷ ನಿಷ್ಠೆ ಪ್ರಶ್ನಾತೀತವಾಗಿತ್ತು. ಇಂದಿರಾ ಗಾಂಧಿ ನಾಯಕತ್ವದ ಮೇಲೆ ಅಚಲ ನಿಷ್ಠೆ ಇಟ್ಟಿದ್ದರು. 1980ರಲ್ಲಿ ಇಂದಿರಾ ತನ್ನ ಆಪ್ತ ಸಿ.ಎಂ. ಸ್ಟೀಫನ್ ಅವರನ್ನು ಸಂಪುಟಕ್ಕೆ ಸೇರಿಸುವ ಸಲುವಾಗಿ ಚುನಾವಣೆಗೆ ನಿಲ್ಲಿಸಲು ಮುಂದಾದಾಗ ಧರಂ ಸಿಂಗ್ ಗುಲ್ಬರ್ಗ ಲೋಕಸಭಾ ಸ್ಥಾನವನ್ನೇ ತ್ಯಾಗ ಮಾಡಿ ಸ್ಟೀಫನ್‌ಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಅವರ ಗೆಲುವಿಗೆ ಮನಸಾರೆ ಪ್ರಯತ್ನಿಸಿದರು. ಧರಂ ಸಿಂಗ್ ಅಗಲಿಕೆಯಿಂದ ಭಾರೀ ನಷ್ಟವಾಗಿದೆ ಎನ್ನುವುದು ಔಪಚಾರಿಕವಾದ ಮಾತಾಗಬಹುದು. ಏಕೆಂದರೆ ಸದ್ಯದ ರಾಜಕೀಯಕ್ಕೆ ಧರಂ ಸಿಂಗ್‌ರಂತಹ ನಿಷ್ಠಾವಂತ ನಾಯಕನ ಅಗತ್ಯವಿಲ್ಲ. ಆದರೆ ಓರ್ವ ಸಜ್ಜನ, ಗೌರವಾನ್ವಿತ, ಮುತ್ಸದ್ದಿ ಮುಖಂಡನನ್ನು ನಾಡು ಅಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.