ಶಿಕ್ಷಕರ ವರ್ಗಾವಣೆ ವಿಘ್ನ ನಿವಾರಣೆಯಾಗಲಿ
Team Udayavani, Sep 21, 2021, 6:00 AM IST
ಪ್ರತೀ ವರ್ಷ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗು ತ್ತಿದ್ದಂತೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇರುತ್ತದೆ. ವರ್ಗಾವಣೆ ಪ್ರಕ್ರಿಯೆ ಸಲೀಸಾಗಿ ನಡೆದಿರುವುದಕ್ಕಿಂತ ಅರ್ಧಕ್ಕೆ ಮೊಟಕುಗೊಂಡಿ ರುವುದೇ ಹೆಚ್ಚು. ವರ್ಗಾವಣೆಯನ್ನು ಸರಾಗವಾಗಿ ನಡೆಸಲು ಕಾಯ್ದೆಗೆ ತಿದ್ದುಪಡಿ, ಹೊಸ ಕಾಯ್ದೆ, ನಿಯಮಗಳಲ್ಲಿದ್ದನ್ನು ಕಾಯ್ದೆಗೆ ಸೇರಿಸಲು ಅಧ್ಯಾದೇಶ ಮೂಲಕ ತಿದ್ದುಪಡಿ ಹೀಗೆ ಹಲವು ರೀತಿಯ ಪ್ರಯತ್ನಗಳು ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಿದೆ. ಆದರೆ, ಚುನಾವಣ ನೀತಿ ಸಂಹಿತೆ, ಕಡ್ಡಾಯ ವರ್ಗಾವಣೆ, ಹೆಚ್ಚುವರಿ ವರ್ಗಾವಣೆ, ಕಾನೂನಿನ ತೊಡಕು ಸೇರಿದಂತೆ ಹಲವು ಕಾರಣಗಳಿಗಾಗಿ ವರ್ಗಾವಣೆ ಪ್ರಕ್ರಿಯೆ 2017ರಿಂದ ಈಚೆಗೆ ಸರಿಯಾಗಿ ನಡೆದೇ ಇಲ್ಲ.
2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಸಲೀಸಾಗಿ ನಡೆಸಲು ಸರಕಾರ ಶಿಕ್ಷಕ ಮಿತ್ರ ತಂತ್ರಾಂಶ ರೂಪಿಸಿ, ಆಮೂಲಕ ಅರ್ಜಿ ಆಹ್ವಾ ನಿಸಿತ್ತು. ಸುಮಾರು 72 ಸಾವಿರ ಅರ್ಜಿ ಸಲ್ಲಿಕೆಯಾಗಿತ್ತು. ಮುಂದಿನ ಪ್ರಕ್ರಿಯೆ ಆರಂಭವಾಗುವ ವೇಳೆಗೆ ಕೆಲವು ಶಿಕ್ಷಕರು ಕೋರ್ಟ್ ಮೆಟ್ಟಿ ಲೇರಿದ್ದು, ಇದಕ್ಕೆ ಕೋರ್ಟ್ ತಡೆ ನೀಡಿ ತು.ಹೀಗಾಗಿ ಸರಕಾರ ನಿಯಮ ದಲ್ಲಿರುವ ಅಂಶವನ್ನು ಕಾಯ್ದೆಗೆ ಸೇರಿಸಲು (ಕಡ್ಡಾಯ ವರ್ಗಾವಣೆ ಯಿಂದ ಅನ್ಯಾಯವಾಗಿರುವವರಿಗೆ ಆದ್ಯತೆ ನೀಡುವ ವಿಚಾರ) ಅಧ್ಯಾದೇಶ ಮೂಲಕ ಕಾಯ್ದೆಗೆ ತಿದ್ದುಪಡಿ ತರಲಾಯಿತು. ತಿದ್ದುಪಡಿ ಕಾಯ್ದೆ ಯಂತೆ ವರ್ಗಾವಣೆ ಪ್ರಕ್ರಿಯೆ ಪುನರ್ ಆರಂಭಿಸಲಾಗಿತ್ತು. ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಮತ್ತೆ ಕೆಲವು ಶಿಕ್ಷಕರು 2016-17ನೇ ಸಾಲಿನಲ್ಲಿ ತಾಲೂಕು ಬಿಟ್ಟವರಿಗೆ ಪುನಃ ತವರು ತಾಲೂಕಿಗೆ ಹೋಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ ಸದ್ಯ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ವಾಗಿ ಸ್ಥಗಿತಗೊಂಡಿದೆ.
ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾವಣೆ ಪ್ರಕ್ರಿಯೆ ವಿಚಾರವಾಗಿ ಶಾಲಾ ಶಿಕ್ಷಕರ ಸಂಘಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಂದು ಭಾಗವಾದರೆ, ವರ್ಗಾವಣೆ ಪ್ರಕ್ರಿಯೆಗೆ ಪದೇಪದೆ ಕಾನೂನು ತೊಡಕು ಎದುರಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಪ್ರತಿ ಬಾರಿಯೂ ಕಾನೂನಿನ ತೊಡಕಿನಿಂದಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತಾ ಹೋದರೆ, ಕಳೆದ ಹತ್ತು, ಹದಿನೈದು ವರ್ಷಗಳಿಂದ ವರ್ಗಾವಣೆಗಾಗಿ ಕಾದು ಕುಳಿತಿರುವ ಶಿಕ್ಷಕರಿಗೆ ನಿರಂತರ ನಿರಾಸೆಯಾಗುತ್ತಲೇ ಇದೆ. ಅನೇಕ ಬಾರಿ ಅರ್ಜಿ ಸಲ್ಲಿಸಿ, ಇನ್ನೆನು ಕೌನ್ಸೆಲಿಂಗ್ ನಡೆಯಬೇಕು ಎನ್ನುವಾಗ ಪ್ರಕ್ರಿಯೆ ಸ್ಥಗಿತ ವಾಗಿ, ನೋವು ತಿಂದವರು ಅನೇಕರಿದ್ದಾರೆ. ತವರು ಜಿಲ್ಲೆ, ತಾಲೂಕಿಗೆ ಹೋಗಬೇಕು ಎಂದು ಹತ್ತಾರು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಸಾವಿರಾರು ಶಿಕ್ಷಕರಿಗೆ ಅನ್ಯಾಯವಾಗುತ್ತಲೇ ಇದೆ.
ಸದ್ಯ ಎದುರಾಗಿರುವ ಕಾನೂನಿನ ಕಂಟಕವನ್ನು ಶೀಘ್ರ ನಿವಾರಿಸಿ, ಶಿಕ್ಷಕರ ವರ್ಗಾವಣೆಗೆ ಯಾವುದೇ ರೀತಿಯ ವಿಘ್ನ, ಕಾನೂನಿನ ತೊಡಕು ಎದುರಾಗದಂತೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಎಚ್ಚರವಹಿಸಬೇಕು. ಹಾಗೆಯೇ ಶಿಕ್ಷಕರು ತಾವು ಬಯಸುವ ತಾಲೂಕುಗಳಿಗೆ ಹೋಗಿ, ಶೈಕ್ಷಣಿಕ ಚಟುವಟಿಕೆಯಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ, ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ವ್ಯವಸ್ಥೆ ನಿರ್ಮಾಣ ಮಾಡಬೇಕು. ಇಲ್ಲವಾದರೆ, ಶಿಕ್ಷಕರು ವರ್ಗಾವಣೆಗಾಗಿ ಅಲೆದಾಡುವುದು ಇನ್ನಷ್ಟು ಹೆಚ್ಚಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.