TREKKING: ರಾಜ್ಯದಲ್ಲಿ ಚಾರಣಕ್ಕೆ ಕಡಿವಾಣ ಸ್ತುತ್ಯರ್ಹ
Team Udayavani, Oct 5, 2024, 7:00 AM IST
ರಾಜ್ಯದಲ್ಲಿ ಚಾರಣವನ್ನು ವ್ಯವಸ್ಥಿತವಾಗಿಸುವ ಹಾಗೂ ಅರಣ್ಯ ಪ್ರದೇಶದ ಪರಿಸರ ಮತ್ತು ವನ್ಯಜೀವಿಗಳ ಆವಾಸಸ್ಥಾನ ಮತ್ತು ಓಡಾಟಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಮಹತ್ತರ ಉದ್ದೇಶದಿಂದ ರಾಜ್ಯ ಸರಕಾರ ಚಾರಣಿಗರಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಇದಕ್ಕಾಗಿ ಪ್ರತ್ಯೇಕ ಅರಣ್ಯವಿಹಾರ ಎನ್ನುವ ವೆಬ್‌ಸೈಟ್ ಅನ್ನು ಪರಿಚಯಿಸಲಾಗಿದ್ದು, ಇದರ ಮೂಲಕ ಮುಂಗಡ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಹೊಸ ವ್ಯವಸ್ಥೆಯ ಪರಿಚಯದಿಂದ ರಾಜ್ಯದ ಚಾರಣ ಪ್ರದೇಶಗಳಿಗೆ ಭೇಟಿ ನೀಡುವವರ ಸವಿವರ ಮಾಹಿತಿ ಇಲಾಖೆಗೆ ಲಭಿಸಲಿದೆಯಲ್ಲದೆ ಯಾವ್ಯಾವ ಚಾರಣ ಪಥದಲ್ಲಿ ಎಷ್ಟೆಷ್ಟು ಮಂದಿ ಚಾರಣ ಕೈಗೊಂಡಿದ್ದಾರೆ ಎಂಬ
ಅಧಿಕೃತ ಅಂಕಿಅಂಶವೂ ದೊರೆಯಲಿದೆ. ಸದ್ಯ ಆರಂಭಿಸಲಾಗಿರುವ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಒಂದು ಫೋನ್ ನಂಬರ್‌ನಿಂದ 10 ಟಿಕೆಟ್‌ಗಳನ್ನಷ್ಟೇ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಮುಂಗಡ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಚಾರಣಕ್ಕೆ ತೆರಳಲಿರುವ ಸದಸ್ಯರೆಲ್ಲರೂ ಇಲಾಖೆ ನಿಗದಿಪಡಿಸಿರುವ ಅಧಿಕೃತ ಗುರುತಿನ ಚೀಟಿಗಳ ಪೈಕಿ ಯಾವುದಾದರೊಂದನ್ನು ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಯಾರು ಚಾರಣಕ್ಕಾಗಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದಾರೋ ಅವರು ಮಾತ್ರವೇ ಚಾರಣಕ್ಕೆ ತೆರಳಬಹುದಾಗಿದೆ. ಇದರಿಂದಾಗಿ ಬೇಕಾಬಿಟ್ಟಿಯಾಗಿ ಚಾರಣಕ್ಕೆ ತೆರಳುವ ಜನರ ಚಾಳಿಗೆ
ಕಡಿವಾಣ ಬೀಳಲಿದೆ. ಇದೇ ವೇಳೆ ನಿರ್ದಿಷ್ಟ ಚಾರಣ ಪಥದಲ್ಲಿ ಪ್ರತೀದಿನ 300 ಚಾರಣಿಗರ ಪ್ರವೇಶಕ್ಕೆ ಮಾತ್ರವೇ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕ್ರಮದಿಂದ ಚಾರಣ ಪಥದಲ್ಲಿ ಜನದಟ್ಟಣೆ ಹೆಚ್ಚಿ, ವನ್ಯಜೀವಿಗಳ ಸಹಜ ಓಡಾಟಕ್ಕೆ ಸಮಸ್ಯೆಯಾಗುವುದು ತಪ್ಪಲಿದೆ.
ಈ ಹೊಸ ವ್ಯವಸ್ಥೆಯಲ್ಲಿ ಅರಣ್ಯ ಪ್ರದೇಶದ ಪರಿಸರ ರಕ್ಷಿಸುವ ನಿಟ್ಟಿನಲ್ಲಿಯೂ ಕೆಲವು ಸೂಕ್ತ ಉಪಕ್ರಮಗಳನ್ನು ಪರಿಚಯಿಸಲಾಗಿದೆ. ಪ್ರತೀ 10-20 ಮಂದಿ ಚಾರಣಿಗರಿಗೆ ಇಕೋ ಟೂರಿಸಂ ಬೋರ್ಡ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಓರ್ವ ಗೈಡ್ ಅನ್ನು ನಿಯೋಜಿಸಲಾಗುವುದು. ಚಾರಣದ ವೇಳೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳು, ಮದ್ಯ ಸಹಿತ ಇನ್ನಿತರ ಎಲ್ಲ ನಿಷೇಧಿತ ವಸ್ತುಗಳನ್ನು ಚಾರಣಿಗರು ತಮ್ಮ ಬಳಿ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚಾರಣಿಗರು ಹಿಂದಿರುಗಿದ ಬಳಿಕ ಚಾರಣ ಪಥದಲ್ಲಿ ಯಾವುದೇ ನಿಷೇಧಿತ ವಸ್ತುಗಳು, ಇವುಗಳ ತ್ಯಾಜ್ಯ ಪತ್ತೆಯಾದಲ್ಲಿ ಸಂಬಂಧಿತ ಚಾರಣಿಗರಿಗೆ ದಂಡ ವಿಧಿಸುವ ಪ್ರಸ್ತಾವವನ್ನು ಇದು ಒಳಗೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಚಾರಣ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯಗೊಳ್ಳುತ್ತಿದ್ದು, ಚಾರಣಿಗರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬಹುತೇಕ ಚಾರಣ ತಾಣಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಚಾರಣಿಗರ ಸುರಕ್ಷೆ, ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ ಚಾರಣ ಎನ್ನುವುದು ಯುವಜನಾಂಗದ ಪಾಲಿಗೆ ಮೋಜುಮಸ್ತಿನ ವಿಹಾರವಾಗಿ ಮಾರ್ಪಟ್ಟಿದ್ದು, ಈ ಕಾರಣದಿಂದಾಗಿಯೇ ಹಲವಾರು ಅನಾಹುತಗಳು ಸಂಭವಿಸಿ, ಜೀವಹಾನಿ ಸಂಭವಿಸಿರುವ ಸಾಕಷ್ಟು ಘಟನೆಗಳೂ ನಡೆದಿವೆ. ಅಷ್ಟು ಮಾತ್ರವಲ್ಲದೆ ಚಾರಣದ ನೆಪದಲ್ಲಿ ಅಪರಾಧ ಕೃತ್ಯಗಳು, ವನ್ಯಜೀವಿಗಳ ಕಳ್ಳಬೇಟೆಯಂತಹ ಅಕ್ರಮ ಚಟುವಟಿಕೆಗಳೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರ ಬೇಕಾಬಿಟ್ಟಿ ಚಾರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮತ್ತು ನಿಯಮಾವಳಿಗಳನ್ನು ಪಾಲಿಸದಲ್ಲಿ ಮಾತ್ರವೇ ಇಲಾಖೆ ತನ್ನ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯ. ಇಲ್ಲೂ ಹೊಂದಾಣಿಕೆ, ರಾಜಿ, ಅಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟದ್ದೇ ಆದಲ್ಲಿ ಇದು ಕೂಡ ನೀರ ಮೇಲಿಟ್ಟ ಹೋಮದಂತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.