![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jan 25, 2025, 6:06 AM IST
ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವೆ ಕಳೆದೊಂದು ವರ್ಷದಿಂದ ನಡೆಯು ತ್ತಿರುವ ಸಂಘರ್ಷ ಈಗ ಮತ್ತೂಂದು ಆಯಾಮ ಪಡೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದ್ದು, ವಿಪಕ್ಷ ಮೈತ್ರಿಕೂಟ ಆಡಳಿತವಿರುವ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರದ ವಿರುದ್ಧ ಬಹಿರಂಗ ಸಮರ ಸಾರಿದ್ದ ರಾಜ್ಯ ಸರಕಾರವೀಗ ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತದ ವಿಷಯವನ್ನು ಮುಂದಿಟ್ಟು ಕೇಂದ್ರದ ವಿರುದ್ಧ ಮತ್ತೂಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದೆ.
ಕೇಂದ್ರ ಸರಕಾರದ ಅಧೀನದಲ್ಲಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ)ವು ದೇಶದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿ ಮತ್ತು ಬೋಧನಾ ಸಿಬಂದಿ ಹಾಗೂ ಕಾಲೇಜುಗಳ ಬೋಧನಾ ಸಿಬಂದಿಯ ನೇಮಕಕ್ಕೆ ಸಂಬಂಧಿಸಿ ರೂಪಿಸಿರುವ ಕರಡು ನಿಯಮಾವಳಿಯ ಬಗೆಗೆ ರಾಜ್ಯ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯುಜಿಸಿಯನ್ನು ಬಳಸಿಕೊಂಡು ಕೇಂದ್ರ ಸರಕಾರ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಣ ರಾಜ್ಯ ಸರಕಾರಗಳ ಅಧಿಕಾರವನ್ನು ಕಿತ್ತುಕೊಳ್ಳಲು ನಡೆಸಿರುವ ಹುನ್ನಾರ ಇದಾಗಿದೆ ಎಂಬ ಗಂಭೀರ ಆರೋಪವನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರು ಮಾಡಿದ್ದಾರೆ. ದೇಶದ ಹಲವು ರಾಜ್ಯ ಸರಕಾರಗಳು ಅದರಲ್ಲೂ ಮುಖ್ಯವಾಗಿ ವಿಪಕ್ಷ ಮೈತ್ರಿಕೂಟದ ಪಾಲುದಾರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ಕೂಡ ಯುಜಿಸಿ ರೂಪಿಸಿರುವ ಕರಡು ನಿಯಮಾವಳಿಯ ವಿರುದ್ಧ ಅಪಸ್ವರ ಎತ್ತಿವೆ. ಈ ಹಿನ್ನೆಲೆಯಲ್ಲಿ ವಿಪಕ್ಷ ಮೈತ್ರಿಕೂಟ ಅಧಿಕಾರವಿರುವ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ ಕರೆದು ಯುಜಿಸಿ ಹೊರಡಿಸಿರುವ ಕರಡು ನಿಯಮಾವಳಿಗಳ ಸಾಧಕ-ಬಾಧಕಗಳ ಕುರಿತಂತೆ ಚರ್ಚಿಸಿ, ಸಹಮತದ ನಿರ್ಧಾರವೊಂದನ್ನು ಕೈಗೊಂಡು ಅದನ್ನು ಯುಜಿಸಿ ಮತ್ತು ಕೇಂದ್ರ ಸರಕಾರದ ಮುಂದಿಡುವ ನಿರ್ಧಾರಕ್ಕೆ ಬಂದಿದೆ.
ಯುಜಿಸಿ ಕರಡು ನಿಯಮಾವಳಿಯ ಪ್ರಕಾರ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಬೋಧಕ ಸಿಬಂದಿಯ ನೇಮಕದಲ್ಲಿ ಕುಲಾಧಿಪತಿ ಗಳಾಗಿರುವ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕುಲಪತಿ ನೇಮಕಕ್ಕಾಗಿನ ಶೋಧನಾ ಸಮಿತಿಯಲ್ಲಿ ರಾಜ್ಯ ಸರಕಾರದ ಏಕೈಕ ಪ್ರತಿನಿಧಿಗೂ ಅವಕಾಶ ನೀಡಲಾಗಿಲ್ಲ. ತನ್ಮೂಲಕ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಗಳಿಂದ ಕಸಿದುಕೊಳ್ಳಲು ಕೇಂದ್ರ ಸರಕಾರ ಮುಂದಾಗಿರುವಂತೆ ತೋರುತ್ತಿದೆ. ಕುಲಪತಿ ಹುದ್ದೆಗೆ ಪಿಎಚ್.ಡಿ. ಮತ್ತು ಬೋಧನೆಯ ಅನುಭವ ಇಲ್ಲದವರನ್ನು ಪರಿಗಣಿಸಲು ಹಾಗೂ ಬೋಧಕರ ನೇಮಕ ಮತ್ತು ಭಡ್ತಿಗೆ ಸಂಬಂಧಿಸಿದ ನಿಯ ಮಾವಳಿಗಳನ್ನು ಬದಲಾಯಿಸುವ ಪ್ರಸ್ತಾವವನ್ನು ಈ ನಿಯಮಾವಳಿ ಒಳಗೊಂಡಿದೆ. ಇವೆಲ್ಲವನ್ನು ಗಮನಿಸಿದಾಗ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಣ ರಾಜ್ಯ ಸರಕಾರಕ್ಕಿದ್ದ ಅಲ್ಪ ಅಧಿಕಾರಕ್ಕೂ ಕತ್ತರಿ ಹಾಕಲು ಯುಜಿಸಿ ಮುಂದಾ ಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಉನ್ನತ ಶಿಕ್ಷಣದಲ್ಲಿ ಕೇಂದ್ರದ ಅಧಿಕಾರ, ಹೊಣೆಗಾರಿಕೆ ಹೆಚ್ಚಿನದಾಗಿದ್ದರೂ ಆಯಾ ರಾಜ್ಯಗಳಿಗೂ ಕೆಲವು ಪ್ರಮುಖ ಜವಾ ಬ್ದಾರಿಗಳಿವೆ. ಇವ್ಯಾವುವನ್ನೂ ಪರಿಗಣಿಸದೆ ಕೇಂದ್ರ, ರಾಜ್ಯಗಳಿಗಿರುವ ಸಂವಿಧಾನಾತ್ಮಕ ಅಧಿಕಾರವನ್ನು ಕಸಿಯಲು ಮುಂದಾಗಿರುವುದು ಒಕ್ಕೂಟ ವ್ಯವಸ್ಥೆಗೆ ಅಪಚಾರವೇ ಸರಿ. ಶಿಕ್ಷಣದ ಗುಣಮಟ್ಟ ವರ್ಧನೆ, ಸುಧಾರಣೆಗಾಗಿನ ಯಾವುದೇ ಉಪಕ್ರಮಗಳು ವ್ಯವಸ್ಥೆಯ ಬಲವರ್ಧನೆಗೆ ಪೂರಕವಾಗಿರಬೇಕೇ ಹೊರತು ದುರ್ಬಲಗೊಳಿಸುವಂತಿರ ಬಾರದು. ಸದ್ಯ ಯುಜಿಸಿ ಹೊರಡಿಸಿರುವ ಕರಡು ನಿಯಮಾವಳಿ ಜಾರಿಯಾಗುವುದಕ್ಕೂ ಮುನ್ನ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ, ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಸಮತೋಲಿತ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು. ಶಿಕ್ಷಣದಂತಹ ವಿಷಯದಲ್ಲೂ ರಾಜಕೀಯ ಸಂಘರ್ಷದ ವಾತಾವರಣ ಸೃಷ್ಟಿಸುವುದು ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಶೋಭೆ ತಾರದು.
You seem to have an Ad Blocker on.
To continue reading, please turn it off or whitelist Udayavani.