ಗರ್ಭಕೋಶ ಶಸ್ತ್ರಚಿಕಿತ್ಸೆ: ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಲಿ
Team Udayavani, Apr 30, 2022, 6:00 AM IST
ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯರಿಗೆ ಹಣದಾಸೆಗಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿದ್ದ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶಿಸಿದ್ದು, ಸ್ವಾಗತಾರ್ಹವಾಗಿದೆ. ಜತೆಗೆ ತನಿಖೆ ಬಳಿಕ ಈ ಮಹಿಳೆಯರಿಗೆ ಪರಿಹಾರ ನೀಡುವ ಕುರಿತೂ ಮುಖ್ಯಮಂತ್ರಿಗಳು ಮಾಹಿತಿ ನೀಡಿರುವುದು ಉತ್ತಮ ನಡೆಯಾಗಿದೆ.
ಅಂದ ಹಾಗೆ ಈ ಪ್ರಕರಣ ನಾಲ್ಕೈದು ವರ್ಷಗಳ ಹಿಂದೆಯೇ ನಡೆದಿದ್ದು, ಆಗಲೇ ಸುದ್ದಿಯಾಗಿತ್ತು. ಆದರೆ ಈಗ ಇವರ ಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದ್ದಾರೆ. ಕಲಬುರಗಿ, ಹಾವೇರಿ, ಬೀದರ್, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶೇ. 40ರಷ್ಟು ಬಡ ಮತ್ತು ಲಂಬಾಣಿ ಹೆಣ್ಣು ಮಕ್ಕಳು ಗರ್ಭಕೋಶ ಕಳೆದುಕೊಂಡಿದ್ದರು. ನೋವಿನ ಸಂಗತಿ ಎಂದರೆ ಇಂದು ಇವರ್ಯಾರಿಗೂ ಸರಿಯಾಗಿ ದೈನಂದಿನ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಚಿಕಿತ್ಸೆಗೂ ಹಣವಿಲ್ಲದೇ ಪರದಾಡುವಂಥ ಸ್ಥಿತಿಯೂ ಈಗ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಗರ್ಭಕೋಶ ತೆಗೆಸಿಕೊಂಡವರಲ್ಲಿ 40 ವರ್ಷದೊಳಗಿನವರೇ ಹೆಚ್ಚು ಎಂಬುದು ಇನ್ನಷ್ಟು ದುಃಖಕರ ಸಂಗತಿಯಾಗಿದೆ.
ಈ ಹೆಣ್ಣು ಮಕ್ಕಳಲ್ಲಿ ಇಂದು ನೀರು ತುಂಬಿದ ಕೊಡ ಎತ್ತಲೂ ಆಗುತ್ತಿಲ್ಲ. ಜತೆಗೆ ಕೂದಲು ಉದುರುವುದು, ಸೋಂಟ ನೋವು, ನರ ದೌರ್ಬಲ್ಯ, ಬೆನ್ನು ನೋವಿನಂಥ ಸ್ಥಿತಿಯೂ ಉದ್ಭವವಾಗಿದೆ.
ಮುಗ್ಧರನ್ನು ನಮ್ಮ ವ್ಯವಸ್ಥೆಗಳು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಆಗ ಮುಗ್ಧ ಮತ್ತು ಅವಿದ್ಯಾವಂತ ಮಹಿಳೆಯರು ಹೊಟ್ಟೆನೋವು, ಮುಟ್ಟು ಸಮಸ್ಯೆ, ಬಿಳಿ ಮುಟ್ಟು, ಉರಿಮೂತ್ರದಂಥ ಸಹಜ ಸಮಸ್ಯೆಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದರು. ಆಗ ಕೆಲವು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿ, ಕೆಲವು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡದೆಯೆ ಗರ್ಭಊತ, ಅಪೆಂಡಿಕ್ಸ್, ಗರ್ಭ ಕ್ಯಾನ್ಸರ್, ಗರ್ಭಚೀಲದ ಮೇಲೆ ಗುಳ್ಳೆಯಾಗಿದ್ದು ಪ್ರಾಣಕ್ಕೆ ಅಪಾಯವಾಗಿದೆ ಎಂದು ಹೆದರಿಸಿ ಗರ್ಭಕೋಶವನ್ನೇ ತೆಗೆದಿದ್ದರು. ಅಲ್ಲದೆ ಗರ್ಭಕೋಶ ತೆಗೆಸಿಕೊಂಡ ಮಹಿಳೆಯರಿಗೆ ಸರಕಾರದ ಕಡೆಯಿಂದ ಒಂದೂವರೆಯಿಂದ ಎರಡು ಲಕ್ಷ ರೂ.ಗಳವರೆಗೆ ಸಹಾಯಧನ ಬರುತ್ತಿತ್ತು. ಈ ಬಗ್ಗೆ ಈ ಮಹಿಳೆಯರಿಗೆ ಮಾಹಿತಿಯೇ ಇರಲಿಲ್ಲ. ಆದರೆ ಇವರಿಗೆ ಗರ್ಭಕೋಶ ತೆಗೆಸಿ, ಆಸ್ಪತ್ರೆಗಳೇ ಹಣ ದೋಚಿವೆ ಎಂಬ ಆರೋಪವೂ ಕೇಳಿಬಂದಿತ್ತು.
ಈ ರೀತಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಕೇವಲ ಪರಿಹಾರ ಘೋಷಿಸಿದರೆ ಮಾತ್ರ ಸಾಲದು. ದೀರ್ಘಾವಧಿವರೆಗೆ ಇವರ ಜೀವನ ನಿರ್ವಹಣೆಗೂ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಮಹಿಳಾ ಸಂಘಟನೆಗಳು, ಸರಕಾರವು ಇವರಿಗೆ ಸ್ವ-ಉದ್ಯೋಗ ಅಥವಾ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹವನ್ನೂ ಮಾಡಿವೆ.
ಇಡೀ ಪ್ರಕರಣ ನೋಡಿದರೆ, ನೊಂದ ಮಹಿಳೆಯರಿಗೆ ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೇ ಅನ್ನಿಸುತ್ತದೆ. ಅಷ್ಟೇ ಅಲ್ಲ, ಅದು ಸರಕಾರದ ಜವಾಬ್ದಾರಿ ಕೂಡ. ಜತೆಗೆ ಇಂಥ ಮುಗ್ಧ ಜನರ ಬದುಕಿನ ಜತೆ ಆಟವಾಡುವಂಥವರಿಗೆ ಕಠಿನ ಶಿಕ್ಷೆಯೂ ಆಗಬೇಕು. ಇಂಥ ಹೊತ್ತಿನಲ್ಲೇ ಸಿಎಂ ಅವರು ಸಮಗ್ರ ತನಿಖೆ ಮತ್ತು ಪರಿಹಾರದ ಮಾತು ಹೇಳಿರುವುದು ಉತ್ತಮ ನಡೆಯೇ ಆಗಿದೆ. ಆದರೆ ಇದು ಶೀಘ್ರ ಗತಿಯಲ್ಲಿ ಆಗಬೇಕು. ಆಗಷ್ಟೇ ನೊಂದವರಿಗೆ ನ್ಯಾಯ ಸಿಕ್ಕಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.