Language; ತುಳು ಭಾಷೆಯ ದೀನ ಸ್ಥಿತಿಗೆ ಕಾರಣರಾರು?
Team Udayavani, Dec 3, 2024, 6:55 AM IST
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಅತ್ಯಂತ ಪ್ರಾಚೀನ ಭಾಷೆ ಕೂಡ. ಹಲವು ವಿಧದ ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ತುಳುನಾಡಿನಲ್ಲಿ ತುಳು ಭಾಷೆಯೇ ಜನರನ್ನು ಒಂದಾಗಿಸಿರುವ ಜಾತ್ಯತೀತ ನಾಯಕ ಎಂದರೆ ತಪ್ಪಾಗಲಾರದು. ತಮ್ಮ ನೆಲದ ಭಾಷೆಯಾದ, ಸಂಸ್ಕೃತಿಯ ಕೊಂಡಿಯಾದ ತುಳುವಿಗೆ ತುಳುವರೆಷ್ಟು ಬದ್ಧರಾಗಿದ್ದಾರೆ ಎಂಬುದು ಸದ್ಯದ ಜಿಜ್ಞಾಸೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ಸರ್ವವಿದಿತ ಸತ್ಯ. ಕನ್ನಡ ಸಹಿತ ಯಾವ ಭಾಷೆಯನ್ನೂ ತುಳುವರು ವಿರೋಧಿಸಿದ್ದೇ ಇಲ್ಲ. ಅಷ್ಟೇ ಅಲ್ಲ, ಕನ್ನಡವನ್ನು ದೊಡ್ಡಮ್ಮನಾಗಿ ಸ್ವೀಕರಿಸಿರುವ ತುಳುವರು ತಾಯಿ ಭಾಷೆ ತುಳುವನ್ನು ಮನೆಯೊಳಗಿಟ್ಟು ದೊಡ್ಡಮ್ಮನ ತೆಕ್ಕೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡು ಬಿಟ್ಟರು. ಕೂಡುಕುಟುಂಬದಲ್ಲಿ ದೊಡ್ಡಮ್ಮನ ಪ್ರೀತಿ; ತಾಯಿಯ ಪ್ರೀತಿಗಿಂತಲೂ ಮಿಗಿಲು. ದೊಡ್ಡಮ್ಮಳೂ ತುಳುವರನ್ನು ಕೈಬಿಡಲಿಲ್ಲ. ತುಳುವರಿಗೆ ಕನ್ನಡ ಭಾಷೆ ಚೆನ್ನಾಗಿ ಒಲಿದಿದೆ. ಸ್ವತ್ಛ, ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಬಳಸಿ, ಬೆಳೆಸುವಲ್ಲಿ ತುಳುವರದು ದೊಡ್ಡ ಪಾತ್ರವಿದೆ.
ಆದರೆ ತುಳು ಭಾಷೆಗೆ ತುಳು ಭಾಷಿಕರ ಮುಗ್ಧತೆ ಹಾಗೂ ಸಹಿಷ್ಣು ಗುಣವೇ ಕೊಡಲಿ ಕಾವಾಗಿದೆ ಎನ್ನಬಹುದು. ಇಲ್ಲಿ ಸಹಿಷ್ಣುತೆ ಎಂದಿರುವುದು ಎಲ್ಲವನ್ನೂ ತಮಗೆ ತಾವೇ ಹೇರಿಕೊಂಡಿರುವುದರ ಅರ್ಥದಲ್ಲಿ. ಆಧುನಿಕರಾಗುವ ಭರದಲ್ಲಿ ತಮ್ಮತನವನ್ನು ಬಿಟ್ಟುಕೊಟ್ಟುದುದರ ಅರ್ಥದಲ್ಲಿ. ಏಕೆಂದರೆ, ಮನೆಯೊಳಗೆ ಉಳಿದ ತುಳುವ ತಾಯಿ ಹೊರ ಪ್ರಪಂಚವನ್ನೇ ಕಾಣಲಿಲ್ಲ. ಶಾಲೆ, ಕಚೇರಿಗಳಲ್ಲಿ ತುಳು ಮಾತನಾಡುವುದು ಅಪರಾಧ ಎಂಬಂಥ ಮನಃಸ್ಥಿತಿ/ ಪರಿಸ್ಥಿತಿ ಸೃಷ್ಟಿಯಾಯಿತು. ತುಳು ಭಾಷೆ ವ್ಯಾವಹಾರಿಕ ಭಾಷೆಯಾಗಿ ಹಾಗೂ ಸೀಮಿತ ಕ್ಷೇತ್ರಕ್ಕೆ ಒಳಪಟ್ಟು ಬಳಸಲ್ಪಡಲಾರಂಭಿಸಿತು. ತುಳುನಾಡಿನಲ್ಲಿ ಹುಟ್ಟಿ ಬಳಿಕ ಕೇರಳಕ್ಕೆ ಹೋದ ತುಳು ಲಿಪಿಯು ಅಲ್ಲಿ ಹೊಸ ರೂಪದಲ್ಲಿ ಪ್ರಸಿದ್ಧಿ ಹೊಂದಿದರೆ, ತನ್ನ ಮೂಲ ನೆಲದಲ್ಲಿ ಅಪರಿಚಿತವಾಯಿತು! ತುಳುವಿಗೆ ಲಿಪಿ ಇಲ್ಲ ಎಂದು ದೃಢವಾಗಿ ಹೇಳುವಷ್ಟು ಅಜ್ಞಾನ ಇಲ್ಲಿ ವ್ಯಾಪಿಸಿತು. ಇತ್ತೀಚಿನ ವರ್ಷಗಳಲ್ಲಿ ಶಾಲೆ, ಕಾಲೇಜುಗಳಲ್ಲಿ ತುಳು ಕಲಿಸಲಾಗುತ್ತಿದೆ. ಸಂಘ-ಸಂಸ್ಥೆಗಳು ವಿವಿಧ ವೇದಿಕೆಗಳ ಮೂಲಕ ತುಳು ಲಿಪಿ ಕಲಿಸುವ ಪ್ರಯತ್ನಗಳನ್ನು ಮಾಡುತ್ತಿವೆ ಎಂಬುದು ಕೊಂಚ ಸಮಾಧಾನದ ಸಂಗತಿ.
ತುಳುನಾಡಿನಲ್ಲಿ ಊರಿನ ಹೆಸರುಗಳನ್ನು, ಮನೆ ಹೆಸರುಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಯಿತು. ಊರಿನ ಇತಿಹಾಸ, ಮನೆಯ, ಜಾಗದ ಹೆಸರಿನ ಅರ್ಥಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡದೆ, ತೋಚಿದಂತೆ ಭಾಷಾಂತರಿಸಿ ಬೋರ್ಡ್ ಬರೆಸಿಕೊಳ್ಳಲಾಯಿತು. ಹೊಸ ಅರ್ಥ ಬರುವಂತೆ ಮಾತ್ರವಲ್ಲ; ಕೆಲವು ಕಡೆ ಅರ್ಥವೇ ಇಲ್ಲದ ರೀತಿಯಲ್ಲಿ ಕೆಟ್ಟದಾಗಿ ಭಾಷಾಂತರ ಮಾಡಿಕೊಂಡು ಹೊಸ ಹೆಸರು ಬಳಕೆಗೆ ತಂದರು. ಅಷ್ಟೇ ಏಕೆ? ಸದಾ ನಿಷ್ಠೆ, ಭಕ್ತಿಯಿಂದ ಆರಾಧಿಸುವ ತಮ್ಮ ಕೆಲವು ದೈವಗಳ ಹೆಸರುಗಳನ್ನೂ ಜನರು ಕನ್ನಡಮಯವಾಗಿಸಿದರು.
ಇವನ್ನೆಲ್ಲ ಹೊರಗಿನವರು ಯಾರಾದರೂ ಮಾಡಿದರೆ? ಜನರು ಸುಶಿಕ್ಷಿತರಾದಂತೆ ಈ ಕೆಟ್ಟ ಭಾಷಾಂತರ ಎನ್ನುವ ಅಪಸವ್ಯವು ಹೆಚ್ಚುತ್ತ ಸಾಗಿತು ಎನ್ನಬಹುದು. ಮೊದಲೇ ತುಳು ಪ್ರಾಚೀನ ಭಾಷೆ. ಆಧುನಿಕ ವಸ್ತುಗಳು, ವಿಚಾರಗಳು ಹುಟ್ಟುವ ಮೊದಲೇ ಹುಟ್ಟಿ ಬೆಳೆದ ಭಾಷೆ. ಇನ್ನು ಆ ಆಧುನಿಕ ವಸ್ತುಗಳಿಗೆ, ಅವು ಮಾಡುವ ಕೆಲಸಗಳಿಗೆ ತುಳುವಿನಲ್ಲಿ ಸೂಕ್ತ ಪದವೆಲ್ಲಿದೆ? ಮನೆಯೊಳಗೆ ಕೂಡಿ ಹಾಕಲ್ಪಟ್ಟ ತುಳುವಿನಲ್ಲಿ ಕಾಲಕಾಲಕ್ಕೆ ಆಗಬೇಕಾದ ಪದಸೃಷ್ಟಿಯಂಥ ಪರಿಷ್ಕರಣೆಗಳು ನಡೆಯಲೇ ಇಲ್ಲ.
ಅತ್ತ ಕಡೆ ಇಂಗ್ಲಿಷ್ ಮತ್ತು ಹಿಂದಿ ಪದಗಳು ತುಳು ಪದಗಳಂತೆಯೇ ಕೊನೆಯಲ್ಲಿ ಅರ್ಧ ಉಚ್ಚಾರ ಹೊಂದಿರುವುದರಿಂದ ತುಳುವಿಗೆ ಅವೂ ಚೆನ್ನಾಗಿ ಒಗ್ಗಿಕೊಂಡವು. ಕನ್ನಡ ಪದಗಳ ಜತೆಗೆ ಅವೂ ಸೇರಿಕೊಂಡು ಮೂಲ ಸೊಗಡು ಕಳೆದುಕೊಂಡ ಆಧುನಿಕ ತುಳು ಬೆಳೆದು ನಿಂತಿತು. ಮನೆಯೊಳಗಡೆ ಮುದುರಿ ಕುಳಿತಿದ್ದ ಹಳೆಯ ಅಚ್ಚ ತುಳು ಭಾಷೆಯು ದೈವಗಳ ಬಾಯಿ ಹೊಕ್ಕು ಕೈ ಮುಗಿಸಿಕೊಂಡಿತು. ಸದ್ಯಕ್ಕೆ ದೈವಗಳ ಬಾಯಲ್ಲಿ ಮಾತ್ರ ಅಚ್ಚ ತುಳು ಉಳಿದುಕೊಂಡಿದೆ ಎನ್ನಬಹುದು.
ತಲೆಮಾರಿನಿಂದ ತಲೆಮಾರಿಗೆ ತುಳುವಿನ ಭಾಷಾಶುದ್ಧತೆ ಮಾಸುತ್ತ ಹೋಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಾಮಾನ್ಯ ಜನರೂ ತಮ್ಮಲ್ಲಿ ಬಳಕೆಯಲ್ಲಿದ್ದ ತುಳು ಪದಗಳನ್ನು ಬದಿಗೆ ಸರಿಸಿ ಆ ಜಾಗದಲ್ಲಿ ಆಂಗ್ಲ ಪದ, ಕನ್ನಡ ಪದಗಳನ್ನು ಬಳಸುತ್ತಿದ್ದಾರೆ. ಹೊಸ ತಲೆಮಾರುಗಳಿಗೆ ಕನ್ನಡ ಪದ, ತುಳು ಪದಗಳ ನಡುವಿನ ವ್ಯತ್ಯಾಸದ ಅರಿವಿಲ್ಲ. ಅಲ್ಲದೆ, ತುಳುವಿನಲ್ಲಿ ಯಾವುದಕ್ಕೆ ಅರ್ಧ ಉಚ್ಚಾರ, ಎಲ್ಲಿ ಪೂರ್ಣ ಉಚ್ಚಾರ ಎಂಬುದರ ಕುರಿತು ಅವರಿಗೆ ಗೊಂದಲವಿರುವಂತಿದೆ. ಒಂದೇ ರೀತಿಯ ಆದರೆ ಉಚ್ಚಾರ ವ್ಯತ್ಯಾಸದಲ್ಲಿ ಭಿನ್ನ ಅರ್ಥ ಸೂಚಿಸುವ ಪದಗಳ ಬಗ್ಗೆ ಅರಿವಿಲ್ಲ. ಕನ್ನಡ ವ್ಯಾಕರಣದ ನಿಯಮಗಳನ್ನೇ ತುಳುವಿಗೆ ಯಥಾವತ್ತಾಗಿ ಅನ್ವಯಿಸಲು ಹೋದಾಗ ಎಡವಟ್ಟುಗಳಾಗುತ್ತಿವೆ. ಹೊಸದಾಗಿ ತುಳು ಕಲಿಯಲು ಇಚ್ಛಿಸುವವರನ್ನು ಇದು ದಾರಿ ತಪ್ಪಿಸಬಹುದು. ಭಾಷೆಯ ಅಸ್ತಿತ್ವಕ್ಕೂ ಇದು ಮಾರಕ.
ತುಳುವರು ತಮ್ಮ ಮೇಲೆ ತಾವೇ ಹೇರಿಕೊಂಡ ಪರಿಸ್ಥಿತಿ ಇದು. ಇದನ್ನು ಸರಕಾರಗಳೇನಾದರೂ ಹೇರಿದ್ದವೆ? ಇತರ ಭಾಷೆಗಳನ್ನು ಕಲಿಯುವಾಗ ಮಾತೃಭಾಷೆಯನ್ನು ಅವಗಣಿಸಿ ಎಂದು ಯಾರಾದರೂ ಹೇಳಿದ್ದರೆ? ತುಳುವರೇ ತಮ್ಮ ಅಜ್ಞಾನದಿಂದ, ಕೀಳರಿಮೆ ಹೊಂದಿ, ತಮ್ಮದೇ ಭಾಷೆಯನ್ನು ವಿಚಿತ್ರವಾಗಿ ಮಾರ್ಪಾಡುಗೊಳಿಸಿ ಕೊಂಡು ಹಂತ ಹಂತವಾಗಿ ಭಾಷೆಯ ಅವನತಿಗೆ ಕಾರಣರಾಗಿ¨ªಾರೆ ಎಂದರೆ ತಪ್ಪಾದೀತೇ?
ಈಗ ತನ್ನ ಮಕ್ಕಳಿಂದಲೇ ಅವಗಣಿಸಲ್ಪಟ್ಟ ತುಳುವ ತಾಯಿ ಈಗಲೋ ಆಗಲೋ ಎನ್ನುವ ಸ್ಥಿತಿಯಲ್ಲಿ¨ªಾಳೆ. ತಾಂತ್ರಿಕವಾಗಿ ತುಳು ವಿಕಿಪೀಡಿಯಾ, ಯುನಿಕೋಡ್ ನಲ್ಲಿ ತುಳು, ಗೂಗಲ್ ಅನುವಾದದಲ್ಲಿ ತುಳು ಇತ್ಯಾದಿ ಬೆಳವಣಿಗೆಗಳು ತುಳು ಭಾಷೆಯ ಬೆಳವಣಿಗೆಗೆ ಪೂರಕವೇ ಹೌದು. ಆದರೆ ಅದನ್ನು ಬಳಸುವ ತುಳುವರ ಭಾಷಾ ಜ್ಞಾನ ಅಭಿವೃದ್ಧಿಗೊಳ್ಳದೆ ಅವೂ ಪ್ರಯೋಜನಕ್ಕೆ ಬಾರದು.
ತುಳು ಭಾಷೆಯ ಬಗ್ಗೆ ನಮ್ಮಲ್ಲಿಯೇ ಅಭಿಮಾನ ಮೂಡದೇ, ಭಾಷೆಯ ಪ್ರಸ್ತುತ ಸ್ಥಿತಿಯ ಅರಿವು ಉಂಟಾಗದೆ, ಭಾಷೆಯನ್ನು ಉಳಿಸುವ ಅಗತ್ಯದ ಬಗ್ಗೆ ತಿಳಿವಳಿಕೆ ಹುಟ್ಟದೇ ಇದ್ದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಅವನತಿ ಹೊಂದಿದ ಭಾಷೆಗಳ ಪಟ್ಟಿಗೆ ತುಳು ಸೇರ್ಪಡೆಗೊಳ್ಳುವುದರಲ್ಲಿ ಅನುಮಾನ ಇಲ್ಲ.
ಯುವಜನರು ನಗರಗಳಿಗೆ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ ತುಳುವಿನ ಪ್ರಾದೇಶಿಕ ವೈವಿಧ್ಯವನ್ನು ಉಳಿಸಿಕೊಳ್ಳುವುದೂ ಇನ್ನೊಂದು ಸವಾಲು. ಅಲ್ಲದೆ, ತುಳುವಿನ ಉಪ ಪ್ರಭೇದಗಳ ಸಂರಕ್ಷಣೆ ಕೂಡ ಅತ್ಯಗತ್ಯ.
ಭಾಷೆಯ ಬಗ್ಗೆ ಅಭಿಮಾನ, ಕಾಳಜಿಯು ಮನೆಯಲ್ಲಿ ಹುಟ್ಟಬೇಕು. ಯಾವ ಮನೆಯೆಂಬ ಗೂಡಿನೊಳಗೆ ತುಳು ಬಂಧಿಯಾಯಿತೋ, ಅಲ್ಲಿಂದ ತುಳು ಮರುಹುಟ್ಟು ಪಡೆದು ಹೊರಬರಬೇಕು. ಸಮಾಜದಲ್ಲಿ ಮುಕ್ತವಾಗಿ ಮತ್ತು ಸ್ವತ್ಛವಾಗಿ ಬಳಸಲ್ಪಡಬೇಕು. ತುಳುವಿನ ಮೂಲ ಹೆಸರುಗಳೇ ಬರವಣಿಗೆಯಲ್ಲಿ ಬಳಕೆಗೆ ಬರಬೇಕು. ಹೇಗೆ ಕೊಡ
ವರು ಭಾಷೆಯ ನಿಟ್ಟಿನಲ್ಲಿ ತಮ್ಮತನವನ್ನು ಉಳಿಸಿ ಕೊಂಡು ಬಂದಿ¨ªಾರೋ ಅದೇ ರೀತಿ ತುಳುವರೂ ಕೂಡ ತಮ್ಮ ಮನೆಯ ಹೆಸರುಗಳನ್ನು ಅಂಜಿಕೆಯಿ ಲ್ಲದೆ, ಅದೇ ರೀತಿ ಬರೆಯುವಂತಾಗಬೇಕು. ತಮ್ಮ ಹಿರಿಯರ ಹೆಸರುಗಳನ್ನು ಬದಲಾಯಿಸದೆ ಯಥಾರೀತಿ ಬರೆಯುವಂತೆ, ಹೇಳುವಂತಾಗಬೇಕು. ದಾಖಲೆಗಳಲ್ಲಿ, ಬಳಕೆಯಲ್ಲಿ ತುಳು ತನ್ನ ಮೂಲ ರೂಪ ಹಿಡಿದಿಟ್ಟುಕೊಳ್ಳಬೇಕು.
ಈ ರೀತಿಯಲ್ಲಿ ತಾಯಿ ಭಾಷೆಯನ್ನು ಮೊದಲು ಚೆನ್ನಾಗಿ ಕಲಿತು, ಬಳಸಲು ಆರಂಭಿಸಿ, ಬಳಿಕ ರಾಜ್ಯ ಭಾಷೆ, ರಾಷ್ಟ್ರೀಯ ಭಾಷೆ (ಇದ್ದಲ್ಲಿ), ಅಂತಾರಾಷ್ಟ್ರೀಯ ಭಾಷೆಗಳನ್ನು ಕಲಿಯುವುದು ಉತ್ತಮ. ಎಲ್ಲವನ್ನೂ ಒಟ್ಟಿಗೆ ಕಲಿತರಂತೂ ಭಾರೀ ಪಾಂಡಿತ್ಯವೇ ಲಭಿಸೀತು. ಕೃಷಿ ಸಂಸ್ಕೃತಿಯೊಂದಿಗೆ ಬೆಸುಗೆ ಹೊಂದಿರುವ ತುಳು ಭಾಷೆಯು ಕೃಷಿಯ ಮಾದರಿಯ ಅಳಿವಿನ ಹಾದಿ ಹಿಡಿಯದಂತೆ ಉಳಿಸುವ ನಿಟ್ಟಿನಲ್ಲಿ ತೌಳವರು ದೃಢಸಂಕಲ್ಪ ಕೈಗೊಂಡು ಕಾರ್ಯಪ್ರವೃತ್ತರಾಗಬೇಕು. ತಾಯಂದಿರು ಕಾಳಜಿ ವಹಿಸಬೇಕು. ಭಾಷೆಯ ಬಗೆಗೆ ಜನರಲ್ಲಿನ ಅಜ್ಞಾನ, ಕೀಳರಿಮೆಯನ್ನು ತೊಡೆದುಹಾಕಲು ತುಳುಪರವಾದ ಸಂಘ-ಸಂಸ್ಥೆಗಳು ಪ್ರಯತ್ನಿಸಬೇಕು. ಹೀಗಾದಾಗಲಷ್ಟೇ ತುಳುವಿಗೆ ತನ್ನ ನೆಲದಲ್ಲಿ ಗಟ್ಟಿ ನೆಲೆ ಸಿಕ್ಕೀತು. ಸ್ಥಾನಮಾನವೂ ದೊರೆತೀತು.
ಕುದ್ಯಾಡಿ ಸಂದೇಶ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Cap Auction: ಬ್ರಾಡ್‌ಮನ್ ಕ್ಯಾಪ್ 2.11 ಕೋಟಿ ರೂ.ಗೆ ಹರಾಜು
Cricket: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20: ಕರ್ನಾಟಕವನ್ನು ಬಗ್ಗುಬಡಿದ ಬರೋಡ
Hockey: ವನಿತಾ ಜೂ. ಏಷ್ಯಾ ಕಪ್ ಹಾಕಿ: ಭಾರತ ತಂಡ ಮಸ್ಕತ್‌ಗೆ
Udupi: ಗೀತಾರ್ಥ ಚಿಂತನೆ-113: ತನ್ನ ದೃಷ್ಟಾಂತವನ್ನೇ ಕೊಟ್ಟ ಶ್ರೀಕೃಷ್ಣ
Pro Kabaddi: ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ಪಂದ್ಯ ಟೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.