ಮಾಡಿದ್ದುಣ್ಣೋ ಮಹಾರಾಯ ಅಂದರೆ ಇದೇ ಏನು? ಲಾಲೂಗೆ ಮತ್ತೆ ಮೇವು
Team Udayavani, May 9, 2017, 3:45 AM IST
ಕಾನೂನಿನ ಕೈಗಳು ದೀರ್ಘವೂ ಪ್ರಬಲವೂ ಆಗಿದೆ ಎನ್ನುವುದನ್ನು ಮೇವು ಹಗರಣದಲ್ಲಿ ಸುಪ್ರೀಂ ಕೋರ್ಟ್ ಮತ್ತೂಮ್ಮೆ ತೋರಿಸಿಕೊಟ್ಟಿದೆ. ಮೇವು ಹಗರಣದ ಮರುವಿಚಾರಣೆಗೆ ಅದರ ಆದೇಶ ಬಿಹಾರ ಮಾತ್ರವಲ್ಲದೆ, ರಾಷ್ಟ್ರ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ.
ಬಿಹಾರದ ಮಾಜಿ ಸಿಎಂ, ಹಾಲಿ ಮೈತ್ರಿ ಸರಕಾರದ ಸೂತ್ರಧಾರನಾಗಿರುವ ಲಾಲೂ ಪ್ರಸಾದ್‌ಗೆ ಈಗ ಸಂಕಷ್ಟದ ಕಾಲ. ಲಾಲೂ ಮತ್ತು ಅವರ ಮಕ್ಕಳು ಭೂಕಬಳಿಕೆ ಮಾಡಿ 200 ಕೋ. ರೂ.ಗಳ ಮಾಲ್ ನಿರ್ಮಿಸಿದ ಹಗರಣವನ್ನು ಇತ್ತೀಚೆಗೆ ಬಿಜೆಪಿ ಎಳೆಎಳೆಯಾಗಿ ಬಹಿರಂಗಪಡಿಸಿದೆ. ಇದರ ಬೆನ್ನಿಗೆ ಸುದ್ದಿ ವಾಹಿನಿಯೊಂದು ಜೈಲಿನಲ್ಲಿರುವ ಗೂಂಡಾ ರಾಜಕಾರಣಿ ಶಹಾಬುದ್ದೀನ್ ಜತೆಗೆ ಲಾಲೂ ಮಾತುಕತೆಯ ಆಡಿಯೋ ಟೇಪ್ ಬಹಿರಂಗಪಡಿಸಿದೆ. ಆರ್‌ಜೆಡಿಯ ಶಾಸಕರು, ಸಚಿವರು ತಮ್ಮ ವಾಸಕ್ಕೆ ಸರಕಾರ ನೀಡಿರುವ ಬಂಗಲೆಗಳನ್ನು ಬಾಡಿಗೆಗೆ ನೀಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ವಿಷಯ ಬಯಲಾಗಿದೆ. ಇದೀಗ ಲಾಲೂ ಅವರ ರಾಜಕೀಯ ಬದುಕಿನ ಅತಿದೊಡ್ಡ ಕಳಂಕವಾಗಿರುವ ಮೇವು ಹಗರಣಕ್ಕೆ ಸುಪ್ರೀಂ ಕೋರ್ಟ್ ಮರುಜೀವ ನೀಡಿ ಈ ರಾಜಕೀಯ ವಿದೂಷಕನ ಮಹತ್ವಾಕಾಂಕ್ಷೆಗೆ ತಣ್ಣೀರು ಸುರಿದಿದೆ.
ಮೇವು ಹಗರಣದಲ್ಲಿ ಬಾಕಿ ಉಳಿದಿರುವ ಐದು ಕೇಸುಗಳನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಬೇಕು ಹಾಗೂ 9 ತಿಂಗಳ ಒಳಗಾಗಿ ವಿಚಾರಣೆ ಮುಗಿಯಬೇಕೆಂದು ಆದೇಶಿಸಿದೆ ಸುಪ್ರೀಂ ಕೋರ್ಟ್. ಲಾಲೂ ಬಿಹಾರ ಮುಖ್ಯಮಂತ್ರಿಯಾಗಿದ್ದ ಕಾಲದ ಹಗರಣವಿದು. ಪಶು ಸಂಗೋಪನೆ ಇಲಾಖೆ ಜಾನುವಾರುಗಳಿಗೆ ಮೇವು ಮತ್ತು ಔಷಧಿ ಪೂರೈಸಲು ಮೀಸಲಿರಿಸಿದ್ದ ಹಣವನ್ನು ನಕಲಿ ಬಿಲ್ ಸೃಷ್ಟಿಸುವ ಮೂಲಕ ಲಪಟಾಯಿಸಿ ಬೊಕ್ಕಸಕ್ಕೆ ಸುಮಾರು 950 ಕೋ. ರೂ. ನಷ್ಟ ಉಂಟು ಮಾಡಿದ ಈ ಹಗರಣ “ಮೇವು ಹಗರಣ’ವೆಂದೇ ಜನಜನಿತ. ಲಾಲೂರ ರಾಜಕೀಯ ಬದುಕಿನುದ್ದಕ್ಕೂ ಇನ್ನಿಲ್ಲದಂತೆ ಕಾಡಿದ ಈ ಹಗರಣ 21 ವರ್ಷಗಳ ಬಳಿಕ ಮತ್ತೆ ಗೋರಿಯಿಂದ ಎದ್ದು ಕುಳಿತಿರುವುದು ರಾಷ್ಟ್ರ ರಾಜಕಾರಣದಲ್ಲೂ ವ್ಯಾಪಕ ಪರಿಣಾಮ ಉಂಟು ಮಾಡಲಿದೆ ಎಂದು ಭಾವಿಸಲಾಗಿದೆ. ಬಿಹಾರದ ಬಿಜೆಪಿ ನಾಯಕ ಸುಶೀಲ್‌ಕುಮಾರ್ ಮೋದಿ ಆರ್‌ಜೆಡಿ ಮುಖ್ಯಸ್ಥನ ರಾಜಕೀಯ ಬದುಕಿನ ಅಂತ್ಯ ಇದು ಎಂದು ಸಂಭ್ರಮಿಸುತ್ತಿದ್ದರೂ ಲಾಲೂ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವ ಆಸಾಮಿಯಲ್ಲ. ಮೇವು ಹಗರಣಕ್ಕೆ ಸಂಬಂಧಿಸಿ ಲಾಲೂ ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ಜೈಲಿಗೆ ಹೋಗಿ ಬಂದ ಅನುಭವ ಅವರಿಗಿದೆ. ಆದರೆ ಅವರನ್ನು ದೀರ್ಘ ಕಾಲ ಜೈಲಿನಲ್ಲಿ ಬಂಧಿಸಿಡುವಷ್ಟು ನಮ್ಮ ಕಾನೂನು ವ್ಯವಸ್ಥೆ ಸಮರ್ಥವಾಗಿಲ್ಲ. ಜೈಲಿನಲ್ಲಿರಲಿ ಅಥವಾ ಅಧಿಕಾರದಲ್ಲಿರಲಿ ರಾಜಕೀಯ ತಂತ್ರಗಾರಿಕೆಯಲ್ಲಿ ಲಾಲೂಗೆ ಸರಿಸಾಟಿಯಿಲ್ಲ. ಕೋರ್ಟು ಕಚೇರಿ ಅಲೆದಾಟ, ಜೈಲು, ಜಾಮೀನು ಇವೆಲ್ಲ ಲಾಲೂ ಬದುಕಿನ ಅವಿಭಾಜ್ಯ ಚಟುವಟಿಕೆಗಳು.
ಹೀಗಾಗಿ ಸುಪ್ರೀಂ ಕೋರ್ಟು ಆದೇಶ ಸದ್ಯಕ್ಕೆ ಲಾಲೂ ಮೇಲೆ ಯಾವ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ನೆಪಕ್ಕಾದರೂ ಅವರು ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ. ಆದಾಗ್ಯೂ ಬಿಹಾರ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಈ ಆದೇಶ ಬೀರಬಹುದಾದದ ಪರಿಣಾಮವನ್ನು ನಿರ್ಲಕ್ಷಿಸುವಂತಿಲ್ಲ. ಸದ್ಯದಲ್ಲೇ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ. ಚುನಾವಣಾ ರಾಜಕೀಯದಿಂದ ಅವರು ಇನ್ನೂ ಹಲವು ವರ್ಷ ದೂರವಿರಬೇಕಾಗುತ್ತದೆ. ಬಿಹಾರದ ರಾಜಕೀಯ ಸಮೀಕರಣವೂ ಬದಲಾಗುವ ಸಾಧ್ಯತೆಯಿದೆ. ಈ ಕುರಿತಾದ ಸುಳಿವು ಈಗಾಗಲೇ ಸಿಕ್ಕಿದೆ. ಆರ್‌ಜೆಡಿ ಮೈತ್ರಿಯಿಂದ ಕಳಚಿಕೊಂಡರೆ ನಾವು ಬೆಂಬಲ ನೀಡಲು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ, ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ರವಾನಿಸಿದೆ. ಅಲ್ಲದೆ ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಯ ಜತೆಗೆ ಏಗುವುದು ಕೂಡ ನಿತೀಶ್‌ಗೆ ಕಷ್ಟವಾಗಬಹುದು. ಈಗಲೇ ಅವರಿಗೆ ಉಸಿರುಕಟ್ಟಿದ ಅನುಭವವಾಗುತ್ತಿದ್ದು 2020ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ್ತೆ ಮಹಾಘಟಬಂಧನ್ ಜತೆ ಕೈಜೋಡಿಸುವ ಸಾಧ್ಯತೆ ಕಡಿಮೆ. ಹೀಗಾದರೆ ಅದು ನೇರವಾಗಿ ದಿಲ್ಲಿ ರಾಜಕಾರಣದ ಮೇಲೆ ಪರಿಣಾಮ ಬೀರುತ್ತದೆ. ಸುಪ್ರೀಂ ಕೋರ್ಟ್ ಆದೇಶಿಸಿದಂತೆ 9 ತಿಂಗಳಲ್ಲಿ ವಿಚಾರಣೆ ಮುಗಿದು ಲಾಲೂ ಮತ್ತೂಮ್ಮೆ ಜೈಲಿಗೆ ಹೋಗುವ ಪ್ರಸಂಗ ಎದುರಾದರೆ ಆರ್‌ಜೆಡಿ ಅರಾಜಕವಾಗುತ್ತದೆ. ಸಮಾಜವಾದಿ ಪಾರ್ಟಿಯಲ್ಲಾದಂತೆ ಆರ್‌ಜೆಡಿಯಲ್ಲೂ ಅಧಿಕಾರಕ್ಕಾಗಿ ಯಾದವೀ ಕಲಹ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕಾನೂನಿನ ಕೈಗಳು ದೀರ್ಘವೂ ಪ್ರಬಲವೂ ಆಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಮತ್ತೂಮ್ಮೆ ತೋರಿಸಿಕೊಟ್ಟಿದೆ. ಆದರೆ ಲಾಲೂರಂತಹ ದಪ್ಪ ಚರ್ಮದ ರಾಜಕಾರಣಿಗಳಿಗೆ ಮಾತ್ರ ಇದು ಅರ್ಥವಾಗುತ್ತಿಲ್ಲ. ಜೀವನದುದ್ದಕ್ಕೂ ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಅವಕಾಶವಾದಿ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಲಾಲೂರಂಥ ರಾಜಕಾರಣಿಗಳನ್ನು ದೇಶ ಇನ್ನೆಷ್ಟು ಸಮಯ ಸಹಿಸಿಕೊಳ್ಳಬೇಕು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.