ಮನಸ್ಸಿಗೆ ಚಿಕಿತ್ಸೆ ಯಾವಾಗ?
ಪ್ರತಿ 7 ಜನರಲ್ಲಿ ಒಬ್ಬರಿಗೆ ಮಾನಸಿಕ ಸಮಸ್ಯೆ
Team Udayavani, Dec 25, 2019, 6:46 AM IST
ಮಾನಸಿಕ ಸಮಸ್ಯೆ ಎಂದಾಕ್ಷಣ “ಹುಚ್ಚು’ ಎಂದು, ಮಾನಸಿಕ ಆಸ್ಪತ್ರೆ ಎಂದರೆ “ಹುಚ್ಚಾಸ್ಪತ್ರೆ’ ಎಂಬ ತಪ್ಪುಕಲ್ಪನೆ ದೂರಮಾಡುವತ್ತಲೂ ಪ್ರಯತ್ನ ನಡೆಯಬೇಕಿದೆ. ಜನರು ಹಿಂಜರಿಕೆಯಿಲ್ಲದೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಂಥ ವಾತಾವರಣ ಮನೆಯಲ್ಲಿ ಮತ್ತು ಸಮಾಜದಲ್ಲಿ ಸೃಷ್ಟಿಯಾದಾಗ ಮಾತ್ರ ಸ್ವಸ್ಥ ಭಾರತ ನಿರ್ಮಾಣವಾಗಲು ಸಾಧ್ಯ.
ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ನಿಷ್ಕಾಳಜಿ ಇದೆ ಎನ್ನುವುದಕ್ಕೆ ಕನ್ನಡಿ ಹಿಡಿಯುವಂತಿದೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ಒಂದು ವರದಿ. 1990 2017ರವರೆಗಿನ ಈ ಅಧ್ಯಯನ ಮಾಪನದ ಪ್ರಕಾರ ಭಾರತದಲ್ಲಿ ಪ್ರತಿ 7 ಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಉತ್ತರ ಭಾರತದಲ್ಲಿ ಮಕ್ಕಳು ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆಅಧಿಕವಿದ್ದರೆ, ದಕ್ಷಿಣದಲ್ಲಿ, ಅಂದರೆ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಪ್ರೌಢರು ಮಾನಸಿಕ ಸಮಸ್ಯೆಗಳಿಂದ ಹೆಚ್ಚು ಬಳಲುತ್ತಿದ್ದಾರೆ.
ದಕ್ಷಿಣದಲ್ಲಿ ತೀವ್ರತರ ಮನೋಕಾಯಿಲೆಗಿಂತಲೂ ಖನ್ನತೆ, ದುಗುಡ ಅನುಭವಿಸುವವರ ಸಂಖ್ಯೆ ಅಧಿಕವಿದೆ. ಗಾಬರಿ ಹುಟ್ಟಿಸಬೇಕಾದ ಸಂಗತಿಯೆಂದರೆ, ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ದೇಶವಾಸಿಗಳ ಪ್ರಮಾಣ 1990ಕ್ಕೆ ಹೋಲಿಸಿದರೆ ದ್ವಿಗುಣಗೊಂಡಿರುವುದು. 2017ರ ವೇಳೆಗೆ ದೇಶದಲ್ಲಿ 19.73 ಕೋಟಿ ಜನರು ಒಂದಲ್ಲ ಒಂದು ರೀತಿಯ ಮನೋರೋಗಕ್ಕೆ ತುತ್ತಾಗಿದ್ದಾರೆ ಎನ್ನುತ್ತದೆ ಈ ವರದಿ.
ದೇಶವಾಸಿಗಳನ್ನು ಹೆಚ್ಚು ಕಾಡುತ್ತಿರುವ ಮನೋ ಸಮಸ್ಯೆಗಳಲ್ಲಿ ಮೊದಲೆರಡು ಸ್ಥಾನಗಳಲ್ಲಿ ಖನ್ನತೆ ಮತ್ತು ದುಗುಡ ಸಂಬಂಧಿ ಸಮಸ್ಯೆಗಳಿದ್ದರೆ, ನಂತರದ ಸ್ಥಾನದಲ್ಲಿ ಸ್ಕಿಝೋಫ್ರೀನಿಯಾ ಮತ್ತು ಬೈಪೋಲಾರ್ ಸಮಸ್ಯೆಗಳು ಇವೆ. ದಕ್ಷಿಣ ರಾಜ್ಯಗಳು ಆಧುನಿಕತೆಯ ಪಥದಲ್ಲಿ ಸಾಗುತ್ತಿದ್ದು, ಈ ಕಾರಣಗಳಿಂದಾಗಿ ಅಲ್ಲಿನ ಜನರಿಗೆ ಮಾನಸಿಕ ಒತ್ತಡವೂ ಅಧಿಕವಾಗುತ್ತದೆ ಎನ್ನುತ್ತದೆ ಈ ವರದಿ.
ಗಮನಿಸಬೇಕಾದ ಅಂಶವೆಂದರೆ, ಪುರುಷರಿಗಿಂತಲೂ ಮಹಿಳೆಯರಲ್ಲೇ ಮನೋಸಮಸ್ಯೆಗಳು ಅಧಿಕವಿದ್ದು, ಇದಕ್ಕೆ ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯ, ಪ್ರಸವ ಪೂರ್ವ ಪ್ರಸವಾನಂತರದ ಒತ್ತಡ ಕಾರಣವಾಗುತ್ತವೆ. ಸ್ವಾಸ್ಥ್ಯದ ವಿಚಾರದ ಬಗ್ಗೆ ಸಾಮಾಜಿಕವಾಗಿಯಾಗಲಿ ಅಥವಾ ಸರಕಾರಿ ಮಟ್ಟದಲ್ಲೇ ಆಗಲಿ ಚರ್ಚೆಯಾಗುವಾ ಗೆಲ್ಲ ದೈಹಿಕ ಆರೋಗ್ಯದ ಬಗ್ಗೆಯೇ ಮಾತನಾಡಲಾಗುತ್ತದೆ. ಆದರೆ ಮನುಷ್ಯನ ಜೀವನ ಗುಣಮಟ್ಟಕ್ಕೆ ದೈಹಿಕ ಅನಾರೋಗ್ಯದಷ್ಟೇ, ಮಾನಸಿಕ ರೋಗಗಳೂ ಮಾರಕ ಎನ್ನುವುದು ಪರಿಗಣನೆಗೇ ಬರುತ್ತಿಲ್ಲ. ಈ ಕಾರಣಕ್ಕಾಗಿಯೇ ಆರೋಗ್ಯ ವಿಮೆಗಳ ವ್ಯಾಪ್ತಿಯಲ್ಲೂ ಕೂಡ ಮಾನಸಿಕ ವ್ಯಾಧಿಗಳು ಬರುವುದೇ ಇಲ್ಲ. ಮನೋಚಿಕಿತ್ಸೆಗಳೂ ಕೂಡ ಆರೋಗ್ಯ ವಿಮೆಯ ವ್ಯಾಪ್ತಿಗೆ ಬರುವಂತೆ ಮಾಡಬೇಕಿದೆ.
ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರವು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಆರಂಭಿಸಿರುವುದು ಸಕಾರಾತ್ಮಕ ನಡೆ ಎನ್ನಬಹುದು. ಆದರೆ ಸಾಗಬೇಕಾದ ದಾರಿ ಬಹಳ ಇದೆ. ಇತ್ತೀಚೆಗೆ ನೀತಿ ಆಯೋಗ ಕೂಡ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳಿಗೂ ಮಾನಸಿಕ ಖನ್ನತೆಗಳಿಗೂ ನೇರಾನೇರ ಸಂಬಂಧ ಕಂಡುಬರುತ್ತಿದೆ ಎಂದಿದೆ. ಈ ಅಂಶಗಳನ್ನು ಅವಲೋಕಿಸಿದಾಗ, ಮಾನಸಿಕ ಆರೋಗ್ಯದ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ನೀತಿ ನಿರೂಪಿತವಾಗುವ ತುರ್ತು, ಗೋಚರಿಸುತ್ತಿದೆ.
ಪ್ರತಿ ಆಸ್ಪತ್ರೆಗಳಲ್ಲಿ ಮಾನಸಿಕ ಚಿಕಿತ್ಸಕರು, ಶಾಲೆಗಳಲ್ಲಿ ಆಪ್ತ ಸಮಾಲೋಚಕರು ಇರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಬೇಕಿದೆ. ಇನ್ನು ಮಾನಸಿಕ ಸಮಸ್ಯೆ ಎಂದಾಕ್ಷಣ “ಹುಚ್ಚು’ ಎಂದು, ಮಾನಸಿಕ ಆಸ್ಪತ್ರೆ ಎಂದರೆ “ಹುಚ್ಚಾಸ್ಪತ್ರೆ’ ಎಂಬ ತಪ್ಪುಕಲ್ಪನೆ ದೂರಮಾಡುವತ್ತಲೂ ಪ್ರಯತ್ನ ನಡೆಯಬೇಕಿದೆ. ಸತ್ಯವೇನೆಂದರೆ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಲೇ ಇರುತ್ತಾರೆ, ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದಷ್ಟೇ. ಜನರು ಹಿಂಜರಿಕೆಯಿಲ್ಲದೇ ತಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವಂಥ ವಾತಾವರಣ ಮನೆಯಲ್ಲಿ ಮತ್ತು ಸಮಾಜದಲ್ಲಿ ಸೃಷ್ಟಿಯಾದಾಗ ಮಾತ್ರ ಸ್ವಸ್ಥ ಭಾರತ ನಿರ್ಮಾಣವಾಗಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.