ಝಕೀರ್ ನಾಯ್ಕಗೆ ಸತ್ಕಾರ; ಕತಾರ್ ನಡೆ ಖಂಡನೀಯ
Team Udayavani, Nov 23, 2022, 6:00 AM IST
ಭಾರತದಿಂದ ನಿಷೇಧಕ್ಕೊಳಗಾಗಿರುವ, ವಿವಾದಿತ ಇಸ್ಲಾಂ ಧಾರ್ಮಿಕ ಬೋಧಕ ಝಕೀರ್ ನಾಯ್ಕಗೆ ಕತಾರ್ ನೀಡಿರುವ ಸತ್ಕಾರ ಖಂಡನೀಯ.
ಅದರಲ್ಲೂ ಈಗ ಕತಾರ್‌ನಲ್ಲಿ ಫುಟ್‌ಬಾಲ್ ಜ್ವರ ಆರಂಭ ವಾಗಿದ್ದು, ಈ ಸಂದರ್ಭದಲ್ಲಿಯೇ ಮುಸ್ಲಿಂ ಬೋಧನೆಗಾಗಿ ಈತನನ್ನು ಕರೆಸಿಕೊಂಡಿ ರುವುದು ಉತ್ತಮ ನಡೆಯಲ್ಲ ಎಂದೇ ಭಾವಿಸಲಾಗುತ್ತಿದೆ.
ಝಕೀರ್ ನಾಯ್ಕಗೆ ಕತಾರ್ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಇಡೀ ಕ್ರೀಡಾಕೂಟವನ್ನೇ ಭಾರತದಲ್ಲಿ ನಿಷೇಧಿಸಬೇಕು ಎಂದು ಬಿಜೆಪಿಯ ವಕ್ತಾರರೊಬ್ಬರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಜತೆಗೆ ಭಾರತೀಯ ಫುಟ್‌ಬಾಲ್ ಅಸೋಸಿಯೇಶನ್ ಆಗಲಿ, ಭಾರತೀಯರಾಗಲಿ ಫುಟ್‌ಬಾಲ್ ನೋಡಲು ಕತಾರ್‌ಗೆ ತೆರಳಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಭಾರತೀಯನೇ ಆಗಿರುವ ಝಕೀರ್ ನಾಯ್ಕ, ಭಯೋತ್ಪಾದನೆಗೆ ಕುಮ್ಮಕ್ಕು ನೀಡಿರುವ ಜತೆಯಲ್ಲಿ ಉಗ್ರವಾದದ ಬಗ್ಗೆ ಸಹಾನುಭೂತಿ ಹೊಂದಿ ದ್ದಾನೆ. ಫಿಫಾ ಫುಟ್‌ಬಾಲ್ ವಿಶ್ವಕಪ್ ಒಂದು ಅಂತಾರಾ ಷ್ಟ್ರೀಯ ಕ್ರೀಡಾ ವೇದಿಕೆ. ಇಲ್ಲಿ ಜಗತ್ತಿನ ಹಲವಾರು ದೇಶಗಳ ಪ್ರತಿನಿಧಿಗಳು ಆಗಮಿಸಿರುತ್ತಾರೆ. ಈ ವೇಳೆಯಲ್ಲೇ ಈತನನ್ನು ಇಸ್ಲಾಂ ಧರ್ಮದ ಬೋಧನೆಗಾಗಿ ಕರೆಸುವುದು ಸರಿಯಾದ ನಡೆಯಲ್ಲ. ಅಲ್ಲದೆ ಇಡೀ ಜಗತ್ತೇ ಭಯೋತ್ಪಾದನ ವಿರೋಧಿ ಸಮರ ನಡೆಸುತ್ತಿರುವಾಗ ಈತನಿಗೆ ಆಹ್ವಾನ ನೀಡಿದ್ದು ಸರಿಯೇ ಎಂಬ ಪ್ರಶ್ನೆಗಳೂ ವ್ಯಕ್ತವಾಗುತ್ತಿವೆ.
ಸದ್ಯ ಝಕೀರ್ ನಾಯ್ಕ ವಿರುದ್ಧ ಭಾರತದಲ್ಲಿ ಅಕ್ರಮವಾಗಿ ಹಣ ಸಾಗಣೆ, ದ್ವೇಷ ಭಾಷಣ ಸಹಿತ ಹಲವಾರು ಪ್ರಕರಣಗಳಿದ್ದು, ಈತ ಪೊಲೀಸರಿಗೆ ಬೇಕಾಗಿದ್ದಾನೆ. ಹೀಗಾಗಿಯೇ ಭಾರತದಿಂದ ತಲೆಮರೆಸಿ ಕೊಂಡು ಹೋಗಿ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಈತ ಮುಕ್ತವಾಗಿ ಒಸಾಮಾ ಬಿನ್ ಲಾಡೆನ್ ಅನ್ನೂ ಸಮರ್ಥಿಸಿಕೊಂಡಿದ್ದಾನೆ. ಭಾರತದಲ್ಲಿ ಇಸ್ಲಾಂ ಮೂಲಭೂತವಾದ ಹರಡುವಿಕೆಯಲ್ಲಿ ಸಕ್ರಿಯವಾದ ಪಾತ್ರ ವಹಿಸಿದ್ದಾನೆ ಎಂಬ ಆರೋಪಗಳಿವೆ. ಇದೇ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರಕಾರ ಝಕೀರ್ ನಾಯ್ಕ ಸ್ಥಾಪಿಸಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್‌ಎಫ್) ಅನ್ನು ಐದು ವರ್ಷಗಳ ವರೆಗೆ ನಿಷೇಧ ಮಾಡಿತ್ತು.
ಝಕೀರ್ ನಾಯ್ಕ, ಫಿಫಾ ವಿಶ್ವಕಪ್ ಫುಟ್ಬಾಲ್ ನಡೆಯುವ 28 ದಿನಗಳೂ ಅಲ್ಲೇ ಇರುತ್ತಾನೆ. ಜಗತ್ತಿನ ವಿವಿಧೆಡೆಯಿಂದ ಬರುವ ಪ್ರೇಕ್ಷಕ ರಿಗೆ ಈತ ಇಸ್ಲಾಂ ಧರ್ಮದ ಬಗ್ಗೆ ಪಾಠ ಮಾಡುತ್ತಾನೆ. ಇದಕ್ಕಾಗಿಯೇ ಕತಾರ್ ಸರಕಾರ ಈತನನ್ನು ಮಲೇಷ್ಯಾದಿಂದ ಕರೆಸಿಕೊಂಡಿದೆ. ಈಗಷ್ಟೇ ಅಲ್ಲ, ಈ ಹಿಂದೆಯೂ ಕತಾರ್, ಝಕೀರ್ ನಾಯ್ಕನನ್ನು ಆಹ್ವಾನಿಸಿ ಸುದ್ದಿಯಾಗಿತ್ತು. ಝಕೀರ್ ನಾಯ್ಕ ಅಲ್ಲಿರುವ ವೇಳೆಯಲ್ಲೇ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರೂ ಕತಾರ್‌ನಲ್ಲೇ ಇದ್ದರು.
ಅಂತಾರಾಷ್ಟ್ರೀಯ ಸಂಬಂಧದಲ್ಲಿ ಇಂಥ ಘಟನೆಗಳು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತವೆ. ಝಕೀರ್ ನಾಯ್ಕನಂಥವರು ವಿಶ್ವಶಾಂತಿಗೆ ಅಡ್ಡಿ ಮಾಡುವಂಥ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಯಾವುದೇ ಕಾರಣಕ್ಕೂ ಸರಕಾರಗಳು ಇಂಥವರಿಗೆ ಆಶ್ರಯ ನೀಡಬಾರದು. ಹೀಗೇ ಮಾಡಿದ್ದೇ ಆದರೆ ಮತ್ತೆ ಉಗ್ರವಾದಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಈ ವಿಚಾರವನ್ನು ಭಾರತವೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾವಿಸಬೇಕು. ಅದರಲ್ಲೂ ಭಯೋತ್ಪಾದನ ಆರೋಪ ಹೊತ್ತವರಿಗೆ ಆಶ್ರಯ ನೀಡುವ ದೇಶಗಳನ್ನು ಒಬ್ಬಂಟಿ ಮಾಡುವ ಬಗ್ಗೆಯೂ ಯೋಚಿಸಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.