ಭಾರತ ಸರಕಾರದ 8% ಆರ್.ಬಿ.ಐ ಬಾಂಡುಗಳು
Team Udayavani, Sep 4, 2017, 12:59 PM IST
ರಾಯರ ಚಿಂತೆ ಬಿಟ್ಟು ನಿಮ್ಮ ಮುಂದಿನ ಠೇವಣಿ ಆರ್.ಬಿ.ಐ ಬಾಂಡುಗಳಲ್ಲಿ ಆಡುವ ಚಿಂತನೆಗೆ ತಲೆಕೊಡಿ. ಯಾವ ಸಮಯದಲ್ಲಿ ಅರ್.ಬಿ.ಐ ಈ ಬಾಂಡುಗಳ ಬಡ್ಡಿದರವನ್ನು ಕಡಿಮೆ ಮಾಡೀತು ಎಂದು ಹೇಳಲು ಬರುವುದಿಲ್ಲ. ನಿರ್ಮಾ ಜಾಹೀರಾತಿನಲ್ಲಿ ಹೇಳುವಂತೆ ನೀವೀಗ ತ್ವರೆ ಮಾಡಿ.
ಈ ಗುರುಗುಂಟಿರಾಯರ ಸಂಸಾರ ತಾಪತ್ರಯದಲ್ಲಿ ಮೂಗು ತೂರಿಸ್ಲಿಕ್ಕೆ ಹೋದರೆ ನಮಗೆ ನಮ್ಮ ಕೆಲಸ ಬಿಲ್ ಕುಲ್ ಆಗುವುದಿಲ್ಲ. ಅವರೂ ಅವರ ಬಹೂರಾನಿಯೂ ಜೊತೆಗೂಡಿ ಮಾಡುವ ದುಬೈ ಚಿನ್ನದ ಕಸರತ್ತನ್ನು ನೋಡತ್ತಾ ಕುಳಿತರೆ ಮೊಬೈಲ್ ಕೈಯಲ್ಲಿ ಹಿಡಿದು ಹೆಬ್ಬೆಟ್ಟು ಸವರುವ ಕಾಲೇಜು ಮಕ್ಕಳಿಗಾದಂತೆ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಅಸಲಿಗೆ ನಮಗೆ ನಮ್ಮ ಕೆಲಸವೇ ಬೆಟ್ಟದಷ್ಟು ಬಿದ್ದಿದೆ. ಅದರ ಮೇಲಿನಿಂದ ಆ ಗುರುಗುಂಟಿರಾವ್ ಐನ್ಡ್ ಫ್ಯಾಮಿಲಿಯ ನಾಟಕ ಮಂಡಳಿಯ ಉಸಾಬರಿಗೆ ಕೈಹಚ್ಚಿದರೆ ನಾವು ಉದ್ಧಾರ ಆದ ಹಾಗೆಯೇ!
ಹಾಗಾಗಿ ಈ ವಾರ ಊರವರ ಉಸಾಬರಿ ಬಿಟ್ಟು ನಮ್ಮ-ನಿಮ್ಮ ಹೂಡಿಕೆಯಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಒಂದು ಗಂಭೀರ ಚಿಂತನೆ ನಡೆಸುವುದು ಅವಶ್ಯವಾಗಿದೆ. ದುವ್ವುರಿ ಸುಬ್ಟಾ ರಾಯರ ಕಾಲದಿಂದಲೂ ನೋಡುತ್ತಲೇ ಬಂದಿದ್ದೇವೆ- ಈ ಬಡ್ಡಿದರ ಇಳಿತದ ಹೊಟ್ಟೆ ಉರಿ ಇನ್ನೂ ಶಮನವಾಗಿಲ್ಲ. ಆ ಬಳಿಕ ಮೂರು ವರ್ಷಪೂರ್ತಿ ರಘುಪತಿ ರಾಘವ ರಾಜಾ ರಾಮ್ ಅಂತ ಜೊಯ್ ಜೊಯ್ ಭಜನೆ ಹಾಡಿದರೂ ಬಡ್ಡಿದರದ ಇಳಿಕೆ ಮಾತ್ರ ನಿಲ್ಲಲಿಲ್ಲ. ಅದು ಬಿಟ್ಟು, ಇದೀಗ ಮತ್ತೆ ಮೊದಲಿನಿಂದ ಇಳಿಕೆ ಪ್ರಕ್ರಿಯೆ ಊರ್ಜಿತವಾಗಿದೆ. ಹೀಗೇ ಇಳಿದರೆ ಒಂದು ದಿನ ಬ್ಯಾಂಕುಗಳಲ್ಲಿ ನಾವೇ ದುಡ್ಡು ಇಟ್ಟು ನಾವೇ ಅವರಿಗೆ ಬಡ್ಡಿ ನೀಡುವ ಪೋಪಿಕಾಲ ಸನ್ನಿಹಿತವಾದೀತೇನೋ ಎನ್ನುವುದು ಕೆಲವರ ಆತಂಕ.
ಅದೇನೇ ಇರಲಿ; ಇಳಿಯುತ್ತಿರುವ ಬಡ್ಡಿದರದ ಜಮಾನದಲ್ಲಿ ನಾವು-ನೀವುಗಳು ಮಾಡತಕ್ಕದ್ದೇನು ಎನ್ನುವುದು ನಮ್ಮೆಲ್ಲರ ಚಿಂತೆ. ಇಂತಹ ಉಪಯೋಗಿ ಚಿಂತನ ಮಂಥನ ನಮ್ಮ ಸಮಸ್ಯೆಗೆ ಏನಾರ ಸೊಲ್ಯೂಶನ್ ಕಂಡು ಹಿಡಿದರೆ ನಮ್ಮ ಕಾಸು-ಕುಡಿಕೆ ಒಂದು ತೆಳಿ ಕುಡಿಯುವ ಲೆವೆಲ್ಲಿಗಾದರೂ ಬಂದು ನಿಂತೀತು; ಇಲ್ಲದಿದ್ದರೆ ನಮಗೆಲ್ಲಾ ಒಟ್ಟೆ ಕುಡಿಕೆಯೇ ಗತಿಯೇನೋ ಎಂಬ ಭೀತಿ ಎಲ್ಲರನ್ನೂ ಆವರಿಸಿದೆ. ಇಂತಹ ಜ್ವಲಂತ ಸಮಸ್ಯೆಯನ್ನು ಬಿಟ್ಟು ಆ ಗುರುಗುಂಟಿರಾಯರು ತಮ್ಮ ಬಹೂರಾನಿಯ ಕೈಯಲ್ಲಿ ಎಷ್ಟು ಬಾರಿ ಚಹ ಮಾಡಿಸಿ ಕುಡಿದರು, ಎಷ್ಟು ಬಾರಿ ಮೊಮ್ಮಗನ ಕೈಯಲ್ಲಿ ಕಂಪ್ಯೂಟರ್ ಶಟ್-ಡೌನ್ ಮಾಡಿಸಿದರು ಎನ್ನುವ ಕಾನೀಶ್ಮಾರಿ ತೆಗೆಯುತ್ತ ಕುಳಿತರೆ ನಾವುಗಳು ಬರ್ಕತ್ತಾಗ್ಲಿಕ್ಕುಂಟಾ? ನೀವೇ ಹೇಳಿ.
ಹಾಗಾಗಿ ಈ ವಾರ, “ಇಳಿಯುತ್ತಿರುವ ಬಡ್ಡಿದರದ ಕಾಲದಲ್ಲಿ ಆರ್.ಬಿ.ಐ ಬಾಂಡುಗಳ ಮಹತ್ವ’ ಎನ್ನುವ ಟಾಪಿಕ್ಕಿನ ಮೇಲೆ ಒಂದು ಲಘು ಕೊರೆತ. ಇದೋ ಕೇಳುವಂತವರಾಗಿ:
ಬಾಂಡುಗಳು: ಗವರ್ನಮೆಂಟ್ ಆಫ್ ಇಂಡಿಯಾ 8% ಸೇವಿಂಗ್ಸ್ (ಟ್ಯಾಕ್ಸೇಬಲ್) ಬಾಂಡ್, 2003 ಎಂಬ ಅಧಿಕೃತ ನಾಮಧೇಯ ಹೊಂದಿದ ಆಡು ಭಾಷೆಯಲ್ಲಿ “ಆರ್.ಬಿ.ಐ ಬಾಂಡ್’ ಎಂದು ಕರೆಯಲ್ಪಡುವ ಈ ಕೇಂದ್ರ ಸರಕಾರದ ಬಾಂಡುಗಳು ರಿಸರ್ವ್ ಬ್ಯಾಂಕ್ ಮುಖಾಂತರ ಜನ ಸಾಮಾನ್ಯರಿಗೆ ಬಿಡುಗಡೆಯಾಗುತ್ತದೆ. ಆ ಬಳಿಕ ಬ್ಯಾಂಕುಗಳ ಮುಖಾಂತರ ವಿತರಣೆಯಾಗುತ್ತದೆ. ಈ ಬಾಂಡುಗಳು ಏಪ್ರಿಲ್ 1, 2003ರಂದು ಸಾರ್ವಜನಿಕರಿಗಾಗಿ ತೆರೆದಿದ್ದು ಇದು ಸದಾ ತೆರೆದಿರುವ ಒಂದು ಯೋಜನೆ. ಬ್ಯಾಂಕ್ ಎಫ್.ಡಿ.ಗಳಂತೆ ಯಾವತ್ತು ಬೇಕಾದರೂ ಹೋಗಿ ಇದರಲ್ಲಿ ಠೇವಣಿ ಹೂಡಬಹುದು. ಇನ್ನಿತರ ಬಾಂಡುಗಳಂತೆ ಇದರಲ್ಲಿ ಯೋಜನೆ ತೆರೆಯುವ ಮತ್ತು ಮುಚ್ಚುವ ದಿನಾಂಕಗಳಿಲ್ಲ. ಇದೊಂದು ಜನಸಾಮಾನ್ಯರಿಗಾಗಿ ರಚಿಸಿರುವ ಸರ್ವರುತು ಯೋಜನೆ.
ಯಾರಿಗೆ?: ಈ ಯೋಜನೆಯಲ್ಲಿ ವೈಯಕ್ತಿಕ ಯಾ ಜಂಟಿ ಹೆಸರಿನಲ್ಲಿ, ಹಿಂದು ಅವಿಭಕ್ತ ಕುಟುಂಬ, ಚಾರಿಟೇಬಲ್ ಸಂಸ್ಥೆ/ಯುನಿವರ್ಸಿಟಿ ಇತ್ಯಾದಿಗಳು ಹೂಡಿಕೆ ಮಾಡಬಹುದು. ಆದರೆ ಎನ್ನಾರೈ ಕೆಟಗರಿಗೆ ಸೇರಿದ ವ್ಯಕ್ತಿಗಳಿಗೆ ಈ ಬಾಂಡುಗಳಲ್ಲಿ ಹೂಡುವ ಅನುಮತಿ ಇಲ್ಲ.
ಮುಖಬೆಲೆ: ಒಂದು ಬಾಂಡಿನ ಮುಖ ಬೆಲೆ ರೂ 1000. ಅದರ ಗುಣಕವಾಗಿ ಎಷ್ಟಾದರೂ ಬಾಂಡುಗಳನ್ನು ಖರೀದಿಸಬಹುದು. ಆರ್.ಬಿ.ಐಯು ನೀವು ಖರೀದಿಸಿದ ಎಲ್ಲಾ ಬಾಂಡುಗಳನ್ನೂ ಒಂದೇ ಬಾಂಡ್ ಲೆಜ್ಜರ್ ಖಾತೆಯಲ್ಲಿ ಒಟ್ಟಾಗಿ ನಮೂದಿಸಿ ನಿಮಗೆ ನೀಡುತ್ತದೆ.
ಬಡ್ಡಿದರ: ಹೆಸರಿನಲ್ಲೇ ಸೂಚಿಸಿದಂತೆ ಇದೊಂದು 8% ವಾರ್ಷಿಕ ಬಡ್ಡಿ ನೀಡುವ ಸರಕಾರಿ ಯೋಜನೆ. ಬ್ಯಾಂಕುಗಳ ಎಫ್ಡಿ ದರಗಳು ಜಮೀನ್-ಆಸ್ಮಾನ್ ಮಟ್ಟಕ್ಕೆ ಏರಿಳಿದರೂ ಈ ಬಾಂಡುಗಳ ಬಡ್ಡಿದರ ಅನಾದಿ ಕಾಲದಿಂದಲೂ ಎಂಟರ ನಂಟು ಬಿಟ್ಟಿಲ್ಲ. ಸದಾ 8% ಬಡ್ಡಿದರದಲ್ಲಿಯೇ ಸ್ಥಿರವಾಗಿ ನಿಂತಿರುವ ಈ ಸ್ಕೀಮಿಗೆ ಶುಕ್ರ ದೆಶೆ ಕುದುರುವುದು ಬ್ಯಾಂಕು ಬಡ್ಡಿದರಗಳು ಕಡಿಮೆಯಾದಾಗ. ಬ್ಯಾಂಕ್ ದರಗಳು ಉಚ್ಛಾಯದಲ್ಲಿರುವ ಕಾಲದಲ್ಲಿ ಈ ಸ್ಕೀಮನ್ನು ಕೇಳುವವರು ಇರುವುದಿಲ್ಲ. ಬ್ಯಾಂಕ್ ಎಫ್.ಡಿಗಳು 6%-6.5% ರೇಂಜಿನಲ್ಲಿರುವ ಸದÂದ ಪರಿಸ್ಥಿತಿಯಲ್ಲಿ ಈ ಬಾಂಡುಗಳ 8% ಸಹಜವಾಗಿಯೇ ಆಕರ್ಷಕವಾಗಿದೆ.
ಬಡ್ಡಿ ಪಾವತಿ: ಈ ಬಾಂಡುಗಳ ಮೇಲೆ ಬಡ್ಡಿ ಪಾವತಿಗೆ ಎರಡು ಆಯ್ಕೆಗಳಿವೆ. ನೀವು ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕು. ಒಂದನೆಯದು ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ನಿಮ್ಮ ಕೈಸೇರುವಂತಹ ಆಯ್ಕೆ. ಅಂದರೆ ವಾರ್ಷಿಕ 8% ದರದಲ್ಲಿ ಪ್ರತಿ 6 ತಿಂಗಳುಗಳಿಗೊಮ್ಮೆ 4% ಬಡ್ಡಿ ನಿಮ್ಮ ಎಸ್.ಬಿ ಖಾತೆಗೆ ಸಂದಾಯವಾಗುತ್ತದೆ. ಪ್ರಪ್ರಥಮ ಬಾರಿಗೆ ಖರೀದಿ ದಿನಾಂಕದಿಂದ ಜುಲೈ 31 ಅಥವಾ ಜನವರಿ 31 ರವರೆಗಿನ ಅಲ್ಪಾವಧಿಯ (broken period) ಬಡ್ಡಿ ನೀಡಲಾಗುತ್ತದೆ. ಆ ಬಳಿಕ ಜೂನ್ 30 ಹಾಗೂ ಡಿಸೆಂಬರ್ 31ರವರೆಗಿನ ಬಡ್ಡಿಗಳನ್ನು ಅಗುಸ್ಟ್ 1 ಮತ್ತು ಫೆಬ್ರವರಿ 1 ರಂದು ನೀಡಲಾಗುತ್ತದೆ. ಇನ್ನೊಂದು ಬಗೆಯದ್ದು, ಬಡ್ಡಿ ಪಾವತಿಯ ಕ್ಯುಮುಲೆಟಿವ್ ಆಯ್ಕೆ. ಅಂದರೆ ಬಡ್ಡಿ ಪಾವತಿಯಾಗದೆ ಹಾಗೆಯೇ ಇದ್ದು ಅದರಷ್ಟಕ್ಕೇ ಅದು ಬೆಳೆಯುತ್ತಾ ಹೋಗುತ್ತದೆ. ಠೇವಣಿಯ ಅವಧಿಯಾದ 6 ವರ್ಷಗಳ ಬಳಿಕ ಅಸಲು ಮತ್ತು ಬಡ್ಡಿ ಏಕಗಂಟಿನಲ್ಲಿ ನಿಮಗೆ ಪಾವತಿಯಾಗುತ್ತದೆ. ರೂ 1000 ಮುಖ ಬೆಲೆಯ ಒಂದು ಬಾಂಡು 6 ವರ್ಷಗಳ ಬಳಿಕ ರೂ 1601 ಆಗುತ್ತದೆ. ಈ ಆಯ್ಕೆಯಲ್ಲಿ ಬಡ್ಡಿ ದರವು ಹೇಳಿಕೆಗೆ 8% ಆದರೂ ಅದು ಪ್ರತಿ 6ತಿಂಗಳುಗಳಿಗೊಮ್ಮೆ ಚಕ್ರೀಕೃತವಾಗುತ್ತದೆ (compounding). 6 ತಿಂಗಳುಗಳಿಗೊಮ್ಮೆ ಚಕ್ರೀಕರಣ ಅಂದರೆ ವಾರ್ಷಿಕ 8.16% ಸಿಕ್ಕ ಹಾಗೆ ಆಯಿತು. ಇದನ್ನು ಬ್ಯಾಂಕ್ ಎಫ್. ಡಿಯ 6%-6.5% ಗೆ ಹೋಲಿಸಿ ನೋಡಿ.
ಅವಧಿ: ಈ ಠೇವಣಿ ಭರ್ತಿ 6 ವರ್ಷದ್ದು. ದುಡ್ಡು ಪಾವತಿ ಮಾಡಿ ಅರ್ಜಿ ಗುಜರಾಯಿಸಿದ ದಿನದಿಂದ ಠೇವಣಿ ಆರಂಭವಾಗುತ್ತದೆ. ಆ ದಿನಾಂಕದಿಂದ 6 ವರ್ಷಗಳ ಕಾಲ ನಿಮ್ಮ ದುಡ್ಡು ಲಾಕ್-ಇನ್ ಆಗುತ್ತದೆ. ಅವಧಿಪೂರ್ವವಾಗಿ ದುಡ್ಡನ್ನು ಹಿಂಪಡೆಯಲು ಬರುವುದಿಲ್ಲ; ಅಥವಾ ಮಾರುಕಟ್ಟೆಯಲ್ಲಿ ಈ ಬಾಂಡುಗಳನ್ನು ಮಾರಾಟ ಮಾಡಲೂ ಬರುವುದಿಲ್ಲ. ಆದರೆ ಎಮರ್ಜೆನ್ಸಿ ಸಂದರ್ಭಗಳಲ್ಲಿ ಈ ಬಾಂಡುಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಅವುಗಳ ಮೆಲೆ ಸಾಲ ತೆಗೆಯಲು ಬರುತ್ತದೆ. ಬ್ಯಾಂಕು ಎಫ್.ಡಿ ಗಳಂತೆ 1% ದಂಡಕಟ್ಟಿ ಅವಧಿಪೂರ್ವ ಹಿಂಪಡೆತ ಸಾಧ್ಯವಿಲ್ಲ.
ಭದ್ರತೆ: ಇದು ಆರ್.ಬಿ.ಐ ಮುಖಾಂತರ ವಿತರಣೆಯಾಗುವ ಭಾರತ ಸರಕಾರದ ಸಾಲ ಪತ್ರ. ಆದ್ದರಿಂದ ಇದು ಅತ್ಯಂತ ಭದ್ರವಾದ ಹೂಡಿಕೆ. ಇಲ್ಲಿ ಸರಕಾರವೇ ನಿಮ್ಮ ಸಾಲಗಾರ ಹಾಗೂ ನೀವು ಭಾರತ ಸರಕಾರಕ್ಕೇ ಸಾಲ ನೀಡುವ ಕುಳವಾರು!
ಆದಾಯಕರ: ಹೆಸರಿನಲ್ಲಿಯೇ ಸೂಚನೆ ಇದೆ, ಇದೊಂದು ಕರಾರ್ಹ ಯೋಜನೆ. ಅಂದರೆ ಬ್ಯಾಂಕ್ ಎಫ್.ಡಿಯಂತೆಯೇ ಇದರಲ್ಲಿ ಸಿಗುವ ಬಡ್ಡಿಯನ್ನು ಕೂಡಾ ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಿ ಅನ್ವಯ ದರದಲ್ಲಿ ಕರಕಟ್ಟಬೇಕು. ನಿಯಮಕ್ಕೆ ಅನುಸಾರ ವಾರ್ಷಿಕ ಬಡ್ಡಿ ರೂ 10000 ಮೀರಿದರೆ ಸಂಪೂರ್ಣ ಬಡ್ಡಿ ಮೊತ್ತದ ಮೇಲೆ 10% ಟಿಡಿಎಸ್ ಕಡಿತ ಕೂಡಾ ಆಗುತ್ತದೆ. ಈ ವಿಚಾರದಲ್ಲಿ ಈ ಬಾಂಡುಗಳಿಗೂ ಬ್ಯಾಂಕ್ ಎಫ್.ಡಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ.
ವಿಶ್ಲೇಷಣೆ: ಬ್ಯಾಂಕು ಎಫ್.ಡಿಗಿಂತ ಜಾಸ್ತಿ ಬಡ್ಡಿ ದರ ನೀಡುವ ಈ ಬಾಂಡುಗಳು ಬಡ್ಡಿ ಲೆಕ್ಕದಲ್ಲಿ ಉತ್ತಮ. ಆದರೆ 6 ವರ್ಷಗಳ ಕಾಲ ಈ ಬಾಂಡನ್ನು ಮುಟ್ಟುವಂತಿಲ್ಲ. ಯಾವುದೇ ಕಾರಣಕ್ಕೂ ಆ ಮೊದಲೇ ದುಡ್ಡು ಬೇಕೆನ್ನುವವರು ಈ ಯೋಜನೆಯಲ್ಲಿ ತೊಡಗುವ ಮುನ್ನ ಯೋಚಿಸಬೇಕು. ಈ ಒಂದು ಕಾರಣಕ್ಕಾಗಿ ಮಾತ್ರ ಇದು ಎಫ್.ಡಿಗಿಂತ ಕಡಿಮೆ ಆಕರ್ಷಕ. ಅದು ಬಿಟ್ಟರೆ ಕೇವಲ ಬಡ್ಡಿ ದರದ ಆಕರ್ಷಣೆಗಾಗಿ ಇದರಲ್ಲಿ ಧಾರಾಳವಾಗಿ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಹೊರಟರೆ, ಇನ್ನೊಂದು ಮಜಲಿನ ಚಿಂತನೆ ಏನೆಂದರೆ ಇಲ್ಲಿ 6 ವರ್ಷಗಳ ಕಾಲ ಅದೇ 8% ಬಡ್ಡಿ ದರವೂ ಲಾಕ್-ಇನ್ ಆಗುತ್ತದೆ, ಕಡಿಮೆ ಅವಧಿಯ ಬ್ಯಾಂಕ್ ಎಫ್.ಡಿ ಇಟ್ಟರೆ ಅದನ್ನು ರಿನ್ಯೂ ಮಾಡುತ್ತಾ ಹೋದಂತೆಲ್ಲಾ ಹೊಸ ಬಡ್ಡಿ ದರಗಳು ಆವಾಗಿನ ಮಾರುಕಟ್ಟೆ ದರವನ್ನಾಧರಿಸಿ ನಿಮಗೆ ದಕ್ಕುತ್ತದೆ. ಅಂತಹ ಹೊಸ ಬಡ್ಡಿ ದರಗಳು 8% ಮೀರಿದರೆ ಈ ಯೋಜನೆಯಿಂದ ನಿಮಗೆ ನಷ್ಟವಾದೀತು. ಆದರೆ ಮುಂಬರುವ 6 ವರ್ಷಗಳ ಸರಾಸರಿ ಬಡ್ಡಿ ದರಗಳನ್ನು ಊಹಿಸಿ ನೋಡಿದರೆ ಆ ರೀತಿ ನಷ್ಟವಾಗುವ ಸಂಭಾವ್ಯ ಇಲ್ಲವೆಂದೇ ಹೇಳಬಹುದು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಬಾಂಡುಗಳಲ್ಲಿ ಹೂಡುವುದು ಆಕರ್ಷಕವೇ.
ಹೂಡಿಕೆ ಹೇಗೆ?: ಅದೆಲ್ಲಾ ಸರಿ ಮೊಳೆಯಾರೇ, ಆದರೆ ಈ ಬಾಂಡುಗಳಲ್ಲಿ ಹೂಡಿಕೆ ಮಾಡುವುದಾದರೂ ಹೇಗೆ? ಅದನ್ನೂ ಸ್ವಲ್ಪ ಹೇಳಿ ಬಿಡಿ ಯಾಕೆಂದರೆ ಬ್ಯಾಂಕು ಎಫ್.ಡಿಯಾದರೆ ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತದೆ. ಸೀದಾ ಬ್ಯಾಂಕ್ ಶಾಖೆಗೆ ಹೋಗಿ ನಂಗೊಂದು ಎಫ್.ಡಿ ಮಾಡ್ಬೇಕು ಅಂದರೆ ಸಾಕು, ಉಳಿದದ್ದು ಸುಲಭ. ಅಥವಾ ಆನ್-ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಉಳ್ಳವರು ತಮ್ಮ ಖಾತೆಯನ್ನು ಹೊಕ್ಕು ತಾವೇ ಆನ್-ಲೈನ್ ಆಗಿ ಎಫ್.ಡಿ ಮಾಡಬಹುದು. ಹಾಗಾಗಿ ಬ್ಯಾಂಕ್
ಎಫ್.ಡಿಯನ್ನು ಪಳಗಿಸಿ ಗೊತ್ತು, ಆದರೆ ಈ ಹೊಸ ಪ್ರಾಣಿ ಆರ್. ಬಿ.ಐ ಬಾಂಡನ್ನು ಹೇಗಪ್ಪಾ ಬೆಂಡ್ ಮಾಡುವುದು – ಎಂದು ನೀವೀಗ ಕೇಳುತ್ತೀರಿ. ಅಲ್ಲವೇ? ವಾಸ್ತವದಲ್ಲಿ ಈ ಬಾಂಡುಗಳಲ್ಲಿ ಹೂಡಿಕೆ ಮಾಡುವುದು ಕೂಡಾ ಎಫ್.ಡಿ ಮಾಡಿದಷ್ಟೇ ಸುಲಭ. ಎಲ್ಲಾ ಸ್ಟೇಟ್ ಬ್ಯಾಂಕ್ ಸಹಿತ ಎಲ್ಲಾ ರಾಷ್ಟೀಕೃತ ಬ್ಯಾಂಕುಗಳು, ಮುಖ್ಯ ಖಾಸಗಿ ಬ್ಯಾಂಕುಗಳು (ಐಸಿಐಸಿಐ, ಎಚ್‌ಡಿಎಫ್ಸಿ, ಆಕ್ಸಿಸ್,ಇತ್ಯಾದಿ) ಹಾಗೂ ಸ್ಟಾಕ್ ಹೋಲ್ಡಿಂಗ್, ಕಾರ್ವಿ ಇತ್ಯಾದಿ ಸಂಸ್ಥೆಗಳು ಈ ಬಾಂಡುಗಳನ್ನು ಮಾರುತ್ತವೆ. ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳು ಈ ಸೌಲಭ್ಯವನ್ನು ನೀಡದೆ ಇರಬಹುದು, ಆದರೆ ಮುಖ್ಯ ಶಾಖೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಈ ಬ್ಯಾಂಕುಗಳಲ್ಲಿ ಎಫ್.ಡಿ ಮಾಡಿದಷ್ಟೇ ಸುಲಭವಾಗಿ ಎರಡು ಪುಟದ ಅರ್ಜಿ ಫಾರ್ಮ್ ತುಂಬಿ, ನಾಮಿನೇಶನ್, ಬ್ಯಾಂಕ್ ಮೆಂಡೇಟ್, ಐಡಿ, ಪ್ಯಾನ್ ಇತ್ಯಾದಿ ವೈಯಕ್ತಿಕ ಪುರಾವೆಗಳನ್ನು ನೀಡಿ ಚೆಕ್ ಪಾವತಿ ಮಾಡಿದರಾಯಿತು. ಕೆಲಸ ಸುಲಭ.
ಪರ್ಯಾಯವಾಗಿ ಇವೇ ಸಂಸ್ಥೆಗಳಲ್ಲಿ ನಿಮ್ಮ ಆನ್-ಲೈನ್ ಖಾತೆಯಿದ್ದರೆ ಆ ಮೂಲಕವೂ ಮನೆಯಲ್ಲಿಯೇ ಕುಳಿತು ಈ ಬಾಂಡುಗಳನ್ನು ಖರೀದಿಸಬಹುದು. ಈ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸರಿ ಸುಮಾರು ಎಲ್ಲಾ ವ್ಯವಹಾರಗಳನ್ನೂ ಮನೆಯಲ್ಲಿಯೂ ಕುಳಿತು ಮದ್ಯ ರಾತ್ರಿಯಲ್ಲಿಯೂ ಮಾಡಬಹುದಾಗಿದೆ. ಸೋ, ರಾಯರ ಚಿಂತೆ ಬಿಟ್ಟು ನಿಮ್ಮ ಮುಂದಿನ ಠೇವಣಿ ಆರ್.ಬಿ.ಐ ಬಾಂಡುಗಳಲ್ಲಿ ಆಡುವ ಚಿಂತನೆಗೆ ತಲೆಕೊಡಿ. ಯಾವ ಸಮಯದಲ್ಲಿ ಅರ್.ಬಿ.ಐ ಈ ಬಾಂಡುಗಳ ಬಡ್ಡಿದರವನ್ನು ಕಡಿಮೆ ಮಾಡೀತು ಎಂದು ಹೇಳಲು ಬರುವುದಿಲ್ಲ. ನಿರ್ಮಾ ಜಾಹೀರಾತಿನಲ್ಲಿ ಹೇಳುವಂತೆ ನೀವೀಗ ತ್ವರೆ ಮಾಡಿ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.